ಶುಕ್ರವಾರ, ಮೇ 14, 2021
35 °C

ಮತ ಮಾರಾಟ ಸಂಸ್ಕೃತಿ ಸಲ್ಲದು: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ:ಚುನಾವಣೆ ವ್ಯವಸ್ಥೆಯಲ್ಲಿ ಮತಗಳನ್ನು ಮಾರಿಕೊಳ್ಳುವ ಸಂಸ್ಕೃತಿಗೆ ಮುಂದಾಗಿರುವ ಪರಿಣಾಮ, ಪ್ರಶ್ನಿಸುವ ನೈತಿಕತೆ ಕಳೆದುಕೊಂಡಿದ್ದೇವೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.ಸೋಮವಾರ ತಾಲ್ಲೂಕಿನ ಪುಣಭಗಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪುಣ್ಯದಕಟ್ಟೆಯ ಜೀರ್ಣೋದ್ಧಾರ ಹಾಗೂ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕರುಣಾಕರರೆಡ್ಡಿ ಚುನಾವಣಾ ಪೂರ್ವದಲ್ಲಿ ಕೋಟ್ಯಂತರ ರೂಪಾಯಿ ಹರಿಸಿದರು. ಪ್ರತಿ ಮತದಾರನಿಗೂ ಐದು ನೂರು-ಸಾವಿರ ಹಂಚಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.  ನಂತರ ಹಂಚಿದ ಹಣದ ಕ್ರೋಡೀಕರಣಕ್ಕಾಗಿ ಹಣ ದೋಚಲು ಆರಂಭಿಸಿದರು ಎಂದರು.ಹೀಗಾಗಿ, ಕಣ್ಣೆದುರಿಗೆ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರ ಯಾವುದನ್ನೂ ಪ್ರಶ್ನಿಸದೇ, ಏನನ್ನೂ ಕೇಳದೇ, ನೈತಿಕತೆಯ ಧ್ವನಿ ಕ್ಷೀಣಿಸಿ ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿಗೆ ನಮ್ಮನ್ನು ನಾವೇ ತಂದುಕೊಂಡಿದ್ದೇವೆ.ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ. ಈ ಮಾತನ್ನು ತುಂಬಾ ನಿಷ್ಠುರವಾಗಿ ಹೇಳುತ್ತಿದ್ದೇನೆ ಎಂದು ನುಡಿದರು. ಪ್ರಾಮಾಣಿಕತೆ ಎಂಬುದು ಮೊದಲು ನಮ್ಮ ಮನಸ್ಸಿನ ಮೂಸೆಯಿಂದ ಅರಳಿ, ಮನೆಯ ಹೊಸ್ತಿಲಿನಿಂದಲೇ ಆರಂಭವಾಗಬೇಕು. ಮತವನ್ನು ಮಾರಿಕೊಳ್ಳದೇ ಇದ್ದರೆ, ಕನಿಷ್ಠ ಪ್ರಾಮಾಣಿಕರನ್ನು ಆಯ್ಕೆಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿತ್ತು ಎಂದು ವಿಶ್ಲೇಷಿಸಿದರು. ಇದಕ್ಕೂ ಮೊದಲು ಗ್ರಾಮದ ಶಿವ ಸೈನ್ಯದ ಯುವಕರು ಸ್ವಾಮೀಜಿ ಅವರನ್ನು `ಬೈಕ್ ರ‌್ಯಾಲಿ~ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡರು.ಗ್ರಾಮದ ಹಿರಿಯ ಮುಖಂಡ ಎನ್. ವಿರೂಪಾಕ್ಷಗೌಡ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಹಾಗೂ ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್, ಶಾಸಕ ಎಸ್.ವಿ. ರಾಮಚಂದ್ರ, ಜಿ.ಪಂ. ಮಾಜಿ ಸದಸ್ಯ ಪಿ. ರಾಮನಗೌಡ, ಕರ್ನಾಟಕ ರಾಜ್ಯ ಬೀಜ ನಿಗಮದ ನಿರ್ದೇಶಕ ಪಿ. ಮಹಾಬಲೇಶ್ವರಗೌಡ, ಜಿ. ನಂಜನಗೌಡ, ಎಸ್. ಮಂಜುನಾಥ, ಎನ್. ಕೊಟ್ರೇಶ್,  ನಾರಾಯಣಗೌಡ, ಪಿ.ಎಂ. ಬಾಲಚಂದ್ರಯ್ಯ ಇತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.