ಬುಧವಾರ, ನವೆಂಬರ್ 13, 2019
23 °C
ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆ ಹೋರಾಟ

ಮತ್ತೊಂದು ಜಯ; ಡೆವಿಲ್ಸ್ ಕನಸು

Published:
Updated:

ನವದೆಹಲಿ (ಪಿಟಿಐ): ಸತತ ಆರು ಸೋಲುಗಳ ನಿರಾಸೆಯಿಂದ ಹೊರಬಂದಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಮಾಹೇಲ ಜಯವರ್ಧನೆ ಬಳಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.ಡೇರ್‌ಡೆವಿಲ್ಸ್ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿತ್ತು. ಪ್ರಸಕ್ತ ಟೂರ್ನಿಯಲ್ಲಿ ತಂಡಕ್ಕೆ ದೊರೆತ ಚೊಚ್ಚಲ ಗೆಲುವು ಇದಾಗಿತ್ತು.ವೀರೇಂದ್ರ ಸೆಹ್ವಾಗ್ ಭರ್ಜರಿ 95 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಮೊದಲ ಗೆಲುವು ಪಡೆದಿರುವ ತಂಡಕ್ಕೆ ಇನ್ನು ಮುಂದಿನ ಪ್ರತಿಯೊಂದು ಪಂದ್ಯಗಳೂ ಮಹತ್ವದ್ದಾಗಿವೆ. ಏಕೆಂದರೆ ಏಳು ಪಂದ್ಯಗಳ ಬಳಿಕ ಕೇವಲ ಎರಡು ಪಾಯಿಂಟ್‌ಗಳೊಂದಿಗೆ ಈ ತಂಡ ಕೊನೆಯ ಸ್ಥಾನದಲ್ಲಿದೆ.ಕಿಂಗ್ಸ್ ಇಲೆವೆನ್ ವಿರುದ್ಧದ ಪೈಪೋಟಿ ಒಳಗೊಂಡಂತೆ ಒಟ್ಟು ಒಂಬತ್ತು ಪಂದ್ಯಗಳನ್ನು ಡೇರ್‌ಡೆವಿಲ್ಸ್ ಆಡಬೇಕಿದೆ. `ಪ್ಲೇ ಆಫ್' ಹಂತ ಪ್ರವೇಶಿಸಬೇಕಾದರೆ ಇದರಲ್ಲಿ ಏಳು ಅಥವಾ ಎಂಟು ಪಂದ್ಯಗಳಲ್ಲಿ ಜಯ ಪಡೆಯುವುದು ಅನಿವಾರ್ಯ.

ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್ ಶನಿವಾರಷ್ಟೇ ಸಲಹೆಗಾರನಾಗಿ ತಂಡವನ್ನು ಸೇರಿಕೊಂಡಿದ್ದರು. ಅದರ ಬೆನ್ನಲ್ಲೇ ಸೆಹ್ವಾಗ್ ಫಾರ್ಮ್ ಕಂಡುಕೊಂಡದ್ದು ಮತ್ತು ಡೇರ್‌ಡೆವಿಲ್ಸ್ ಚೊಚ್ಚಲ ಗೆಲುವು ಪಡೆದದ್ದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಹಿಂದಿನ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಗೆಲುವು ಪಡೆದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಕೂಡಾ ಆತ್ಮವಿಶ್ವಾಸದಲ್ಲಿದೆ. ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 41 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದ್ದರು. ಮನ್‌ದೀಪ್ ಸಿಂಗ್ ಕೂಡಾ ಭರ್ಜರಿ ಆಟವಾಡಿದ್ದರು. ಆದ್ದರಿಂದ ತಂಡ ಬ್ಯಾಟಿಂಗ್‌ನಲ್ಲಿ ಇವರನ್ನೇ ಅವಲಂಬಿಸಿದೆ.

ಗಿಲ್‌ಕ್ರಿಸ್ಟ್ ಅವರ ಕಳಪೆ ಪ್ರದರ್ಶನ ತಂಡವನ್ನು ಕಾಡುತ್ತಿದೆ.  ಆಸ್ಟ್ರೇಲಿಯದ ಶಾನ್ ಮಾರ್ಷ್ ತಂಡವನ್ನು ಸೇರಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)