ಮತ್ತೆ ಪ್ರತಿಭಟನೆ ಎಚ್ಚರಿಕೆ

ಶುಕ್ರವಾರ, ಜೂಲೈ 19, 2019
28 °C

ಮತ್ತೆ ಪ್ರತಿಭಟನೆ ಎಚ್ಚರಿಕೆ

Published:
Updated:

ಮೊಳಕಾಲ್ಮುರು: ಕೊಟ್ಟ ಮಾತಿನ ಪ್ರಕಾರ ಪ್ರೌಢಶಾಲಾ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು.ಶುಕ್ರವಾರ ತಾಲ್ಲೂಕು ಪ್ರವಾಸ ನಂತರ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಏಪ್ರಿಲ್ ತಿಂಗಳಿನಲ್ಲಿ ಮೌಲ್ಯಮಾಪನ ವೇಳೆ ಹಮ್ಮಿಕೊಂಡಿದ್ದ ಪ್ರತಿಭಟನೆ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪಿಯು ಬೋರ್ಡ್ ನಿರ್ದೇಶಕ ಕುಮಾರಗೌಡ ನೇತೃತ್ವದಲ್ಲಿ ಸಮಿತಿ ರಚಿಸಿ ಒಂದು ತಿಂಗಳ ಒಳಗಾಗಿ ತಾರತಮ್ಯ ಸರಿಪಡಿಸಲಾಗುವುದು ಎಂದು ಹೇಳಿದ್ದರು. ಆದರೆ, ಅವಧಿ ಮುಗಿದು 40 ದಿನ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸ್ಥಾಪಿಸಬೇಕು ಎಂಬ ಕಾನೂನು ಇದ್ದರೂ ಅನುಷ್ಠಾನವಾಗುತ್ತಿಲ್ಲ. ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ 450 ವಿದ್ಯಾರ್ಥಿನಿಯರು ಸೇರಿದಂತೆ ಒಂದು ಸಾವಿರ ವಿದ್ಯಾರ್ಥಿಗಳಿದ್ದು ಶೌಚಾಲಯ ಇಲ್ಲದಿರುವುದು ದುರಂತ. ಎರಡು ತಿಂಗಳ ಒಳಗಾಗಿ  ಸೌಲಭ್ಯಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು ಎಂದು ಬಿಇಒ ಅವರಿಗೆ ಸೂಚಿಸಿದರು.ತಾವು ಪ್ರವಾಸ ವೇಳೆ ತಮ್ಮೇನಹಳ್ಳಿ, ರಾಂಪುರ, ನಾಗಸಮುದ್ರ, ದೇವಸಮುದ್ರ, ಚಿಕ್ಕೇರಹಳ್ಳಿ, ಹಾನಗಲ್, ತುಮಕೂರ‌್ಲಹಳ್ಳಿ, ಚಿಕ್ಕೋಬನಹಳ್ಳಿ ಮತ್ತಿತರ ಶಾಲೆಗಳಿಗೆ ಭೇಟಿ ನೀಡಿದ್ದು, ಬಹುತೇಕ ಎಲ್ಲಾ ಕಡೆ ಶಿಕ್ಷಕರ ಕೊರತೆ ಮುಖ್ಯವಾಗಿದೆ. ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಆಗದಿರುವುದು ಕಂಡುಬಂದಿದೆ. ಈ ಬಗ್ಗೆ ಶಿಕ್ಷಣ ಸಚಿವ ಕಾಗೇರಿ ಮತ್ತು ಡಿಡಿಪಿಐ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಗಣಿತ ಮತ್ತು ಆಂಗ್ಲ ವಿಷಯಕ್ಕೆ ಶಿಕ್ಷಕರು ಇಲ್ಲ. ಇದಕ್ಕೆ ಹುದ್ದೆ ಮಂಜೂರು ಮಾಡದೇ ಇರುವುದು ಕಾರಣವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಬಿಇಒ ಬಿ. ಉಮಾದೇವಿ, ಬಿಆರ್‌ಸಿ ನಯೀಮುರ್ ರೆಹಮಾನ್, ಶಿಕ್ಷಕರ ಸಂಘದ ಎಂ.ಎಂ. ಮಲ್ಲಿಕಾರ್ಜುನ್, ಪಿಎಸ್‌ಐ ಕೊಟ್ರೇಶ್, ಉಪನ್ಯಾಸಕ ಎಂ. ಗಿರೀಶ್ ಇತರರು ಇದ್ದರು. ಸೈಯದ್ ಖಾದರ್‌ಆಲಿ ಸ್ವಾಗತಿಸಿದರು. ತಿಮ್ಮೇಶ್ವಪ್ಪ ಕಾರ್ಯಕ್ರಮ  ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry