ಮತ್ತೆ ಬಂತು ಕಡಲೆಕಾಯಿ ಪರಿಷೆ

7

ಮತ್ತೆ ಬಂತು ಕಡಲೆಕಾಯಿ ಪರಿಷೆ

Published:
Updated:

1537ರ ಆಸುಪಾಸು. ಬೆಂಗಳೂರಿನ ಸುತ್ತಮುತ್ತಲೆಲ್ಲಾ ಕಡಲೆಕಾಯಿ ಬೆಳೆ ಭರ್ಜರಿ ಆಗಿತ್ತು. ನೋಡನೋಡುತ್ತಿದ್ದಂತೆ ಬೆಳೆದ ಕಡಲೇಕಾಯಿ ಬೆಳೆ  ಇಲ್ಲವಾಗುತ್ತಿತ್ತು. ಇದು ಬಸವಣ್ಣನ ಕರಾಮತ್ತು, ಬಸವಣ್ಣ ಜೀವಂತವಾಗಿ ಬಂದು ಕಡಲೆಕಾಯಿ ತಿನ್ನುತ್ತಿದ್ದಾನೆ ಎಂದು ತಿಳಿದ ರೈತರು `ಇನ್ನುಮುಂದೆ ಪ್ರತಿವರ್ಷ ಕಡಲೆಕಾಯಿಯನ್ನು ನಿನಗೆ ಅರ್ಪಿಸಿ ವ್ಯಾಪಾರ ಮಾಡುತ್ತೇವೆ' ಎಂದು ಬೇಡಿಕೊಂಡರಂತೆ.



ಆಗಿನಿಂದಲೂ ಚಾಲ್ತಿಯಲ್ಲಿದೆ ಎನ್ನಲಾಗುತ್ತಿರುವ `ಕಡಲೆಕಾಯಿ ಪರಿಷೆ'ಗೆ ಎಷ್ಟು ತುಂಬಿತೋ ನಿಖರವಾಗಿ ಗೊತ್ತಿಲ್ಲ. 20 ವರ್ಷಗಳಿಂದೀಚೆಗೆ ಅತ್ಯಂತ ಪ್ರಸಿದ್ಧಿ ಪಡೆದ ಪರಿಷೆ ಪ್ರತಿವರ್ಷದ ಕಾರ್ತಿಕ ಮಾಸದ ಕೊನೆಯ ಸೋಮವಾರ ಹಾಗೂ ಮಂಗಳವಾರ ಪ್ರಾರಂಭವಾಗುತ್ತದೆ. ಆಗ ಬಸವನಗುಡಿಯ ಬೀದಿಬೀದಿಗಳಲ್ಲಿ ಕಡಲೆಕಾಯಿ ಜಾತ್ರೆ. ನೆರೆಯ ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ನಾನಾ ಭಾಗದ ರೈತರು ಗಣಪನಿಗೆ ನೈವೇದ್ಯ ಅರ್ಪಿಸಿ ವ್ಯಾಪಾರ ಮಾಡಿಕೊಂಡು ಹೋಗಲು ಬರುವುದನ್ನು ನೋಡುವುದೇ ಒಂದು ಮಜಾ.



ಅಂದಹಾಗೆ, ಇಂದು (ಡಿ.10) ಕಾರ್ತಿಕ ಮಾಸದ ಕೊನೆಯ ಸೋಮವಾರ. ಈಗಾಗಲೇ ಬಸವನಗುಡಿಯ ದೊಡ್ಡಗಣಪತಿ ಹಾಗೂ ದೊಡ್ಡಬಸವನ ದೇವಸ್ಥಾನದ ಸುತ್ತಮುತ್ತ ಶೇಂಗಾ ರಾಶಿಗಳು ಬಿದ್ದಿವೆ. ಹತ್ತಾರು ಮೂಟೆಗಳನ್ನು ಇಟ್ಟುಕೊಂಡು ಶೇಂಗಾ ಮಾರಾಟ ಪ್ರಾರಂಭಿಸಿಯೂ ಆಗಿದೆ. ರಾತ್ರಿಯಾದರೆ ಅಲ್ಲಿನ ಪುಟ್ಟ ಜಾಗದಲ್ಲೇ ನಿದ್ದೆ. ಕೆಲವರು ಅಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಾರೆ. ಮಂಗಳವಾರ ಸಂಜೆ ಹೊತ್ತಿಗೆ ದುಡಿದವರ ಮುಖದಲ್ಲಿ ದಣಿವು, ಸಾರ್ಥಕ್ಯ. ಕೂದಲು ಕೆದರಿರುತ್ತವೆ. ಮಣ್ಣುಮಣ್ಣಾದ ಬಟ್ಟೆಗಳನ್ನೆಲ್ಲಾ ಸೇರಿಸಿ ಹೊರಡುವ ತಯಾರಿಯಲ್ಲಿರುವ ಅವರ ಮುಖದಲ್ಲಿ ವ್ಯಾಪಾರ ಚೆನ್ನಾಗಿ ಆದ ಸಮಾಧಾನ ಎದ್ದು ಕಾಣುತ್ತದೆ.



ದೇವಸ್ಥಾನದ ಸುತ್ತಮುತ್ತಲಿನ ನಾಲ್ಕೂ ರಸ್ತೆಗಳಲ್ಲಿ ಕಡಲೆಕಾಯಿ, ಕಡಲೆಪುರಿ, ಬ್ಲ್ಲೆಲ, ಕಲ್ಯಾಣ ಸೇವೆ ವಸ್ತುಗಳು, ಮಣ್ಣಿನ ಪಾತ್ರೆಗಳು, ಗೊಂಬೆಗಳು, ಹಲವಾರು ರೀತಿಯ ಸಿಹಿತಿಂಡಿಗಳು ಹೀಗೆ ಹತ್ತಾರು ವಿಧದ ಅಂಗಡಿಗಳು ಬಂದು ಠಿಕಾಣಿ ಹೂಡಿವೆ. ಚಿಕ್ಕ ಚಿಕ್ಕ ಬೈಕ್, ನವಿಲು, ಬೃಹತ್ ಗಾತ್ರದ ದೋಣಿಗಳು ತಮಿಳುನಾಡಿನಿಂದ ಬಂದಿವೆ. ನೋಡಿದರೆ ಎಲ್ಲವೂ ಮಕ್ಕಳ ಆಟಕ್ಕಾಗಿ. `ಭಾನುವಾರದಿಂದಲೇ ಬಸವನಗುಡಿಗೆ ಜಾತ್ರೆಯ ರಂಗು ಬರುತ್ತದೆ. ಹೆಚ್ಚಿನವರು ಮಜಾ ಮಾಡಲೆಂದೇ ಬರುತ್ತಾರೆ. ಮಕ್ಕಳಂತೂ ಈ ಆಟದ ವಸ್ತುಗಳನ್ನು ನೋಡಿದರೆ ಗಲಾಟೆ ಮಾಡಿಯಾದರೂ ಕೊಡಿಸಿಕೊಳ್ಳುತ್ತಾರೆ. ನಾಲ್ಕು ದಿನ ಮೊದಲೇ ಬಂದ ನಮಗೆ ಇವುಗಳನ್ನು ಒಪ್ಪವಾಗಿ ಜೋಡಿಸಿ ಫಿಕ್ಸ್ ಮಾಡುವುದೇ ಬಹುದೊಡ್ಡ ಕೆಲಸ. ಬಸವಣ್ಣ ನಂಬಿದವರ ಕೈ ಬಿಡುವುದಿಲ್ಲ' ಎನ್ನುತ್ತಾರೆ ವ್ಯವಸ್ಥಾಪಕ ಪವನ್‌ರಾಜ್.



`ಎರಡೂ ದಿನ ಜಾತ್ರೆಯ ಸಂಭ್ರಮ. ರಾಜ್ಯದ ಬೇರೆ ಬೇರೆ ಕಡೆಯ ರೈತರು ಕ್ಯಾಲೆಂಡರ್ ನೋಡಿ ಪರಿಷೆಗೆ ವಾರ ಮುಂಚೆ ಬಂದು ಕೂರುತ್ತಾರೆ. ಈಗಾಗಲೇ ವ್ಯಾಪಾರ ಶುರು ಮಾಡಿಕೊಂಡುಬಿಟ್ಟಿರುತ್ತಾರೆ. ಸರ್ಕಾರ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರ ತುಂಬು ಸಹಕಾರ ಜಾತ್ರೆಗೆ ಇದೆ. ಈಗಾಗಲೇ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜೊತೆ ಸೇರಿ ಸಭೆ ಕರೆದು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ. ಪರಿಷೆ ಮುಗಿದ ನಂತರ (ಬುಧವಾರ ಹೊತ್ತಿಗೆ) ತ್ಯಾಜ್ಯ ವಿಲೇವಾರಿ ಮಾಡುವ ಬಗೆಗೂ ನಿರ್ಣಯ ಕೈಗೊಳ್ಳಲಾಗಿದೆ' ಎಂದು ಪ್ರಧಾನ ಅರ್ಚಕರಾದ ಸುನಿಲ್ ಕುಮಾರ್ ಮಾಹಿತಿ ನೀಡುತ್ತಾರೆ.



ಎರಡು ದಿನದ ಪರಿಷೆಯಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಜನ ಬರುತ್ತಾರೆ. ಕೆಲವರು ಜಾತ್ರೆಯ ಮಜಾ ಸವಿಯಲು ಬಂದರೆ, ಇನ್ನು ಕೆಲವರು ದೇವರ ದರ್ಶನ ಪಡೆಯಲೆಂದೇ ಆಗಮಿಸುತ್ತಾರೆ. ಬಹಳ ಜನರಿಗೆ ದೇವರ ದರ್ಶನ ಪಡೆಯಬೇಕೆಂಬ ಆಸೆ ಇದ್ದರೂ ದೇವಸ್ಥಾನದ ಒಳಗೆ ನಡೆಯಲಾಗದಷ್ಟು ಜನದಟ್ಟಣೆ ಇರುತ್ತದೆ. ದೇವರ ಬಗ್ಗೆ ಕಾಳಜಿ ಇಲ್ಲ ಎಂದು ಗೋಳಾಡುವ ಮನಸ್ಸಿನವರು ಕೂಡ ಒಮ್ಮೆ ಪರಿಷೆ ನೋಡಿ ಮನಸ್ಸು ತಂಪು ಮಾಡಿಕೊಳ್ಳಬಹುದು.



`ಬಸವಣ್ಣ ವ್ಯಾಪಾರಕ್ಕೆ ಮೋಸ ಮಾಡಾಕಿಲ್ಲ. ಬಂದವರೆಲ್ಲರೂ ಚೂರೂ ಬಿಡದಂಗೆ ವ್ಯಾಪಾರ ಮಾಡ್ಕಂಡು ಹೋಗ್ತಾರೆ. ಹೊರಗಿನವರ ಬಗ್ಗೆ ಜಾಸ್ತಿ ಕಾಳಜಿ ತೋರಿಸ್ತಾರೆ. ಆದರೆ ಅವರೂ ದೂರದಿಂದ ಬಂದಿರ್ತಾರೆ. ಹಣ ಮಾಡ್ಕಳ್ಲಿ ಅಂತ ಸುಮ್ನಾಗ್ತೀವಿ' ಅನ್ನುತ್ತಾರೆ ಪ್ರತಿದಿನ ದೊಡ್ಡಬಸವಣ್ಣನ ದೇವಸ್ಥಾನದ ಮುಂದೆ ಕಡಲೆಕಾಯಿ ವ್ಯಾಪಾರ ಮಾಡುವ ಯಲ್ಲಮ್ಮ.



ಮೊದಮೊದಲು ಕೇವಲ ಕಡಲೆಕಾಯಿ ವ್ಯಾಪಾರ ಮಾಡೋಕೆ ಬರ್ತಿದ್ರು. ಈಗೀಗ ವ್ಯಾಪಾರೀಕರಣದಿಂದ ಎಲ್ಲಾ ಥರದ ಅಂಗಡಿಯವರೂ ಬಂದು ವ್ಯಾಪಾರ ಮಾಡಿಕೊಂಡು ಹೋಗ್ತಾರೆ. ಬೇರೆ ಬೇರೆ ಭಾಷೆಯ ಜನ, ಬೇರೆ ಸಂಸ್ಕೃತಿಯ ಜನ ಮೇಳೈಸಿ ಎರಡು ದಿನ ಹೊಸತನದ ಪ್ರತಿಬಿಂಬ ಮೂಡುತ್ತದೆ. `ಸುಮಾರು 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕಗೊಳ್ಳುವುದರಿಂದ ಗಲಾಟೆ ಅಥವಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಕಡಲೆಕಾಯಿ ತಿಂದು ಖುಷಿ ಪಡುತ್ತಾರೆ. ಈ ಜಾಗಗಳಲ್ಲಿ ಬಸ್ಸುಗಳ ಓಡಾಟಕ್ಕೂ ಜಾಗವಿರುವುದಿಲ್ಲ. ಕಾಲಿಡುವುದೇ ಕಷ್ಟ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೂ ಜನರ ಉತ್ಸಾಹ ಕಡಿಮೆ ಯಾಗುವುದಿಲ್ಲ' ಎನ್ನುತ್ತಾರೆ 20 ವರ್ಷದಿಂದ ಭದ್ರತಾ ಸಿಬ್ಬಂದಿಯಾಗಿ ಇಲ್ಲಿ ಕೆಲಸ ಮಾಡುತ್ತಿರುವ ಬ್ಯೂಗಲ್ ರಾಕ್ ಪಡಿಯಪ್ಪ.



ಚಿಣ್ಣರ ಸಂಭ್ರಮ, ಪ್ರೇಮಿಗಳ ಸಲ್ಲಾಪ, ಭಕ್ತರ ಧ್ಯಾನ, ಪೀಪಿ, ಮಿಠಾಯಿ, ಹೊಸ ಕಾಲದ ಚಾಟ್ಸ್ ಎಲ್ಲಕ್ಕೂ ಸಾಕ್ಷಿಯಾಗುವ ಪರಿಷೆಯಲ್ಲಿ ಕಡಲೇಕಾಯಿ ವೈವಿಧ್ಯದ ಬೋನಸ್ಸು. ನಗರದಲ್ಲೂ ಒಂದು ಹಳ್ಳಿ ನಿರ್ಮಾಣವಾಗಲು ಕಾರಣವಾಗುವ ಈ ಪರಿಷೆ ಬೇರೆ ಬೇರೆ ಕಾರಣಗಳಿಂದ ಗಮನ ಸೆಳೆಯುತ್ತದೆ.                         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry