ಶುಕ್ರವಾರ, ಡಿಸೆಂಬರ್ 6, 2019
17 °C

ಮತ್ತೆ ಮಂಜು ಬೇಸಾಯ!

Published:
Updated:
ಮತ್ತೆ ಮಂಜು ಬೇಸಾಯ!

`ಮನಸುಗಳ ಮಾತು ಮಧುರ~ ಎನ್ನುವ ಚಿತ್ರ ನಿರ್ದೇಶಿಸಿದ್ದ ಮಂಜು ಮಸ್ಕಲ್‌ಮಟ್ಟಿ ಅವರಿಗೆ ಆ ಚಿತ್ರದ ಅನುಭವ ಅಷ್ಟೇನೂ ಮಧುರವಾಗಿರಲಿಲ್ಲ. ಆದರೆ ಸಿನಿಮಾದ ಸೆಳೆತಕ್ಕೆ ಸಿಕ್ಕವರು ಸೋಲಿಗೆ ಅಂಜುವುದುಂಟೇ? ಮಂಜು ಮತ್ತೆ ಸಿನಿಮಾ ಮಾಡುತ್ತಿದ್ದಾರೆ- ನಿರ್ದೇಶನದ ಜೊತೆಗೆ ನಿರ್ಮಾಪಕನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.ಹೇಳಿಕೇಳಿ ಮಂಜು ಅವರು ಕೃಷಿಕರು. ಬೇಸಾಯದಲ್ಲಿ ಗಳಿಸಿದ ಲಾಭವನ್ನು ಸಿನಿಮಾದಲ್ಲಿ ತೊಡಗಿಸುತ್ತಿದ್ದಾರಂತೆ. ಮಂಜು ಅವರ ಹೊಸ ಚಿತ್ರದ ಹೆಸರು `ಗೌರಿಪುತ್ರ~. ಅವರ ಪತ್ನಿ ಸೌಮ್ಯಶ್ರೀ ಚಿತ್ರದ ಮುಖ್ಯ ನಿರ್ಮಾಪಕಿ. ರವಿ ಮತ್ತು ಮಂಜು ಎನ್ನುವ ಸಹ ನಿರ್ಮಾಪಕರೂ ಮಂಜು ಜೊತೆಗಿದ್ದಾರೆ.`ಗೌರಿಪುತ್ರ~ದ ಕಥೆ ಮದುವೆ ಮತ್ತು ಸುಳ್ಳುಗಳ ಸುತ್ತ ಸುತ್ತುತ್ತದಂತೆ. ತಮಾಷೆ, ಭಾವುಕತೆ, ಸ್ವಾರಸ್ಯ ಎಲ್ಲವೂ ಸಿನಿಮಾದಲ್ಲಿ ಇದೆಯಂತೆ. ತಮ್ಮ ಚಿತ್ರಗಾಗಿ ಭಾರೀ ತಾರಾಗಣವನ್ನೇ ಮಂಜು ಕಲೆಹಾಕಿದ್ದಾರೆ. ಚಿತ್ರದಲ್ಲಿ ಮೂರು ಜೋಡಿಗಳಿವೆ. ಮೊದಲ ಜೋಡಿ ಅಕ್ಷಯ್ ಮತ್ತು ನಿಕಿತಾ ತುಕ್ರಾಲ್ ಅವರದ್ದು. ತಂದೆಯನ್ನು ಕಳಕೊಂಡ ಹಾಗೂ ಮದುವೆಯ ಬಗ್ಗೆ ಅನಾಸಕ್ತ ಹುಡುಗಿಯ ಪಾತ್ರ ನಿಕಿತಾ ಅವರದಂತೆ.ಚಿತ್ರದ ಶೀರ್ಷಿಕೆಯಾದ ಗೌರಿಯ ಪಾತ್ರದಲ್ಲಿ ಸಿಹಿಕಹಿ ಗೀತಾ ನಟಿಸುತ್ತಿದ್ದಾರೆ. ಪುತ್ರನ ಪಾತ್ರ ಅಕ್ಷಯ್ ಅವರದ್ದು. ಚಿತ್ರದ ಮತ್ತೊಂದು ಜೋಡಿ ನಾಗಶೇಖರ್ ಹಾಗೂ ನಿವೇದಿತಾ (ಸ್ಮಿತಾ) ಅವರದ್ದು. `ಅರಮನೆ~, `ಸಂಜು ವೆಡ್ಸ್ ಗೀತಾ~ ಚಿತ್ರಗಳ ನಿರ್ದೇಶಕ ನಾಗಶೇಖರ್ ಈಗ ಮಂಜು ಗರಡಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುರುಡು ರೇಡಿಯೊ ಜಾಕಿಯ ಪಾತ್ರ ಅವರದ್ದು. ಸಿನಿಮಾದಲ್ಲಿ ಒಂದು ಗೀತೆಯನ್ನು ಅವರು ಹಾಡಿದ್ದಾರಂತೆ. `ಇಳಯರಾಜಾ ಹಾಡಿದಂತಿದೆ~ ಎಂದು ಗೆಳೆಯರೊಬ್ಬರು ಬೆನ್ನು ಚಪ್ಪರಿಸಿರುವುದು ಅವರಿಗೆ ಖುಷಿ ಕೊಟ್ಟಿದೆ.ರಾಕೇಶ್ ಶರ್ಮ ಮತ್ತು ರೂಪಿಕಾ ಅವರದ್ದು ಮೂರನೇ ಜೋಡಿ. ಇವರ ಜೊತೆಗೆ ರಮೇಶ್ ಭಟ್, ಮಾನಸಿ, ಸಿಹಿಕಹಿ ಗೀತಾ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಸಂಗೀತ ಮಿಲಿಂದ ಧರ್ಮಸೇನ ಅವರದ್ದು. ಪಿ.ಎಲ್.ರವಿ ಚಿತ್ರದ ಛಾಯಾಗ್ರಾಹಕರು.

ನಾಗಶೇಖರ್ ತಮ್ಮ ಚಿತ್ರಕ್ಕೆ ಒತ್ತಾಸೆಯಾಗಿ ನಿಂತಿರುವುದನ್ನು ಮಂಜು ಮಸ್ಕಲ್‌ಮಟ್ಟಿ ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಅಂದಹಾಗೆ, ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಡಬ್ಬಿಂಗ್ ಪ್ರಗತಿಯಲ್ಲಿದೆ.

ಪ್ರತಿಕ್ರಿಯಿಸಿ (+)