ಮತ್ತೆ ಬಯಲಾಯಿತು ಬೌಲಿಂಗ್ ದೌರ್ಬಲ್ಯ

ಬ್ರಿಸ್ಬೇನ್ (ಪಿಟಿಐ/ಐಎಎನ್ಎಸ್): ‘ಎದುರಾಳಿ ತಂಡವನ್ನು ಕಟ್ಟಿ ಹಾಕಲು ನಮ್ಮ ಬೌಲರ್ಗಳಿಗೆ 300 ರನ್ ಸಾಕಾಗುವುದಿಲ್ಲ...’
ಹೀಗೆ ವ್ಯಂಗಮಿಶ್ರಿತ ಧಾಟಿಯಲ್ಲಿ ಭಾರತದ ಬೌಲರ್ಗಳನ್ನು ಚುಚ್ಚಿದ್ದು ನಾಯಕ ಮಹೇಂದ್ರ ಸಿಂಗ್ ದೋನಿ. ಅವರ ಮಾತಿನಲ್ಲಿ ತಮ್ಮ ತಂಡದ ಸೋಲಿಗೆ ಕಾರಣವೇನೆಂಬುದು ಸ್ಪಷ್ಟ ವಾಗಿತ್ತು.
ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 309 ರನ್ ಗಳಿಸಿಯೂ ಸೋತಿದ್ದ ಪ್ರವಾಸಿ ತಂಡಕ್ಕೆ ಬ್ರಿಸ್ಬೇನ್ ಕ್ರೀಡಾಂಗಣದಲ್ಲಿಯೂ ನಿರಾಸೆ ಕಾಡಿತು. ಬೌಲಿಂಗ್ ದೌರ್ಬಲ್ಯ ಸೋಲಿಗೆ ಕಾರಣ ವಾಯಿತು. 309 ರನ್ಗಳ ಸವಾಲಿನ ಗುರಿಯನ್ನು ಸುಲಭವಾಗಿ ಮುಟ್ಟಿದ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ ಪಡೆದುಕೊಂಡಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ರೋಹಿತ್ ಶತಕ, ಉಪನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಅರ್ಧಶತಕಗಳ ಬಲದಿಂದ ಪ್ರವಾಸಿ ತಂಡ ಸವಾಲಿನ ಮೊತ್ತ ಕಲೆ ಹಾಕಿತು.
ಮತ್ತೊಂದು ಶತಕ: ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್ ಎರಡನೇ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್ ಮುಂದುವರಿಸಿದರು. 175 ನಿಮಿಷ ಕ್ರೀಸ್ನಲ್ಲಿದ್ದು 11 ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದಂತೆ 124 ರನ್ ಕಲೆ ಹಾಕಿದರು. ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಗಳಿಸಿದ ಹತ್ತನೇ ಶತಕವಿದು.
ಜೊತೆಗೆ ಆಸ್ಟ್ರೇಲಿಯಾ ಎದುರು ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎನ್ನುವ ಕೀರ್ತಿ ಯನ್ನು ರೋಹಿತ್ ತಮ್ಮದಾಗಿಸಿ ಕೊಂಡರು. ಆತಿಥೇಯರ ಎದುರು ಮುಂಬೈನ ಆಟಗಾರ ಬಾರಿಸಿದ ಐದನೇ ಶತಕವಿದು. ಸಚಿನ್ ತೆಂಡೂಲ್ಕರ್ (70 ಇನಿಂಗ್ಸ್ಗಳಿಂದ 9 ಶತಕ) ಮತ್ತು ವೆಸ್ಟ್ ಇಂಡೀಸ್ನ ಡೆಸ್ಮಂಡ್ ಹೈನಸ್ (64 ಇನಿಂಗ್ಸ್ಗಳಿಂದ 6 ಶತಕ) ಬಾರಿಸಿದ್ದಾರೆ.
ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಧವನ್ (6) ಈ ಪಂದ್ಯ ದಲ್ಲಿಯೂ ತಮ್ಮ ಮೇಲಿನ ನಿರೀಕ್ಷೆ ಹುಸಿ ಗೊಳಿಸಿದರು. ಎರಡು ಮಹತ್ವದ ಜೊತೆಯಾಟಗಳಿಂದ ಭಾರತ ತಂಡಕ್ಕೆ ಮೂನ್ನರಕ್ಕಿಂತಲೂ ಹೆಚ್ಚು ರನ್ ಕಲೆ ಹಾಕಲು ಸಾಧ್ಯವಾಯಿತು. ರೋಹಿತ್ ಮತ್ತು ವಿರಾಟ್ ಕೊಹ್ಲಿ ( 59, 84 ನಿಮಿಷ, 67 ಎಸೆತ, 4 ಬೌಂಡರಿ) ಮೂರನೇ ವಿಕೆಟ್ಗೆ 125 ರನ್ ಮತ್ತು ರೋಹಿತ್–ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್ಗೆ 121 ರನ್ ಕಲೆ ಹಾಕಿದರು.
35 ಓವರ್ಗಳು ಪೂರ್ಣಗೊಂಡಿ ದ್ದಾಗ ಭಾರತ 166 ರನ್ ಗಳಿಸಿತ್ತು. ಕೊನೆಯ 90 ಎಸೆತಗಳಲ್ಲಿ 142 ರನ್ಗಳು ಹರಿದು ಬಂದವು. ರೋಹಿತ್ ಮತ್ತು ರಹಾನೆ ಅವರ ವೇಗದ ಆಟ ಇದಕ್ಕೆ ಕಾರಣವಾಯಿತು. ರಹಾನೆ 80 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಂತೆ 89 ರನ್ ಗಳಿಸಿ ಕಾಂಗರೂಗಳ ನಾಡಿನ ಬೌಲರ್ಗಳನ್ನು ಕಾಡಿದರು.
ಜಯದ ಮುನ್ನುಡಿ: ಇಲ್ಲಿನ ಕ್ರೀಡಾಂಗಣ ದಲ್ಲಿ ಭಾರತದ ಎದುರು ಉತ್ತಮ ಗೆಲುವಿನ ದಾಖಲೆ ಹೊಂದಿರುವ ಸ್ಟೀವನ್ ಸ್ಮಿತ್ ಬಳಗಕ್ಕೆ ಈ ಪಂದ್ಯದಲ್ಲಿ ಜಯದ ಮುನ್ನುಡಿ ಬರೆಯಲು ಹೆಚ್ಚು ಕಷ್ಟವಾಗಲಿಲ್ಲ. ಆರಂಭಿಕ ಬ್ಯಾಟ್ಸ್ಮನ್ ಗಳಾದ ಆ್ಯರನ್ ಫಿಂಚ್ (71, 97 ನಿಮಿಷ, 81 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಶಾನ್ ಮಾರ್ಷ್ (71, 121 ನಿಮಿಷ, 84 ಎಸೆತ, 5 ಬೌಂಡರಿ) ಮೊದಲ ವಿಕೆಟ್ಗೆ 145 ರನ್ ಗಳಿಸಿ ಗಟ್ಟಿ ಬುನಾದಿ ನಿರ್ಮಿಸಿದರು.
ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ ಸ್ಮಿತ್ (46), ಜಾರ್ಜ್ ಬೇಲಿ (ಔಟಾಗದೆ 76, 78 ನಿಮಿಷ, 58 ಎಸೆತ, 6 ಬೌಂಡರಿ, 1 ಸಿಕ್ಸರ್) ಗೆಲುವಿಗೆ ಕಾರಣರಾದರು. ಇದರಲ್ಲಿ ಭಾರತದ ಕಳಪೆ ಫೀಲ್ಡಿಂಗ್ನ ‘ಕಾಣಿಕೆಯೂ’ ಇದೆ.24ನೇ ಓವರ್ನಲ್ಲಿ ಬರೀಂದರ್, 28ನೇ ಓವರ್ನಲ್ಲಿ ಮನೀಷ್ ಪಾಂಡೆ ಮತ್ತು ಇಶಾಂತ್ ಶರ್ಮಾ ಕ್ಯಾಚ್ ಕೈ ಚೆಲ್ಲಿದರು.
ಬಯಲಾದ ದೌರ್ಬಲ್ಯ: ವೇಗದ ಬೌಲಿಂಗ್ ಬಲಗೊಳಿಸುವ ಸಲುವಾಗಿ ನಾಯಕ ದೋನಿ ವೇಗಿಗಳಾದ ಬರೀಂದರ್ ಸ್ರಾನ್, ಅನುಭವಿ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಅವರನ್ನು ಕಣಕ್ಕಿಳಿಸಿದ್ದರು. ಸ್ಪಿನ್ನರ್ ಗಳಾದ ಅಶ್ವಿನ್ ಹಾಗೂ ರವೀಂದ್ರ ಜಡೇಜ ಕೂಡ ಇದ್ದರು. ಇವರಿಗೆ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಅಶ್ವಿನ್, ಜಡೇಜ ಹಾಗೂ ಸಾಂದರ್ಭಿಕ ಸ್ಪಿನ್ನರ್ ಕೊಹ್ಲಿ ಸೇರಿ ಒಟ್ಟು 20 ಓವರ್ ಬೌಲಿಂಗ್ ಮಾಡಿ 117 ರನ್ಗಳನ್ನು ಕೊಟ್ಟರು. ಉಳಿದ ರನ್ಗಳನ್ನು ವೇಗಿಗಳು ನೀಡಿದರು.
ಮೊದಲ ಪಂದ್ಯದಲ್ಲಿಯೂ ಭಾರತದ ಬೌಲಿಂಗ್ ದುರ್ಬಲವಾಗಿತ್ತು. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ಅಶ್ವಿನ್ ಮತ್ತು ಜಡೇಜ ಅವರ ಸ್ಪಿನ್ ಮೋಡಿ ಇಲ್ಲಿ ನಡೆಯಲಿಲ್ಲ.
ಸ್ಕೋರ್ಕಾರ್ಡ್
ಭಾರತ 8 ಕ್ಕೆ308 (50 ಓವರ್ಗಳಲ್ಲಿ)
ರೋಹಿತ್ ಶರ್ಮಾ ರನ್ ಔಟ್ (ಜೇಮ್ಸ್ ಫಾಕ್ನರ್) 124
ಶಿಖರ್ ಧವನ್ ಸಿ. ಮ್ಯಾಥ್ಯೂ ವೇಡ್ ಬಿ. ಜೊಯಲ್ ಪ್ಯಾರಿಸ್ 06
ವಿರಾಟ್ ಕೊಹ್ಲಿ ರನ್ ಔಟ್ (ಕೇನ್ ರಿಚರ್ಡ್ಸನ್/ಮ್ಯಾಥ್ಯೂ ವೇಡ್) 59
ಅಜಿಂಕ್ಯ ರಹಾನೆ ಸಿ. ಸ್ಟೀವನ್ ಸ್ಮಿತ್ ಬಿ. ಜೇಮ್ಸ್ ಫಾಕ್ನರ್ 89
ಮಹೇಂದ್ರಸಿಂಗ್ ದೋನಿ ಸಿ. ಗ್ಲೆನ್ ಮ್ಯಾಕ್ಸ್ವೆಲ್ ಬಿ. ಸ್ಕಾಟ್ ಬೊಲಾಂಡ್ 11
ಮನೀಷ್ ಪಾಂಡೆ ಸಿ. ಜೊಯಲ್ ಪ್ಯಾರಿಸ್ ಬಿ. ಜೇಮ್ಸ್ ಫಾಕ್ನರ್ 06
ರವೀಂದ್ರ ಜಡೇಜ ರನ್ ಔಟ್ (ಜಾನ್ ಹಾಸ್ಟಿಂಗ್ಸ್) 05
ಆರ್. ಅಶ್ವಿನ್ ಸಿ. ಸ್ಕಾಟ್ ಬೊಲಾಂಡ್ ಬಿ. ಜಾನ್ ಹಾಸ್ಟಿಂಗ್ಸ್ 01
ಉಮೇಶ್ ಯಾದವ್ ಔಟಾಗದೆ 00
ಇತರೆ: (ವೈಡ್–7) 07
ವಿಕೆಟ್ ಪತನ: 1–9 (ಧವನ್; 2.2), 2–134 (ಕೊಹ್ಲಿ; 23.5), 3–255 (ರೋಹಿತ್; 42.2), 4–276 (ದೋನಿ; 45.6), 5–298 (ರಹಾನೆ; 48.3), 6–302 (ಮನೀಷ್; 48.5), 7–306 (ಅಶ್ವಿನ್; 49.3), 8–308 (ಜಡೇಜ; 49.6)
ಬೌಲಿಂಗ್: ಜೊಯಲ್ ಪ್ಯಾರಿಸ್ 8–0–40–1, ಕೇನ್ ರಿಚರ್ಡ್ಸನ್ 8–1–61–0, ಜಾನ್ ಹಸ್ಟಿಂಗ್ಸ್ 8–0–46–1, ಸ್ಕಾಟ್ ಬೊಲಾಂಡ್ 10–0–64–1, ಗ್ಲೆನ್ ಮ್ಯಾಕ್ಸ್ವೆಲ್ 6–0–33–0, ಜೇಮ್ಸ್ ಫಾಕ್ನರ್ 10–0–64–2.
ಆಸ್ಟ್ರೇಲಿಯಾ 3ಕ್ಕೆ 309 (49 ಓವರ್ಗಳಲ್ಲಿ)
ಆ್ಯರನ್ ಫಿಂಚ್ ಸಿ. ಅಜಿಂಕ್ಯ ರಹಾನೆ ಬಿ. ರವೀಂದ್ರ ಜಡೇಜ 71
ಶಾನ್ ಮಾರ್ಷ್ ಸಿ. ವಿರಾಟ್ ಕೊಹ್ಲಿ ಬಿ. ಇಶಾಂತ್ ಶರ್ಮಾ 71
ಸ್ಟೀವನ್ ಸ್ಮಿತ್ ಬಿ. ಉಮೇಶ್ ಯಾದವ್ 46
ಜಾರ್ಜ್ ಬೇಲಿ ಔಟಾಗದೆ 76
ಗ್ಲೆನ್ ಮ್ಯಾಕ್ಸ್ವೆಲ್ ಔಟಾಗದೆ 26
ಇತರೆ: (ಲೆಗ್ ಬೈ–7, ವೈಡ್–11, ನೋ ಬಾಲ್–1) 19
ವಿಕೆಟ್ ಪತನ: 1–9 (ಫಿಂಚ್; 2.3), 2–21 (ವಾರ್ನರ್; 4.4), 3–263 (ಬೇಲಿ; 41.5), 4–273 (ಮ್ಯಾಕ್ಸ್ವೆಲ್; 43.4), 5–308 (ಸ್ಮಿತ್; 49.1)
ಬೌಲಿಂಗ್: 1–145 (ಫಿಂಚ್; 24.5), 2–166 (ಮಾರ್ಷ್; 29.5), 3–244 (ಸ್ಮಿತ್; 40.5), ಬೌಲಿಂಗ್: ಬರೀಂದರ್ ಸ್ರಾನ್ 9–1–51–0, ಇಶಾಂತ್ ಶರ್ಮಾ 10–0–60–1, ಉಮೇಶ್ ಯಾದವ್ 10–0–74–1, ರವೀಂದ್ರ ಜಡೇಜ 9–0–50–1, ಆರ್. ಅಶ್ವಿನ್ 10–0–60–0, ವಿರಾಟ್ ಕೊಹ್ಲಿ 1–0–7–0.
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಗೆಲುವು.
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ (ಭಾರತ)
ಎರಡನೇ ಪಂದ್ಯ: ಜ. 17 (ಮೆಲ್ಬರ್ನ್).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.