ಮತ್ತೊಂದು ಸವಾಲು...

7

ಮತ್ತೊಂದು ಸವಾಲು...

Published:
Updated:
ಮತ್ತೊಂದು ಸವಾಲು...

ಭಾರತ ಕ್ರಿಕೆಟ್ ತಂಡ ವಿದೇಶಿ ನೆಲದಲ್ಲಿ ಆಗಿಂದಾಗ್ಗೆ ಸೋಲು ಅನುಭವಿಸುತ್ತಿದ್ದರೂ, ತವರು ನೆಲದಲ್ಲಿ ಯಾವುದೇ ಬಲಿಷ್ಠ ತಂಡವನ್ನು ನೆಲಕ್ಕುರುಳಿಸುತ್ತಿತ್ತು. ತನ್ನದೇ ನೆಲದಲ್ಲಿ ಸೋಲು ಎದುರಾದರೆ ಅದು ಅಚ್ಚರಿಗೆ ಕಾರಣವಾಗುತ್ತಿತ್ತು. ಆದರೆ ಈಗ ಕಾಲ ಬದಲಾದಂತೆ ಕಾಣುತ್ತಿದೆ. ತವರು ನೆಲದಲ್ಲಿ ಭಾರತ `ಹುಲಿ'ಯಾಗಿ ಉಳಿದುಕೊಂಡಿಲ್ಲ. ಒಂದು ಸಾಮಾನ್ಯ ತಂಡ ಎನಿಸಿಕೊಂಡಿದೆ.ಇತ್ತೀಚೆಗೆ ಎದುರಾದ ಸೋಲುಗಳೇ ಇದಕ್ಕೆ ಕಾರಣ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರಾಸೆ ಅನುಭವಿಸಿದ್ದ ಮಹೇಂದ್ರ ಸಿಂಗ್ ದೋನಿ ಬಳಗ ಆ ಬಳಿಕ ಪಾಕಿಸ್ತಾನ ಎದುರಿನ ಏಕದಿನ ಸರಣಿಯಲ್ಲೂ ಮುಗ್ಗರಿಸಿದೆ. ಇದರ ಜೊತೆಗೆ ಇವೆರಡು ತಂಡಗಳ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಸಮಬಲ ಸಾಧಿಸಲು ಮಾತ್ರ ಯಶಸ್ವಿಯಾಗಿತ್ತು.ಇತ್ತೀಚಿನ ಕಳಪೆ ಪ್ರದರ್ಶನದ ಕಾರಣ ಆತ್ಮವಿಶ್ವಾಸ ಕಳೆದುಕೊಂಡಿರುವ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಅದು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ. ಜನವರಿ 11 ರಿಂದ ಆರಂಭವಾಗುವ ಈ ಸರಣಿಯಲ್ಲಿ ಭಾರತ ಪುಟಿದೆದ್ದು ನಿಲ್ಲಲಿದೆಯೇ ಅಥವಾ ಮತ್ತೆ ಸೋಲಿನ ಪ್ರಪಾತಕ್ಕೆ ಬೀಳಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಇಂಗ್ಲೆಂಡ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರಲ್ಲಿ ಗೆದ್ದುಕೊಂಡಿತ್ತು. ಮಾತ್ರವಲ್ಲ 28 ವರ್ಷಗಳ ಬಿಡುವಿನ ಬಳಿಕ ಭಾರತದ ನೆಲದಲ್ಲಿ ಈ ಸಾಧನೆ ಮಾಡಿತ್ತು. ಅಂತಹದೇ ಐತಿಹಾಸಿಕ ಸಾಧನೆಯನ್ನು ಏಕದಿನ ಸರಣಿಯಲ್ಲೂ ಪುನರಾವರ್ತಿಸುವ ಲೆಕ್ಕಾಚಾರ ಆಂಗ್ಲರದ್ದು.

ಮುಗ್ಗರಿಸಿದ್ದೇ ಹೆಚ್ಚು

ಭಾರತದ ನೆಲದಲ್ಲಿ ಇಂಗ್ಲೆಂಡ್ ಏಕದಿನ ತಂಡದ ಸಾಧನೆ ಉತ್ತಮವಾಗಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ತಂಡ ಇಲ್ಲಿ 17 ಏಕದಿನ ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಪಡೆದಿದೆ. ಆದ್ದರಿಂದ ಈ ಬಾರಿ ಶ್ರೇಷ್ಠ ಪ್ರದರ್ಶನ ತೋರುವ ಸವಾಲು ತಂಡದ ಮುಂದಿದೆ.1984/85 ರಲ್ಲಿ ಇಂಗ್ಲೆಂಡ್ ತಂಡ ಭಾರತದಲ್ಲಿ ಕೊನೆಯ ಬಾರಿ ಏಕದಿನ ಸರಣಿ ಜಯಿಸಿತ್ತು. ಅಂದು ಐದು ಪಂದ್ಯಗಳ ಸರಣಿಯನ್ನು 4-1 ರಲ್ಲಿ ತನ್ನದಾಗಿಸಿಕೊಂಡಿತ್ತು. ಡೇವಿಡ್ ಗೋವರ್ ನೇತೃತ್ವದ ಆಂಗ್ಲರ ಪಡೆ ಸುನಿಲ್ ಗಾವಸ್ಕರ್ ನಾಯಕತ್ವದ ಭಾರತವನ್ನು ಮಣಿಸಿತ್ತು.1992/93 ಹಾಗೂ 2001/ 02 ರಲ್ಲಿ ಇಂಗ್ಲೆಂಡ್ ತಂಡ ಭಾರತದಲ್ಲಿ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದು, ಈ ಎರಡೂ ಸರಣಿಗಳು 3-3 ರಲ್ಲಿ ಡ್ರಾದಲ್ಲಿ ಕೊನೆಗೊಂಡಿದ್ದವು.ಭಾರತದ ನೆಲದಲ್ಲಿ ಇಂಗ್ಲೆಂಡ್ ಕೊನೆಯದಾಗಿ ಏಕದಿನ ಸರಣಿ ಆಡಿದ್ದು 2011ರ ಅಕ್ಟೋಬರ್‌ನಲ್ಲಿ. ಆಡಿದ ಐದೂ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿತ್ತು. ಆದರೆ ಆ ಸರಣಿ ಕಳೆದು ಇದೀಗ 14 ತಿಂಗಳುಗಳು ಕಳೆದಿವೆ. ಇಂಗ್ಲೆಂಡ್ ಹಳೆಯ ತಂಡವಾಗಿ ಉಳಿದುಕೊಂಡಿಲ್ಲ. ಸಾಕಷ್ಟು ಸುಧಾರಣೆ ಕಂಡುಬಂದಿದೆ. ಯುವ ಆಟಗಾರರ ಆಗಮನವಾಗಿದೆ. ಅಲಸ್ಟೇರ್ ಕುಕ್ ಅವರ ಸಮರ್ಥ ನಾಯಕತ್ವದಲ್ಲಿ ಹೊಸ ಶಕ್ತಿಯಾಗಿ ಬೆಳೆದುನಿಂತಿದೆ.

 

ಉತ್ಸಾಹದಲ್ಲಿ ಇಂಗ್ಲೆಂಡ್ ಆಟಗಾರರು

ಭಾರತ ವಿರುದ್ಧದ ಟೆಸ್ಟ್ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಆಡಿದ ಬಳಿಕ ಇಂಗ್ಲೆಂಡ್ ತಂಡ ತವರಿಗೆ ಮರಳಿತ್ತು. ಇದೀಗ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡು ಮತ್ತೆ ಭಾರತಕ್ಕೆ ಆಗಮಿಸಿದೆ. ಆದ್ದರಿಂದ ಈ ತಂಡದ ಆಟಗಾರರು ಅತ್ಯಂತ ಉತ್ಸಾಹದಲ್ಲಿದ್ದಾರೆ.ಅಲಸ್ಟೇರ್ ಕುಕ್ ಬಳಗವನ್ನು ಕಟ್ಟಿಹಾಕುವುದು ಅಷ್ಟು ಸುಲಭವಲ್ಲ. ಟೆಸ್ಟ್ ಸರಣಿಯಲ್ಲಿ ತೋರಿದ ಆಟವೇ ಅದಕ್ಕೆ ಉದಾಹರಣೆ. ಭಾರತದ ಪಿಚ್‌ಗಳಲ್ಲಿ ಆಡಲು ನಮಗೂ ಸಾಧ್ಯ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಸರಣಿ ಗೆಲುವು ಪಡೆಯುವುದು ಈ ತಂಡದ ಗುರಿ.ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಂಡದ ಆಯ್ಕೆಯ ವೇಳೆ `ರೊಟೇಶನ್ ಪದ್ಧತಿ' ಅನುಸರಿಸುತ್ತಿದೆ. ಈ ಕಾರಣ ಗ್ರೇಮ್ ಸ್ವಾನ್, ಜೊನಾಥನ್ ಟ್ರಾಟ್ ಮತ್ತು ಜೇಮ್ಸ ಆ್ಯಂಡರ್ಸನ್ ತಂಡದಲ್ಲಿಲ್ಲ. ಈ ಆಟಗಾರರು ಟೆಸ್ಟ್ ಸರಣಿಯ ವೇಳೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇವರ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರು ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ.

ಒತ್ತಡದಲ್ಲಿ ಭಾರತ

ಭಾರತದ ಪರಿಸ್ಥಿತಿ ಇಂಗ್ಲೆಂಡ್ ತಂಡಕ್ಕಿಂತ ಭಿನ್ನವಾಗಿದೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಪಾಕಿಸ್ತಾನದ ಎದುರು ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ಇದರಿಂದ ಆಟಗಾರರಲ್ಲಿ ಆತ್ಮವಿಶ್ವಾಸ ಎಂಬುದು ಎಳ್ಳಷ್ಟೂ ಉಳಿದುಕೊಂಡಿಲ್ಲ. ಎಲ್ಲರ ಮನಸ್ಸು ಬರಡು ಭೂಮಿಯಂತಾಗಿದೆ.ಪಾಕ್ ವಿರುದ್ಧದ ಸರಣಿ ಸೋಲನ್ನು ತಂಡಕ್ಕೆ ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸಚಿನ್ ತೆಂಡೂಲ್ಕರ್ ನಿವೃತ್ತಿ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸಚಿನ್ ಈ ಹಿಂದೆಯೂ ಹಲವು ಏಕದಿನ ಸರಣಿಗಳಲ್ಲಿ ಆಡಿರಲಿಲ್ಲ. ಅಲ್ಲೆಲ್ಲಾ ಭಾರತ ಉತ್ತಮ ಪ್ರದರ್ಶನ ನೀಡಿತ್ತು.ಜವಾಬ್ದಾರಿಯುತ ಪ್ರದರ್ಶನ ನೀಡುವ ಸವಾಲು ಬ್ಯಾಟ್ಸ್‌ಮನ್‌ಗಳ ಮುಂದಿದೆ. ಟೆಸ್ಟ್ ಪಂದ್ಯಗಳ ವೇಳೆ ಪಿಚ್‌ನ ಗುಣ ಹಾಗೂ ಪರಿಸ್ಥಿತಿ ಸಾಕಷ್ಟು ಚರ್ಚೆಗೆ ಗ್ರಾಸವೊದಗಿಸಿತ್ತು. ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್ ಬೇಕೆಂದು  ದೋನಿ ಕೇಳಿಕೊಂಡಿದ್ದರು. ಆದರೆ ಇದು ಭಾರತಕ್ಕೇ ತಿರುಗು ಬಾಣವಾಗಿ ಪರಿಣಮಿಸಿತ್ತು. ಇಂಗ್ಲೆಂಡ್ ಸ್ಪಿನ್ನರ್‌ಗಳು ಇದರ ಪ್ರಯೋಜನ ಪಡೆದಿದ್ದರು.ಒಂದು ರೀತಿಯಲ್ಲಿ ಈ ಸರಣಿ ಭಾರತಕ್ಕೆ ಸೇಡು ತೀರಿಸಲು ಅವಕಾಶ ನೀಡಿದೆ. ಆದರೆ ಅದರಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ನೋಡಬೇಕು. ಟೆಸ್ಟ್ ಸರಣಿಯನ್ನು ಕೂಡಾ ಭಾರತ `ಸೇಡಿನ ಸರಣಿ'ಯಂತೆ ಪರಿಗಣಿಸಿತ್ತು. ಏಕೆಂದರೆ ಈ ಹಿಂದೆ ಇಂಗ್ಲೆಂಡ್ ನೆಲದಲ್ಲಿ ಭಾರತ ಟೆಸ್ಟ್ ಸರಣಿಯಲ್ಲಿ 0-4 ರಲ್ಲಿ ಸೋತಿತ್ತು. ಮಹೇಂದ್ರ ಸಿಂಗ್ ದೋನಿ ಆ ಬಳಗ ಆ ಸೋಲಿಗೆ ಮುಯ್ಯಿ ತೀರಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಭಾರತದ ಆಟ ನಡೆಯಲಿಲ್ಲ.`ಸಾಂಪ್ರದಾಯಿಕ ಎದುರಾಳಿ' ಪಾಕ್ ವಿರುದ್ಧದ ಸರಣಿ ಸೋಲಿನಿಂದ ತಂಡದ ಆಟಗಾರರು ನಿರಾಸೆಯಲ್ಲಿ ಮುಳುಗಿದ್ದಾರೆ. ಅಭಿಮಾನಿಗಳು ಕೂಡಾ ಆಟಗಾರರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಗೆದ್ದರೂ ಪಾಕ್ ಎದುರು ಕಳೆದು ಹೋದ ಮಾನ ವಾಪಾಸಾಗದು. ಆದರೆ ಅಲ್ಪ ಘನತೆಯನ್ನು ಕಾಪಾಡಿಕೊಳ್ಳಲು ಸಾಧ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry