ಮತ್ತೆ ಬಾರವು ಆ ದಿನಗಳು.....

ಗುರುವಾರ , ಜೂಲೈ 18, 2019
24 °C

ಮತ್ತೆ ಬಾರವು ಆ ದಿನಗಳು.....

Published:
Updated:

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನೀರಾವರಿ ಯೋಜನೆ ಅನುಷ್ಠಾನವಾಗದೇ ಕೃಷಿ ಚಟುವಟಿಕೆ ಕಷ್ಟಸಾಧ್ಯ ಎನ್ನುವ ರೈತರು, `ಮಳೆ ಬಂದರೆ ಬೆಳೆ, ಮಳೆಯಿಲ್ಲದಿದ್ದರೆ ಸಾಲದ ಶೂಲೆ' ಎಂದು ಭೀತಿ ವ್ಯಕ್ತಪಡಿಸುತ್ತಾರೆ. ಆದರೆ ಒಂದಾನೊಂದು ಕಾಲದಲ್ಲಿ ರೈತರು ಹೀಗೆ ಕಂಗಾಲು ಆಗುತ್ತಿರಲಿಲ್ಲ. ಮಳೆ ತಡವಾದರೂ ಚಿಂತೆಯಿಲ್ಲ ಎಂದು ಹಸನ್ಮುಖರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು.

ಮಳೆ ಕೈಕೊಟ್ಟರು ಆತಂಕ ಇರಲಿಲ್ಲ, ಕಾರಣ:  ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಕೆರೆಗಳು ವರ್ಷಪೂರ್ತಿ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುತ್ತಿದ್ದವು. ಕೆರೆಗಳಿಗೆ ಹೊಂದಿಸಿಕೊಂಡಂತೆ ನಿರ್ಮಿಸುತ್ತಿದ್ದ ಕಾಲುವೆಗಳಿಂದ ಕೃಷಿ ಜಮೀನುಗಳಿಗೆ ನೀರು ಹರಿದರೆ, ಗ್ರಾಮಸ್ಥರು ಕುಡಿಯಲು ಕೂಡ ಕೆರೆ ನೀರನ್ನೇ ಅವಲಂಬಿಸುತ್ತಿದ್ದರು.

ನೂರಾರು ಎಕರೆ ವಿಸ್ತೀರ್ಣ ಹೊಂದಿರುತ್ತಿದ್ದ ಕೆರೆಗಳು ಸುಮಾರು 15 ರಿಂದ 20 ಗ್ರಾಮಗಳಿಗೆ ಜೀವಸೆಲೆಯಾಗಿದ್ದವು. ಕೆರೆಗಳು ಆಯಾ ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಭಾಗವಾಗಿದ್ದವು. ನೆಂಟರನ್ನು ಭೇಟಿಯಾಗಲು ಮತ್ತು ಸಂಬಂಧಿಕರೊಡನೆ ಹರಟೆ ಹೊಡೆಯಲು ಕೆರೆಗಳು ಪ್ರಾಶಸ್ತ್ಯ ಸ್ಥಳವಾಗಿದ್ದವು.

ಸದ್ಯದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈಗ ಯಾವುದೇ ಗ್ರಾಮದ ಸುತ್ತಮುತ್ತ ಭೇಟಿ ನೀಡಿದರೂ ಕೆರೆಗಳ ಬದಲು ಪುಟ್ಟ ಪುಟ್ಟ ಹೊಂಡಗಳು ಕಾಣಸಿಗುತ್ತವೆ. ಬಹುತೇಕ ಕೆರೆಗಳು ತಮ್ಮ ಗಡಿಯನ್ನೇ ಕಳೆದುಕೊಂಡಿದ್ದು, ಬೇರೆ ಬೇರೆ ಕ್ಷೇತ್ರದ ಜನರಿಂದ ಒತ್ತುವರಿಗೊಂಡಿವೆ. ಕೆಲ ಕಡೆ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದರೆ, ಇನ್ನೂ ಕೆಲ ಕಡೆ ಅನಧಿಕೃತವಾಗಿ ಇಟ್ಟಿಗೆಗಳನ್ನು ತಯಾರಿಸಲಾಗುತ್ತಿದೆ. ಕೆಲ ಕಡೆಯಂತೂ ಕೆರೆ ದಡಗಳು ಹೊಲಗದ್ದೆಗಳಾಗಿ ಮಾರ್ಪಟ್ಟಿವೆ. ಬತ್ತಿರುವ ಕೆರೆ ಪ್ರದೇಶದಲ್ಲಿ ಕೃಷಿ ಕುರಿತು ಪ್ರಶ್ನಿಸಿದರೆ, `ನೂರಾರು ವರ್ಷದಿಂದ ಇಲ್ಲಿ ಬೆಳೆ ಬೆಳೆಯುತ್ತಿದ್ದೇವೆ' ಎಂದು ಕೆಲವರು ಒತ್ತುವರಿ ಸಮರ್ಥಿಸಿಕೊಳ್ಳುತ್ತಾರೆ.

`ನಮ್ಮ ಕಂದವಾರ ಕೆರೆಯ ಮೇಲೆ ನಮಗೆ ತುಂಬ ಅಭಿಮಾನವಿತ್ತು. ಕೆರೆ ತುಂಬಿದಾಗಲೆಲ್ಲ ಕೋಡಿ ಹರಿಯುತಿತ್ತು. ಅದನ್ನು ನೋಡುವುದೇ ಸೊಗಸಾಗಿತ್ತು. ಗ್ರಾಮದ ಮಹಿಳೆಯರು ಮತ್ತು ಕುಟುಂಬ ಸದಸ್ಯರೆಲ್ಲರೂ ಕೆರೆಯತ್ತ ಹೋಗಿ ಪೂಜೆ ಸಲ್ಲಿಸುತ್ತಿದ್ದರು.  ಉತ್ತಮ ಫಸಲು ಪಡೆಯುತ್ತಿದ್ದ ರೈತರು ಮೊದಲು ಜಲಮಾತೆಯನ್ನು ನೆನಪಿಸಿಕೊಳ್ಳುತ್ತಿದ್ದರು. ಆದರೆ ಈಗ ನೀರೆಲ್ಲವೂ ಬತ್ತಿ ಹೋಗಿ ಕೆರೆ ಪ್ರದೇಶ ಸಂಪೂರ್ಣವಾಗಿ ಬರಡಾಗಿದೆ' ಎಂದು ಗ್ರಾಮಸ್ಥ ನಿವಾಸಿ ಮುನಿಕೃಷ್ಣಪ್ಪ ಹೇಳುತ್ತಾರೆ.

`ಕೆರೆಯ ನೀರು ಕಂದವಾರವಲ್ಲದೇ ಸುತ್ತಮುತ್ತಲ ಗ್ರಾಮಗಳಿಗೆ ಮತ್ತು ನಗರಪ್ರದೇಶಕ್ಕೆ ಪೂರೈಕೆಯಾಗುತಿತ್ತು. ಪ್ರಾಣಿಪಕ್ಷಿ ಮತ್ತು ಜಾನುವಾರುಗಳು ಬಾಯಾರಿಸಿಕೊಳ್ಳುತ್ತಿದ್ದವು. ಕೆರೆಯ ನೀರು ವ್ಯರ್ಥವಾಗಿ ಹರಿಯದಿರಲಿಯೆಂದು ಬೃಹತ್ ಕಟ್ಟೆ ಕೂಡ ನಿರ್ಮಿಸಿದೆವು. ಆದರೆ ಈಗ ಕಟ್ಟೆ ಮಾತ್ರವೇ ಉಳಿದುಕೊಂಡಿದೆ ಹೊರತು ನೀರು ಉಳಿದಿಲ್ಲ. ಕೆರೆಯು ಈಗ ನಿಧಾನವಾಗಿ ಒತ್ತುವರಿಯಾಗತೊಡಗಿದೆ. ಆಗಾಗ್ಗೆ ಮರಳು ಗಣಿಗಾರಿಕೆಯು ನಡೆಯುತ್ತಿದೆ. ಕೆರೆ ಪ್ರದೇಶ ಒತ್ತುವರಿಯಾಗುತ್ತಿದ್ದರೂ ಅದನ್ನು ತೆರವುಗೊಳಿಸಲು ಯಾರೂ ಮುಂದಾಗಿಲ್ಲ' ಎನ್ನ್ತುರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry