ಮತ್ತೆ ಬಾ ಎಂದರೂ ಬಾರದ ಆ ದಿನಗಳು...

7

ಮತ್ತೆ ಬಾ ಎಂದರೂ ಬಾರದ ಆ ದಿನಗಳು...

Published:
Updated:

ಅಂದು ನಾವು ಪಿಯುಸಿ, ಡಿಗ್ರಿ ಕ್ಯಾಂಪಸ್‌ನಲ್ಲಿ ಸ್ನೇಹಿತರ ಜೊತೆ ಹರಟೆ ಹೊಡೆದಿದ್ದು. ಕ್ಲಾಸ್‌ಗೆ ಚಕ್ಕರ್ ಹಾಕಿ ಕ್ಯಾಂಪಸ್‌ನಲ್ಲೆ ಅಡ್ಡಾಡಿದ್ದು. ಒಂಟಿ ಹುಡುಗಿಯರೇ ಬರಲಿ, ಹುಡುಗಿಯರ ದಂಡೆ ಬರಲಿ, ಶಿಳ್ಳೆ ಹೊಡೆದು ಅವರು ನಮ್ಮ ಕಡೆ ನೋಡುವಂತೆ ಮಾಡಿದ್ದು, ಫಿಲ್ಮ್ ಡೈಲಾಗ್‌ಗಳನ್ನು ಸಮಯಕ್ಕೆ ಹೊಂದಿಸಿಕೊಂಡು ಹೇಳಿದ್ದು. ಒಟ್ಟಾರೆ ಆ ಜೀವನವೇ ಅತ್ಯಂತ ರಸಮಯವಾದ್ದು ಮರೆಯಲಾಗದ್ದು. ಆದರೆ ಪಿಜಿ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಜೀವನ ಸಂಪೂರ್ಣ ಬದಲಾಗಿರುತ್ತದೆ.ಇದನ್ನೆಲ್ಲಾ ಯೋಚಿಸಿದಾಗ ನಮಗೆನಿಸುವುದೇನು?

ನಿಜಕ್ಕೂ ಎಷ್ಟೊಂದು ಸಂತೋಷ ಕ್ಯಾಂಪಸ್‌ನಲ್ಲಿರುತ್ತೆ. ಇದಕ್ಕಿಂತ ಎಂಜಾಯ್ ಮಾಡಲು ಮತ್ತೊಂದು ಸ್ಥಳ ಇರದು ಅಂದುಕೊಳ್ಳುತ್ತೇವೆ. ಜೊತೆಗೆ ಕಾಲೇಜು ಮುಗಿದ ನಂತರ ಇಂತಹ ಜೀವನ ಸಿಗುವುದಿಲ್ಲಪ್ಪ ಎಂದು ಯೋಚಿಸುವುದು ಉಂಟು. ಒಟ್ಟಿನಲ್ಲಿ ಕಾಲೇಜು ಜೀವನವೇ ಬಂಗಾರದ ಜೀವನ ಅಂದುಕೊಳ್ಳುವ ನಾವೆಲ್ಲ ಸ್ವಲ್ಪ ನಮ್ಮ ಬಾಲ್ಯದೆಡೆಗೆ ಯೋಚಿಸಿ ನೋಡೋಣ ...ನಾ ಶಾಲೆಗೆ ಹೋಗಲಾರೆ ಎಂದು ಗಳಗಳ ಕಣ್ಣೀರ ಸುರಿಸಿದರೂ, ಅಪ್ಪನಾಗಲಿ, ಅಮ್ಮನಾಗಲಿ ಹೇಗಾದರೂ ಮಾಡಿ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಿಡುತ್ತಾರೆ. ಅಲ್ಲಿ ಸ್ನೇಹಿತ ಜೊತೆ ಸೇರಿ ಆಟ - ಪಾಠ ಕಲಿಯುತ್ತೇವೆ. ಶಿಕ್ಷಕರು ಒಂದೆಡೆ ಅ, ಆ, ಇ, ಈ ಹೇಳುತ್ತಿದ್ದರೆ ಇತ್ತ ಪಕ್ಕದಲ್ಲಿದ್ದವನಿಗೆ ಚಿವುಟುತ್ತೇವೆ. ಆತ ಅಳುವ ಮುಖ ಮಾಡಿದರೆ ಏನೋ ಒಂದು ರೀತಿಯ ಖುಷಿ ಪಡುತ್ತೇವೆ. ಆದರೆ ಆತ ಶಿಕ್ಷಕರಿಗೆ ಹೇಳಿದರೆ ನಮಗೆ ಚಡಿ ಚಂ ..... ಚಂ..  ಇಲ್ಲಿ ನಾವಳುವಾಗ ಆತ ಖುಷಿ ಪಡುತ್ತಾನೆ.ಶಾಲೆಯಿಂದ ಮರಳಿ ಮನೆಗೆ ಬಂದಾಗ ಊರ ಹುಡುಗರ ಜೊತೆ ಸೇರಿ ಮರಕೋತಿಯಾಟ, ಚಿನ್ನಿದಾಂಡು, ಬುಗುರಿ, ಲಗೋರಿ, ಕೆರೆದಂಡೆ ಹೀಗೆ ಹಲವು ಆಟದಲ್ಲಿ ನಾವು ಅನುಭವಿಸಿದ ಖುಷಿಗೆ ಬೆಲೆಕಟ್ಟಲು ಅಸಾಧ್ಯ. ಸಮಾಜದ ಬಗ್ಗೆ ಏನನ್ನೂ ಅರಿಯದ ನಮಗೆ ಕಾರ್ ಡ್ರೈವರ್ ಆಗುವ ಕನಸು. ಶಿಕ್ಷಕರು ಕೇಳಿದಾಗ ಹೇಳುವ ಉತ್ತರ ಅದೇ. ಯಾವುದೇ ದುಃಖ, ದುರಾಸೆ, ಅಹಂ, ಸ್ವಾರ್ಥ ಇಲ್ಲದೆ ಎಂಜಾಯ್ ಮಾಡುತ್ತೇವೆ ಎಂದರೆ ಅದು ನಮ್ಮ ಬಾಲ್ಯ ಜೀವನದಲ್ಲಿ ಮಾತ್ರ ಸಾಧ್ಯ. ಬಾಲ್ಯದ ಜೀವನ ನೆನೆಸಿಕೊಂಡರೆ ಜೀವನದ ಅಮೂಲ್ಯವನ್ನೇ ನಾ ಕಳೆದುಕೊಂಡೆ ಅನ್ನಿಸುತ್ತೆ.ಕಾಲೇಜ್ ಜೀವನ ಹೇಗಿದೆ ನೋಡಿ ...

ಒಬ್ಬ ಸ್ನೇಹಿತನನ್ನ ಮಾಡಿಕೊಳ್ಳುವಾಗ ಆತನಿಂದ ನನಗೆ ಏನಾದರೂ ಪ್ರಯೋಜನ ಆಗಬಹುದೆ? ಶಿಕ್ಷಕರ ಜೊತೆ ಉತ್ತಮ ಸಂಬಂಧ ಹೊಂದಿದರೆ ನಮಗೆ ಇಂಟರ್‌ನಲ್ ಮಾರ್ಕ್ಸ್ ಹೆಚ್ಚಿಗೆ ಬರಬಹುದೆ? ಹೀಗೆ ಪ್ರತಿಯೊಂದರಲ್ಲಿಯೂ  ಸ್ವಾರ್ಥ ವಿದ್ಯಾರ್ಥಿಗಳಲ್ಲಿ ಅವಿತಿರುತ್ತದೆ.  ಪ್ರೀತಿ ಪ್ರೇಮ ಎಂದು ಓಡಾಡಿಕೊಂಡು ಶಿಕ್ಷಣವನ್ನು ಹಾಳುಮಾಡಿಕೊಳ್ಳುವವರೇ ಹೆಚ್ಚು. ಕ್ಯಾಂಪಸ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳು ನಾ ಹೇಳಿದಂತೆ ಇದ್ದಾರೆಂದಲ್ಲ, ಇಂತಹ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ನಮ್ಮ ಮುಂದಿನ ಜೀವನ ಹೇಗೆ? ಅದಕ್ಕೆ ನಾನೇನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಗಂಭೀರವಾಗಿ ಆಲೋಚಿಸುವ ವಿದ್ಯಾರ್ಥಿಗಳಂತೂ ತುಂಬಾ ಕಡಿಮೆ.  ಕ್ಯಾಂಪಸ್‌ನಲ್ಲಿರುವ ತನಕ ಬಿಂದಾಸ್ ಆಗಿರಬೇಕು ಎಂದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಅದರ ಜೊತೆ ಜೊತೆಗೆ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಶ್ರಮ ಪಡಬೇಕು.ಸುಂದರವಾದುದನ್ನ ನೆನೆಸಿಕೊಂಡರೆ ಖುಷಿಯಾಗುವುದು ಸಹಜ. ಹಾಗೆ ಬಾಲ್ಯ ಜೀವನ ನೆನಪಿಸಿಕೊಂಡರೆ ನಮಗೆ ತುಂಬಾ ಆನಂದವಾಗುತ್ತದೆ.  ಅಂತೆಯೇ ಕ್ಯಾಂಪಸ್ ಜೀವನವನ್ನು ಮುಂದೊಂದು ದಿನ ನೆನಪಿಸಿಕೊಂಡರೆ ಮನಸ್ಸಿಗೆ ಖುಷಿಯಾಗಬೇಕು. ಎಂದೂ ಈ ಜೀವನವನ್ನು ನೆನೆದು ಅಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಭವಿಷ್ಯದಲ್ಲಿ ಈ ಜೀವನವನ್ನು ನೆನೆಸಿಕೊಂಡಾಗ ಖುಷಿ ಪಡುವ ವಾತಾವರಣವನ್ನು ನಾವು ಈಗಲೇ ನಿರ್ಮಾಣ ಮಾಡಬೇಕು.ಮತ್ತೆ ಬಾ .. ಎಂದರೂ ಈಗ ಆ ದಿನಗಳು ಹೇಗೆ ಬರಲಾರವೋ ಅದೇ ರೀತಿ ಇಂದಿನ ದಿನಗಳು ನಾಳೆ ಬರಲಾರವು ... ಎನ್ನವುದು ನಮ್ಮ ಮನಸಿನಲ್ಲಿ ಇರಬೇಕಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry