ಮತ್ತೆ ಮತ್ತೆ ವಾಸುದೇವ್

7

ಮತ್ತೆ ಮತ್ತೆ ವಾಸುದೇವ್

Published:
Updated:

ಹಿರಿಯ ಕಲಾವಿದ ಎಸ್.ಜಿ.ವಾಸುದೇವ್ ಹೊಸ `ಉಡುಗೆ~ ತೊಟ್ಟು ಬಂದಿದ್ದಾರೆ. ಅವರ ಈ `ದಿರಿಸಿನಲ್ಲಿ~ ಸಂಗೀತದ ಲಯವಿದೆ, ಗೆರೆಗಳ ತೀಕ್ಷ್ಣತೆಯಿದೆ, ಹೆಣಿಗೆಯ ಮಾಧುರ್ಯವಿದೆ. `ರಿ ಕಲೆಕ್ಷನ್ಸ್ ರಿಕನೆಕ್ಷನ್ಸ್~ ಅವರ ನೂತನ ಕಲಾಕೃತಿಗಳ ಪ್ರದರ್ಶನ.ಇದು ರೇಖಾಚಿತ್ರ, ವರ್ಣಚಿತ್ರ, ಉಬ್ಬುಶಿಲ್ಪ ಹಾಗೂ ಚಿತ್ರವಸ್ತ್ರ ಮಾಧ್ಯಮಗಳನ್ನು ದುಡಿಸಿಕೊಂಡ ಸರಣಿ. ತಾಮ್ರದ ಉಬ್ಬು ಶಿಲ್ಪಗಳಿಂದ ನಾಡಿನ ಗಮನ ಸೆಳೆದಿದ್ದ ಅವರು ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಜತೆ `ಆಟ~ವಾಡಿದ್ದಾರೆ. ಈ ಮಾಧ್ಯಮದಲ್ಲಿ ರಚಿಸಲಾದ ಮೂರು ಕಲಾಕೃತಿಗಳಲ್ಲಿ ಮನುಷ್ಯ ಕತೆಯ ಹಂದರ ಎದ್ದು ತೋರುತ್ತದೆ.

 

ಎಂದಿನಂತೆ ಇವುಗಳಲ್ಲೆಲ್ಲಾ ಟಿಪಿಕಲ್ ವಾಸುದೇವ್ ಛಾಯೆ ಢಾಳಾಗಿ ಕಂಡುಬರುತ್ತದೆ.

ಮುಖ್ಯವಾಗಿ ಸೆಳೆಯುವುದು ಅವರು ರ‌್ಯಾಪ್ಸೋಡಿ (ಅನಿಶ್ಚಿತ ನೆಲೆಯಲ್ಲಿ ವಾದ್ಯಗಳೊಂದಿಗೆ ನಡೆಸುವ ಪ್ರಯೋಗ) ಸಂಗೀತ ಪರಂಪರೆಯ ನೆರಳಿನಲ್ಲಿ ರಚಿಸಿದ ರೇಖಾಚಿತ್ರಗಳು.

 

ಶಿವರಾಮ ಕಾರಂತರು ಬಹಳ ಹಿಂದೆ ರ‌್ಯಾಪ್ಸೋಡಿಯಿಂದ ಪ್ರಭಾವಿತರಾಗಿ `ನದಿ~ಯನ್ನು ಆಧರಿಸಿ ಸಂಗೀತ ರೂಪಿಸಿದ್ದರು. ಅದು ಆಕಾಶವಾಣಿಯಲ್ಲಿ ಅನುರಣಿಸಿತ್ತು. ಈಗ ವಾಸುದೇವ್ ಚಿತ್ರಗಳ ಮೂಲಕ ರ‌್ಯಾಪ್ಸೋಡಿಯ ಕೈ ಹಿಡಿದಿದ್ದಾರೆ.ಸಂಗೀತದ ಹಿನ್ನೆಲೆಯಲ್ಲಿ ಈಗಾಗಲೇ ಕಲಾಕೃತಿಗಳ ಪ್ರಯೋಗ ನಡೆಸಿದ್ದ ಇವರಿಗೆ ರ‌್ಯಾಪ್ಸೋಡಿ ವಿಶೇಷವಾಗಿ ಕಂಡಿತು. ಅವರ ಈ ಕಲಾಕೃತಿಗಳಲ್ಲಿ ಪದ್ಯದ ಗೇಯತೆಯನ್ನು, ಭಾವನೆಗಳ ಏರಿಳಿತವನ್ನು ಗಮನಿಸಬಹುದು.

 

ಬಿಳಿ ಬಣ್ಣವನ್ನು ಕ್ಯಾನ್‌ವಾಸ್ ಆಗಿ ಬಳಸಿಕೊಂಡು ರೇಖೆಗಳ ಲಾಲಿತ್ಯ ನಡೆಸಲಾಗಿದೆ. ಗಾತ್ರದಲ್ಲಿ ಪುಟ್ಟದಾಗಿರುವುದರಿಂದ ಇವುಗಳನ್ನು ಮಿನಿಯೇಚರ್ ಎನ್ನಲೂ ಅಡ್ಡಿಯಿಲ್ಲ.ಅವರ ಚಿತ್ರವಸ್ತ್ರಗಳು (ಟ್ಯಾಪೆಸ್ಟ್ರಿ) ನೇಯ್ಗೆಯನ್ನು ಆಧರಿಸಿದವು. ಸುಬ್ಬರಾಯಲು ಎಂಬ ಸುಪ್ರಸಿದ್ಧ ನೇಯ್ಗೆ ಕಲಾವಿದರೊಬ್ಬರ ನೆರವಿನೊಂದಿಗೆ ರಚಿಸಿದ ಕಲಾಕೃತಿಗಳು ಇವು. ಇಬ್ಬರೂ ಒಂದು ದಶಕಕ್ಕೂ ಹೆಚ್ಚು ಕಾಲ ಇದಕ್ಕಾಗಿ ಶ್ರಮ ವಹಿಸಿದ್ದಾರೆ. ಎಲ್ಲ ಪ್ರಕಾರಗಳಿಗೂ ಇರುವಂತೆ ಚಿತ್ರವಸ್ತ್ರಕ್ಕೆ ಕೂಡ ತನ್ನದೇ ಆದ ಮಿತಿಗಳಿರುತ್ತವೆ.ಆದರೆ ರೇಖಾಚಿತ್ರಗಳ ಸೂಕ್ಷ್ಮತೆಯನ್ನೂ ನೇಕಾರಿಕೆಯಲ್ಲಿ ಮೂಡಿಸಿರುವುದು ವಾಸುದೇವ್ ಅವರ ಹೆಗ್ಗಳಿಕೆ. ಇಲ್ಲಿ ಕಡು ಬಣ್ಣಗಳ ಜತೆ ಒಡನಾಡಿದಷ್ಟೇ ಸಲೀಸಾಗಿ ತೆಳು ಬಣ್ಣಗಳೊಂದಿಗೂ ಚಕ್ಕಂದವಾಡಿದ್ದಾರೆ. ಇಡೀ ಸರಣಿ ಕಲಾವಿದ ಹಾಗೂ ಕುಶಲಕರ್ಮಿ ಇಬ್ಬರ ಜುಗಲ್‌ಬಂದಿಯಂತೆ ತೋರುತ್ತದೆ.

 

ತಾಮ್ರದ ಉಬ್ಬುಶಿಲ್ಪ ರಚಿಸುವಾಗ ಅವರು ಚಂದ್ರನ್ ಎಂಬ ಶಿಲ್ಪಿಯ ಜತೆ ಕೆಲಸ ಮಾಡಿದ್ದರು. ಚಿತ್ರವಸ್ತ್ರ ಹಾಗೂ ತಾಮ್ರದ ಉಬ್ಬುಶಿಲ್ಪ ಎರಡನ್ನೂ ನೋಡಿದವರಿಗೆ `ವಾಸುದೇವತನ~ ಅಚ್ಚಳಿಯದೆ ಉಳಿದಿರುವುದನ್ನು ಕಾಣಬಹುದು.ಇನ್ನು ವರ್ಣಚಿತ್ರಗಳಲ್ಲಿ ನಡೆದಿರುವುದು ತೆಳು ಬಣ್ಣಗಳ ಪ್ರಯೋಗ. ಕೆಂಪು ಹಳದಿ ನೀಲಿ ಹಸಿರಿನಂತಹ ದಟ್ಟ ಬಣ್ಣಗಳಿಂದ ಬಹುತೇಕ ದೂರವೇ ಉಳಿದು ಹೊಸ ಪ್ರಯೋಗಕ್ಕೆ ಅಣಿಯಾಗಿದ್ದಾರೆ. ದಟ್ಟಬಣ್ಣಗಳ ಛಾಪು ಅಲ್ಲಲ್ಲಿ ಗೋಚರಿಸಿದರೂ ಅವು ಕಾವ್ಯದ ಸಂಚಾರಿ ಭಾವದಂತೆ ಮಿಂಚಿ ಮರೆಯಾಗುತ್ತವೆ. ತೆಳು ಬಣ್ಣಗಳನ್ನೇ ಬಳಸಿ ನಡೆಸಿರುವ ನೆಳಲು ಬೆಳಕಿನ ಕ್ರಿಯೆ ಮನೋಜ್ಞವಾಗಿದೆ.ಈಗಾಗಲೇ ಕೋಲ್ಕತ್ತಾ, ಮುಂಬೈ, ಚೆನ್ನೈ ಮುಂತಾದೆಡೆ ಪ್ರದರ್ಶನ ನಡೆದಿದೆ. ಅಹಮದಾಬಾದ್, ಬರೋಡಾ, ಕೊಚ್ಚಿಯಲ್ಲಿ ಪ್ರದರ್ಶನಕ್ಕಾಗಿ ತಯಾರಿ ಆರಂಭವಾಗಿದೆ. ಇದೇ 29ರವರೆಗೆ ನಗರದಲ್ಲಿ ಪ್ರದರ್ಶನ ಏರ್ಪಾಟಾಗಿದೆ.

 

ಸ್ಥಳ: ಕ್ರಿಮ್ಸನ್- ದಿ ಆರ್ಟ್ ರಿಸೋರ್ಸ್, ದಿ ಹ್ಯಾಟ್‌ವರ್ಕ್ಸ್ ಬೌಲ್‌ವರ್ಡ್, ನಂ 32, ಕನ್ನಿಂಗ್‌ಹ್ಯಾಂ ರಸ್ತೆ. ಅಲ್ಲದೆ ವಾಸುದೇವ್ ಅವರ ಬದುಕು ಕುರಿತ  `ಓಪನ್ ಫ್ರೇಮ್~ ಸಾಕ್ಷ್ಯಚಿತ್ರ ಪ್ರದರ್ಶನ ಇದೇ 17ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ. ಸಮಯ ಸಂಜೆ 6.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry