ಸೋಮವಾರ, ಮೇ 10, 2021
25 °C
ಇಬ್ಬರ ಸಾವು-ಹಲವರಿಗೆ ಗಾಯ, ಬೆಳೆ ನಷ್ಟ

ಮತ್ತೆ ಬಂತು ಆನೆ ಹಿಂಡು; ಹಬ್ಬಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಬಂತು ಆನೆ ಹಿಂಡು; ಹಬ್ಬಿದ ಆತಂಕ

ಮಾಲೂರು: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶನಿವಾರ ಆನೆ ಹಿಂಡು ಮತ್ತೆ ಕಾಣಿಸಿಕೊಂಡು ಜನ ಸಮೂಹವನ್ನು ಆತಂಕಕ್ಕೆ ತಳ್ಳಿವೆ.  ನೀರು ಆಹಾರ  ಅರಸುತ್ತಾ ತಾಲ್ಲೂಕಿಗೆ ಅನಿವಾರ್ಯವಾಗಿ ಆಗಾಗ್ಗೆ ಬರುವ ಆನೆಗಳಿಂದ ಬೆಳೆ ನಾಶ, ಸಾವು-ನೋವು ಸಂಭವಿಸಿ ಗ್ರಾಮೀಣ ಪ್ರದೇಶದ ಜನ ಭಯಭೀತರಾಗಿದ್ದಾರೆ.ಶನಿವಾರ ಆನೆಗಳ ಹಿಂಡು ಇಬ್ಬರ ಸಾವಿಗೂ ಕಾರಣವಾಗಿವೆ. ಕುತೂಹಲಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗವನ್ನೂ ಮಾಡಿದರು.

ಕಳೆದ ಮೇ 10ರಂದು ತಾಲ್ಲೂಕಿನ ಚಿಕ್ಕತಿರುಪತಿಯ ಕಲ್ಕೆರೆ ಗ್ರಾಮದ ನೀಲಗಿರಿ ತೋಪಿನಲ್ಲಿ ಕಾಣಿಸಿಕೊಂಡ ನಾಲ್ಕು ಆನೆಗಳ ಹಿಂಡು ಹಲವು ಬೆಳೆಗಳನ್ನು ನಾಶ ಮಾಡಿದ್ದವು.ತುಳಿತಕ್ಕೆ ಸಿಕ್ಕ ಚಿಕ್ಕತಿರುಪತಿಯ ನರಸಪ್ಪ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು.ಆ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಶುಕ್ರವಾರ ರಾತ್ರಿ 22 ಆನೆಗಳ ಹಿಂಡು ತಾಲ್ಲೂಕಿನ ಮಾಸ್ತಿ ಗ್ರಾಮದ ಮೂಲಕ ತಾಲ್ಲೂಕನ್ನು ಪ್ರವೇಶಿಸಿವೆ.ದಿನ್ನೇರಿ ಹಾರೋಹಳ್ಳಿ, ತಿರುಮಲಹಟ್ಟಿ, ಹುಲ್ಕೂರು ಗ್ರಾಮಗಳ ಬಳಿ ಪ್ರತ್ಯಕ್ಷಗೊಂಡಿದ್ದರಿಂದ ಜನರಲ್ಲಿ ಕುತೂಹಲ, ಆತಂಕ ಏಕಕಾಲಕ್ಕೆ ಮೂಡಿದೆ.

ಬೆಳಗಿನ ಜಾವದಿಂದಲೇ ಹುಲ್ಕೂರು ಗ್ರಾಮದಲ್ಲಿರುವ ಕಲ್ಲು-ಗುಡ್ಡದ ಬಳಿ ಆನೆಗಳು ಬಂದಿರುವ ಸುದ್ದಿ ಕಾಡ್ಗಿಚ್ಚಿನಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ತಲುಪಿದ್ದರಿಂದ ತಂಡೋಪತಂಡವಾಗಿ ಗ್ರಾಮಸ್ಥರು ನೀಲಗಿರಿ ತೋಪು ಸೇರಿದಂತೆ ಗುಡ್ಡಗಳ ಸುತ್ತ ಆನೆಗಳನ್ನು ನೋಡಲು ನೆರೆದರು.ಕೆಲವು ಪುಂಡರು ಆನೆಗಳ ಬಳಿ ತೆರಳಿ ಮೊಬೈಲ್‌ಗಳ ಮೂಲಕ ಚಿತ್ರ ಸೆರೆಹಿಡಿಯುತ್ತಿದ್ದರು. ಆನೆಗಳ ಗುಂಪಿನಲ್ಲಿ ಎಂಟು ಗಂಡಾನೆಗಳು, ನಾಲ್ಕು ಮರಿಯಾನೆ ಹಾಗೂ 10 ಹೆಣ್ಣಾನೆಗಳು ಇದ್ದು, ಗಂಡಾನೆಗಳು ಜನಗಳನ್ನು ಗಮನಿಸಿ ರೊಚ್ಚಿಗೆದ್ದು, ಜನಗಳನ್ನು ಕಂಡ ತಕ್ಷಣ ಅವರ ಕಡೆಗೆ ನುಗ್ಗುತ್ತಿತ್ತು.ಹಿಮ್ಮೆಟ್ಟದ ಹಿಂಡು: ಜಿಲ್ಲಾ ಉಪ ಅರಣ್ಯಾಧಿಕಾರಿ ಮುನೇಗೌಡ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಣ್ಣಯ್ಯ, ಬಂಗಾರಪೇಟೆ ವಲಯಾಧಿಕಾರಿ ಚಂದ್ರಶೇಖರ್, ಅರಣ್ಯಾಧಿಕಾರಿ ಸುಬ್ಬರಾವ್, ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಆನೆಗಳನ್ನು ಕಾಡಿಗೆ ಓಡಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.13 ಆನೆಗಳ ಹಿಂಡು ಚಾಕನಹಳ್ಳಿ, ಕುಂತೂರು ಮುಖಾಂತರ ಸೊಣ್ಣಹಳ್ಳಿ ಗ್ರಾಮಕ್ಕೆ ಕಾಲಿಡುತ್ತಿದ್ದಂತೆಯೇ ಜನತೆ ಆನೆಗಳನ್ನು ನೋಡಲು ಕಿಕ್ಕಿರಿದು ನೆರೆದರು. ಜನಗಳನ್ನು ತಡೆಯಲು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಾಹಸ ಮಾಡಬೇಕಾಯಿತು.ಆದರೂ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸೊಣ್ಣಹಳ್ಳಿ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಮಲ್ಲಪ್ಪ(60) ಆನೆಯ ತುಳಿತಕ್ಕೆ ಸಿಲುಕಿ ಸಾವನ್ನಪಿದರು.ಘಟನೆ ನಡೆಯುತ್ತಿದ್ದಂತೆ ಜನತೆ ದಿಕ್ಕಾಪಾಲಾಗಿ ಓಟ ಕಿತ್ತರು. ನಂತರ ಪೊಲೀಸರು ಜನರನ್ನು ಚದುರಿಸಲು ಲಾಟಿ ಪ್ರಹಾರ ಕೂಡ ಮಾಡಿದರು. ಸಂಜೆ 6 ಗಂಟೆಗೆ ಸೊಣ್ಣಹಳ್ಳಿಯಿಂದ ಕಡತೂರು ಮುಖಾಂತರ ಲಿಂಗಾಪುರ, ಹಾರೋಹಳ್ಳಿ ಕಡೆಯಿಂದ ಅಬ್ಬೇನಹಳ್ಳಿ ಕಡೆಗೆ ಮುಖಮಾಡಿದವು.ಮಧ್ಯಾಹ್ನ ಕುರಿಗಾಹಿಯನ್ನು ತುಳಿದ ಆನೆಗಳು ಸಂಜೆ 6ರ ವೇಳೆಗೆ ಅಬ್ಬೇನಹಳ್ಳಿಯ ಬಳಿ ದನಗಾಹಿ ಮುನಿಯಪ್ಪ (60) ಅವರನ್ನು ತುಳಿದು ಸಾಯಿಸಿದವು. ಬನ್ನೇರುಘಟ್ಟ ಅರಣ್ಯ ಸಂರಕ್ಷಣಾಧಿಕಾರಿಗಳ ಸಹಕಾರದೊಂದಿಗೆ ಆನೆಗಳನ್ನು ಹಿಮ್ಮೆಟ್ಟಿಸಲು ಕಾರ್ಯಾಚರಣೆ ನಡೆಸಿ ಆನೆಗಳನ್ನು ತಮಿಳುನಾಡು ಅರಣ್ಯಕಡೆಗೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ಸುಬ್ಬರಾವ್ ತಿಳಿಸಿದ್ದಾರೆ.  ರಾತ್ರಿಯಾದರೂ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಬೆಳೆಹಾನಿ: ರೈತರು ಅಲ್ಪಸ್ವಲ್ಪ ನೀರಿನಲ್ಲಿ ಕೃಷಿ ಚಟುವಟಿಕೆ ನಡೆಸಿ ಬೆಳೆದಿರುವ ಕೋಸು, ಟೊಮೆಟೊ ಹಾಗೂ ಹಿಪ್ಪುನೇರಳೆ ಬೆಳೆಗಳು ಆನೆಗಳ ದಾಳಿಗೆ ಸಿಲುಕಿ ಹಾಳಾಗಿವೆ. ಹೀಗಾಗಿ ಕಾಡಿನಿಂದ ಆನೆಗಳು ನಾಡಿಗೆ ಬಾರದಂತೆ ಎಚ್ಚರಿಕೆ ವಹಿಸಿ ಬೆಳೆಗಳನ್ನು ಹಾಗೂ ಗ್ರಾಮೀಣ ಭಾಗದ ಜನತೆಯನ್ನು ಜಿಲ್ಲಾಡಳಿತ ಉಳಿಸಬೇಕು ಎಂಬುದು ರೈತರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.