ಮತ್ತೆ ಸ್ಪರ್ಧೆಗೆ ನಾಲ್ವರು `ಕೃಷ್ಣ'ರ ತಯಾರಿ

7
ವಿಜಯನಗರ, ಗೋವಿಂದರಾಜನಗರ, ಬ್ಯಾಟರಾಯನಪುರ, ಬೆಂಗಳೂರು ದಕ್ಷಿಣ ಕ್ಷೇತ್ರ

ಮತ್ತೆ ಸ್ಪರ್ಧೆಗೆ ನಾಲ್ವರು `ಕೃಷ್ಣ'ರ ತಯಾರಿ

Published:
Updated:
ಮತ್ತೆ ಸ್ಪರ್ಧೆಗೆ ನಾಲ್ವರು `ಕೃಷ್ಣ'ರ ತಯಾರಿ

ಬೆಂಗಳೂರು: ಆಕಸ್ಮಿಕ ಎಂಬಂತೆ ಈ ನಾಲ್ಕು ಕ್ಷೇತ್ರಗಳಲ್ಲಿ ಶಾಸಕರಾಗಿ ನಾಲ್ವರು `ಕೃಷ್ಣ'ರಿದ್ದಾರೆ. ಈ ನಾಲ್ವರೂ ತಮ್ಮ ಪಕ್ಷದಿಂದ ಟಿಕೆಟ್ ಸಿಗುವ ಖಚಿತ ಭರವಸೆಯೊಂದಿಗೆ ಮತ್ತೆ ಚುನಾವಣಾ ಕಣಕ್ಕೆ ಧುಮುಕಲು ತಯಾರಿ ನಡೆಸಿದ್ದಾರೆ. ಇವರ ಎದುರಾಳಿ ಪಕ್ಷಗಳಿಂದ ಕಣಕ್ಕೆ ಇಳಿಯಲು ಹೊಸಬರು ಕಾತರದಿಂದಿದ್ದಾರೆ.ರಾಜಧಾನಿಯ ಪಶ್ಚಿಮ ಭಾಗದ ಕೇಂದ್ರದಲ್ಲಿರುವ ವಿಜಯನಗರ, ಗೋವಿಂದರಾಜನಗರ, ಉತ್ತರ ಭಾಗದಲ್ಲಿರುವ ಬ್ಯಾಟರಾಯನಪುರ ಹಾಗೂ ದಕ್ಷಿಣದಲ್ಲಿರುವ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಕ್ರಮವಾಗಿ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಕೃಷ್ಣ ಬೈರೇಗೌಡ ಹಾಗೂ ಬಿಜೆಪಿಯ ಎಂ.ಕೃಷ್ಣಪ್ಪ ಅವರು ಪ್ರತಿನಿಧಿಸುತ್ತಿದ್ದಾರೆ.ಕ್ಷೇತ್ರ ಪುನರ್‌ವಿಂಗಡಣೆಯ ಫಲವಾಗಿ 2008ರ ಚುನಾವಣೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಈ ನಾಲ್ಕ ಕ್ಷೇತ್ರಗಳ ಪೈಕಿ ಮೂರನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆ ಮೂರರಲ್ಲಿ ಒಂದನ್ನು 2009ರಲ್ಲಿ `ಆಪರೇಷನ್ ಕಮಲ'ದ ಮೂಲಕ ತನ್ನದಾಗಿಸಿಕೊಳ್ಳಲು ಬಿಜೆಪಿ ನಡೆಸಿದ ಯತ್ನ ಸಫಲವಾಗಲಿಲ್ಲ.ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದ ಈ ಕ್ಷೇತ್ರಗಳಲ್ಲಿ ಈ ಸಲದ ಚುನಾವಣೆಯಲ್ಲಿ ಜೆಡಿಎಸ್, ಬಿಎಸ್‌ಆರ್, ಕೆಜೆಪಿ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶಿಸುವ ಹಂಬಲದಲ್ಲಿವೆ.ಬ್ಯಾಟರಾಯನಪುರದಿಂದ ಸ್ಪರ್ಧಿಸಲು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅವರಿಗೆ ಬಿಎಸ್‌ಆರ್ ಪಕ್ಷದ ಟಿಕೆಟ್ ಘೋಷಿಸಲಾಗಿದೆ. ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಸಂಸದೆ ತೇಜಸ್ವಿನಿ ಗೌಡ ಪ್ರಯತ್ನ ನಡೆಸಿದ್ದಾರೆ.ವಿಜಯನಗರ

ಕ್ಷೇತ್ರದ ಹಾಲಿ ಶಾಸಕ ಎಂ.ಕೃಷ್ಣಪ್ಪ ಈಗಾಗಲೇ ಚುನಾವಣೆ ತಯಾರಿ ಪ್ರಾರಂಭಿಸಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ಖಾತರಿ ಎಂಬ ಪಕ್ಷದೊಳಗಿನ ಭರವಸೆಯಿಂದ ಅವರು ಮತ್ತೆ ಕಣಕ್ಕೆ ಇಳಿಯುವ ಉತ್ಸಾಹದಲ್ಲಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಲು ಬಿಬಿಎಂಪಿ ಸದಸ್ಯ ಎಚ್.ರವೀಂದ್ರ, ಮಾಜಿ ಉಪ ಮೇಯರ್ ಲಕ್ಷ್ಮೀನಾರಾಯಣ ಮೊದಲಾದವರು ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿವೆ.ಪುನರ್ ವಿಂಗಡಣೆಗೂ ಮೊದಲು ಈ ಕ್ಷೇತ್ರದ ಬಹುಭಾಗವನ್ನು ಒಳಗೊಂಡಿದ್ದ ಬಿನ್ನಿಪೇಟೆ ಕ್ಷೇತ್ರದಲ್ಲಿ ಜನತಾ ಪರಿವಾರದ ಪ್ರಾಬಲ್ಯ ಇತ್ತು.ಗೋವಿಂದರಾಜನಗರ

ಈ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ವಿ.ಸೋಮಣ್ಣ 2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದರು. ಸಚಿವರೂ ಆದರು. ನಂತರ ನಡೆದ ಉಪ ಚುನಾವಣೆಯಲ್ಲಿ ಕೃಷ್ಣಪ್ಪ ಅವರ ಪುತ್ರ ಪ್ರಿಯಕೃಷ್ಣ ವಿರುದ್ಧ ಸೋಲು ಅನುಭವಿಸಿದರು.2008ರ ನಂತರ `ಆಪರೇಷನ್ ಕಮಲ'ಕ್ಕಾಗಿ ನಡೆದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದ ಏಕೈಕ ಕ್ಷೇತ್ರ ಗೋವಿಂದರಾಜನಗರ. `ಸಚಿವರ ವಿರುದ್ಧ ಜಯ ಗಳಿಸುವುದೆಂದರೆ ಸರ್ಕಾರವನ್ನೇ ಸೋಲಿಸಿದಂತೆ. ಹೀಗಾಗಿ ಪ್ರಿಯಕೃಷ್ಣ ಅವರಿಗೆ ಟಿಕೆಟ್ ಸಿಕ್ಕೇ ಸಿಗುತ್ತೆ' ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ.`ನಾನು ಬಿಜೆಪಿ ತೊರೆಯುವುದಿಲ್ಲ' ಎಂದು ಸಚಿವ ವಿ.ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದರೂ ಅವರ ಬಗೆಗಿನ ವದಂತಿಗಳ ಪ್ರಸಾರ ನಿಂತಿಲ್ಲ. `ಸೋಮಣ್ಣ ಕಾಂಗ್ರೆಸ್ ಸೇರಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಕೃಷ್ಣಪ್ಪ ಅಥವಾ ಪ್ರಿಯಕೃಷ್ಣ ಅವರಿಗೆ ಬೇರೆ ರೀತಿ ರಾಜಕೀಯ ಪರಿಹಾರ ಕಲ್ಪಿಸಲಾಗುತ್ತದೆ' ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇವೆ.ಒಂದೊಮ್ಮೆ ಸೋಮಣ್ಣ ಬಿಜೆಪಿ ತೊರೆದರೆ ತಮಗೆ ಟಿಕೆಟ್ ಕೊಡಬೇಕೆಂದು ಬಿಬಿಎಂಪಿ ಹಿರಿಯ ಸದಸ್ಯ ಗಂಗಬೈರಯ್ಯ ಪಕ್ಷದ ವರಿಷ್ಠರನ್ನು ಕೋರಿಕೊಂಡಿದ್ದಾರೆ ಎಂದು ಗೊತ್ತಾಗಿದೆ.ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸಲು ಕ್ಷೇತ್ರ ವ್ಯಾಪ್ತಿಯ ಕಾವೇರಿಪುರ ವಾರ್ಡ್ ಪಾಲಿಕೆ ಸದಸ್ಯ ಪ್ರಕಾಶ್ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬ್ಯಾಟರಾಯನಪುರ

ಹಾಲಿ ಶಾಸಕ ಕೃಷ್ಣ ಬೈರೇಗೌಡ ಈಗಾಗಲೇ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ. `ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರೂ ಆದ ಕೃಷ್ಣ ಅವರು ಪಕ್ಷದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಅವರಿಗೇ ಟಿಕೆಟ್ ಖಚಿತ' ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಭಿಮತ.ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರವಿ ಅವರೇ ಈ ಬಾರಿಯೂ ಬಿಜೆಪಿ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ.ನಗರಸಭೆ ಮಾಜಿ ಅಧ್ಯಕ್ಷ ಹನುಮಂತೇಗೌಡ, ಥಣಿಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಗೋಪಾಲಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಇಬ್ಬರೂ ಜೆಡಿಎಸ್ ಟಿಕೆಟ್‌ಗಾಗಿ ತೀವ್ರ ಯತ್ನ ನಡೆಸಿದ್ದಾರೆ.

ಇನ್ನು ಬಿಎಸ್‌ಆರ್ ಪಕ್ಷದಿಂದ ಸಿ.ಎಸ್.ದ್ವಾರಕಾನಾಥ್ ಕಣಕ್ಕೆ ಇಳಿಯಲಿದ್ದಾರೆ.ಬೆಂಗಳೂರು ದಕ್ಷಿಣ

ಉತ್ತರಹಳ್ಳಿ ಮತ್ತು ಆನೇಕಲ್ ಕ್ಷೇತ್ರದ ಹಲವು ಭಾಗಗಳನ್ನು ಒಳಗೊಂಡು ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಕೃಷ್ಣಪ್ಪ ಹಾಲಿ ಶಾಸಕರು. ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಘೋಷಿಸಿರುವ ಹಿನ್ನೆಲೆಯಲ್ಲಿ ಕೃಷ್ಣಪ್ಪ ಅವರು ಚುನಾವಣಾ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಎಂ.ಸದಾನಂದ, ಕಾಂಗ್ರೆಸ್‌ನ ನಗರ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ರವಿಕುಮಾರ್, ಉದ್ಯಮಿ ಎಚ್.ಪಿ.ರಾಜಗೋಪಾಲರೆಡ್ಡಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಎಸ್.ಎ.ಹುಸೇನ್, ಜಿ.ಸಿ.ಚಂದ್ರಶೇಖರ್ ಮೊದಲಾದವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಐದಾರು ದಿನಗಳಿಂದ ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರೂ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಯತ್ನ ಆರಂಭಿಸಿದ್ದಾರೆ.ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೊಟ್ಟಿಗೆರೆ ಮಂಜುನಾಥ್ ಈ ಬಾರಿಯೂ ಪಕ್ಷದ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry