ಬುಧವಾರ, ನವೆಂಬರ್ 13, 2019
23 °C
ಪ್ರವಾಸದಲ್ಲಿ ಕಂಡಿದ್ದು, ಕೇಳಿದ್ದು...

ಮತ `ಗಣಿ'ಬೇಟೆಯಲ್ಲಿ ಕಾಡುವ ವೀರಪ್ಪನ್...

Published:
Updated:

ಚಾಮರಾಜನಗರ:  ಕಾಮಗೆರೆ, ಹನೂರು, ರಾಮಾಪುರ ಪೊಲೀಸ್ ಠಾಣೆ ಮೂಲಕ ಸಾಗುತ್ತಿದ್ದಂತೆ, ಕಾಡುಗಳ್ಳ ವೀರಪ್ಪನ್, ಮಾಜಿ ಶಾಸಕ ನಾಗಪ್ಪ ಅಪಹರಣ, ಪೊಲೀಸ್ ಠಾಣೆ ಶಸ್ತ್ರಾಸ್ತ್ರ ಲೂಟಿ ಸೇರಿದಂತೆ ಆತನ ಅಟ್ಟಹಾಸದ ಕರಾಳ ನೆನಪುಗಳೆಲ್ಲ ಸುರುಳಿ -ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ.ಮಲೆಮಹದೇಶ್ವರ ಬೆಟ್ಟಕ್ಕೆ ಸಾಗುವ ಬಳಸು ದಾರಿಯಲ್ಲಿ  ಸಾಗಿ ನಾಲ್‌ರೋಡ್ ತಲುಪಿದಾಗ ವೀರಪ್ಪನ್ ಸಹಚರರಿಬ್ಬರ ಮನೆಗಳ ಹತ್ತಿರದಲ್ಲಿದ್ದೆವು. ಅಲ್ಲಿ  ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಾ ನಾಯಕ್ ಅವರನ್ನು ಮಾತಿಗೆ ಎಳೆದಾಗ, `ವೀರಪ್ಪನ್ ಇದ್ದಾಗ ಮತ್ತು ಆತ ಸತ್ತ ನಂತರದ ಪರಿಸ್ಥಿತಿಯಲ್ಲೂ ಏನೂ ಬದಲಾವಣೆಯಾಗಿಲ್ಲ.ವೀರಪ್ಪನ್ ಕಾಲದಲ್ಲಿ ಕರಿ ಕಲ್ಲು ಕ್ವಾರಿ ನಡೀತಾ ಇತ್ತು. ಸ್ಥಳೀಯರಿಗೆ ಕೆಲ್ಸ ಸಿಗ್ತಾ ಇತ್ತು. ಆತನ ವಿರುದ್ಧದ ಕಾರ್ಯಾಚರಣೆ ಸುರುವಾದ ನಂತರ ಗಣಿಗಾರಿಕೆಗೆ ಕಲ್ಲು ಬಿತ್ತು. ಕಾರ್ಮಿಕರು ಊರು ಬಿಟ್ಟು ಹೋದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಜನರಿಗೆ ಉದ್ಯೋಗ ಇಲ್ಲ. ಅನೇಕರು ಕೆಲಸ  ಹುಡುಕಿಕೊಂಡು ಗುಳೆ ಹೋಗಿರುವುದರಿಂದ  ಮತದಾನವೂ ಕಡಿಮೆ ಆಗುತ್ತಿದೆ. ವೀರಪ್ಪನ್ ಸತ್ತಮೇಲೂ  ತೊಂದರೆ ನಿಂತಿಲ್ಲ, ರಾಜಕಾರಣಿಗಳು ಮಸ್ತಾಗಿ ದ್ರೋಹ ಮಾಡಿದ್ದಾರೆ. ಎಸ್‌ಟಿಎಫ್ ದೌರ್ಜನ್ಯ ಆಗಿರುವುದು ನಿಜ' ಎಂದರು.ಪಾಲಾರ್ ಸೇತುವೆ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಜ್ಞಾನ ಪ್ರಕಾಶ್, (ಚಂದನಪಾಳ್ಯ), ಬಿಲವೇಂದ್ರ (ಮಾರ್ಟಲ್ಲಿ), ಸೈಮನ್ (ವಡ್ಡರದೊಡ್ಡಿ)  ಮತ್ತು ಮೀಸೆಕಾರ್ ಮಾದಯ್ಯ (ಶಂಗಪಾಡಿ) ಅವರ ಕುಟುಂಬದ ಸದಸ್ಯರು ವಾಸಿಸುವ  ಈ ಪ್ರದೇಶಗಳೆಲ್ಲ ಹಿಂದೆ ವೀರಪ್ಪನ್ ಪ್ರಭಾವಕ್ಕೆ ಒಳಪಟ್ಟಿದ್ದವು. ಸುತ್ತಲಿನ ಬೆಟ್ಟ, ಕ್ವಾರಿಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದವು.ಜ್ಞಾನ ಪ್ರಕಾಶ್‌ನ ತೋಟದ ಮನೆ ಹುಡುಕಿಕೊಂಡು ಹೋದಾಗ,  ಅವನ ಹೆಂಡತಿ ಮನೆಯಲ್ಲಿ ಇದ್ದಿರಲಿಲ್ಲ. ಮಗ ಅರುಳ್‌ರಾಜ್, ಮಗಳು ಫೆನಿಟಾ ಮೇರಿ ಅವರು ಮಾತನಾಡಿಸಿದಾಗ, `ನನ್ನ ತಂದೆ ಯಾವ ತಪ್ಪೂ ಮಾಡಿಲ್ಲ. ಅವರ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಪ್ರತಿ ಶನಿವಾರ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕಾಯಿನ್ ಬಾಕ್ಸ್‌ನಿಂದ ಫೋನ್ ಮಾಡ್ತಾರೆ. ನಮಗೆ ಧೈರ್ಯ ತುಂಬುತ್ತಾರೆ. ಸ್ಥಳೀಯ ರಾಜಕಾರಣಿಗಳಲ್ಲಿ ಯಾರೊಬ್ಬರೂ ಒಳ್ಳೇದು ಮಾಡಿಲ್ಲ. ನಮ್ಮನ್ನು  ಯಾರೊಬ್ಬರೂ ಭೇಟಿ ಮಾಡಿಲ್ಲ. ನಾವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆ' ಎಂದರು.ಭುಲ್ಲರ್ ಪ್ರಕರಣದ ತೀರ್ಪು, ಗಲ್ಲು ಜಾರಿಗೆ ಇದ್ದ ಅಡಚಣೆ ದೂರ ಆಗಿರುವುದೂ ಗೊತ್ತಿಲ್ಲದ ಮನೆಯಲ್ಲಿ,  ಕುಟುಂಬದ ಯಜಮಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ ಮೌನವಾಗಿ ಪ್ರಾರ್ಥಿಸುತ್ತಿದ್ದಾರೆ. ಗಲ್ಲು ಶಿಕ್ಷೆ ತೀರ್ಪು ಪ್ರಕಟವಾದ ನಂತರ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಇವರ ಮನೆಗೆ ಬಂದು ಸಾಂತ್ವನ ಹೇಳಿ ಹೋಗಿದ್ದಾಳೆ. ಒಂದೆರಡು ಕಿ. ಮೀ ದೂರದಲ್ಲಿ ಇರುವ ಬಿಲವೇಂದ್ರ ಮನೆಗೆ ಮಾತ್ರ ಭೇಟಿಕೊಟ್ಟಿಲ್ಲ. ಆಕೆ ಅಲ್ಲಿಗೆ ಬಂದು ಹೋಗಿದ್ದೂ ಕೂಡ ಈ ಕುಟುಂಬಕ್ಕೆ ಗೊತ್ತಿಲ್ಲ.

ಜ್ಞಾನ ಪ್ರಕಾಶ್ ಮನೆ ಹತ್ತಿರವೇ ಇರುವ,  ಒಂದು ಕಾಲಕ್ಕೆ ಕ್ವಾರಿಗಳಲ್ಲಿ ದುಡಿದಿದ್ದ ಕೃಷ್ಣಾ ನಾಯಕ್ ಕೂಡ - `ಪಾಲಾರ್ ಪ್ರಕರಣದ  ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ' ಎನ್ನುತ್ತಾರೆ.ಮುಖ್ಯ ರಸ್ತೆಯಲ್ಲಿ ಸ್ವಲ್ಪ ದೂರದಲ್ಲಿ ಇರುವ ಬಿಲವೇಂದ್ರನ ಅಕ್ಕನ ಮನೆಯವರೊಂದಿಗೆ ಮಾತನಾಡುತ್ತಿದ್ದಾಗ ಆತನ ಮಗ ವಿಕ್ಟರ್ ಅಲ್ಲಿಗೆ ಬಂದ. ಬಿಲವೇಂದ್ರನ ಹೆಂಡತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಳೆ. ಇದೇ ವಿಚಾರಕ್ಕೆ ಅಪ್ಪ - ಮಗನ ಮಧ್ಯೆ ವಿರಸ ಮೂಡಿದೆ.  ಪಂಜಾಬ್ ಉಗ್ರ ಭುಲ್ಲರ್ ವಿರುದ್ಧದ ತೀರ್ಪು ಪರಾಮರ್ಶೆಗೆ ಪಂಜಾಬ್ ಸರ್ಕಾರ ಮಾಡಿಕೊಂಡ ಮನವಿಯ ಹಣೆಬರಹ ಏನಾಗುವುದು ಎನ್ನುವುದನ್ನು ಬಿಲವೇಂದ್ರ ಕುಟುಂಬ ಕುತೂಹಲದಿಂದ ಎದುರು ನೋಡುತ್ತಿದೆ. ನಿರಪರಾಧಿಗಳಿಗೆ ಗಲ್ಲು ಆಗಲಾರದು ಎನ್ನುವ ನಿರೀಕ್ಷೆ  ಇವರಲ್ಲಿಯೂ ಇದೆ.`ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ  ಏಕೈಕ ಸಾಕ್ಷಿಯಾಗಿರುವ  ಎಸ್‌ಪಿ ಕೆ. ಗೋಪಾಲಕೃಷ್ಣನ್ (ರ‌್ಯಾಂಬೊ), “ಕರ್ನಾಟಕದ ಪೊಲೀಸ್ ಸೂ.... ಮಕ್ಕಳು ಅಮಾಯಕರನ್ನು ಎಳೆದು ಕೇಸ್ ಹಾಕಿದ್ರು” ಎಂದು ಹೇಳಿದ್ದಕ್ಕೆ ನಾನೇ ಸಾಕ್ಷಿಯಾಗಿರುವೆ' ಎಂದು ಹೇಳಿದ `ಟಾಡಾ'ದಡಿ ಮೂರುವರೆ ವರ್ಷ ಜೈಲಿನಲ್ಲಿದ್ದು, ಆರೋಪ ಸಾಬೀತಾಗದೆ ಹೊರ ಬಂದಿರುವ ವೆಂಕಟರಾಮನ್.`ನಮಗೆಲ್ಲ ಸೈಮನ್ ಮೇಲೆ ಮಾತ್ರ ಅನುಮಾನ' ಎಂದೂ ಬಿಲವೇಂದ್ರನ ಸಂಬಂಧಿಕರು ಹೇಳುತ್ತಾರೆ. `40 ಎಕರೆ ಭೂಮಿ ಹೊಂದಿದ್ದ ಬಿಲವೇಂದ್ರನಿಗೆ ವೀರಪ್ಪನ್ ಹಿಂದೆ ಹೋಗುವ ಯಾವುದೇ ಅನಿವಾರ್ಯತೆ ಇದ್ದಿರಲಿಲ್ಲ' ಎಂದು ಅವರೆಲ್ಲ ತಮ್ಮ ಮನೆಯ ಸುತ್ತ ಉದ್ದಕ್ಕೂ ಚಾಚಿಕೊಂಡ, ಈಗ ಹೊಟ್ಟೆಪಾಡಿಗೆ ಮಾರಿಕೊಂಡಿರುವ ಜಾಗ ತೋರಿಸುತ್ತಾರೆ.`ವೀರಪ್ಪನ್ ಚಾಪ್ಟರ್ ಮುಗಿದಿದೆ ಈ ಕೇಸ್‌ನಲ್ಲಿ ಗೌರ್ನಮೆಂಟ್ ತಪ್ಪು ಮಾಡಿದೆ. ಈ ಅಮಾಯಕರಿಗೆ ಕ್ಷಮಾದಾನ ದೊರೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕು' ಎಂದು ಬಿಲವೇಂದ್ರ ಸಂಬಂಧಿ ಅಲ್ಬರ್ಟ್ ರಾಜ್ ಹೇಳುತ್ತಾನೆ.ಹೊಟ್ಟೆಕಿಚ್ಚು ಕಾರಣ?: ಇವರಿಗೆ ಆಗದವರು ಹೊಟ್ಟೆಕಿಚ್ಚಿನಿಂದ ಸಿಲುಕಿಸಿದ್ದಾರೆ ಎನ್ನುವ  ದೂರುಗಳೇ ವ್ಯಾಪಕವಾಗಿ ಕೇಳಿ ಬಂದವು. ಇದಕ್ಕೆ ಪುಷ್ಟಿಯಾಗಿ  ಸಂದನಪಾಳ್ಯದ ಡೊಮಿನಿಕ್ ಕೂಡ `ಸೈಮನ್ ಮುಗ್ಧ' ಎಂದೇ ಹೇಳುತ್ತಾರೆ.ಕಾಂಗ್ರೆಸ್ ಸಹವಾಸ: `ನಮಗೆ ಕಾಂಗ್ರೆಸ್ ಬೇಡವೇ ಬೇಡ. ನಮಗೆ ಯಾವುದೇ ಸೌಕರ್ಯ ಮಾಡಿಕೊಟ್ಟಿಲ್ಲ. ಶಾಸಕ  ಮಹದೇವ್ ಪ್ರಸಾದ್ ನಾಟಕ ಆಡುತ್ತಿದ್ದಾರೆ' ಎಂದು ಗುಂಡ್ಲುಪೇಟೆಯ ಶೌಕತ್ ಅಲಿ ಟೀಕಿಸುತ್ತಾರೆ.  ಹನೂರು ಕ್ಷೇತ್ರದ ಷಫಿವುಲ್ಲಾ, `ಕಾಂಗ್ರೆಸ್ ಮುಸ್ಲಿಮರಿಗೆ ಏನೂ ಮಾಡಿಲ್ಲ. ಸ್ಥಳೀಯ ಶಾಸಕರಿಗೆ ಜನ ಸಾಮಾನ್ಯರನ್ನು ಗೌರವದಿಂದ ಕಾಣುವ ಕನಿಷ್ಠ ಸೌಜನ್ಯವೂ ಇಲ್ಲ' ಎಂದು ದೂರುತ್ತಾರೆ.ಯಡಿಯೂರಪ್ಪ ಪ್ರಭಾವ: ಜಿಲ್ಲೆಯಲ್ಲಿ ಯಡಿಯೂರಪ್ಪ ಅಭಿಮಾನಿ ಬಳಗ ಹೆಚ್ಚಿದೆ.  ಸುತ್ತೂರು ಶ್ರೀಗಳು ಮತ್ತು ಬಿ. ಎಸ್. ಯಡಿಯೂರಪ್ಪ ಅವರ ಆಸಕ್ತಿ ಫಲವಾಗಿ 213 ಕೆರೆಗಳಿಗೆ ಮೂಳೆಹೊಳೆಯಿಂದ ನೀರು ತುಂಬಿಸುವ ಯೋಜನೆ ಕಾರ್ಯಗತಗೊಳ್ಳುತ್ತಿರುವುದು ಹೆಚ್ಚಿನ ಸಂಖ್ಯೆಯ ಭೂಮಾಲೀಕ ಲಿಂಗಾಯತರಲ್ಲಿ ಕೆಜೆಪಿ ಒಲವು ಹೆಚ್ಚಿಸಿದೆ. `ಮೂಳೆಹೊಳೆ ನೀರಿನಿಂದ ಕೆರೆಕಟ್ಟೆಗಳನ್ನೆಲ್ಲ ತುಂಬಿಸುವ ಯೋಜನೆ ಕಾರ್ಯಗತಗೊಂಡರೆ ನಾವು ಮಂಡ್ಯ ಜಿಲ್ಲೆಯನ್ನೂ ಮೀರಿಸಬಹುದು. ದಲಿತರು, ಸಾಬರು ಆರ್ಥಿಕವಾಗಿ ಸಬಲರಾಗಬಾರದು ಎನ್ನುವ ಹವಣಿಕೆ ಸ್ಥಳೀಯ ಶಾಸಕರಿಗೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಮಹದೇವ್ ಪ್ರಸಾದ್ `ಗುದ್ದಲಿ ಪೂಜೆ ಪ್ರವೀಣ' ಎಂದೇ ಕುಖ್ಯಾತಿ ಪಡೆದಿದ್ದಾರೆ. ಕಾರಿನ ಡಿಕ್ಕಿಯಲ್ಲಿ ಸದಾ ಗುದ್ದಲಿ ಇರುತ್ತದೆ' ಎಂಬುದು ಎಸ್.ಗೋವಿಂದ ರಾಜನ್ ಅವರ ಲೇವಡಿ.ನಾವು ಸಾಗಿದ ದಾರಿಯಲ್ಲಿ ಎದುರಾದ ಹರವೆ ಹೋಬಳಿಯಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣದ ಬಗ್ಗೆ ಸ್ಥಳೀಯರನ್ನು ಪ್ರಶ್ನಿಸಿದಾಗ, `ಗ್ರಾಮೀಣ ಸಡಕ್ ಯೋಜನೆಯಡಿ ವಾಜಪೇಯಿ ಅವರ ಕಾಲದಲ್ಲಿ ಮಂಜೂರಾದ ಯೋಜನೆ ಈಗ ಕಾರ್ಯಗತಗೊಳ್ಳುತ್ತಿದೆ' ಎಂದರು. ಇದು ಜಿಲ್ಲೆಯ ಅಭಿವೃದ್ಧಿ ಯಾವ ಗತಿಯಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಸೋಲಿಗರ ಪ್ರಜ್ಞೆ: `ಪಾರ್ಟಿಗೀರ್ಟಿ  ಎಂತದ್ದೂ ನಮ್ಗೆ ಗೊತ್ತಿಲ್ಲ. ನಾವು ಬಿಟ್ಟಿಯಾಗಿ ವೋಟ್ ಹಾಕ್ತೇವೆ. ಅವ್ರ ನಮ್ಗೆ ಮೂರು ನಾಮ ಹಾಕ್ತಾರೆ'ಎಂದು ಕನ್ನೇರ್ ಕಾಲೋನಿಯ ಸೋಲಿಗರಾದ ಕಿಡಗಿ ಮಾದೇಗೌಡ ಸಿಟ್ಟಿನಿಂದ ಹೇಳಿದರೆ, `ನಮ್ಮ ಯೋಜನೆಗಳ ಹೆಸರಲ್ಲಿ ಕೆಲವರು ನಮ್ಮ ಸಾಲ ಸೌಲಭ್ಯಗಳನ್ನು  ಕಿತ್ಕೊಳ್ತಾರೆ. ಕೇಳಕ್ಕೆ ಹೋದ್ರೆ ಬೆದ್ರಸ್ತಾರೆ. ಏಯ್ ನೀ ಹೋಗ್ ನಿನ್ನ ವೋಟಲ್ಲಿ  ಬದುಕ್ತೀವಾ  ಎಂದು ಗೆದ್ದ ಮೇಲೆ ಧಮಕಿ ಹಾಕ್ತಾರೆ' ಎನ್ನುವುದು ಹೊಸಪೋಡು ಕಾಲೋನಿಯ ಹನುಮಮ್ಮಳ ವಿಷಾದ.ಸೋಲಿಗರು, ತಮ್ಮ ಕಲ್ಯಾಣ ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲದಷ್ಟು ಮುಗ್ಧರು. ಬಹುತೇಕ ಸೋಲಿಗರು ಈಗಲೂ `ಹಸ್ತ'ದ ಇಂದಿರಮ್ಮಳನ್ನು ನೆನಪಿಸಿಕೊಳ್ಳುತ್ತಾರೆ. ಸೋಲಿಗರ  ಹಾಡಿಗಳಲ್ಲಿ ಮದ್ಯ ಪೂರೈಕೆ, ಅನಕ್ಷರತೆ ಮತ್ತು ವಲಸೆ ಪ್ರವೃತ್ತಿ ಇದ್ದೇ ಇದೆ.`ಬಹುತೇಕ ಕಡೆ ಕೆಜೆಪಿಯ ಲಿಂಗಾಯತರು ಠಾಕು ಠೀಕಾಗಿ ಗರಿ, ಗರಿ ಬಟ್ಟೆ ತೊಟ್ಟುಕೊಂಡು ಶ್ರೀಗಳು, ಬಿಎಸ್‌ವೈ ಹೆಸರಲ್ಲಿ ಚುರುಕಾದ ಸಂಘಟನೆ ಮೂಲಕ  ಓಡಾಡುತ್ತಿದ್ದರೂ, ಮತಗಟ್ಟೆಗೆ ಬಹುಸಂಖ್ಯೆಯಲ್ಲಿ ಬರುವ ಸಮಾಜದ ನಿಮ್ನ ವರ್ಗದವರೇ ಫಲಿತಾಂಶ ನಿರ್ಧರಿಸುವುದರಿಂದ ಎಲ್ಲವೂ ಏರುಪೇರಾಗಲಿದೆ. ಬಿಜೆಪಿ ಒಂದೂ ಸ್ಥಾನ ಗೆಲ್ಲಲ್ಲ' ಎಂದು ಪಕ್ಷದ ಚಾಮರಾಜನಗರದ ಮುಖಂಡರೊಬ್ಬರೇ ಹೇಳುತ್ತಾರೆ.ತಳಮಟ್ಟದ ನಾಯಕ:  ಧ್ರುವ ನಾರಾಯಣ ತಳಮಟ್ಟದ ನಾಯಕ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹೊಣೆಯಲ್ಲ ಇವರ ಹೆಗಲ ಮೇಲಿದೆ. ಅದನ್ನು ಅವರು ಶ್ರದ್ಧೆಯಿಂದಲೇ ಪಾಲಿಸುತ್ತಿದ್ದಾರೆ. ಶಿವರಾತ್ರಿ, ಯುಗಾದಿ ಸಂದರ್ಭಗಳಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅವರಿಗಾಗಿ ಬೆಟ್ಟ ಪ್ರದೇಶ ಮತ್ತು ಮಾರ್ಗ ಮಧ್ಯೆ ಬರುವ  ಕೊಳ್ಳೇಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ  ವಸತಿಗೃಹ, ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳೂ ಇಲ್ಲ. ಮಲೆ ಮಹದೇಶ್ವರ ಬೆಟ್ಟದಲ್ಲೂ ಪ್ಲ್ಯಾಸ್ಟಿಕ್ ಸೇರಿದಂತೆ ಕಸದ ತಿಪ್ಪೆ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ.ಕೆರೆ ತುಂಬಿಸುವ, ನೀರು ಕುಡಿಸುವ ಮಾತನಾಡುತ್ತಲೇ ಮತಗಳ `ಗಣಿ' ಬೇಟೆಯಾಡುತ್ತಿರುವ `ಪಕ್ಷಾಂತರಿ ಅಭ್ಯರ್ಥಿ'ಗಳ ಮಧ್ಯೆ ಬಡ ಭಕ್ತರನ್ನು ಆ `ಮಾದೇಶ್ವರ'ನೇ ಕಾಪಾಡಬೇಕು.

ಪ್ರತಿಕ್ರಿಯಿಸಿ (+)