ಶನಿವಾರ, ಮೇ 15, 2021
24 °C

ಮತ್ತೆ ಮಳೆ ಆರ್ಭಟ ತತ್ತರಿಸಿದ ಜನಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯದಲ್ಲಿ ಮಳೆ ಎರಡು ದಿನಗಳಿಂದ ಮತ್ತೆ ಜೋರಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ.  ಹಾಸನ ಜಿಲ್ಲೆಯ ಯಗಚಿ ಜಲಾಶಯ ಭರ್ತಿಯಾಗಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ 36 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆ ಹಾಗೂ ಸೇತುವೆಗಳಿಗೆ ಹಾನಿ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮತ್ತೆರಡು ಸೇತುವೆಗಳು ಮುಳುಗಿವೆ. ಹಿರಣ್ಯಕೇಶಿ ಮತ್ತು ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಮನೆಗಳು ಕುಸಿದಿವೆ.ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜೀವ ನದಿ ಕಾವೇರಿಯ ಉಪ ನದಿಗಳು, ಕೆರೆ, ತೊರೆಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ಮನೆ ಕುಸಿತ ಸಂಭವಿಸಿವೆ.ಮಡಿಕೇರಿಯ ಪುಟಾಣಿ ನಗರದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಜಲಾವೃತವಾಗಿದೆ. ನದಿಯ ನೀರು ಸೇತುವೆ ಮೇಲೆ ಹಾಗೂ ರಸ್ತೆಯ ಮೇಲೆ ಹರಿಯಿತು. ಇದರಿಂದ ವಾಹನಗಳ ಸಂಚಾರಕ್ಕೆ ತಡೆ ಉಂಟಾಯಿತು.ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲದಲ್ಲಿ 180 ಮಿ.ಮೀ, ಮಡಿಕೇರಿಯಲ್ಲಿ 107 ಮಿ.ಮೀ, ಶಾಂತಳ್ಳಿಯಲ್ಲಿ 98 ಮಿ.ಮೀ, ಅಮ್ಮತ್ತಿಯಲ್ಲಿ 70 ಮಿ.ಮೀ.  ನಾಪೋಕ್ಲುವಿನಲ್ಲಿ 72 ಮಿ.ಮೀ ಮಳೆಯಾಗಿದೆ.ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನಾಲೆಗೆ ಬಿಡಲಾಗುತ್ತಿದೆ. ಶುಕ್ರವಾರ ನೀರಿನ ಮಟ್ಟ 2858.51 ಅಡಿಗೆ ತಲುಪಿದೆ (ಗರಿಷ್ಠ ಮಟ್ಟ 2859 ಅಡಿಗಳು). ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ 4271 ಕ್ಯೂಸೆಕ್ ನೀರು ಹರಿದು ಬಂದಿದೆ. ಹಾರಂಗಿ ಜಲಾಶಯದ ಕೆಳ ಪ್ರದೇಶದ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಿಭಾಯಿಸಲು ಸರ್ಕಾರ ಸಿದ್ಧ
ಬೆಂಗಳೂರು: ರಾಜ್ಯದ ಕೆಲವು ಕಡೆ ತಲೆದೋರಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಶುಕ್ರವಾರ ಇಲ್ಲಿ ತಿಳಿಸಿದರು.

ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಜೆ ಇದ್ದರೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಸೂಚಿಸಿದ್ದು, ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಕೊಡಗು, ಬೆಳಗಾವಿ, ಉಡುಪಿ, ಮಂಗಳೂರು ಸೇರಿದಂತೆ ಇತರ ಕಡೆ ಮಳೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಬಿದ್ದ ಮಳೆಗೂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದು, ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು `ಕೃಷ್ಣಾ~ದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

ಯಗಚಿ ಜಲಾಶಯ ಭರ್ತಿ: ಬೇಲೂರು  ಸಮೀಪದ ಯಗಚಿ ಜಲಾಶಯ ಭರ್ತಿಯಾಗಿದೆ. ಅಣೆಕಟ್ಟೆಯ ಐದು ಕ್ರೆಸ್ಟ್‌ಗೇಟ್‌ಗಳ ಮೂಲಕ ಶುಕ್ರವಾರ ನೀರನ್ನು ನದಿಗೆ ಬಿಡಲಾಗಿದೆ.ಯಗಚಿ ಜಲಾಶಯ ಸತತ ಆರು ವರ್ಷವೂ  ತುಂಬಿದೆ. 964.6 ಮೀಟರ್ ಎತ್ತರದ ಅಣೆಕಟ್ಟೆಯಲ್ಲಿ ಈಗ 964.55 ಮೀಟರ್ ನೀರಿದೆ. ಜಲಾಶಯಕ್ಕೆ 3690 ಕ್ಯೂಸೆಕ್ ನೀರು ಬರುತ್ತಿದ್ದು, 2600 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.3.6 ಟಿ.ಎಂ.ಸಿ. ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 3.56 ಟಿ.ಎಂ.ಸಿ. ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 963.6 ಟಿ.ಎಂ.ಸಿ. ನೀರಿತ್ತು. ಕಳೆದ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಲಾಶಯ ಭರ್ತಿಯಾಗಿತ್ತು.ಕೆಆರ್‌ಎಸ್‌ಗೆ ಹೆಚ್ಚು ನೀರು: ಕೃಷ್ಣರಾಜ ಸಾಗರ  ಜಲಾಶಯಕ್ಕೆ ಒಳಹರಿವು 28 ಸಾವಿರ  ಕ್ಯೂಸೆಕ್ ದಾಟಿದೆ. ಭಾರಿ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ 36,787 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಶುಕ್ರವಾರ ಸಂಜೆ ಒಟ್ಟು 124.32 ಅಡಿ ನೀರು ಸಂಗ್ರಹವಿತ್ತು. ಹೊರ ಹರಿವನ್ನು ಹೆಚ್ಚಿಸಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ.ಕಬಿನಿ ಮತ್ತೆ ಭರ್ತಿ: ಎಚ್.ಡಿ.ಕೋಟೆ  ತಾಲ್ಲೂಕಿನ ಕಬಿನಿ ಜಲಾಶಯ ಈ ವರ್ಷ ಎರಡನೇ ಬಾರಿಗೆ ಭರ್ತಿಯಾಗಿದೆ. ಶುಕ್ರವಾರದಿಂದ 38 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.38 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿರುವುದು ಇದೇ ಪ್ರಥಮವಾಗಿದ್ದು, ನದಿ ಪಾತ್ರದ ಅಂಚಿನಲ್ಲಿರುವ ಬೆಳೆಗಳು ಹಾಗೂ  ಕೆಲವು ಮನೆಗಳು ಜಲಾವೃತವಾಗಿವೆ.ಮತ್ತಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಗೆ ಮತ್ತಷ್ಟು ನೀರು ಬಿಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ತಾಲ್ಲೂಕಿನ ಕೆಲವು ಪ್ರಮುಖ ಹಳ್ಳಿಗಳ ಸೇತುವೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಜಲಾಶಯದ ಮುಂಭಾಗದಲ್ಲಿರುವ  ಬೀಚನಹಳ್ಳಿ, ಬಿದರಹಳ್ಳಿ ಸೇತುವೆ ಸಂಪೂರ್ಣ ಜಲಾವೃತಗೊಂಡಿವೆ.ಮನೆ ಕುಸಿತ, ಸೇತುವೆ ನಾಶ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ 2 ಮನೆಗಳು ಕುಸಿದಿವೆ. ಚಿಕ್ಕಮಗಳೂರು ನಗರದ ಬಹುತೇಕ ತಗ್ಗು ಪ್ರದೇಶ ಜಲಾವೃತವಾಗಿವೆ.ಮೂಡಿಗೆರೆ ತಾಲ್ಲೂಕಿನಾದ್ಯಂತ ವಾರದಿಂದ ಸತತ ಮಳೆಯಾಗುತ್ತಿದೆ. ಹೇಮಾವತಿ ನದಿ ಹಾಗೂ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಬತ್ತದ ಗದ್ದೆಗಳೆಲ್ಲ ನೀರು ತುಂಬಿ ಕೆರೆಯಾಗಿವೆ. ಗೋಣಿಬೀಡು ಹೋಬಳಿ ಚಿನ್ನಿಗ ಹಾಗೂ ಬಣಕಲ್ ಹೋಬಳಿ ಜಕ್ಕಳಿ ಗ್ರಾಮದಲ್ಲಿ ತಲಾ ಒಂದು ಮನೆ ಕುಸಿದಿವೆ. ಕುಂದೂರು ರಸ್ತೆಯಲ್ಲಿ ಮಳೆ ನೀರಿನ ರಭಸಕ್ಕೆ ಸೇತುವೆ ಭಾಗಶಃ ಕೊಚ್ಚಿಹೋಗಿದೆ.ಕಡಲ್ಕೊರೆತ ತೀವ್ರ: ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮರವಂತೆ ಮತ್ತು ಪಡುಬಿದ್ರಿಯಲ್ಲಿ ಶುಕ್ರವಾರ ಕಡಲ್ಕೊರೆತ ತೀವ್ರಗೊಂಡಿದೆ.  ಕುಂದಾಪುರ, ಕಾರ್ಕಳ ತಾಲ್ಲೂಕಿನಲ್ಲೂ ಮಳೆ ಆರ್ಭಟ ಜೋರಾಗಿದೆ. ಮಂಗಳೂರು ನಗರದಲ್ಲಿ ಬಿಟ್ಟುಬಿಟ್ಟೂ ಮಳೆ ಸುರಿಯುತ್ತಿದೆ.ಪ್ರವಾಹದ ಭೀತಿ: ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದಾಗಿ ಕೆರೆಕಟ್ಟೆ, ನದಿ, ಜಲಾಶಯಗಳ ನೀರಿನಮಟ್ಟ ಹೆಚ್ಚಿದೆ.  ಭದ್ರಾ ಜಲಾಶಯ ಸಂಪೂರ್ಣ ತುಂಬಿದೆ. ಒಳ ಹರಿವು 32,617 ಕ್ಯೂಸೆಕ್ ಇದ್ದು, 35,951 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಕೆಲವೆಡೆ ಪ್ರವಾಹದ ಭೀತಿ ಉಂಟಾಗಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,812 ಅಡಿ ತಲುಪಿದೆ. ಒಳಹರಿವು 46,697 ಕ್ಯೂಸೆಕ್ ಇದೆ.  ಇನ್ನು  7 ಅಡಿ ನೀರು ಬಂದರೆ ಜಲಾಶಯ ತುಂಬಲಿದೆ.ಬೆಳಗಾವಿ: 13 ಸೇತುವೆ ಜಲಾವೃತ

ನೆರೆಯ ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಶುಕ್ರವಾರ ಸ್ವಲ್ಪ ಇಳಿಕೆಯಾಗಿದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು, ಜಿಲ್ಲೆಯ 13 ಸೇತುವೆಗಳು ನೀರಿನಲ್ಲಿ ಮುಳುಗಿವೆ.ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹೆಚ್ಚಿದ ಪರಿಣಾಮ ಮಲಪ್ರಭಾ, ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿವೆ.

ಚಿಕ್ಕೋಡಿ ತಾಲ್ಲೂಕಿನ ಎಂಟು, ಖಾನಾಪುರ ಮತ್ತು ಹುಕ್ಕೇರಿ ತಾಲ್ಲೂಕಿನ ತಲಾ ಎರಡು ಹಾಗೂ ರಾಯಬಾಗ ತಾಲ್ಲೂಕಿನ ಒಂದು ಸೇತುವೆ ನೀರಿನಲ್ಲಿ ಮುಳುಗಿವೆ. ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಸುಲ್ತಾನಪುರ ಹಾಗೂ ಗೋಟೂರ ಸೇತುವೆಗಳು ಹಾಗೂ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ ಅಸೋಗಾ ಸೇತುವೆಯೂ ನೀರಿನಲ್ಲಿ ಮುಳುಗಿವೆ.ಸ್ಮಾರಕ ಜಲಾವೃತ: ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಐತಿಹಾಸಿಕ ಹಂಪಿಯ ಪುರಂದರ ಮಂಟಪ ಸೇರಿದಂತೆ ಅನೇಕ ಸ್ಮಾರಕಗಳು ಜಲಾವೃತವಾಗಿವೆ. ನದಿ ಪಾತ್ರದ ಕಂಪ್ಲಿ ಸೇರಿದಂತೆ ಕೆಲ ಗ್ರಾಮಗಳು ಸಂಪರ್ಕ ಕಳೆದು ಕೊಳ್ಳುವ ಭೀತಿಯಲ್ಲಿವೆ.ಪುರಂದರ ಮಂಟಪ, ಸೀತೆಯ ಸೆರಗು, ಚಕ್ರತೀರ್ಥದ ಬಳಿಯ ಪಾರ್ವತಿ ದೇವಾಲಯ, ಅನಂತಪದ್ಮನಾಭ ದೇವರು, ಲಕ್ಷ್ಮೀನರಸಿಂಹ ದೇವರ ಗುಡಿ, ಸಂಪೂರ್ಣ ಜಲಾವೃತವಾಗಿವೆ. ಕೊದಂಡರಾಮ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಮಾರ್ಗ ಬಂದ್ ಆಗಿದೆ.ಸಂಚಾರ ಸ್ಥಗಿತ ಸಂಭವ: ಕಂಪ್ಲಿ ಸಮೀಪದ ತುಂಗಭದ್ರಾ ನದಿಗೆ ಜಲಾಶಯದಿಂದ 1ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಗೆ ಕೇವಲ 1 ಅಡಿ ಅಂತರವಿರುವುದು ಶುಕ್ರವಾರ ಸಂಜೆ 7ಗಂಟೆಗೆ ಕಂಡು ಬಂತು.ನದಿ ನೀರಿನ ಹರಿವು ರಾತ್ರಿ ವೇಳೆಗೆಲ್ಲ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಸೇತುವೆ ಮೇಲೆ ವಾಹನಗಳ  ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಟ್ಟು ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ.  ಹಾವೇರಿ ಜಿಲ್ಲೆಯಲ್ಲಿ 26ಮನೆಗಳು ಭಾಗಶಃ ಕುಸಿದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.