ಗುರುವಾರ , ಏಪ್ರಿಲ್ 22, 2021
29 °C

ಮತ್ತೊಂದು ಮಹಾಕಾವ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮ್ಮ ಹೈಸ್ಕೂಲು ವಿದ್ಯಾಭ್ಯಾಸದ ದಿನಗಳಲ್ಲಿಯೇ ಸಾಹಿತ್ಯ ಕೃಷಿಗೆ ಇಳಿದಿದ್ದ ಲತಾ ರಾಜಶೇಖರ್ ಅವರದು ಮೂರು ಮಹಾಕಾವ್ಯಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ ಹಿರಿಮೆ. ಗೌತಮ ಬುದ್ಧನ ಜೀವನ ಕುರಿತ ‘ಬುದ್ಧ ಮಹಾದರ್ಶನ’, ಕ್ರಿಸ್ತನ ಬದುಕನ್ನು ಆಧರಿಸಿದ ‘ಯೇಸು ಮಹಾದರ್ಶನ’ ಮತ್ತು ಇದೀಗ ಬಸವಣ್ಣನನ್ನು ಕುರಿತ ‘ಬಸವ ಮಹಾದರ್ಶನ’ ಕೃತಿಗಳನ್ನು ರಚಿಸಿದ್ದಾರೆ.ಇವಲ್ಲದೆ, ಮೂರು ಕವನ ಸಂಕಲನ, ಒಂದು ಕಥನ ಕವನ, ಒಂದು ಸಂಯುಕ್ತ ಕಾವ್ಯ, ಐದು ಕಾದಂಬರಿ, ‘ಕುವೆಂಪು ಕಾವ್ಯದಲ್ಲಿ ಪ್ರಕೃತಿ’ ಕುರಿತ ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ. ಒಂದು ವಚನ ಸಂಕಲನ ಹಾಗೂ ನಾಲ್ಕು ಪ್ರವಾಸ ಸಾಹಿತ್ಯ ಕೃತಿಗಳು ಅಚ್ಚಿನಲ್ಲಿದ್ದು ಲೇಖಕಿಯ ಸಮೃದ್ಧ ಸಾಹಿತ್ಯ ಕೃಷಿಯನ್ನು ಪರಿಚಯಿಸುತ್ತವೆ.ಕನ್ನಡದಲ್ಲಿ ಮಹಾಕಾವ್ಯಗಳ ಪರಂಪರೆಯನ್ನು ಮುಂದುವರಿಸಿದ ಯಶಸ್ಸು ಲತಾ ಅವರದು. ಚಾರಿತ್ರಿಕ ವ್ಯಕ್ತಿಗಳನ್ನು ಕುರಿತಾಗಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿ ಬೃಹತ್ ಗಾತ್ರದ ಮಹಾಕಾವ್ಯ ರಚಿಸಿರುವುದು ಆಶ್ಚರ್ಯ ಮೂಡಿಸುವ ಸಾಧನೆ.  ‘ಬಸವ ಮಹಾದರ್ಶನ’ ಹನ್ನೆರಡು ಸಂಪುಟಗಳ ಬೃಹತ್ ಕಾವ್ಯ. ಪ್ರತಿ ಸಂಪುಟಗಳಲ್ಲಿ ಹತ್ತಾರು ಅಧ್ಯಾಯಗಳು. ಅವನ್ನು ಕವಿ ಅರ್ಥಪೂರ್ಣವಾಗಿ ಸೋಪಾನಗಳೆಂದು ಕರೆದಿದ್ದಾರೆ.

ಸಂಪುಟಗಳಿಗೆ ಕೊಟ್ಟಿರುವ ಶೀರ್ಷಿಕೆಗಳು ಮಹಾಕಾವ್ಯದಲ್ಲಿ ವರ್ಣಿಸಲಾದ ಕಥಾಭಾಗವನ್ನು ಧ್ವನಿಸುತ್ತವೆ. ಅವತಾರ ಭವ್ಯ ಸಂಪುಟ, ಅನನ್ಯ ಬಾಲ್ಯ ಸಂಪುಟ, ಅಪೂರ್ವ ಸಂಗಮ ಸಂಪುಟ, ಅಸಾಮಾನ್ಯ ಸಾಂಗತ್ಯ ಸಂಪುಟ, ಅನುಪಮ ಭಕ್ತಿ ಸಂಪುಟ, ಅಸಾಧಾರಣ ಕಲ್ಯಾಣ ಸಂಪುಟ, ಅಸದೃಶ ಶರಣ ಸಂಪುಟ, ಅನುಭಾವ ದಿವ್ಯ ಸಂಪುಟ, ಅನಿರ್ವಚನೀಯ ವಚನ ಸಂಪುಟ, ಅವರ್ಣನೀಯ ಕಾಂತಿ ಸಂಪುಟ, ಅದ್ಭುತ ಕಾಂತಿ ಸಂಪುಟ ಮತ್ತು ಅಕ್ಷಯ ಕಾಂತಿ ಸಂಪುಟಗಳಲ್ಲಿ 286 ಸೋಪಾನಗಳ ಮೂಲಕ ಮಹಾಕಾವ್ಯ ವಿಸ್ತರಿಸಿದೆ. ಲತಾ ರಾಜಶೇಖರ್ ಅವರ ಮಹಾಕಾವ್ಯದ ಶೈಲಿಗೆ ಒಂದು ನಿದರ್ಶನ:

‘ಜನಿಸಿಹೆವೇನು ನಾವು ಹಾಲಲಿ

ಹುಟ್ಟಿದರೇನು ಅವರು ಹೊಲಸಲಿ? ಉಣ್ಣುವೆವು ನಾವು

ಅನ್ನವನು, ಆದರವರು ತಿನ್ನುವರೇನು ಸಗಣಿಯನು!

ಮೀಯುವೆವು ನಾವು ನೀರಿನಲಿ, ಆದರೆ ಮೈ ತೊಳೆವರೇನು

ಅವರು ಕೊಳಚೆಯಲಿ? ಹರಿವುದೆಮ್ಮ ಮೈಯಲ್ಲಿ ರಕ್ತವು

ಕೆಂಪಾಗಿ. ಆದರೆ ಇರುವುದೇನವರ ದೇಹದಲಿ ನೆತ್ತರು

ಕಪ್ಪಾಗಿ’ ‘ಮತ್ಯಾವ ವ್ಯತ್ಯಾಸವಿಹುದು ಎಮಗೂ

ಅವರಿಗು? ಇರಿಸಿದರಾ ಜನರನ್ನು ನಮ್ಮೀ ಅಗ್ರಹಾರದಲಿ

ಇಂತೀ ಅಂದಚಂದದ ಮನೆಗಳಲಿ; ಮೀಯಿಸಿ ತಲೆಬಾಚಿ

ಹೊಸ ವಸ್ತ್ರವನು ತೊಡಿಸಿ, ಕಾಣುತ್ತಿದ್ದರೇನೊ ಅವರು

ಎಮಗಿಂತ ಚೆನ್ನಾಗಿ! ಅಂತೆ ಕಲಿಸಿದ್ದರೆ ಅವರಿಗೂ

ವಿದ್ಯೆಯನು, ಕಲಿಯುತ್ತಿದ್ದರೇನೊ ಅವರು ಎಮಗಿಂತ

ಮಿಗಿಲಾಗಿ’‘ಓ ಬಸವಣ್ಣ, ಕುಳಿತಿಹೆ ಏಕಿಲ್ಲಿ

ನೀನು, ಬೆಕ್ಕಿನ ಮರಿಯಂದದಿ? ಬಳಲಿದೆ ನಾನಿಷ್ಟು ಹೊತ್ತು

ಹುಡುಕಿ ನಿನಗಾಗಿ. ಎದ್ದೇಳು, ಹೊತ್ತೇರಿದೆ, ಕರೆದಿಹಳು

ಅಮ್ಮ ನಿನ್ನನು, ತಿನಲೆಂದು ತುಪ್ಪದ ದೋಸೆಯನು !’

(ಪುಟ 62-64)

ಇಪ್ಪತ್ತನೆಯ ಶತಮಾನದಲ್ಲಿ ಕನ್ನಡದಲ್ಲಿ ಆರಂಭವಾದ ಮಹಾಕಾವ್ಯಗಳ ಬೆಳಸಿನಲ್ಲಿ ಈಗಾಗಲೇ ನಲವತ್ತಕ್ಕೂ ಹೆಚ್ಚು ಬೃಹತ್ ಕೃತಿಗಳು ಪ್ರಕಟವಾಗಿದ್ದು ವಿಸ್ತೃತ ಅಧ್ಯಯನದ ವಸ್ತುಗಳಾಗಿವೆ. ಲತಾ ಅವರ ಈ ಕೃತಿಯನ್ನು ಪ್ರಕಟಣ ಪೂರ್ವದಲ್ಲಿ ಪರಾಂಬರಿಸುವ ಅವಕಾಶ ಪಡೆದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಇಲ್ಲಿ ‘ವೀರಶೈವ ಸಿದ್ಧಾಂತದ ಕಾವ್ಯಾತ್ಮಕ ದರ್ಶನ’ ಗೋಚರಿಸಿದೆ.

 

ಇಂಥದ್ದೇ ಅವಕಾಶ ಪಡೆದ ಬಾಲಗಂಗಾಧರ ಸ್ವಾಮೀಜಿ ಅವರಿಗೆ ಇದು ‘ವಿಶ್ವಸಾಹಿತ್ಯದ ಗಣ್ಯಕೃತಿ’ಯಾಗಿ ಕಂಡಿದೆ. ‘ಅಮರ ಕೃತಿ’ ಎಂದು ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದರೆ, ತರಳಬಾಳು ಶಿವಮೂರ್ತಿ ಶಿವಾಚಾರ್ಯರು ಇದರಲ್ಲಿ ‘ಜೀವನಾದರ್ಶಗಳ ವಿರಾಟ್ ದರ್ಶನ’ವನ್ನು ಕಂಡಿದ್ದಾರೆ.ದೇಜಗೌ ಅವರು ‘ಬಸವ ಮಹಾದರ್ಶನಕ್ಕೆತ್ತಿದ ಆರತಿ’  ಎಂದು ಬಣ್ಣಿಸಿದರೆ ಮುನ್ನುಡಿಯ ಪ್ರವೇಶ ಒದಗಿಸಿದ ಡಾ. ಸಾ.ಶಿ.ಮರುಳಯ್ಯ ಅವರು ‘ಅಪರೋಕ್ಷ ಅನುಭೂತಿಯ ಅಭಿವ್ಯಕ್ತಿ’ಎಂದು ಕೃತಿಯನ್ನು ವರ್ಣಿಸಿದ್ದಾರೆ. ಗೊ.ರು.ಚೆನ್ನಬಸಪ್ಪ ಅವರಿಗೆ ಇದು ‘ಐತಿಹಾಸಿಕ ದಾಖಲೆಯ ಮಹಾಕಾವ್ಯ’ವಾಗಿ ಕಂಡಿದೆ. ಡಾ.ವಿಜಯಶ್ರೀ ಸಬರದ, ಡಾ.ಅರವಿಂದ ಯಾಳಗಿ, ಡಾ.ಎನ್.ಬಸವಾರಾಧ್ಯ ಅವರು ಈ ಬೃಹತ್ ಕೃತಿಯನ್ನು ಓದಿ ವ್ಯಕ್ತಪಡಿಸಿದ ಅನಿಸಿಕೆಗಳು ಓದುಗರಿಗೆ ಕಾವ್ಯ ಸೋಪಾನವನ್ನೇರಲು ನೆರವಾಗುವ ಕೈ ದೀವಿಗೆಯಂತಿವೆ.ಬಸವ ಮಹಾದರ್ಶನ (ಮಹಾಕಾವ್ಯ)

ಲೇ: ಡಾ. ಲತಾ ರಾಜಶೇಖರ್,

ಪು:1498; ಬೆ: ರೂ. 1200.

ಪ್ರ: ಕಾವೇರಿ ಪ್ರಕಾಶನ, ಕಾವ್ಯಲೋಕ, 963/1 ಎ, ಶೇಷಾದ್ರಿ ಅಯ್ಯರ್ ರಸ್ತೆ, ಲಕ್ಷ್ಮೀಪುರಂ, ಮೈಸೂರು- 570004.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.