ಶುಕ್ರವಾರ, ಮೇ 7, 2021
26 °C
ಸರ್ವ ಶಿಕ್ಷಣ ಅಭಿಯಾನ

ಮದರಸಾಗಳಿಗೆ ಪ್ರಸಕ್ತ ವರ್ಷ ಮಾತ್ರ ಅನುದಾನ

ಪ್ರಜಾವಾಣಿ ವಾರ್ತೆ/ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಶಾಲೆಯಿಂದ ಹೊರಗೆ ಉಳಿದ ಬಾಲಕಾರ್ಮಿಕ ಮಕ್ಕಳಿಗಾಗಿ ಸರ್ವ ಶಿಕ್ಷಣ ಅಭಿಯಾನದಡಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ತೆರೆಯಲಾಗುವುದಿಲ್ಲ. ಅಲ್ಲದೇ, ಮದರಸಾ ಶಾಲೆಗಳಿಗೆ ಈ ಒಂದು ಶೈಕ್ಷಣಿಕ ವರ್ಷ ಮಾತ್ರ ಅನುದಾನ ನೀಡಲು ನಿರ್ಧರಿಸಲಾಗಿದೆ.ಈ ಸಂಬಂಧ ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕರು ಎಲ್ಲ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (ಡಿಡಿಪಿಐ) ಹಾಗೂ ಸರ್ವ ಶಿಕ್ಷಣ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿಗಳಿಗೆ (ಡಿವೈಪಿಸಿ) ಬರೆದ ಪತ್ರದಲ್ಲಿ ಸೂಚನೆ ನೀಡಿದ್ದು, ಈ ಪತ್ರವು 'ಪ್ರಜಾವಾಣಿ'ಗೆ ಲಭ್ಯವಾಗಿದೆ.ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರಬೇಕು ಎಂಬ ದೃಷ್ಟಿಯಿಂದ ಅಭಿಯಾನದಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ವಸತಿಯುತ ಮತ್ತು ವಸತಿ ರಹಿತ ಕಾರ್ಯಕ್ರಮಗಳೂ ಸೇರಿವೆ.ಆದರೆ, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಕೇಂದ್ರಗಳನ್ನು ತೆರೆದ ಬಗ್ಗೆ ಕೆಲವು ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒಗಳು) ಸುಳ್ಳು ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಲು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವೇ ಈ ನಿರ್ಧಾರಕ್ಕೆ ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.ಶಾಲೆಯಿಂದ ಹೊರಗುಳಿದ ಬಾಲಕಾರ್ಮಿಕ ಮಕ್ಕಳಿಗಾಗಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯಡಿ (ಎನ್‌ಸಿಎಲ್‌ಪಿ) ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಆದರೆ, ನವದೆಹಲಿಯಲ್ಲಿ ನಡೆದ ಯೋಜನಾ ಅನುಮೋದನಾ ಮಂಡಳಿ (ಪಿಎಬಿ) ಸಭೆಯು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇಂತಹ ಶಾಲೆಗಳಿಗೆ ಅನುದಾನ ನೀಡದಿರಲು ನಿರ್ಧರಿಸಿದೆ. ಶಾಲೆಯಿಂದ ಹೊರಗುಳಿದ ಬಾಲಕಾರ್ಮಿಕ ಮಕ್ಕಳನ್ನು ಇನ್ನು ಮುಂದೆ ಕೇಂದ್ರ ಸರ್ಕಾರ ನೀಡುವ ಧನ ಸಹಾಯದಿಂದ ಕಾರ್ಮಿಕ ಇಲಾಖೆ ನಡೆಸುತ್ತಿರುವ ಎನ್‌ಸಿಎಲ್‌ಪಿ ಕೇಂದ್ರಗಳಲ್ಲಿ ದಾಖಲಿಸುವಂತೆ ಪಿಎಬಿ ಸೂಚನೆ ನೀಡಿದೆ.ಪಿಎಬಿಯ ಸೂಚನೆಯನ್ನು ಉಲ್ಲೇಖಿಸಿ ಅಭಿಯಾನದ ನಿರ್ದೇಶಕರು ಬಾಗಲಕೋಟೆ, ಬೆಂಗಳೂರು (ಗ್ರಾಮಾಂತರ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳು), ಬಳ್ಳಾರಿ, ವಿಜಾಪುರ, ಚಿತ್ರದುರ್ಗ, ದಾವಣಗೆರೆ, ಯಾದಗಿರಿ, ಕೊಡಗು, ಕೊಪ್ಪಳ, ಮೈಸೂರು ಹಾಗೂ ರಾಯಚೂರು ಜಿಲ್ಲೆಗಳ ಡಿಡಿಪಿಐ ಮತ್ತು ಡಿವೈಪಿಸಿಗಳಿಗೆ  ಸೂಚನೆ ನೀಡಿದ್ದಾರೆ. ಆಯಾ ಜಿಲ್ಲೆಗಳಲ್ಲಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಶಾಲೆಯಿಂದ ಹೊರಗುಳಿದ ಬಾಲಕಾರ್ಮಿಕ ಮಕ್ಕಳನ್ನು ಎನ್‌ಸಿಎಲ್‌ಪಿ ಕೇಂದ್ರಗಳಿಗೆ ದಾಖಲಿಸುವ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದ್ದಾರೆ.ಗುಳೆ ಹೋಗುವ ಪಾಲಕರ ಮಕ್ಕಳಿಗಾಗಿ 6 ತಿಂಗಳ ಅವಧಿಯ ಋತುಮಾನ ವಸತಿಯುತ ವಿಶೇಷ ತರಬೇತಿ ಶಾಲೆಗಳನ್ನು ನಡೆಸಲಾಗುತ್ತಿದೆ. ಇಂತಹ ಶಾಲೆಗಳಿಗೆ ದಾಖಲಾಗುವ ಪ್ರತಿ ಮಗುವಿಗೆ ಈವರೆಗೆ 10 ಸಾವಿರ ರೂಪಾಯಿಗಳನ್ನು ಘಟಕ ವೆಚ್ಚವಾಗಿ ನೀಡಲಾಗುತ್ತಿತ್ತು. ಆದರೆ, 2013-14ನೇ ಸಾಲಿನಿಂದ ಈ ಘಟಕ ವೆಚ್ಚವನ್ನು 6,600 ರೂಪಾಯಿಗಳಿಗೆ ನಿಗದಿಗೊಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.