ಮತ ಖರೀದಿಗೆ ಪೈಪೋಟಿ, ಲಕ್ಷಾಂತರ ವೆಚ್ಚ

7
ಒಕ್ಕಲಿಗರ ಸಂಘದ ಚುನಾವಣೆ ಜ.5ರಂದು

ಮತ ಖರೀದಿಗೆ ಪೈಪೋಟಿ, ಲಕ್ಷಾಂತರ ವೆಚ್ಚ

Published:
Updated:

ಕೋಲಾರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಎರಡು ದಿನ ಮಾತ್ರ ಉಳಿದಿದೆ. ಪ್ರತಿಷ್ಠೆಯ ಕಣವಾಗಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣವನ್ನು ಲೆಕ್ಕಕ್ಕೇ ಇಡದೆ ಖರ್ಚು ಮಾಡುತ್ತಿ­ದ್ದಾರೆ. ಎರಡು ದಿನದಲ್ಲಿ ಹತ್ತಾರು ಕೋಟಿ ರೂಪಾಯಿ ಖರ್ಚಾಗುವ ನಿರೀಕ್ಷೆಯೂ ಇದೆ. ಯಾವುದೇ ರಾಜ­ಕೀಯ ಚುನಾವಣೆಗಿಂತಲೂ ಕಡಿಮೆ ಇಲ್ಲದಂತೆ ಸಂಘದ ಚುನಾವಣೆಯ ಚಟುವಟಿಕೆಗಳು ನಡೆಯುತ್ತಿವೆ.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳೆರಡೂ ಸೇರಿ ಮೂರು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸ್ಪರ್ಧಿಸಿರುವ 14 ಅಭ್ಯರ್ಥಿಗಳ ಪೈಕಿ ಆರು ಮಂದಿ ಎರಡು ಪ್ರತ್ಯೇಕ ಒಕ್ಕೂಟಗಳನ್ನು ರಚಿಸಿ­ಕೊಂಡು ಸಂಯುಕ್ತವಾಗಿ ಪ್ರಚಾರ ನಡೆ­ಸು­ತ್ತಿದ್ದಾರೆ. ಉಳಿದವರು ವೈಯ­ಕ್ತಿಕ­ವಾಗಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ.

ಮತ ಹಾಕಲು ತಮ್ಮ ಸಮುದಾಯ­ದವರಿಂದಲೇ ಹಣವನ್ನು ಪಡೆಯಲು ಒಕ್ಕಲಿಗ ಮತದಾರರು ಯಾವುದೇ ಹಿಂಜರಿಕೆಯನ್ನು ತೋರದಿರುವುದು ಕೂಡ ಪ್ರಸ್ತುತ ಗಮನ ಸೆಳೆದಿರುವ ಅಂಶ. ಕೆಲವು ಅಭ್ಯರ್ಥಿಗಳು ತಾವೇನೂ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಷ್ಟವಿದ್ದರೆ ಮತ ಹಾಕಿ ಎಂದು ನಿಷ್ಠುರವಾಗಿ ಪ್ರಚಾರ ನಡೆಸುತ್ತಿದ್ದಾರೆ.ಮತಕ್ಕೆ 2 ಸಾವಿರ: ಎರಡು ಒಕ್ಕೂಟಗಳ ಪೈಕಿ ಒಂದು ಒಕ್ಕೂಟದ ಅಭ್ಯರ್ಥಿಗಳು ಒಂದು ಮತಕ್ಕೆ ಒಂದು ಸಾವಿರ ರೂಪಾಯಿ ಆಮಿಷವನ್ನು ಒಡ್ಡಿದ್ದರೆ, ಅದಕ್ಕಿಂತಲೂ ಹೆಚ್ಚು ಶ್ರೀಮಂತರಾದ ಮತ್ತೊಂದು ಒಕ್ಕೂಟದ ಅಭ್ಯರ್ಥಿಗಳು ಒಂದು ಮತಕ್ಕೆ ಎರಡು ಸಾವಿರ ರೂಪಾಯಿ ಹಂಚುವ ಸಿದ್ಧತೆ ನಡೆಸಿ­ದ್ದಾರೆ. ಇದು ಚುನಾವಣೆಯ ಹಿಂದಿನ ದಿನ ಹೆಚ್ಚು ವೇಗ ಪಡೆಯುವ ಸಾಧ್ಯತೆ­ಗಳಿವೆ. ಹಣವಷ್ಟೇ ಅಲ್ಲದೆ ಮೊಬೈಲ್ ಫೋನ್, ಚಿನ್ನದ ಉಂಗುರಗಳನ್ನು ನೀಡಲು ಕೆಲವು ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ ಎಂದೂ ತಿಳಿದುಬಂದಿದೆ.ಕೋಟಿಗಟ್ಟಲೆ: ಎರಡೂ ಜಿಲ್ಲೆ ಸೇರಿ ಸಂಘದಲ್ಲಿ 35,060 ಮತದಾರರಿ­ದ್ದಾರೆ. ಒಂದು ಸಾವಿರದಂತೆ ಒಬ್ಬ ಅಭ್ಯರ್ಥಿ ನೀಡಿದರೆ ಕನಿಷ್ಠ 3.50 ಕೋಟಿ ಖರ್ಚು ಮಾಡಬೇಕಾಗುತ್ತದೆ. ಎರಡು ಸಾವಿರ ರೂಪಾಯಿ ನೀಡಿ­ದರೆ 7 ಕೋಟಿ ಖರ್ಚಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಮೂವರು ಅಭ್ಯರ್ಥಿ­ಗಳೂ ಬಹಳಷ್ಟು ಮತದಾರ­ರಿಗೆ ಹಣ ನೀಡದೇ ಇದ್ದರೂ, ಕನಿ಼ಷ್ಠ ತಲಾ 1 ಕೋಟಿ ರೂಪಾಯಿ ಖರ್ಚಾ­ಗುವ ನಿರೀಕ್ಷೆ ಇದೆ.ಮತದಾರರ ಹೆಚ್ಚಳ: ಸಂಘದ ಚುನಾ­ವಣೆಯು ಐದು ವರ್ಷಕ್ಕೆ ನಡೆ­ಯು­ತ್ತದೆ. ಐದು ವರ್ಷದ ಹಿಂದೆ ಚುನಾ­ವಣೆ ನಡೆದ ಸಂದರ್ಭದಲ್ಲಿ ಎರಡೂ ಜಿಲ್ಲೆಗಳಲ್ಲಿ ಒಟ್ಟಾರೆ ಸುಮಾರು ಐದೂ­ವರೆ ಸಾವಿರ ಮತ­ದಾರರಷ್ಟೇ ಇದ್ದರು. ಈಗ ಆ ಸಂಖ್ಯೆಯು ಸುಮಾರು ಆರು ಪಟ್ಟು ಹೆಚ್ಚಾಗಿದೆ. ಈ ಬೆಳವಣಿಗೆ ನಿರೀಕ್ಷಿತವೇ ಆಗಿದೆ ಎನ್ನು­ತ್ತಾರೆ ಸಮುದಾಯದ ಮುಖಂಡರೊಬ್ಬರು.ಈ ಹಿಂದಿನ ಚುನಾವಣೆಗಿಂತಲೂ ಮುಂಚೆ ಸದಸ್ಯತ್ವ ಹೊಂದಲು ಅವ­ಕಾಶ­ವನ್ನೇ ನೀಡಿರಲಿಲ್ಲ. ಚುನಾವಣೆಯ ಬಳಿಕವಷ್ಟೇ ಹೊಸ ಸದಸ್ಯತ್ವಕ್ಕೆ ಅವ­ಕಾಶ ನೀಡಿದ್ದರಿಂದ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದು ಅವರ ನುಡಿ.

ಮಹಿಳಾ ಅಭ್ಯರ್ಥಿ ಇಲ್ಲ

ಎರಡೂ ಜಿಲ್ಲೆಯಿಂದ ಸ್ಪರ್ಧಿಸಿರುವ 14 ಮಂದಿ ಪೈಕಿ ಮಹಿಳೆಯರು ಒಬ್ಬರೂ ಇಲ್ಲ ಎಂಬುದು ಗಮನಾರ್ಹ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ವೈದ್ಯರು , ವಕೀಲರು, ರಾಜಕೀಯ ಮುಖಂಡರ ಸಂಖ್ಯೆಯೇ ಹೆಚ್ಚಿದೆ. ವೈದ್ಯರು ಮತ್ತು ವಕೀಲರು, ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ವೃತ್ತಿ ಜವಾಬ್ದಾರಿಗಳನ್ನು ಪಕ್ಕಕ್ಕಿಟ್ಟು ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಪ್ರವಾಸವನ್ನು ಕೈಗೊಂಡಿದ್ದಾರೆ. ಪಕ್ಷಾತೀತವಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಸಂಘದ ಮಾಜಿ ಪದಾಧಿಕಾರಿಗಳು ಮತ್ತು ಮತ್ತು ಹೊಸ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಕೆ.ಬಿ.ಗೋಪಾಲಕೃಷ್ಣ, ಡಾ.ಎಂ.ಸಿ.ನವೀನಕುಮಾರ್, ಪಿ.ನಾಗರಾಜು, ಆರ್.ನಂಜುಂಡಗೌಡ, ಡಾ.ಡಿ.ಕೆ.ರಮೇಶ್, ಎನ್.ರಮೇಶ್ ಯಲುವಳ್ಳಿ, ಡಿ.ರಾಮಚಂದ್ರ, ವಿ.ಇ.ರಾಮಚಂದ್ರ, ಟಿ.ಎಂ.ರಂಗನಾಥ್, ಎಚ್.ಲೋಕೇಶ್, ಸಿ.ವಿ.ಲೋಕೇಶಗೌಡ, ಎನ್.ಶ್ರೀರಾಮರೆಡ್ಡಿ, ಎಂ.ಸಿ.ಸತೀಶ್ ಮತ್ತು ಎಂ.ಎನ್.ಸದಾಶಿವರೆಡ್ಡಿ ಕಣದಲ್ಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತವರ ಪರ ಅನುಕಂಪ, ಗೆದ್ದಿದ್ದ ಕೆಲವರ ಕುರಿತ ಅಸಮಾಧಾನ ಮತ್ತು ಹೊಸದಾಗಿ ಸ್ಪರ್ಧಿಸಿದವರ ಬಗ್ಗೆ ಕುತೂಹಲ ಈ ಬಾರಿಯ ಚುನಾವಣೆಯ ವಿಶೇಷವಾಗಿದೆ.

ಮತದಾನ ಎಲ್ಲೆಲ್ಲಿ?

ಜ.5ರಂದು ಬೆಳಿಗ್ಗೆ 8ರಿಂದ ಸಂಜ 4ರವರೆಗೆ ಮತದಾನ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ನಡೆಯುತ್ತದೆ. ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳೆರಡಕ್ಕೂ ಒಂದೇ ಮತದಾನ ಕೇಂದ್ರವನ್ನು ಬಾಗೇಪಲ್ಲಿಯಲ್ಲಿ ಸ್ಥಾಪಿಸಲಾಗಿದೆ. ಕೋಲಾರದ ಮಹಿಳಾ ಸಮಾಜ ವಿದ್ಯಾಸಂಸ್ಥೆ, ಶ್ರೀನಿವಾಸಪುರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಮುಳಬಾಗಲಿನ ಸರ್ಕಾರಿ ಪದವಿಪೂರ್ವ ಕಾಲೇಜು, ಬಂಗಾರಪೇಟೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮಾಲೂರಿನ ಬಾಲಗಂಗಾಧರನಾಥ ಸ್ವಾಮೀಜಿ ವಿದ್ಯಾಸಂಸ್ಥೆ, ಚಿಕ್ಕಬಳ್ಳಾಪುರದ ಜೂನಿಯರ್ ಕಾಲೇಜು, ಗೌರಿಬಿದನೂರಿನ ಮುನ್ಸಿಪಲ್ ಪ್ರೌಢಶಾಲೆ, ಚಿಂತಾಮಣಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಶಿಡ್ಲಘಟ್ಟದ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಂ.ಶಿವಣ್ಣ ತಿಳಿಸಿದ್ದಾರೆ. ಮತ ಎಣಿಕೆಯು ಕೋಲಾರದ ಗೋಕುಲ ವಿದ್ಯಾಸಂಸ್ಥೆಯ ಆವರಣದಲ್ಲಿ ಜ.6ರಂದು ಬೆಳಿಗ್ಗೆ 9ರಿಂದ ಮತ ಎಣಿಕೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದೇ ಮತದ ಲೆಕ್ಕಾಚಾರ

ಚುನಾವಣೆಯಲ್ಲಿ ಒಂದೇ ಮತ ಚಲಾವಣೆಯ ಲೆಕ್ಕಾಚಾರವೂ ನಡೆಯುತ್ತಿದೆ. ಮೂರು ಮತದ ಬದಲಿಗೆ ಒಂದೇ ಮತವನ್ನು ಚಲಾಯಿಸಿದರೆ ಹೆಚ್ಚು ಹಣ ನೀಡುವ ಆಮಿಷವನ್ನೂ ಅಭ್ಯರ್ಥಿಗಳು ಒಡ್ಡುತ್ತಿದ್ದಾರೆ ಎಂದು ತಿಳಿದುಬಂದಿದೆ. ತಮಗೊಬ್ಬರಿಗೇ ಮತವನ್ನು ಚಲಾಯಿಸಿ, ಉಳಿದ ಇಬ್ಬರಿಗೆ ಮತ ಚಲಾಯಿಸದಿದ್ದರೆ  ತಾವು ಮೊದಲ ಸ್ಥಾನ ಪಡೆಯಬಹುದು ಎಂಬ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ 4ರಿಂದ 5 ಸಾವಿರ ರೂಪಾಯಿವರೆಗೂ ಆಮಿಷ ಒಡ್ಡುತ್ತಿದ್ದಾರೆ.ಈಗಾಗಲೇ ಒಂದಕ್ಕಿಂತಲೂ ಹೆಚ್ಚು ಬಾರಿ ಸಂಘಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಕೆಲವರು ಪ್ರಚಾರ ಸಂದರ್ಭದಲ್ಲಿ ಈ ತಂತ್ರವನ್ನು ಬಳಸುತ್ತಿದ್ದಾರೆ. ಇದು ಅವರಿಗೆ ಹೆಚ್ಚು ವೆಚ್ಚವನ್ನು ತರುವ ತಂತ್ರವೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry