ಮದುವೆ ಅಂದ್ರೆ ಬಲು ಇಷ್ಟ

7

ಮದುವೆ ಅಂದ್ರೆ ಬಲು ಇಷ್ಟ

Published:
Updated:
ಮದುವೆ ಅಂದ್ರೆ ಬಲು ಇಷ್ಟ

ಐಷಾರಾಮಿ ಟೈಮೆಕ್ಸ್ ಕೈಗಡಿಯಾರ ಮಳಿಗೆಯೊಂದು ನಗರದ ಇಂದಿರಾನಗರದ ನೂರು ಅಡಿ ರಸ್ತೆಯಲ್ಲಿ ಇತ್ತೀಚೆಗೆ ಕಾರ್ಯಾರಂಭ ಮಾಡಿತು. ಅಮೆರಿಕ ಮೂಲದ ಟೈಮೆಕ್ಸ್ ಕಂಪೆನಿಗೆ ಬಾಲಿವುಡ್ ಮಂದಿ ಬರದಿದ್ದರೆ ಹೇಗೆ? ತಾರಾ ದಂಪತಿ ಪುತ್ರಿ ನಟಿ ಸೋಹಾ ಅಲಿ ಖಾನ್ ಬಂದಿದ್ದರು. ಅಣ್ಣ ಸೈಫ್ ಹಾಗೂ ಕರೀನಾ ಮದುವೆಯ ಪ್ರಶ್ನೆಗಳಿಗೆ `ಅತಿ ಶೀಘ್ರದಲ್ಲಿ~ ಎಂಬ ಉತ್ತರ ನೀಡುತ್ತಾ ಬಗೆಬಗೆಯ ಮಾದರಿಯ ಕೈಗಡಿಯಾರಗಳ ಬಳಿ ನಿಂತು ಛಾಯಾಗ್ರಹಕರಿಗೆ ಪೋಸು ನೀಡುತ್ತಿದ್ದರು. 

ವಿಲಾಸಿ ಕೈಗಡಿಯಾರಗಳಿಗೇ ಸೀಮಿತಗೊಳಿಸಿರುವ ಟೈಮೆಕ್ಸ್‌ನ ಈ ಮಳಿಗೆಯಲ್ಲಿ ಒಂದೂವರೆ ಸಾವಿರ ರೂಪಾಯಿಯಿಂದ ಎರಡೂವರೆ ಲಕ್ಷ ರೂಪಾಯಿವರೆಗಿನ ಕೈಗಡಿಯಾರಗಳಿವೆ. `ದ ಟೈಮ್ ಫ್ಯಾಕ್ಟರಿ~ ಎಂಬ ಈ ಸರಣಿಯಲ್ಲಿ ನಗರದಲ್ಲಿ ಆರಂಭವಾಗಿರುವ ಮೊದಲ ಮಳಿಗೆ ಇದಾಗಿದೆ. 800 ಚದರಡಿ ವಿಸ್ತಾರದ ಈ ವಿಲಾಸಿ ಕೈಗಡಿಯಾರ ಮಳಿಗೆಯ ಉದ್ಘಾಟನೆಯಲ್ಲಿ ಸೋಹಾ ಅಲಿ ಖಾನ್ ಅವರೊಂದಿಗೆ ಟೈಮೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿ.ಡಿ. ವಾಧ್ವಾ ಅವರೂ ಇದ್ದರು.

ಬಿಳಿ ಬಣ್ಣಕ್ಕೂ ಮೀರಿದ ಬಣ್ಣ, ತೆಳುವಾದ ಮೈಕಟ್ಟು ಹಾಗೂ ಬೇಸಿಗೆಗೆ ಹಿತವೆನಿಸುವಷ್ಟು ಉಡುಪು ತೊಟ್ಟ ಸೋಹಾಳ ಗುಳಿಕೆನ್ನೆ ಮೊಗದಲ್ಲಿ ಅಮ್ಮ ಶರ್ಮಿಳಾ ಅವರ ಛಾಯೆ ರಾರಾಜಿಸುತ್ತಿತ್ತು. ಕ್ರಿಕೆಟ್ ಹಿನ್ನಲೆಯ ತಂದೆ, ನಟನೆಯನ್ನೇ ನೆಚ್ಚಿಕೊಂಡ ತಾಯಿ ಹಾಗೂ ಅಣ್ಣನಿಂದ ಮನೆಯಲ್ಲಿ ಫಿಟ್‌ನೆಸ್, ನಟನೆ, ಕ್ಯಾಮೆರಾ, ತಂತ್ರಜ್ಞಾನಗಳ ಕುರಿತೇ ಚರ್ಚೆ ನಡೆಸುತ್ತಿರುವ ಸೋಹಾ ಫಿಟ್‌ನೆಸ್ ಹಾಗೂ ಇತರ ವಿಷಯಗಳ ಕುರಿತು `ಮೆಟ್ರೊ~ ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು.

ನಿಮ್ಮ ಫಿಟ್‌ನೆಸ್ ಮಂತ್ರ ಏನು?

ಎಷ್ಟೇ ಕಷ್ಟವಾಗಲಿ ಮನಸ್ಸು ಹಾಗೂ ದೇಹ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂಬುದೇ ನನ್ನ ಮಂತ್ರ. ಇದಕ್ಕಾಗಿ ನಾನು ಯೋಗದ ಮೊರೆ ಹೋಗಿದ್ದೇನೆ.

ಫ್ಯಾಷನ್ ಎಂದರೆ ನಿಮ್ಮ ಅರ್ಥವೇನು?

ಆಯಾ ಸಂದರ್ಭಕ್ಕೆ ಸರಿಹೊಂದುವಂಥ ಬಟ್ಟೆಗಳನ್ನೇ ತೊಡುವುದು. ಆಧುನಿಕ ವಸ್ತ್ರಗಳು ನನಗಿಷ್ಟವಾದರೂ, ಕೆಲವು ಕಾರ್ಯಕ್ರಮಗಳಿಗೆ ಸೀರೆ ತೊಡುವುದನ್ನೂ ನಾನು ಮರೆಯುವುದಿಲ್ಲ.

ಆಭರಣಗಳೆಂದರೆ?

ಎಲ್ಲಾ ಹುಡುಗಿಯರಂತೆ ವಜ್ರಗಳೆಂದರೆ ನನಗೆ ಪಂಚಪ್ರಾಣ. ಅದರಲ್ಲೂ ಹೇರಳವಾದ ಲೋಹ ಹಾಗೂ ಹರಳುಗಳುಳ್ಳ ಆಭರಣಗಳನ್ನು ತೊಡಬೇಕೆನ್ನುವುದು ನನ್ನ ಆಸೆ.

ನಿಮ್ಮ ಬಳಿ ಎಷ್ಟು ಕೈಗಡಿಯಾರಗಳಿವೆ?

ನನ್ನ ಬಳಿ ಇರುವುದೇ ಎಂಟು ಕೈಗಡಿಯಾರಗಳು. ಅವುಗಳಲ್ಲಿ ಎರಡು ದುಬಾರಿ ಹಾಗೂ ವಿಲಾಸಿ ಕೈಗಡಿಯಾರಗಳು.

ತಂತ್ರಜ್ಞಾನ ಹಾಗೂ ಸಾಮಾಜಿಕ ತಾಣಗಳೆಂದರೆ?

ತಂತ್ರಜ್ಞಾನ ಕಬ್ಬಿಣದ ಕಡಲೆ. ಸಾಮಾಜಿಕ ತಾಣಗಳಿಂದಲೂ ನಾನು ಬಹು ದೂರ. ಹೀಗಾಗಿ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ಗಳ ಖಾತೆಗಳನ್ನೇ ಹೊಂದಿಲ್ಲ. ಆಪ್ತರೊಂದಿಗೆ ಹರಟಲು ನನಗೆ ಎಸ್‌ಎಂಎಸ್ ಒಂದೇ ಸಾಕು.

ನಿಮ್ಮ ತಾಕತ್ತು?

ಆಶಾವಾದಿ, ಎಲ್ಲವನ್ನೂ ಸ್ವೀಕರಿಸುವ ಸ್ವಭಾವ

ದೌರ್ಬಲ್ಯ?

ನಾನು ಬಹಳ ಮೂಡಿ

ಎಂತಹ ಪಾತ್ರ ಮಾಡಬೇಕೆಂಬ ಆಸೆ ಇದೆಯೇ?

ಹಾಗೇನೂ ಇಲ್ಲ. ನನಗೆ ನಟನೆ ಖುಷಿ ನೀಡುತ್ತಿದೆ. ನಾನು ಮಾಡುತ್ತಿದ್ದೇನೆ. ಬರುವ ಎಲ್ಲಾ ಪಾತ್ರವನ್ನೂ ಇಷ್ಟಪಟ್ಟು ಮಾಡುವುದೇ ನನ್ನ ಗುರಿ.

ಮದುವೆ ಎಂದರೆ?

ಬಲು ಇಷ್ಟ. ನನಗೆ ಮದುವೆ, ಕುಟುಂಬ ಇವೆಲ್ಲ ಇಷ್ಟ. ಆದರೆ ಕಾಲ ಇನ್ನೂ ಕೂಡಿ ಬಂದಿಲ್ಲ.

ಕುನಾಲ್ ಖೇಮು ವರನೇ?

ಹ.... ಹ.... (ನಗು)

ಮೂಲಗಳ ಪ್ರಕಾರ ಸೈಫ್-ಕರೀನಾ ಮದುವೆಗೂ ಮುನ್ನ ಸೋಹಾ-ಕುನಾಲ್ ಮದುವೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry