ಶನಿವಾರ, ಮೇ 8, 2021
27 °C

ಮತ್ತೆ ಶುರುವಾದ ವಿದ್ಯುತ್ ಕಣ್ಣಾಮುಚ್ಚಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ನಾಲ್ಕು ಘಟಕಗಳು ಸ್ಥಗಿತಗೊಂಡಿರುವುದರಿಂದ ಹಾಗೂ ಪವನ ವಿದ್ಯುತ್ ಉತ್ಪಾದನೆ ಪ್ರಮಾಣ ಇಳಿಮುಖವಾಗಿರುವ ಪರಿಣಾಮ ರಾಜ್ಯದಲ್ಲಿ ಒಟ್ಟಾರೆ ಸುಮಾರು ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ಮತ್ತೆ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ.ರಾಯಚೂರಿನ ಆರ್‌ಟಿಪಿಎಸ್ ಸ್ಥಾವರದ ಮೂರು ಘಟಕಗಳು ಸ್ಥಗಿತಗೊಂಡಿರುವುದರಿಂದ ಅಲ್ಲಿ 670 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇದಲ್ಲದೆ 500 ಮೆಗಾವಾಟ್ ಸಾಮರ್ಥ್ಯದ ಬಳ್ಳಾರಿ ಘಟಕವೂ ಸದ್ಯಕ್ಕೆ ಸ್ಥಗಿತಗೊಂಡಿದೆ. ವಾರ್ಷಿಕ ನಿರ್ವಹಣೆ ಸಲುವಾಗಿ ಇದನ್ನು ಸ್ಥಗಿತಗೊಳಿಸಲಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಪುನರಾರಂಭಗೊಳ್ಳಲಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ `ಪ್ರಜಾವಾಣಿ~ಗೆ ತಿಳಿಸಿದರು.ತೇವಾಂಶವುಳ್ಳ ಕಲ್ಲಿದ್ದಲಿನಿಂದಾಗಿ ಆರ್‌ಟಿಪಿಎಸ್‌ನ ಒಂದು ಘಟಕದಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ವಾರ್ಷಿಕ ನಿರ್ವಹಣೆಗಾಗಿ ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಘಟಕಗಳು ಸಹ ಸದ್ಯಕ್ಕೆ ಶುರುವಾಗುವ ಲಕ್ಷಣಗಳಿಲ್ಲ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಅಕ್ಟೋಬರ್‌ನಲ್ಲಿ ಉತ್ಪಾದನೆ ಶುರುವಾಗುವ ಸಾಧ್ಯತೆಗಳಿವೆ.ಸದ್ಯ 1170 ಮೆಗಾವಾಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಅಲ್ಲದೆ ಗಾಳಿ ಕಡಿಮೆ ಆಗಿರುವುದರಿಂದ ಪವನ ವಿದ್ಯುತ್ ಉತ್ಪಾದನೆ ಪ್ರಮಾಣವೂ 800 ಮೆಗಾವಾಟ್ ಕಡಿಮೆಯಾಗಿದೆ. ಪವನ ವಿದ್ಯುತ್ ಘಟಕಗಳ ಒಟ್ಟು ಉತ್ಪಾದನಾ ಸಾಮರ್ಥ್ಯ 2400 ಮೆಗಾವಾಟ್. ಜುಲೈ, ಆಗಸ್ಟ್ ತಿಂಗಳಲ್ಲಿ 1200ರಿಂದ 1300 ಮೆಗಾವಾಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಈಗ 400 ಮೆಗಾವಾಟ್‌ಗೆ ಇಳಿದಿದೆ.ಗುರುವಾರ ಒಟ್ಟು 148.27 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗಿದೆ. ಇಷ್ಟಾದರೂ ರಾಜಧಾನಿಯೂ ಸೇರಿದಂತೆ ಎಲ್ಲ ಕಡೆ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ನಗರದ ಬಹುತೇಕ ಭಾಗಗಳಲ್ಲಿ ಸುಮಾರು ಒಂದು ಗಂಟೆ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇಂಧನ ಇಲಾಖೆ ಮೂಲಗಳ ಪ್ರಕಾರ ನಗರ ಪ್ರದೇಶಗಳಲ್ಲಿ ಸರಾಸರಿ 23 ಗಂಟೆ, ಗ್ರಾಮೀಣ ಪ್ರದೇಶಲ್ಲಿ 8 ಗಂಟೆ ಮೂರು ಫೇಸ್ ಮತ್ತು 9 ಗಂಟೆ ಸಿಂಗಲ್‌ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಪವನ ವಿದ್ಯುತ್ ಉತ್ಪಾದನೆ ಇಳಿಮುಖವಾಗಿರುವುದರಿಂದ ಸ್ವಲ್ಪಮಟ್ಟಿಗೆ ತೊಂದರೆಯಾಗಿರುವುದು ನಿಜ ಎಂಬುದನ್ನು ತ್ರಿಪಾಠಿ ಒಪ್ಪಿಕೊಂಡರು.ಸದ್ಯಕ್ಕೆ ಕಲ್ಲಿದ್ದಲು ಕೊರತೆ ಇಲ್ಲ. ಆರ್‌ಟಿಪಿಎಸ್‌ನಲ್ಲಿ 1.90 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಯಾವುದೇ ಘಟಕಗಳನ್ನು ಸ್ಥಗಿತಗೊಳಿಸಿಲ್ಲ. ವಾರ್ಷಿಕ ನಿರ್ವಹಣೆ ದೃಷ್ಟಿಯಿಂದ ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು. ಸದ್ಯ 600 ಮೆಗಾವಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಅಲ್ಲದೆ ಅಕ್ಟೋಬರ್ ಒಂದರಿಂದ ಇನ್ನೂ 500 ಮೆಗಾವಾಟ್ ವಿದ್ಯುತ್ ಖರೀದಿಸಲು ಟೆಂಡರ್ ಕರೆಯಲಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ.ನೀರು ಸಂಗ್ರಹ ಹೆಚ್ಚಳ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಮುಖ ಜಲವಿದ್ಯುತ್ ಉತ್ಪಾದನಾ ಜಲಾಶಯಗಳಲ್ಲಿ ಈ ವರ್ಷ ನೀರಿನ ಮಟ್ಟ ಉತ್ತಮವಾಗಿದೆ. ಲಿಂಗನಮಕ್ಕಿಯಲ್ಲಿ ಶೇ 97 (79), ಸೂಪಾದಲ್ಲಿ ಶೇ 85 (56) ಮತ್ತು ಮಾಣಿಯಲ್ಲಿ ಶೇ 95 (66)ರಷ್ಟು ನೀರಿನ ಸಂಗ್ರಹವಿದೆ.ಆವರಣದಲ್ಲಿರುವುದು ಕಳೆದ ವರ್ಷದ ಮಾಹಿತಿ. ಈಗಿರುವ ನೀರಿನ ಪ್ರಮಾಣದಲ್ಲಿ ನಿತ್ಯ 28.60 ದಶಲಕ್ಷ ಯೂನಿಟ್ ಪ್ರಕಾರ ಜೂನ್‌ವರೆಗೆ ಒಟ್ಟು 8066 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ.

ಖರೀದಿ ಅಗತ್ಯವೇ?

ಸ್ಥಗಿತಗೊಂಡಿರುವ ಆರ್‌ಟಿಪಿಎಸ್‌ನ ಮೂರು ಘಟಕಗಳು ಮತ್ತು ಬಳ್ಳಾರಿಯ 500 ಮೆಗಾವಾಟ್ ಸಾಮರ್ಥ್ಯದ ಮೊದಲ ಘಟಕ ಪುನರಾರಂಭಗೊಂಡು ಸರಿಯಾಗಿ ಕಾರ್ಯನಿರ್ವಹಿಸಿದರೆ ಒಂದು ಸಾವಿರ ಮೆಗಾವಾಟ್‌ಗೂ ಅಧಿಕ ವಿದ್ಯುತ್ ಲಭ್ಯವಾಗಲಿದೆ. ಆಗ ಖರೀದಿ ಮಾಡುವ ಪ್ರಶ್ನೆಯೇ ಬರುವುದಿಲ್ಲ.`ಬಿಟ್ಟು ವಿದ್ಯುತ್ ಖರೀದಿಗಾಗಿಯೇ ವರ್ಷಕ್ಕೆ ರೂ 3 ಸಾವಿರ ಕೋಟಿ ವೆಚ್ಚ ಮಾಡುವುದರಿಂದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದು ಸರಿಯಲ್ಲ. ವಿದ್ಯುತ್ ಖರೀದಿಗಿಂತ ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆ ನೀಡುವುದು ಒಳ್ಳೆಯದು~ ಎಂಬ ಮಾತುಗಳು ಕೇಳಿಬರುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.