ಗುರುವಾರ , ಏಪ್ರಿಲ್ 22, 2021
27 °C

ಮತ್ತೊಮ್ಮೆ ಬೆಳಗಾವಿ ಪಾಲಿಕೆ ಸೂಪರ್‌ಸೀಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಅನ್ವಯ ಬೆಳಗಾವಿ ಮಹಾನಗರಪಾಲಿಕೆಯು ಕರ್ತವ್ಯ ನಿರ್ವಹಿಸಲು ವಿಫಲವಾಗಿರುವುದು ಹಾಗೂ ಪಾಲಿಕೆಯ ಹಿತಾಸಕ್ತಿಗೆ ಬಾಧಕವಾಗುವ ರೀತಿಯಲ್ಲಿ ಸದಸ್ಯರು ಕೆಲಸ ಮಾಡಿದ್ದಾರೆ ಎಂಬ ಕಾರಣಗಳ ಆಧರಿಸಿ ರಾಜ್ಯ ಸರ್ಕಾರ ಪಾಲಿಕೆಯನ್ನು ಪುನಃ            `ಸೂಪರ್‌ಸೀಡ್~ ಮಾಡಿ  ಮಂಗಳವಾರ ಆದೇಶ ಹೊರಡಿಸಿದೆ.`ಪಾಲಿಕೆಯ ಸದಸ್ಯರ ಸದಸ್ಯತ್ವವನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಗೆ ಬಾಧಕವಾಗದಂತೆ ಮುಕ್ತಾಯಗೊಳಿಸಲಾಗಿದೆ. ತಕ್ಷಣದಿಂದಲೇ ಬೆಳಗಾವಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಅವರನ್ನು ಪಾಲಿಕೆಯ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ~ ಎಂದು ಸರ್ಕಾರದ ಪರವಾಗಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಆರ್. ಮಹೇಶ ಕುಮಾರ ಅವರು ಆದೇಶ ಹೊರಡಿಸಿದ್ದಾರೆ.ಪಾಲಿಕೆಯಲ್ಲಿನ ಆಡಳಿತ ವೈಫಲ್ಯ, ಸಕಾಲಕ್ಕೆ ಸಾಮಾನ್ಯ ಸಭೆ ನಡೆಸದಿರುವುದು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರನ್ನು ಅವಮಾನಿಸಿದ ಅಂಶಗಳ ಆಧಾರದಲ್ಲಿ ಪಾಲಿಕೆಯನ್ನು ಏಕೆ  ವಿಸರ್ಜಿಸಬಾರದು ಎಂದು ಸರ್ಕಾರವು ನವೆಂಬರ್ 24ರಂದು ನೋಟಿಸ್ ನೀಡಿತ್ತು.ಇದಕ್ಕೆ ಪಾಲಿಕೆಯಿಂದ ಬಂದ ಉತ್ತರ ಸಮರ್ಪಕವಾಗಿರಲಿಲ್ಲ ಎಂದು 2011 ಡಿಸೆಂಬರ್ 15 ರಂದು ಸರ್ಕಾರ ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿ ಆದೇಶ ಹೊರಡಿಸಿತ್ತು.  ತಮ್ಮ ಅಭಿಪ್ರಾಯ ಪಡೆಯದೇ ಸೂಪರ್‌ಸೀಡ್ ಮಾಡಲಾಗಿದೆ ಎಂದು ಹಲವು ಸದಸ್ಯರು ಧಾರವಾಡದ ಸಂಚಾರಿ ಹೈಕೋರ್ಟ್ ಪೀಠದಲ್ಲಿ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದರು. ಸರ್ಕಾರದ ಆದೇಶವನ್ನು ಜೂನ್ 19ರಂದು ರದ್ದುಗೊಳಿಸಿದ ಹೈಕೋರ್ಟ್, 2011 ನವೆಂಬರ್ 24 ರಂದು ನೀಡಿದ್ದ ನೋಟಿಸ್‌ಗೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಜೂನ್ 25ರಂದು ಪಾಲಿಕೆಯ ಪ್ರತಿಯೊಬ್ಬ ಸದಸ್ಯರಿಂದಲೂ ವೈಯಕ್ತಿಕ ಅಭಿಪ್ರಾಯವನ್ನು ನಗರಾಭಿವೃದ್ಧಿ ಇಲಾಖೆಯು ಸಂಗ್ರಹಿಸಿತ್ತು. ನೋಟಿಸ್‌ನಲ್ಲಿ ಕೇಳಲಾಗಿದ್ದ ಪ್ರಶ್ನೆಗಳಿಗೆ ಸದಸ್ಯರು ನೀಡಿದ ಸ್ಪಷ್ಟೀಕರಣ ಸಮರ್ಪಕವಾಗಿ ಇಲ್ಲದ ಕಾರಣ ಕೆಎಂಸಿ ಕಾಯ್ದೆ 1976ರ ಕಲಂ 99 (1)ರ ಅನ್ವಯ ಸರ್ಕಾರವು ತನ್ನ ಅಧಿಕಾರವನ್ನು ಬಳಸಿ ಪಾಲಿಕೆಯನ್ನು ಪುನಃ `ಸೂಪರ್‌ಸೀಡ್~ ಮಾಡಿ ಆದೇಶ ಹೊರಡಿಸಿದೆ.ನಿರೀಕ್ಷಿತ ನಡೆ

`ಸರ್ಕಾರ ಹೀಗೆಯೇ ಮಾಡುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಹೈಕೋರ್ಟ್ ನಮ್ಮ ಪರ ನೀಡಿದ್ದ ಆದೇಶವನ್ನು ಸರ್ಕಾರದಿಂದ ಅರಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಪುನಃ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಿದೆ. 2010ರಲ್ಲಿ ಸಭೆಗಳು ಸರಿಯಾಗಿ ನಡೆಯದೇ ಇದ್ದ ಕಾರಣ ಕನ್ನಡ ಭಾಷಿಕರಾದ ಎನ್.ಬಿ. ನಿರ್ವಾಣಿ ಮೇಯರ್ ಇದ್ದಾಗಲೇ ಪಾಲಿಕೆ ವಿಸರ್ಜಿಸಬೇಕಿತ್ತು. ಸರ್ಕಾರ ಆಗ ಯಾವುದೇ ಕ್ರಮ ಕೈಗೊಳ್ಳದೇ, ಈಗ ಮಾತ್ರ `ಸೂಪರ್‌ಸೀಡ್~ ಮಾಡಲು ಮುಂದಾಗಿರುವುದು ವಿಷಾದಕರ ಸಂಗತಿ~  

- ಮಂದಾ ಬಾಳೇಕುಂದ್ರಿ, ಮಾಜಿ ಮೇಯರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.