ಭಾನುವಾರ, ನವೆಂಬರ್ 17, 2019
28 °C
ಭದ್ರಾವತಿ ವಿಧಾನಸಭಾ ಕ್ಷೇತ್ರ ಪರಿಚಯ; 1,91,545 ಮತದಾರರು

ಮತ್ತೊಂದು ಕ್ಷೇತ್ರದ ಕೊಡುಗೆ ಇಲ್ಲಿನ ವಿಶೇಷ

Published:
Updated:

ಭದ್ರಾವತಿ: ಮೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು, 12 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳು, 35 ಸದಸ್ಯ ಬಲದ ನಗರಸಭೆ ಹೊಂದಿರುವ ಭದ್ರಾವತಿ ವಿಧಾನಸಭಾ ಕ್ಷೇತ್ರ 1,91,545 ಮತದಾರರನ್ನು ಹೊಂದಿದೆ.95,287 ಪುರುಷ ಮತದಾರರು, 96,308 ಮಹಿಳಾ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ, ಪುರುಷರಿಗಿಂತ 1,021 ಮಹಿಳಾ ಮತದಾರರು ಅಧಿಕವಾಗಿದ್ದಾರೆ. ಒಟ್ಟು ಮತದಾರರಲ್ಲಿ ಶೇ 13ರಷ್ಟು ಮಂದಿ ಪ್ರಥಮ ಬಾರಿಗೆ ಮತದಾನ ಹಕ್ಕು ಪಡೆದ ಯುವಜನರಿದ್ದಾರೆ.ಕ್ಷೇತ್ರದ ಇತಿಹಾಸ: 1978ರ ಕ್ಷೇತ್ರ ಮರುವಿಂಗಡಣೆ ನಂತರ ಭದ್ರಾವತಿ ಕ್ಷೇತ್ರದ ಜತೆಗೆ ಕೂಡಿದ್ದ ಹೊಳೆಹೊನ್ನೂರು ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಈ ವಿಭಜನೆಗೂ ಮುನ್ನ ಜರುಗಿದ ಐದು ಚುನಾವಣೆಗಳಲ್ಲೂ ಹೊಳೆಹೊನ್ನೂರು, ಭದ್ರಾವತಿ ಕ್ಷೇತ್ರದ ಭಾಗವಾಗಿತ್ತು ಎಂಬುದು ವಿಶೇಷ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಹೊಳೆಹೊನ್ನೂರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಗಿ ಮಾರ್ಪಾಡು ಪಡೆದರೆ, ಈ ಕ್ಷೇತ್ರಕ್ಕೆ ಸೇರಿದ್ದ ಕೂಡ್ಲಿಗೆರೆ ಹೋಬಳಿ, ಒಂದು ಜಿ.ಪಂ. ಹಾಗೂ ಆರು ತಾ.ಪಂ ಕ್ಷೇತ್ರಗಳು ಭದ್ರಾವತಿ ವ್ಯಾಪ್ತಿಗೆ ಸೇರುವ ಮೂಲಕ ಕ್ಷೇತ್ರ ಮತ್ತಷ್ಟು ವಿಸ್ತಾರವಾಯಿತು.ಕೈಗಾರಿಕೆ ಗರಿ: ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಈ ಭಾಗದ ಜನರ ಜೀವನಾಡಿ. ಇಲ್ಲಿಗೆ ಕೆಲಸಕ್ಕಾಗಿ ವಲಸೆ ಬಂದ ಮಂದಿ ಇಲ್ಲಿಯೇ ನೆಲೆ ನಿಂತ ಕಾರಣ ಊರು ಬೆಳೆದು ಸಾಕಷ್ಟು ಸಣ್ಣ, ಪುಟ್ಟ ಕೈಗಾರಿಕೆಗಳು ನೆಲೆ ನಿಂತವು.ಹೆಚ್ಚು ವಲಸಿಗರಿಂದ ತುಂಬಿರುವ ಕ್ಷೇತ್ರದಲ್ಲಿ ಎಲ್ಲಾ ಜಾತಿ, ಜನಾಂಗ, ಸಮುದಾಯ ಮಂದಿಯು ಸಮಾನ ಬಲವನ್ನು ಹೊಂದಿರುವುದು ಇಲ್ಲಿನ ವೈಶಿಷ್ಟ್ಯ. ಒಕ್ಕಲಿಗರು, ಲಿಂಗಾಯತರು, ಮುಸ್ಲಿಮರು ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲಿದ್ದರು. ಇವರೊಡನೆ ಪರಿಶಿಷ್ಟ ಜಾತಿ, ವರ್ಗಗಳ ಜತೆಗೆ ಇನ್ನಿತರ ಸಣ್ಣಪುಟ್ಟ ಜಾತಿ ಜನಾಂಗದವರು ನೆಲೆ ಕಂಡಿದ್ದಾರೆ.ಎರಡು ಕಾರ್ಖಾನೆಗಳ ಕಾರ್ಮಿಕರ ಕ್ಷೀಣತೆ, ಹೊಸ ಕೆಲಸ ಸೃಷ್ಟಿಸುವಲ್ಲಿನ ವೈಫಲ್ಯ ಕಾರಣ 1990ರ ನಂತರ ಇಲ್ಲಿಂದ ವಲಸೆ ಹೋಗುವ ಜನರ ಪ್ರಮಾಣ ನಿರಂತರವಾಗಿ ಹೆಚ್ಚಿದೆ. ಈ ಬೆಳವಣಿಗೆ ನಂತರ ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಒಕ್ಕಲಿಗರು, ಲಿಂಗಾಯತರು, ಮುಸ್ಲಿಂ ಸಮಾಜದವರು ಸಮ ಪ್ರಾಬಲ್ಯ ಹೊಂದಿದ್ದರೆ, ಉಳಿಕೆ ಸಮುದಾಯವರು ಗುರುತು ಮಾಡಿಕೊಳ್ಳುವಷ್ಟು ಪ್ರಮಾಣದಲ್ಲಿ ತಮ್ಮ ಆಸ್ತಿತ್ವ ಹೊಂದಿದ್ದಾರೆ.ಗೆಲುವು ಕಂಡವರ ವೈಶಿಷ್ಟ್ಯಗಳು: ಇಂದಿನ 13ನೇ ವಿಧಾನಸಭೆ ತನಕ ನಾಲ್ವರು ಲಿಂಗಾಯತರು, ಇಬ್ಬರು ಮುಸ್ಲಿಮರು, ತಲಾ ಓರ್ವ ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರ ಸಮುದಾಯದವರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಏಳು ಬಾರಿ ಕಾಂಗ್ರೆಸ್ ತೆಕ್ಕೆಗೆ ಒಲಿದಿರುವ ಕ್ಷೇತ್ರದಲ್ಲಿ ಒಂದು ಬಾರಿ ಪ್ರಜಾ ಸೋಷಲಿಸ್ಟ್ ಪಕ್ಷ, ಎರಡು ಬಾರಿ ಜನತಾ ಪಕ್ಷ, ಮೂರು ಬಾರಿ ಪಕ್ಷೇತರರು ಪ್ರಾಬಲ್ಯ ಮೆರೆದಿರುವುದು ಈ ಕ್ಷೆತ್ರದ ಹೆಗ್ಗಳಿಕೆ.ಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಇಬ್ಬರು ತಲಾ ನಾಲ್ಕು ಬಾರಿ ಶಾಸಕರಾದರೆ, ವಕೀಲ ವೃತ್ತಿ ನಡೆಸಿದ ಇಬ್ಬರು, ಮೂರು ಬಾರಿ, ವ್ಯವಸಾಯ, ವ್ಯಾಪಾರ, ವಹಿವಾಟು ನಡೆಸುತ್ತ್ದ್ದಿದ ಐವರು ವಿಧಾನಸಭೆ ಪ್ರವೇಶಿಸಿರುವುದು ಇಲ್ಲಿನ ಮಹಿಮೆ.ಕಾರ್ಮಿಕ ಮುಖಂಡ ದಿವಂಗತ ಅಬ್ದುಲ್ ಖುದ್ದೂಸ್ ಅನ್ವರ್, ವಕೀಲ ಸಾಲೇರ ಎಸ್. ಸಿದ್ದಪ್ಪ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಶಾಸಕ ಬಿ.ಕೆ. ಸಂಗಮೇಶ್ವರ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಬಿಟ್ಟರೆ ಉಳಿದ ಐದು ಮಂದಿ ಒಂದು ಬಾರಿಗೆ ತೃಪ್ತಿಪಟ್ಟಿದ್ದಾರೆ.ಸತತ ಮೂರು ಚುನಾವಣೆಯಲ್ಲಿ ಪಕ್ಷೇತರರ ಪಾಲಿಗೆ ವರವಾಗಿದ್ದ ಈ ಕ್ಷೇತ್ರವೂ 1994ರಿಂದ 2008ರ ತನಕ ಅವರ ಪಾರುಪತ್ಯವನ್ನೇ ಆಶ್ರಯಿಸಿತ್ತು. ಆಗ ಗೆದ್ದವರು ರಾಜ್ಯದಲ್ಲಿ ರಚಿತವಾದ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಗುರುತಿಸಿಕೊಂಡಿದ್ದು ವಿಶೇಷ.ಪ್ರಮುಖ ಕೈಗಾರಿಕಾ ನಗರವಾಗಿ ಬೆಳೆದ ಭದ್ರಾವತಿ ಈಗ ಕೆಲಸ ಸೃಷ್ಟಿಯಲ್ಲಿನ ವೈಫಲ್ಯದಿಂದ ವಲಸೆ ಪ್ರಮಾಣ ಹೆಚ್ಚಿಸಿಕೊಂಡಿದೆ. ಇದರಿಂದಾಗಿ ಇಲ್ಲಿನ ಆರ್ಥಿಕ ಜೀವನ ಮಟ್ಟ, ಸಾಮಾಜಿಕ ಭದ್ರತೆ ಎಲ್ಲವೂ ದೂರ ಎಂಬಂತಾಗಿದೆ. ಈ ಸಂಕಷ್ಟದಲ್ಲಿ 14ನೇ ವಿಧಾನಸಭೆ ರಚನೆಗೆ ವೇದಿಕೆ ಸಿದ್ಧವಾಗಿದೆ. ಇದರತ್ತ ಮತದಾರನ ಚಿತ್ತ ಹರಿದಿದ್ದು ಅದರಲ್ಲಿ ಇಲ್ಲಿನ ಜೀವನಾಡಿಗಳ ಯಶೋಗಾಥೆ ನಿಂತಿದೆ.

ಪ್ರತಿಕ್ರಿಯಿಸಿ (+)