ಗುರುವಾರ , ಜೂನ್ 17, 2021
27 °C
ಕೆಪಿಎಸ್‌ಸಿ ನೇಮಕಾತಿ ಹಗರಣ

ಮತ್ತೆ ಮತ್ತೆ ಎಡವುತ್ತಿರುವ ಸರ್ಕಾರ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಿಧಾನವೇ ಪ್ರಧಾನ’ ಎನ್ನುವುದು ವಾಹನ ಚಾಲನೆಗೆ ಸರಿ ಹೊಂದುವ ಮಾತೇ ವಿನಾ ಸರ್ಕಾರದ ಚಲನೆಗೆ ಅಲ್ಲ. ‘ಅವಸರವೇ ಅಪಘಾತಕ್ಕೆ ಕಾರಣ’ ಎನ್ನುವುದೂ ಹಾಗೆಯೇ. ಸರ್ಕಾರದ ಚಲನೆಯಲ್ಲಿ ನಿಧಾನವೂ ಅಪಘಾತಕ್ಕೆ ಕಾರಣವಾಗಬಹುದು ಎನ್ನುವುದಕ್ಕೆ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಬಗ್ಗೆ ಅದು ನಡೆದುಕೊಂಡ ರೀತಿ ಒಂದು ಉತ್ತಮ ಉದಾಹರಣೆ.ಕರ್ನಾಟಕ ಲೋಕಸೇವಾ ಆಯೋಗ  (ಕೆಪಿಎಸ್‌ಸಿ) 2011ನೇ ಸಾಲಿನ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಪಟ್ಟಿ ಪ್ರಕಟಣೆಯನ್ನು ಸರ್ಕಾರ ತಡೆಯಬಹುದಿತ್ತು. ಆದರೆ ನಿರ್ಧಾರ ಕೈಗೊಳ್ಳಲು ವಿಳಂಬ ಮಾಡಿತು.

ಆದರೆ ಈಗಲೂ ಅಧಿಕಾರ ಸರ್ಕಾರದ ಬಳಿಯೇ ಇದೆ. ಕೆಪಿಎಸ್‌ಸಿ ಪ್ರಕಟಿಸುವ ಅಂತಿಮ ನೇಮಕಾತಿ ಪಟ್ಟಿಯನ್ನು ಸರ್ಕಾರ ತಿರಸ್ಕರಿಸಬಹುದು. ಏಕೆಂದರೆ ಕೆಪಿಎಸ್‌ಸಿ ಪ್ರಕಟಿಸಿದ ಪಟ್ಟಿಯನ್ನು ಒಪ್ಪಿಕೊಂಡರೆ  ಭ್ರಷ್ಟಾಚಾರದ ಪರವಾಗಿದೆ ಎಂಬ ಆರೋಪ ಬರಬಹುದು.ನೇಮಕಾತಿ ಅಕ್ರಮಗಳ ಬಗ್ಗೆ ಸಿಐಡಿ ತನಿಖೆಗೆ ಸರ್ಕಾರವೇ ಆದೇಶಿಸಿತ್ತು. ಅದು ನೀಡಿದ ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಮಂಡಲದಲ್ಲಿ ಪ್ರಕಟಿಸಿದ್ದರು. ಅಲ್ಲದೆ ಸಿಐಡಿ ವರದಿ ಆಧಾರದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ ನಡೆಸುವಂತೆ ಕೆಪಿಎಸ್‌ಸಿಯನ್ನು ಸರ್ಕಾರ ಕೋರಿತ್ತು. ಸಿಐಡಿ ವರದಿ ಆಧರಿಸಿ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ, ಸದಸ್ಯೆ ಡಾ.ಮಂಗಳಾ ಶ್ರೀಧರ್‌ ಸೇರಿದಂತೆ 12 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲೂ ಸರ್ಕಾರ ಒಪ್ಪಿಗೆ ನೀಡಿದೆ. ‘ಇಷ್ಟೆಲ್ಲಾ ಮಾಡಿದ ಸರ್ಕಾರ ಕೆಪಿಎಸ್‌ಸಿ ಪ್ರಕಟಿಸಿದ ಪಟ್ಟಿಯನ್ನು ಒಪ್ಪಿಕೊಳ್ಳುವುದು ಕಷ್ಟ’ ಎಂದು ಸಚಿವರೊಬ್ಬರು ಪ್ರಜಾವಾಣಿಗೆ ತಿಳಿಸಿದರು. ಎಂದು ನಂಬಲು ಸಾಧ್ಯವಿಲ್ಲ.  ಅದು ತಡವಾದ ತೀರ್ಮಾನ ಆಗಬಹುದು ಎಂಬುದನ್ನೂ ಅವರು ಒಪ್ಪಿಕೊಂಡರು.2011ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆರೋಪ ಮೊದಲು ಪ್ರಕಟಗೊಂಡದ್ದು 2013ರ ಮೇ 22ರಂದು. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಸಿಐಡಿಗೆ ಆದೇಶಿಸಿದ್ದು 2013ರ ಜೂನ್‌ 27ರಂದು. ತನಿಖೆ ನಡೆಸಿದ ಸಿಐಡಿ ಸೆ.10ಕ್ಕೆ ತನ್ನ ಪ್ರಾಥಮಿಕ ವರದಿಯನ್ನು ನೀಡಿದೆ. ತಕ್ಷಣವೇ ಮರು ಸಂದರ್ಶನ ಮತ್ತು ಮರು ಮೌಲ್ಯಮಾಪನಕ್ಕೆ ಸರ್ಕಾರ ಕೆಪಿಎಸ್‌ಸಿಗೆ ಸೂಚನೆ ನೀಡಿತಾದರೂ ಅದನ್ನು ಕೆಪಿಎಸ್‌ಸಿ ಒಪ್ಪಿಕೊಳ್ಳಲಿಲ್ಲ.ಆಗ ನೇಮಕಾತಿ ಅಧಿಸೂಚನೆಯನ್ನು ವಾಪಸು ಪಡೆಯುವುದು ಬಿಟ್ಟು ಸರ್ಕಾರಕ್ಕೆ ಬೇರೆ ಮಾರ್ಗವೇ ಇರಲಿಲ್ಲ. ಕಾನೂನು ಇಲಾಖೆ, ಅಡ್ವೊಕೇಟ್‌ ಜನರಲ್‌, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದವು. ಸಚಿವ ಸಂಪುಟದ ಮುಂದೆ ಕೂಡ ಈ ಪ್ರಸ್ತಾಪ ಇತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಚಿವ ಸಂಪುಟದ ಮುಂದೆ ಈ ಪ್ರಸ್ತಾಪವನ್ನು ಇಟ್ಟ ನಂತರ 5 ಬಾರಿ ಸಂಪುಟ ಸಭೆ ನಡೆದಿತ್ತು. ಆದರೂ ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ. ಇದರಿಂದಾಗಿ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಪ್ರಕಟಿಸಲು ಕೆಪಿಎಸ್‌ಸಿಗೆ ಅವಕಾಶ ನೀಡಿದಂತಾಯಿತು.‘ಸರ್ಕಾರದೊಂದಿಗೆ ಸಂಘರ್ಷದ ಮಾತಿಲ್ಲ. ನೇಮಕಾತಿ  ನಡೆಸಿಕೊಡುವಂತೆ ಸರ್ಕಾರ ಕೇಳಿತ್ತು. ಅದರಂತೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ನಮ್ಮ ತಪ್ಪು ಏನೂ ಇಲ್ಲ. ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ’ ಎಂದು ಕೆಪಿಎಸ್‌ಸಿ ಅಧಿಕಾರಿಗಳು ಹೇಳುತ್ತಾರೆ.ನೇಮಕಾತಿ ಪಟ್ಟಿ ಸಲ್ಲಿಸುವ ಕರ್ತವ್ಯವನ್ನು ಕೆಪಿಎಸ್‌ಸಿ ಮಾಡಿದೆ. ಆದರೆ 2013ರ ಮೇ ತಿಂಗಳಿನಲ್ಲಿಯೇ ನೇಮಕಾತಿ ಪ್ರಕ್ರಿಯೆ ಪೂರ್ಣವಾಗಿದ್ದರೂ ಒಂಬತ್ತು ತಿಂಗಳ ನಂತರ ಅದು ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದೆ. ಈ ವಿಳಂಬಕ್ಕೆ ಕಾರಣ ಏನು ಎಂದು ಪ್ರಶ್ನೆ ಮಾಡಿದರೆ, ‘ಅಂಕಗಳ ಮರು ಎಣಿಕೆಯ ನಂತರ 5 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಾಗಿದ್ದರು. ಅವರ ಸಂದರ್ಶನವನ್ನು ಮಾರ್ಚ್1ರಂದು ನಡೆಸಲಾಗಿದೆ. ಅದರೊಂದಿಗೆ ಪ್ರಕ್ರಿಯೆ ಪೂರ್ಣವಾಗಿದೆ. ಹಾಗಾಗಿ ಮಾರ್ಚ್‌ 5ರಂದು ಪಟ್ಟಿ ಪ್ರಕಟಿಸಲಾಗಿದೆ’ ಎಂಬ ಉತ್ತರ ಕೆಪಿಎಸ್‌ಸಿಯಿಂದ ಬರುತ್ತದೆ. ಚುನಾವಣಾ ನೀತಿ ಸಂಹಿತೆಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬುದು ಅದರ ವಾದ.ತಡೆಯಲಿಲ್ಲ ಏಕೆ?: ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ಹೀಗೆ ಸಿದ್ಧವಾದ ಪಟ್ಟಿ ಹೊರಗೆ ಬರುವುದನ್ನು ತಡೆಯಲು ಸಾಧ್ಯವಿದ್ದರೂ ಸರ್ಕಾರ ತಡೆಯಲಿಲ್ಲ ಯಾಕೆ ಎಂಬ ಪ್ರಶ್ನೆ ಕೇಳಿ ಬಂದರೆ ಅದನ್ನು ತಳ್ಳಿ ಹಾಕುವುದು ಕಷ್ಟ.ನೇಮಕಾತಿ ಅಧಿಸೂಚನೆಯನ್ನು ವಾಪಸು ಪಡೆಯಲು ಸರ್ಕಾರ ಮುಂದಾದಾಗ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಹೊಸ ವಾದವೊಂದು ಹುಟ್ಟಿಕೊಂಡಿತು. ‘ಈ ಸಲ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ನೇಮಕಾತಿ ಪಟ್ಟಿಯನ್ನು ರದ್ದು ಮಾಡಿದರೆ ಅವರಿಗೆ ಅನ್ಯಾಯವಾಗುತ್ತದೆ’ ಎಂದು ಕೆಲವರು ವಾದಿಸಿದರು. ಇದಕ್ಕೆ ಕೆಲವು ಸಾಹಿತಿಗಳು, ಕೆಲವರು ‘ಪ್ರಗತಿಪರರ’ ಬೆಂಬಲವೂ ದೊರಕಿತು.ಈ ಹಂತದಲ್ಲಿ ನೇಮಕಾತಿ ಅಧಿಸೂಚನೆಯನ್ನು ವಾಪಸು ಪಡೆದರೆ ಅಹಿಂದ ಮತದಾರರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಂಡೇಳುತ್ತಾರೆ ಎಂಬ ಭಯವನ್ನು ಸಚಿವ ಸಂಪುಟ ಸಭೆಯಲ್ಲಿಯೇ ಕೆಲವರು ಹರಿಯಬಿಟ್ಟರು. ಇದು ನೇಮಕಾತಿ ಪಟ್ಟಿ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಕಟ್ಟಿ ಹಾಕಿತು.ಇದರಿಂದಾಗಿ ಅವರು ನಿರ್ಧಾರವನ್ನು ಲೋಕಸಭಾ ಚುನಾವಣೆ ಪೂರ್ಣಗೊಳ್ಳುವವರೆಗೆ ಮುಂದಕ್ಕೆ ಹಾಕಲು ಬಯಸಿದರು. ಆದರೆ ಈಗ ನೇಮಕಾತಿ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿರುವುದರಿಂದ ಕೊಂಚ ಮುಜುಗರ ಅನುಭವಿಸಬೇಕಾಗಿದೆ.ನೇಮಕಾತಿ ಪಟ್ಟಿಯನ್ನು ತಿರಸ್ಕರಿಸುವ ಅವಕಾಶ ಇರುವುದರಿಂದ ಚೆಂಡು ಈಗ ರಾಜ್ಯ ಸರ್ಕಾರದ ಅಂಗಳದಲ್ಲಿಯೇ ಇದೆ. ಆದರೆ ಈಗ ಯಾವುದೇ ನಿರ್ಧಾರ ಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ.ಈ ನಡುವೆ ಕೆಲವು ಅಭ್ಯರ್ಥಿಗಳು ನೇಮಕಾತಿ ಪಟ್ಟಿಗೆ ತಡೆಯಾಜ್ಞೆ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದು ಯಾವಾಗ ಇತ್ಯರ್ಥ ಆಗುತ್ತದೆ ಎಂಬುದು ಭವಿಷ್ಯಕ್ಕೆ ಸೇರಿದ ಪ್ರಶ್ನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.