ಮತ್ತೆ ಬಂದಿದೆ ಖಾದಿ ಉತ್ಸವ

7

ಮತ್ತೆ ಬಂದಿದೆ ಖಾದಿ ಉತ್ಸವ

Published:
Updated:

ವಿಜಾಪುರ: ಗ್ರಾಮೀಣ ಕುಶಲಕರ್ಮಿಗಳ ನೈಪುಣ್ಯದ ಆಕರ್ಷಕ ಕರಕುಶಲ ವಸ್ತುಗಳು, ಹಿತಕರ ಖಾದಿ ಬಟ್ಟೆ, ವ್ಯಾನಿಟಿ ಬ್ಯಾಗ್ ಮತ್ತಿತರ ಅಲಂಕಾರಿಕ ವಸ್ತುಗಳು, ದೂರದ ಚನ್ನಪಟ್ಟಣದ ವೈಯ್ಯಾರದ ಗೊಂಬೆ, ಮನೆ, ನಿತ್ಯ ಉಪಯೋಗಕ್ಕೆ ವಸ್ತು ಖರೀದಿಸಿದ ನಂತರ ಬಾಯಿ ಚಪ್ಪರಿಸಲು ಒಂದಿಷ್ಟು ಕುರುಕುಲು ತಿಂಡಿ....ಹೌದು. ಇವೆಲ್ಲ ಈಗ ಒಂದೇ ಸೂರಿನಡಿ ದೊರೆಯುತ್ತಿವೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ವಿಜಾಪುರದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಆಶ್ರಯದಲ್ಲಿ ಇಲ್ಲಿಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿರುವ ಖಾದಿ ಉತ್ಸವದಲ್ಲಿ.‘ಖಾದಿ ಬಟ್ಟೆ ಆರೋಗ್ಯಕ್ಕೆ ಹಿತಕರ. ಬೇಸಿಗೆ-ಚಳಿಗಾಲಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಖಾದಿ ಖರೀದಿಸಿ ದುಡಿಯುವ ಕೈಗಳಿಗೆ ಉದ್ಯೋಗ ಕೊಡಿ’ ಎಂಬುದು ಸಂತರು-ಸ್ವಾತಂತ್ರ್ಯ ಯೋಧರ ಮನವಿ. ಪ್ರತಿ ವರ್ಷವೂ ಇಲ್ಲಿ ನಡೆಯುವ ಖಾದಿ ಉತ್ಸವದಲ್ಲಿ 75 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವ ಮೂಲಕ ಜನರೂ ತಮ್ಮ ಖಾದಿ ಪ್ರೀತಿ ಪ್ರದರ್ಶಿಸುತ್ತಲೇ ಬಂದಿದ್ದಾರೆ.ಖಾದಿ ಮತ್ತು ಪಾಲಿ ವಸ್ತ್ರಗಳಿಗೆ ಶೇ.35ರಷ್ಟು ರಿಬೇಟ್ ನೀಡಲಾಗುತ್ತಿದೆ. ರೇಷ್ಮೆ, ಕಂಬಳಿ, ಸ್ವಾದಿಷ್ಟ ಕರದಂಟು, ಬೆಂಗಳೂರಿನ ವಿಶಿಷ್ಟ ಕಡಲೆ ಬೀಜ (ಶೇಂಗಾ), ರಾಗಿ ಚೂಡಾ, ಅವರೆ ಕಾಳು, ಶೇಂಗಾ ಚಟ್ನಿ, ಶೇಂಗಾ ಹೋಳಿಗೆ, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ಉಪ್ಪಿನಕಾಯಿ... ಹೀಗೆ ಗೃಹಬಳಕೆಗೆ ಅವಶ್ಯವಿರುವ ಎಲ್ಲ ವಸ್ತುಗಳೂ ಇಲ್ಲಿವೆ. ಅಷ್ಟೇ ಏಕೆ, ಕಟ್ಟಿಗೆಯ ಫರ್ನಿಚರ್, ಚಪ್ಪಲಿ, ಶೂ ಮತ್ತಿತರ ವಸ್ತುಗಳೂ ಲಭ್ಯ. ಕಟ್ಟಿಗೆಯಲ್ಲಿ ತಯಾರಿಸಿದ ಆಟಿಕೆ ಸಾಮಾನು, ಬಳೆ, ಕೀಲಿ ಗೊಂಚಲು ಹೀಗೆ ಬಣ್ಣ ಬಣ್ಣದಲ್ಲಿರುವ ವಿವಿಧ ವಸ್ತುಗಳು ಗಮನ ಸೆಳೆಯುತ್ತಿವೆ.‘ಸಿದ್ಧೇಶ್ವರ ಜಾತ್ರೆಯ ನಂತರ ನಡೆಯುತ್ತಿರುವ ಈ ಉತ್ಸವಕ್ಕೆ ಆರಂಭದಲ್ಲಿ ಸ್ವಲ್ಪ ಹಿನ್ನಡೆ ಸಹಜ. ಮೇಲಾಗಿ ಅಷ್ಟೊಂದು ವಿಭಿನ್ನ ಉಡುಪುಗಳು ಇಲ್ಲ ಎಂದು ಕೆಲ ಗ್ರಾಹಕರು ಮೂಗು ಮುರಿಯು ತ್ತಿದ್ದಾರೆ. ಆದರೂ ದಿನ ಕಳೆದಂತೆ ಜನ ಬರುತ್ತಾರೆ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವಸ್ತು ಖರೀದಿಸಿಯೇ ಖರೀದಿಸುತ್ತಾರೆ’ ಎಂಬ ನಂಬಿಕೆ ಉತ್ಸವದಲ್ಲಿ ಪಾಲ್ಗೊಂಡಿರುವ ವರ್ತಕರದ್ದು.‘ಫೆ.19ರಂದು ಆರಂಭ ಗೊಂಡಿರುವ ಈ ಉತ್ಸವ 15 ದಿನಗಳ ಕಾಲ ನಡೆಯಲಿದೆ. 88 ಮಳಿಗೆಗಳಿದ್ದು, 40 ಮಳಿಗೆಗಳಲ್ಲಿ ಖಾದಿ ಉತ್ಪನ್ನ, ಉಳಿದ ಮಳಿಗೆಗಳಲ್ಲಿ ಗುಡಿ ಕೈಗಾರಿಕೆಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಈ ಬಾರಿ 70 ರಿಂದ 80 ಲಕ್ಷ ರೂಪಾಯಿ ವಹಿವಾಟು ನಿರೀಕ್ಷಿಸಲಾಗಿದೆ’ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘಗಳ ಒಕ್ಕೂಟದ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ. ಪಾಟೀಲ (ಶೇಗುಣಶಿ) ಹೇಳುತ್ತಾರೆ.‘ಜಿಲ್ಲೆಯ ಸುಮಾರು ಎರಡು ಸಾವಿರ ಜನ ಖಾದಿ ಮತ್ತು ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಅವರ ಉಪಜೀವನ ಈ ವಸ್ತುಗಳ ಮಾರಾಟದ ಮೇಲೆಯೇ ಅವಲಂಬನೆಯಾಗಿದೆ. ಸರ್ಕಾರ ಖಾದಿ ಉತ್ಪಾದನೆಗೆ ನೀಡುತ್ತಿರುವ ಸಬ್ಸಿಡಿ ಯನ್ನು ನಾವು ಗ್ರಾಹಕರಿಗೇ ನೀಡು ತ್ತಿದ್ದೇವೆ. ಗ್ರಾಹಕರು ಈ ವಸ್ತುಗಳನ್ನು ಖರೀದಿಸಿ ಈ ಉದ್ಯಮ ಉಳಿಸಬೇಕು’ ಎಂದು ಪಾಟೀಲ ಮನವಿ ಮಾಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry