ಭಾನುವಾರ, ಅಕ್ಟೋಬರ್ 20, 2019
28 °C

ಮದನಿ ಜಾಮೀನು ತಿರಸ್ಕೃತ

Published:
Updated:

ನವದೆಹಲಿ (ಪಿಟಿಐ): ಬೆಂಗಳೂರು ಸೇರಿದಂತೆ ದೇಶದ ಹಲವೆಡೆ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಕೇರಳದ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಸಂಸ್ಥಾಪಕ ಅಬ್ದುಲ್ ನಸೀರ್ ಮದನಿಯ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಕೇರಳದ ಮಲಪ್ಪುರಂನ ಕೋಟಕ್ಕಲ್ ಆರ್ಯ ವೈದ್ಯ ಶಾಲಾದಲ್ಲಿ ಚಿಕಿತ್ಸೆ ಪಡೆಯಲು ಮಧ್ಯಂತರ ಜಾಮೀನು ನೀಡುವಂತೆ ಕೋರಿ ಮದನಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಪಿ.ಸದಾಶಿವಂ ಮತ್ತು ಜೆ.ಚೆಲಮೇಶ್ವರ್ ಅವರು, ಮದನಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದರು.`ಈಗಾಗಲೇ ಆರೋಗ್ಯ ಸಮಸ್ಯೆಯಿಂದಾಗಿಯೇ ಒಂದು ಕಾಲನ್ನು ಕಳೆದುಕೊಂಡಿರುವ ಮದನಿ, ಬೆನ್ನುಹುರಿ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಅಥವಾ ಕಾನೂನು ಉಲ್ಲಂಘನೆಯ ಪ್ರಶ್ನೆ ಉದ್ಭವಿಸದು~ ಎಂದು ಮದನಿ ಪರ ವಕೀಲ ಸುಶೀಲ್ ಕುಮಾರ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದರು.ಆದರೆ, ಅವರ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳು, `ಸಾಕ್ಷ್ಯ ನಾಶಕ್ಕೆ ವ್ಯಕ್ತಿಯೊಬ್ಬ ಸ್ವತಃ ತಾನೇ ಸ್ಥಳಕ್ಕೆ ಹೋಗಬೇಕಾಗಿಲ್ಲ. ಕುಳಿತಲ್ಲಿಯೇ ತನ್ನ ಬೆಂಬಲಿಗರಿಂದ ಈ ಕೆಲಸ ಮಾಡಿಸಬಹುದು~ ಎಂದು ಅಭಿಪ್ರಾಯಪಟ್ಟರು.ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎಂ.ಎನ್.ಕೃಷ್ಣಮಣಿ ಮತ್ತು ಅನಿತಾ ಶೆಣೈ, ಅನಾರೋಗ್ಯದ ಆಧಾರದ ಮೇಲೆ ಜಾಮೀನು ಕೋರಿ ಮದನಿ ಸಲ್ಲಿಸಿರುವ ಅರ್ಜಿಯನ್ನು ಬಲವಾಗಿ ವಿರೋಧಿಸಿದರು. ಚಿಕಿತ್ಸೆಗಾಗಿ ಕೇರಳಕ್ಕೆ ಹೋಗಬೇಕಾಗಿಲ್ಲ, ಬೆಂಗಳೂರಿನಲ್ಲಿರುವ ಕೋಟಕ್ಕಲ್ ಆರ್ಯ ವೈದ್ಯ ಶಾಲಾ ಸೇರಿದಂತೆ ದೇಶದ ಹಲವೆಡೆ ಚಿಕಿತ್ಸೆ ಲಭ್ಯವಿದೆ ಎಂದು ವಾದ ಮಂಡಿಸಿದರು.ಈ ವಾದವನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಬೆಂಗಳೂರಿನಲ್ಲಿರುವ ಕೋಟಕ್ಕಲ್ ಆರ್ಯ ವೈದ್ಯ ಶಾಲಾದಲ್ಲಿ ಮದನಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದರು.ಇದಕ್ಕೂ ಮೊದಲು ಮದನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಖಟ್ಜು ಮತ್ತು ಗ್ಯಾನ್ ಸುಧಾ ಮಿಶ್ರಾ, ಜಾಮೀನು ನೀಡುವ ಕುರಿತು ವಿಭಿನ್ನ ನಿಲುವು ತಳೆದಿದ್ದರು. ಖಟ್ಜು ಜಾಮೀನು ಪರ ನಿಲುವು ತಾಳಿದರೆ, ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ಮಿಶ್ರಾ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಅವರಿಗೆ ಶಿಫಾರಸು ಮಾಡಲಾಗಿತ್ತು.2008ರಲ್ಲಿ ಬೆಂಗಳೂರು, ಅಹಮದಾಬಾದ್, ಸೂರತ್ ಮತ್ತು ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಗಳಾಗಿದ್ದವು. ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.ಸದ್ಯ ಬೆಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮದನಿ, ಹತ್ತು ವರ್ಷಗಳ ಹಿಂದೆ ನಡೆದ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಿಂದ ಈಚೆಗೆ ಆರೋಪ ಮುಕ್ತರಾಗಿದ್ದಾರೆ.

 

Post Comments (+)