ಮತ್ತೊಂದು ತಾತ್ಕಾಲಿಕ ದುರಸ್ತಿ ಪ್ರಹಸನ

ಗುರುವಾರ , ಜೂಲೈ 18, 2019
25 °C

ಮತ್ತೊಂದು ತಾತ್ಕಾಲಿಕ ದುರಸ್ತಿ ಪ್ರಹಸನ

Published:
Updated:

ಯಾದಗಿರಿ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣಾ ಎಡದಂಡೆ ಕಾಲುವೆಯ ಸ್ಥಿತಿ ತೀರ ಹದಗೆಟ್ಟಿದ್ದು, ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿ ತಾತ್ಕಾಲಿಕ ದುರಸ್ತಿಯ ಮತ್ತೊಂದು ಪ್ರಹಸನ ಆರಂಭವಾಗಲಿದೆ. ಬೇಸಿಗೆ ಮುಗಿಯುವವರೆಗೆ ಸುಮ್ಮನಿದ್ದು, ಮಳೆಗಾಲದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.ನಾರಾಯಣಪುರ ಜಲಾಶಯದಿಂದ ಯಾದಗಿರಿ, ವಿಜಾಪುರ, ಗುಲ್ಬರ್ಗ ಜಿಲ್ಲೆಗಳ ಸುಮಾರು 5 ತಾಲ್ಲೂಕುಗಳ 6 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಎಡದಂಡೆ ಮುಖ್ಯ ಕಾಲುವೆ ಸುಮಾರು 78 ಕಿ.ಮೀ. ಉದ್ದವಾಗಿದೆ. ಮುಖ್ಯ ಕಾಲುವೆಯಲ್ಲಿ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿದು ಬಿಡಲಾಗುತ್ತಿದ್ದು, ಜಿಲ್ಲೆಯ ಸುರಪುರ, ಶಹಾಪುರ, ಗುಲ್ಬರ್ಗ ಜಿಲ್ಲೆಯ ಜೇವರ್ಗಿ, ವಿಜಾಪುರ ಜಿಲ್ಲೆಯ ಸಿಂದಗಿ, ಇಂಡಿ ತಾಲ್ಲೂಕಿನ ಜಮೀನಿಗೆ ನೀರು ದೊರೆಯುತ್ತದೆ.30 ವರ್ಷಗಳ ಹಿಂದೆ ನಿರ್ಮಿಸಲಾದ ಈ ಮುಖ್ಯ ಕಾಲುವೆ, ಅಲ್ಲಲ್ಲಿ ಶಿಥಿಲಗೊಂಡಿದ್ದು, ನೀರು ಪೋಲಾಗುತ್ತಿದೆ. ಶಹಾಪುರ ತಾಲ್ಲೂಕಿನ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪದಂತಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಸಿ. ರೆಡ್ಡಿ ನೇತೃತ್ವದ ತಾಂತ್ರಿಕ ಸಮಿತಿಯು ಕಾಲುವೆ ಪ್ರದೇಶಕ್ಕೆ ಭೇಟಿ ನೀಡಿ, ವರದಿ ಸಲ್ಲಿಸಿತ್ತು. ಪ್ರತಿ ಸಾರಿ ತಾತ್ಕಾಲಿಕ ದುರಸ್ತಿ ಮಾಡುವ ಬದಲು ಮುಖ್ಯ ಕಾಲುವೆಯ ಶಾಶ್ವತ ದುರಸ್ತಿಗೆ ಒತ್ತು ನೀಡುವುದು ಒಳಿತು ಎಂಬ ಅಭಿಪ್ರಾಯವನ್ನು ಸಮಿತಿ ವರದಿಯಲ್ಲಿ ತಿಳಿಸಿತ್ತು.ವರದಿಯಂತೆ ಮುಖ್ಯ ಕಾಲುವೆಯ ಶಾಸ್ವತ ದುರಸ್ತಿಗೆ ಸುಮಾರು ರೂ.420 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಕೃಷ್ಣಾ ಭಾಗ್ಯ ಜಲನಿಗಮವು, ಸರ್ಕಾರಕ್ಕೆ ಸಲ್ಲಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಜಿಲ್ಲೆಯ ಶಾಸಕರು, ರೈತ ಮುಖಂಡರ ಒತ್ತಾಯದ ಹಿನ್ನೆಲೆಯಲ್ಲಿ ರೂ.420 ಕೋಟಿಗೆ ಮಂಜೂರಾತಿ ನೀಡಿ, ಮೂರು ಹಂತದಲ್ಲಿ ಹಣ ನೀಡಲು ಒಪ್ಪಿಗೆ ನೀಡಲಾಯಿತು. ಅದರಂತೆ ಮೊದಲ ಕಂತಾಗಿ ರೂ. 16 ಕೋಟಿ ಬಿಡುಗಡೆ ಮಾಡಲಾಯಿತು. ಆದರೆ ತಾಂತ್ರಿಕ ಸಮಿತಿಯು ಆರಂಭಿಕ ಹಂತದಲ್ಲಿಯೇ ಒಪ್ಪಿಗೆ ನೀಡದೇ ಇರುವುದರಿಂದ ಆರಂಭವಾಗಬೇಕಿದ್ದ ಶಾಶ್ವತ ದುರಸ್ತಿ ಕಾಮಗಾರಿ ಸ್ಥಗಿತಗೊಂಡಿತು.ಮತ್ತೆ ತಾತ್ಕಾಲಿಕ ದುರಸ್ತಿ: ಶಾಶ್ವತ ದುರಸ್ತಿಗೆ ಒಪ್ಪಿಗೆ ಸಿಗದೇ ಇರುವುದರಿಂದ ಇದೀಗ ಪ್ರತಿ ವರ್ಷದಂತೆ ಮತ್ತೆ ತಾತ್ಕಾಲಿಕ ದುರಸ್ತಿಗೆ ಸುಮಾರು ರೂ. 8 ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಜೂನ್ ಮೊದಲ ವಾರದಲ್ಲಿ ಪೂರ್ಣಗೊಳಿಸಲಾಗಿದೆ. ಇದೀಗ ದುರಸ್ತಿ ಕಾಮಗಾರಿಗಳು ಆರಂಭವಾಗುವ ಹಂತದಲ್ಲಿವೆ.

ಜೂನ್ ಮೊದಲ ವಾರ ಮುಗಿದಿದ್ದು, ಈ ಹಂತದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ರೈತರು ಕೇಳುತ್ತಿದ್ದಾರೆ. ಮೇನಲ್ಲಿ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದ್ದು, ಈ ಸಂದರ್ಭದಲ್ಲಿಯೇ ಕಾಮಗಾರಿ ಕೈಗೊಳ್ಳುವುದು ಒಳ್ಳೆಯದು.ಮಳೆಯಾಗುವುದರಿಂದ ಕಾಮಗಾರಿಯನ್ನು ಮಾಡಿಯೂ ಮಾಡದಂತಾಗುತ್ತದೆ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.ಪ್ರತಿವರ್ಷವೂ ಇದೇ ಸ್ಥಿತಿಯಾಗಿದೆ. ತಾತ್ಕಾಲಿಕ ದುರಸ್ತಿ ಕಾಮಗಾರಿಗಳನ್ನು ಜೂನ್‌ನಲ್ಲಿಯೇ ಪ್ರಾರಂಭಿಸಲಾಗುತ್ತದೆ. ಮಳೆ ಆರಂಭವಾದೊಡನೆ ರೈತರು ಬತ್ತದ ನಾಟಿ ಮಾಡಿ, ಬತ್ತ ಬಿತ್ತನೆ ಮಾಡುತ್ತಾರೆ. ಬತ್ತದ ಬೆಳೆಗೆ ನೀರು ಅವಶ್ಯಕವಾಗಿರುವುದರಿಂದ ಜೂನ್ ಅಂತ್ಯದಿಂದಲೇ ಮತ್ತೆ ಕಾಲುವೆಗೆ ನೀರು ಹರಿಸಬೇಕಾಗುತ್ತದೆ. ಹೀಗಾಗಿ ಏಳೆಂಟು ಕೋಟಿ ಖರ್ಚು ಮಾಡಿದ್ದೂ ವ್ಯರ್ಥವಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಅಭಿಪ್ರಾಯಪಡುತ್ತಾರೆ.ಅಧಿಕಾರಿಗಳು, ಕೆಲ ಗುತ್ತಿಗೆದಾರರು ಶಾಮೀಲಾಗಿ, ಕಾಮಗಾರಿಗಳನ್ನು ಮಾಡದೆಯೇ ಹಣ ಎತ್ತಿಹಾಕಲು ಇದೊಂದು ಅವಕಾಶ ಆದಂತಾಗಿದೆ. ಜೂನ್ ಅಂತ್ಯಕ್ಕೆ ಕಾಲುವೆಗೆ ನೀರು ಬಿಡಲಾಗುತ್ತಿದ್ದು, ಎಲ್ಲಿ ಕಾಮಗಾರಿ ಮಾಡಲಾಗಿದೆ ಎಂಬುದೇ ತಿಳಿಯದಂತಾಗುತ್ತದೆ ಎಂದು ಹೇಳುತ್ತಾರೆ.ಇನ್ನೊಂದೆಡೆ ಕೆಂಭಾವಿ ವಲಯದಲ್ಲಿ ಗೇಟ್‌ಗಳ ದುರಸ್ತಿ ಸೇರಿದಂತೆ ವಿವಿಧ ಸಣ್ಣಪುಟ್ಟ ದುರಸ್ತಿಗಾಗಿ ಸುಮಾರು ರೂ.60 ಲಕ್ಷ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಇಲ್ಲಿಯೂ ಇದೇ ಸ್ಥಿತಿ ಇದ್ದು, ಯಾವುದೇ ವಾಸ್ತವವಾಗಿ ಕಾಲುವೆ ದುರಸ್ತಿ ಆಗುತ್ತಿಲ್ಲ ಎಂದು ದೂರುತ್ತಾರೆ.ಕೆಂಭಾವಿ ಕೆಬಿಜೆಎನ್‌ಎಲ್ ಕಚೇರಿಯಲ್ಲಿ ಆಗಿರುವ ಟೆಂಡರ್ ಪ್ರಕ್ರಿಯೆಯನ್ನು ರಿಂಗ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಧಿಕಾರಿಗಳು, ಗುತ್ತಿಗೆದಾರರು ನಡುವಿನ ಹೊಂದಾಣಿಕೆಯಿಂದಾಗಿ ಸರ್ಕಾರದ ಹಣವೂ ಪೋಲಾಗುತ್ತಿದ್ದು, ಕಾಲುವೆಯ ಫಲಾನುಭವಿ ರೈತರಿಗೆ ಯಾವುದೇ ಪ್ರಯೋಜನ ಸಿಗದಂತಾಗಿದೆ ಎಂದು ಹೇಳುತ್ತಾರೆ.ಪ್ರತಿ ಸಾರಿ ತಾತ್ಕಾಲಿಕ ದುರಸ್ತಿ ಮಾಡುವ ಬದಲು ಕಾಲುವೆಯ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದ್ದು, ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಬೇಕು ಎನ್ನುತ್ತಾರೆ ವಣಿಕ್ಯಾಳ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry