ಮಂಗಳವಾರ, ನವೆಂಬರ್ 19, 2019
23 °C
ಜಾಗತಿಕ ಮಾರುಕಟ್ಟೆ ಪರಿಣಾಮ; 15ತಿಂಗಳಲ್ಲೇ ಕನಿಷ್ಠ ಧಾರಣೆ

ಮತ್ತೆ ರೂ 750 ಕುಸಿದ ಚಿನ್ನ; ಬೆಳ್ಳಿ ರೂ 2,100 ಇಳಿಕೆ

Published:
Updated:

ನವದೆಹಲಿ(ಪಿಟಿಐ): ದೇಶದ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ ಸೋಮವಾರವೂ ರೂ 750ರಷ್ಟು ಕುಸಿದಿದೆ. ಇಲ್ಲಿನ ಪೇಟೆಯಲ್ಲಿ 10 ಗ್ರಾಂ ಚಿನ್ನದ ಧಾರಣೆ ಸದ್ಯ 15 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ, ಅಂದರೆ ರೂ 27,600ಕ್ಕೆ ಬಂದಿದೆ. ಬೆಳ್ಳಿ ಬೆಲೆಯೂ ರೂ 2100ಇಳಿಕೆಯಾಗಿ ಕೆ.ಜಿ.ಗೆ ರೂ 48,000ರ ಮಟ್ಟಕ್ಕೆ ಬಂದಿದೆ.ಶನಿವಾರವೂ 10 ಗ್ರಾಂ ಚಿನ್ನ ಒಮ್ಮೆಲೇ ರೂ 1250ರಷ್ಟು ಕುಸಿತ ಕಂಡಿತ್ತು. ಚಿನ್ನ ಸಂಗ್ರಹಕಾರರು ವಿಶ್ವ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದಿಂದ ಭೀತರಾಗಿ ತಮ್ಮಲ್ಲಿ ದಾಸ್ತಾನಿದ್ದ ಹೆಚ್ಚಿನ ಚಿನ್ನವನ್ನೂ ಮಾರಾಟ ಮಾಡಲು ಮುಗಿಬಿದ್ದಿರುವುದೇ ಧಾರಣೆ ಕುಸಿತ ಮುಂದುವರಿಯಲು ಕಾರಣ. ಪರಿಣಾಮ 10 ಗ್ರಾಂ ಅಪರಂಜಿ ಚಿನ್ನ ರೂ 27,600ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ 27,400ಕ್ಕೂ ಇಳಿದಿದೆ.ಶನಿವಾರ ಮತ್ತು ಸೋಮವಾರ ಸೇರಿದಂತೆ ಚಿನ್ನ ಧಾರಣೆ ನವದೆಹಲಿಯಲ್ಲಿ 10 ಗ್ರಾಂಗೆ ಒಟ್ಟುರೂ2000ದಷ್ಟು ಇಳಿಕೆಯಾಗಿದೆ. 2011ರ ಡಿಸೆಂಬರ್ 31ರಂದೂ ಚಿನ್ನದ ಧಾರಣೆ ಇದೇ ಮಟ್ಟದಲ್ಲಿದ್ದಿತು.ಮುಂಬೈನಲ್ಲಿ ಸೋಮವಾರ 10 ಗ್ರಾಂ ಅಪರಂಜಿ ಚಿನ್ನರೂ26,690ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ 26,550ಕ್ಕೂ ಇಳಿಕೆ ಕಂಡಿತು. ಸಿದ್ಧ ಬೆಳ್ಳಿಯೂ ಕೆ.ಜಿ.ಗೆರೂ46,990ರಂತೆ ಮಾರಾಟವಾಯಿತು.ಅಂತರರಾಷ್ಟ್ರಿಯ ಚಿನಿವಾರ ಪೇಟೆಗಳಲ್ಲಿಯೂ ಚಿನ್ನ ಮಾರುಕಟ್ಟೆ ಮೌಲ್ಯ ಕಳೆದುಕೊಳ್ಳುವುದು ಮುಂದುವರಿದಿದೆ. ಲಂಡನ್‌ನಲ್ಲಿ ಸೋಮವಾರ ಚಿನ್ನ ಔನ್ಸ್ ಗೆ 90.70 ಡಾಲರ್ (ಶೇ 6.14)ನಷ್ಟು ಇಳಿಕೆಯಾಗಿದ್ದು, 1,386.30 ಡಾಲರ್ ಲೆಕ್ಕದಲ್ಲಿ ವಹಿವಾಟಾಗುತ್ತಿದೆ. ಬೆಳ್ಳಿ ಸಹ ಔನ್ಸ್‌ಗೆ 23.13 ಡಾಲರ್ (ಶೇ 10.52) ಇಳಿಕೆಯಾಗಿದೆ.ಷೇರುಗಳಿಗೂ ಪೆಟ್ಟು

ಇನ್ನೊಂದೆಡೆ, ಚಿನ್ನದ ಸಾಲ ನೀಡುವ ಕಂಪೆನಿಗಳ ಷೇರುಗಳೂ ಸೋಮವಾರದ ಮಾರುಕಟ್ಟೆ ವಹಿವಾಟಿನಲ್ಲಿ ಭಾರಿ ಪ್ರಮಾಣದಲ್ಲಿ ಮೌಲ್ಯ ಕಳೆದುಕೊಂಡವು.ಮುತ್ತೋಟ್ ಫೈನಾನ್ಸ್ ಷೇರಿನ ಬೆಲೆ ಗರಿಷ್ಠ ಪ್ರಮಾಣದಲ್ಲಿ ಅಂದರೆ ಶೇ 13.13ರಷ್ಟು ಕುಸಿದು ದಿನದಂತ್ಯದಲ್ಲಿರೂ131.35ರಲ್ಲಿ ವಹಿವಾಟು ನಡೆಸಿತು. ಮಣಪ್ಪರಂ ಫೈನಾನ್ಸ್ ಷೇರು ಶೇ 9.84ರಷ್ಟು ಮೌಲ್ಯ ಕಳೆದುಕೊಂಡುರೂ17.40ರಲ್ಲಿ ಮಾರಾಟವಾಯಿತು.ಆಭರಣ ತಯಾರಿಸುವ ಕಂಪೆನಿಗಳಾದ ಪಿ.ಸಿ. ಜ್ಯೂವಲರ್ಸ್ ಷೇರು ಶೇ 5.65, ಥಂಗಮಾಯಿಲ್ ಜ್ಯುವಲ್ಲೆರಿ ಶೇ 5.45, ಟೈಟನ್ ಇಂಡಸ್ಟ್ರೀಸ್ ಶೇ 4.37, ಗೀತಾಂಜಲಿ ಜೆಮ್ಸ ಶೇ 2.40, ತ್ರಿಭುವನ್ ದಾಸ್ ಭೀಮ್‌ಜಿ ಝವೇರಿ ಷೇರು ಶೇ 0.86ರಷ್ಟು ಕುಸಿತ ಕಂಡವು.ವಾಯಿದೆ ಪೇಟೆ

ವಾಯಿದೆ ಪೇಟೆಯಲ್ಲಿಯೂ ಚಿನ್ನದ ಬೆಲೆ ತಗ್ಗಿತು. ಜೂನ್‌ಗೆ ವಿತರಣೆ ಆಗಬೇಕಾದ ಬಂಗಾರಕ್ಕೆ ಸೋಮವಾರ ಇಲ್ಲಿನ `ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್'(ಎಂಸಿಎಕ್ಸ್)ನಲ್ಲಿರೂ1,675ರಷ್ಟು (ಶೇ 6ರಷ್ಟು) ಬೆಲೆ ಕಡಿಮೆ ಆಯಿತು. 10 ಗ್ರಾಂಗೆ ರೂ 26,250ರಲ್ಲಿ ವಹಿವಾಟು ನಡೆಸಿತು.ಆಗಸ್ಟ್ ವಾಯಿದೆ ಚಿನ್ನ 10 ಗ್ರಾಂ ಬೆಲೆ ರೂ 1700ರಷ್ಟು ಇಳಿದು,ರೂ26,643ರಲ್ಲಿ ಮಾರಾಟ ಖಾತರಿಯಾಯಿತು.

ಪ್ರತಿಕ್ರಿಯಿಸಿ (+)