ಮತ್ತೆ ಮತ್ತೆ ಮಳೆ ಸುರಿದು...

7

ಮತ್ತೆ ಮತ್ತೆ ಮಳೆ ಸುರಿದು...

Published:
Updated:
ಮತ್ತೆ ಮತ್ತೆ ಮಳೆ ಸುರಿದು...

ಬಣ್ಣ ಮಾಸಿದ ಗೋಡೆ. ಗೋಡೆಯ ಮೇಲೆ ನೀರಿನ ಕಲೆ. ಅದು ಮಳೆಹನಿಗಳ ಕಲೆಯೇ ಇರಬೇಕು. ಮಾಸಿದ ಕಲಾಕೃತಿಯಂತೆ ಕಾಣುವ ಗೋಡೆಯ ಮೇಲೆ ಚೌಕಟ್ಟಿನೊಳಗಿನ ಚಿತ್ರಪಟಗಳು. ಅನಂತ ಕಾಲದ ಸಾಕ್ಷಿಪ್ರಜ್ಞೆಯಂತೆ ಮುಖ ತೋರುತ್ತಿರುವ ಗಡಿಯಾರ. ಹೀಗೆ, ಒಂದು ಚಂದದ ವಿನ್ಯಾಸದೊಳಗಿನ ಬ್ಲಾಗು- `ನಿರಚಿತ~. ಬ್ಲಾಗಿತಿಯ ಅಭಿರುಚಿಗಳೇ ಬ್ಲಾಗಿನ ವಿನ್ಯಾಸ ಮತ್ತು ಬರಹದಲ್ಲಿ ಮೈದಳೆದಂತಿದೆ.ಹೆಚ್ಚೂ ಕಡಿಮೆ ಐದು ವರ್ಷಗಳಿಂದ ನಿಯಮಿತವಾಗಿ ಬ್ಲಾಗು ಬರೆಯುತ್ತಿರುವ ರಚಿತ ಎನ್ನುವ ಈ ಹೆಣ್ಣುಮಗಳ ಬರಹಗಳ ಕಟ್ಟು ಈ `ನಿರಚಿತ~ (nirachitha.blogspot.in). ರಚಿತ ಜೊತೆಗಿರುವ `ನಿ~ ಆಕೆಯ ಇನಿಷಿಯಲ್. ತವರು ಮಲೆನಾಡಂತೆ. ಕಾಫಿ ಅವರ ಸಂಸ್ಕೃತಿಯಂತೆ. `ಮಲೆನಾಡಿನ ಮಗಳು. ಅಂತರ್ಜಾಲದ ಮಾಯಾಲೋಕದಲ್ಲಿ, ವ್ಯೋಮ ಪ್ರಪಂಚದಲ್ಲಿ ನಾನೊಂದು ಅಣುಜೀವಿ~ ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ರಚಿತ, ಸಂಗೀತ ಮತ್ತು ಸಾಹಿತ್ಯದ ಪ್ರೇಮಿ ಕೂಡ.ಕುವೆಂಪು ಪರಿಸರದ ಕವಿತೆಗಳೊಂದಿಗೆ ಬೇಂದ್ರೆಯ ನಾದಲೀಲೆಯೂ ಅವರಿಗಿಷ್ಟ. ಈ ಕಾವ್ಯಪ್ರೀತಿಯಲ್ಲಿ ಅವರು ಒಂದಷ್ಟು ಕವಿತೆ ಬರೆದಿರುವುದೂ ಇದೆ. `ಬರೆದೆ ನಿನ್ನ ಹೆಸರ ಮರಳ ಮೇಲೆ/ ನೀರಿನ ಅಲೆ ಬಂದು ಕೊಚ್ಚಿ ಹೋಯ್ತು/ ಬರೆದೆ ನಿನ್ನ ಹೆಸರ ಗಾಳಿಯ ಮೇಲೆ/ ಬಿರುಗಾಳಿ ಬಂದು ತೂರಿಹೋಯ್ತು~ ಎಂದೆಲ್ಲ ಕಚಗುಳಿ ಇಡುವಂತೆ ಬರೆಯುತ್ತಾರೆ.

 

ಪ್ರಾಸಕೆ ಪ್ರಾಸ ಜೋಡಿಸುವ ತ್ರಾಸದ ಆಟ ಆಡಿದರೂ ಅವರ ಕೈಹಿಡಿದು ನಡೆಸಿರುವುದು ಗದ್ಯವೇ. ಮಲೆನಾಡಿನ ಹಸಿರನ್ನು, ಆ ಹಸಿರಿನ ನಡುವೆ ಹರಡಿಕೊಂಡ ಬದುಕನ್ನು ಅವರು ಸೊಗಸಾಗಿ ಬರೆಯಬಲ್ಲರು. ಎಲ್ಲಕ್ಕೂ ಮಿಗಿಲಾಗಿ ಅಂತರ್ಜಾಲದಲ್ಲವರು ಮಳೆ ಸುರಿಸಬಲ್ಲರು. ಈ ಮಳೆ ಬಗೆಬಗೆ ರೂಪಗಳಲ್ಲಿ `ನಿರಚಿತ~ದ ಅನೇಕ ಕಡೆ ಮುಖ ತೋರಿದೆ. ತಾವು ತುಂಬ ಇಷ್ಟಪಡುವ ರಾಜ್‌ಕುಮಾರ್ ಮತ್ತು ತೇಜಸ್ವಿ ಅವರನ್ನು ಕುರಿತು ಹೇಳಲಿಕ್ಕೂ ಅವರಿಗೆ ಮಳೆ ಬೇಕು.ಹೇಳಿಕೇಳಿ, ಈಗ ಮಳೆಗಾಲವಲ್ಲವೇ? ಹಾಗಾಗಿ ಇಲ್ಲಿನ ಮಳೆ ಬರಹಗಳು ರುಚಿಕರ ಎನ್ನಿಸುತ್ತವೆ. ಆದರೆ, ಬ್ಲಾಗಿತಿಯ ಪಾಲಿಗಂತೂ ಮಳೆ ಋತುವೊಂದೇ ಸತ್ಯ ಎನ್ನುವಂತಿದೆ. `ಮಲೆನಾಡಿನ ಮಳೆಹನಿಯಂತೆ ನನ್ನ ಮನಸ್ಸು~ ಎಂದು ಬೇರೆ ತಮ್ಮನ್ನವರು ಬಣ್ಣಿಸಿಕೊಂಡಿದ್ದಾರೆ!ಮಳೆಯ ಕುರಿತ ಬರಹವೊಂದರಲ್ಲಿ ಬರುವ ಪಾತ್ರವೊಂದು, `ನಿನಗೆ ರಚಿತ ಎನ್ನುವ ಬದಲು ಕುಶಾಲಿ ಎಂದು ಹೆಸರಿಡಬೇಕಿತ್ತು~ ಎಂದು ಕಾಲೆಳೆಯುತ್ತದೆ. ಹೌದಲ್ಲವೇ? ಅವರ ಬ್ಲಾಗಿನ ಅನೇಕ ಬರಹಗಳಲ್ಲಿ ಎದ್ದುಕಾಣುವ ವಿಶೇಷಣವೇ- ಕುಶಾಲು. ಹಾಗಾಗಿ `ಕುಶಾಲಿ~ ಹೆಸರು ಅವರಿಗೆ ಒಪ್ಪುತ್ತದೆ. ಹಾಗೆಂದು ಕುಶಾಲಿ ಗಂಭೀರವಾಗಿ ಬರೆದಿಲ್ಲವೆಂದಿಲ್ಲ- `ತೇಜಸ್ವಿ ಬರೀ ಸ್ಮಾರಕಕ್ಕೆ ಸೀಮಿತವಾಗದಿರಲಿ~ ಎನ್ನುವ ಬರಹ ಅವರ ಇನ್ನೊಂದು ಮುಖವನ್ನು ಪರಿಚಯಿಸುವಂತಿದೆ. ಎರಡು ವರ್ಷಗಳ ಹಿಂದಿನ ಆ ಬರಹದ ಕೆಲವು ತುಣುಕು ನೋಡಿ:“ತೇಜಸ್ವಿ ಮರೆಯಾಗಿ ಮೂರು ವರ್ಷ ಕಳೆಯಿತು. ಮೊನ್ನೆ ಕುಪ್ಪಳಿಯಲ್ಲಿ ಸ್ಮಾರಕವೂ ಸ್ಥಾಪನೆಯಾಯಿತು. ನಾರ್ವೆ ಕಡೆ ಹೊರಟಿದ್ದವಳು ತುಸು ದೂರ ಹಾಗೆ ಮುಂದೆ ಸಾಗಿ ಸ್ಮಾರಕವನ್ನು ನೋಡಿ ಬಂದೆ. ಆಗಿನಿಂದ ಮನದಲ್ಲಿ ಪ್ರಶ್ನೆ ಉದ್ಭವಿಸುತ್ತಲೇ ಇತ್ತು. ತೇಜಸ್ವಿಗೆ ಸ್ಮಾರಕ ಅಗತ್ಯವೇ? ಯಾವ ಪ್ರಶಸ್ತಿ, ಪಾರಿತೋಷಕ, ಹಾರ ತುರಾಯಿ, ಸ್ಮಾರಕ, ಬೆಂಬಲಿಗರ ದಂಡನ್ನು ನೆಚ್ಚಿಕೊಳ್ಳದ ಎನ್ನ ಗುರುವನ್ನು ಸ್ಮಾರಕ ಎಂಬ ಸೌಧದಲ್ಲಿ ಬಂಧಿಸುವುದು ತರವೇ ಎಂದು.ಒಂದು ವಿಷಯ ನೆನಪಿರಲಿ, ತೇಜಸ್ವಿಯನ್ನು ಹತ್ತಿರದಿಂದ ಬಲ್ಲ ಆಪ್ತರಿಗಿಂತ ಹತ್ತು ಪಟ್ಟು ಹೆಚ್ಚು ಜನ ಅವರನ್ನು ಮಾನಸಿಕ ಗುರುವಾಗಿ ಭಾವಿಸಿ, ಪರಿಸರ ಸಂರಕ್ಷಣೆಯೋ, ಬರವಣಿಗೆಯೋ, ಫೋಟೋಗ್ರಫಿಯೋ, ತಂತ್ರಾಂಶವೋ ಮತ್ತೊಂದು ಕ್ಷೇತ್ರದಲ್ಲಿ ಅವರ ಆಶಯವನ್ನು ಪಾಲಿಸುತ್ತಾ ಬಂದಿದ್ದಾರೆ. ಈ ಸಂಖ್ಯೆ ಬೆಳೆಯುತ್ತಲೇ ಇದೆ. ಇವರಲ್ಲಿ ಹೆಚ್ಚು ಜನ ಪ್ರತ್ಯಕ್ಷವಾಗಿ ತೇಜಸ್ವಿಯನ್ನು ದೂರದಿಂದಾದರೂ ಕಂಡವರಲ್ಲ.

 

ಕೇವಲ ಅವರ ಬರಹಗಳ ಮೂಲಕ ಸ್ಫೂರ್ತಿ ಪಡೆದು ಸದಭಿರುಚಿ ಕಾರ್ಯಗಳಲ್ಲಿ ತೊಡಗಿಕೊಂಡವರು.ಕಾಡಿನಲ್ಲಿ ತಾನೇ ತಾನಾಗಿ ಬೆಳೆವ ಮರಗಳ ನೆರಳಿನಲ್ಲಿ, ಹಕ್ಕಿಗಳ ಇಂಪಿನ ನಡುವೆ ತೇಜಸ್ವಿ ಒಂದಾಗಿ ಇರಲಿ ಎಂಬ ಉದ್ದೇಶದಿಂದ ಕುಪ್ಪಳಿಯಲ್ಲಿ ಸ್ಮಾರಕ ಸ್ಥಾಪಿಸಿದ್ದರೆ ಸರಿ. ಇಲ್ಲವಾದರೆ, ಎಲ್ಲರಂತೆ, `ತೇಜಸ್ವಿ ಎಂಬ ಬ್ರಾಂಡ್ ನೇಮ್~ ಹಿಂದೆ ಬಿದ್ದು, ಗಲ್ಲಿ ಗಲ್ಲಿಗೆ ಹೆಸರು ಮೂಲೆ ಮೂಲೆಗೆ ಸ್ಮಾರಕ, ಒಂದಿಷ್ಟು ಅವರ ಹೆಸರಿನಲ್ಲಿ ಪ್ರಶಸ್ತಿ, ಪುರಸ್ಕಾರ ಎಂಬಂತಾದರೆ... ಕ್ಷಮಿಸಿ, ತೇಜಸ್ವಿಗೆ ಅದು ಮಾಡುವ ಅಪಮಾನವಾದೀತು.ಇರಲಿ, ತೇಜಸ್ವಿ ಸ್ಮಾರಕ ಸ್ಥಾಪನೆಯಾಯ್ತು ಮುಂದೇನು? ಸುತ್ತಮುತ್ತಲ ಅರಣ್ಯ ಸಂರಕ್ಷಣೆಗೆ ಸ್ಮಾರಕ ಸ್ಥಾಪಕರು ಮುಂದಾಗಬಹುದು. ಕವಿಮನೆ (ಕುವೆಂಪು ಮೂಲಮನೆ) ಯಂತೆ ತೇಜಸ್ವಿ ಹೆಸರಲ್ಲಿ ಪರ್ಣಕುಟೀರ ನಿರ್ಮಿಸಬಹುದು. ಅಲ್ಲಿ ಅಧ್ಯಯನ ಪೀಠ ಸ್ಥಾಪಿಸಬಹುದು, ಆಗಾಗ ಸಾಂಸ್ಕತಿಕ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ತೇಜಸ್ವಿ ಆಗಿದ್ದರು ಹೀಗಿದ್ದರು, ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಎಂದೆಲ್ಲಾ ಬೊಬ್ಬೆ ಹಾಕಬಹುದು.ಏನಾದರೂ ಮಾಡಲೇಬೇಕು ಅಂತಾದರೆ, ಕಾಡು ಉಳಿಸಿ. ತೇಜಸ್ವಿ ಪುಸ್ತಕಗಳನ್ನು ಕೊಳ್ಳಿರಿ, ಪರಿಸರ ಉಳಿಸಿ, ಬೆಳೆಸಿ, ಮಕ್ಕಳಿಗೆ ಒಂದಿಷ್ಟು ಅರಿವು ಮೂಡಿಸಿ, ಸಾತ್ವಿಕ ಬದುಕು ಬಾಳಿರಿ, ನೀವು ಬದುಕಿ ಪರರನ್ನು ಬಾಳಿಸಿ ಅಷ್ಟು ಮಾಡಿ ಸಾಕು. ಇದ್ದಾಗ ಯಾರ ಹಿಡಿತಕ್ಕೂ ಸಿಗದ ತೇಜಸ್ವಿಯನ್ನು ಈಗ ದಯವಿಟ್ಟು ನಿಮ್ಮ ಕೈಗೊಂಬೆ ಮಾಡಿಕೊಳ್ಳಬೇಡಿ”.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry