ಮದುವೆ ತಂಡದ ಇಬ್ಬರು ಮಸಣಕ್ಕೆ!

7
ಮಡ್ಲಿ ಕ್ರಾಸ್ ಬಳಿ ಲಾರಿ ಪಲ್ಟಿ; 68 ಜನರಿಗೆ ಗಾಯ

ಮದುವೆ ತಂಡದ ಇಬ್ಬರು ಮಸಣಕ್ಕೆ!

Published:
Updated:

ಶಿಗ್ಗಾವಿ: ವಧುವರರಿಗೆ ಶುಭ ಕೋರಲೆಂದು 70ಕ್ಕೂ ಹೆಚ್ಚು ಜನರನ್ನು ಹೊತ್ತು ತವರಮೆಳ್ಳಿ ಹಳ್ಳಿ ಗ್ರಾಮದಿಂದ ಧಾರವಾಡಕ್ಕೆ ಮದುವೆ ಮನೆಗೆ ಸೋಮವಾರ ಬೆಳಿಗ್ಗೆ ಹೊರಟ ಲಾರಿ, ಪ್ರಯಾಣ ಆರಂಭಿಸಿದ ಅರ್ಧ ಗಂಟೆಯಲ್ಲೇ ಮಡ್ಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಸಾವಿಗೀಡಾಗಿದ್ದಾರೆ.

ಘಟನೆ ನಡೆದ ತಕ್ಷಣ ಶಿಗ್ಗಾವಿ ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗಾಗಿ ಗಾಯಾಳುಗಳನ್ನು ಸೇರಿಸಿದಾಗ ಸ್ಥಳದಲ್ಲಿ ಅಕ್ಷರಶಃ ಸ್ಮಶಾನ ದೃಶ್ಯ ಕಂಡುಬಂತು.ಘಟನೆಯಲ್ಲಿ ಮುಂಡಗೋಡದ ನೆಹರು ನಗರದ ನಿವಾಸಿ 14 ವರ್ಷದ ನೇತ್ರಾ ಉಮೇಶ ಶಿಂಧೆ (ಅಗಸರ) ಎಂಬಾಕೆ ಸ್ಥಳದಲ್ಲಿ ಮೃತಪಟ್ಟರು. ಉಳಿದ ಗಾಯಾಳುಗಳನ್ನು ತಕ್ಷಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ಸಾಗಿಸಲಾಯಿತು.

ಗಾಯಾಳುಗಳ ಪೈಕಿ ಬಾಬು ಶಿವಾಜಿ ಜಾಧವ್ (45) ದಾರಿ ಮಧ್ಯೆ ಕೊನೆಯುಸಿರೆಳೆದರು. ಗಾಯಗೊಂಡ 68 ಜನರ ಪೈಕಿ 24 ಜನರನ್ನು ಒಳರೋಗಿಗಳಾಗಿ ದಾಖಲಿಸ ಲಾಗಿದೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ.`ಸ್ನೇಹಿತೆ ಮಂಜುಳಾ ಜಾಧವಳ ಮದುವೆ ಧಾರಾವಾಡದಲ್ಲಿ ನಡೆಯುವುದಿತ್ತು. ಆದರೆ ಆಕೆಯ ಜೊತೆಗೆ ಭಾನುವಾರವೇ ಹೋಗಲು ಸಾಧ್ಯವಾಗದ್ದರಿಂದ ಇಂದು ಬೆಳಿಗ್ಗೆ ಹೊರಟು, ಲಾರಿ ಏರಿದ್ದೆ. ವಧುವನ್ನು ಕಂಡು ಅಕ್ಷತೆ ಹಾಕಿ ಶುಭ ಕೋರಬೇಕೆಂಬ ಆಸೆ ಹೊತ್ತು ಹೊರಟಿದ್ದೆ. ಆದರೆ ಅರ್ಧ ದಾರಿಯಲ್ಲಿ ಅಪಘಾತ ಸಂಭವಿಸಿ ಆಸ್ಪತ್ರೆ ಸೇರುವಂತಾಯಿತು' ಎಂದು ಮಧುಮಗಳ ಸ್ನೇಹಿತೆ ಶೋಭಾ ಕಮ್ಮಾರ ಕಣ್ಣೀರು ಸುರಿಸಿದರು. ಈ ದೃಶ್ಯ ಕಂಡ ಇತರರ ಕಣ್ಣ್ಲ್ಲಲೂ ಕಣ್ಣೀರು ಹರಿಯಿತು.ತಾಲ್ಲೂಕು ಆಸ್ಪತ್ರೆಯಲ್ಲಿ ಬೆಡ್‌ಗಳ ಸಮಸ್ಯೆ, ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ತಕ್ಷಣಕ್ಕೆ ಗಾಯಳುಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ಪರದಾಡುವಂತಾಯಿತು. ಗಾಯ ಗೊಂಡು ಚಿಕಿತ್ಸೆಗೆ ಒಮ್ಮೆಗೆ ಬಂದ ಸುಮಾರು 50ಕ್ಕೂ ಹೆಚ್ಚು ಗಾಯಾಳುಗಳನ್ನು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಹೃದಯ ಹಿಂಡುವಂತಿತ್ತು.

ಗಾಯಾಳುಗಳ ಚೀರಾಟ, ನರ ಳಾಟದ ಆಕ್ರಂದನ ಮುಗಿಲು ಮುಟ್ಟುವಂತಿತ್ತು.ಗಾಯಾಳುಗಳಿಗೆ ಡಾ.ಎಚ್. ಹನಮಂತಪ್ಪ ನೇತೃತ್ವದಲ್ಲಿ ಸಿಬ್ಬಂದಿ ಚಿಕಿತ್ಸೆ ನೀಡಲು ಹರಸಾಹಸ ಪಡಬೇಕಾಯಿತು. ಆಸ್ಪತ್ರೆಯಲ್ಲಿದ್ದ ಸೌಲಭ್ಯದ ಕೊರತೆಯಿಂದ ಗಾಯಾಳುಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ತಲುಪಿದ ಹರಗ್ರಾಮೀಣ ಅಭಿವೃದ್ದಿ ಸೇವಾಸಂಸ್ಥೆ ಅಧ್ಯಕ್ಷ ಮಂಜುನಾಥ ಮಣ್ಣಣ್ಣನವರ, ಶಿವನಗೌಡ್ರ ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ, ಆಸ್ಪತ್ರೆಗಳ ದಾದಿಯರ ಜೊತೆ ಸೇರಿ ಚಿಕಿತ್ಸೆಗೆ ನೆರವಾದರು. ಗಾಯಾಳುಗಳನ್ನು ಸಂತೈಸುವ ಮೂಲಕ ಸಂಬಂಧಿ ಕರಿಗೆ ಸುದ್ದಿ ತಲುಪಿಸುವ ಕೆಲಸ ಮಾಡಿದರು.ಮತ್ತೊಂದೆಡೆ ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲು ವಾಹನದ ಕೊರತೆ ಇತ್ತು. ತಕ್ಷಣ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಟ್ಟರು.

ಪ್ರಯಾಣಿಕರನ್ನು ಮದುವೆ ಮನೆಗೆ ಆದಷ್ಟು ಬೇಗ ತಲುಪಿಸುವ ಧಾವಂತದಲ್ಲಿ ಚಾಲಕ ವೇಗವಾಗಿ ಲಾರಿ ಚಲಾಯಿಸಿದ್ದ. ಲಾರಿಯೊಂದನ್ನು ಹಿಂದಕ್ಕೆ ತಳ್ಳಿ ಮುಂದಕ್ಕೆ ಹೋಗುವ ತರಾತುರಿಯಲ್ಲಿದ್ದಾಗ ಕಾರೊಂದಕ್ಕೆ ದಾರಿ ಬಿಟ್ಟು ಕೊಡಲು ಹೋಗಿ ಚಾಲಕ ನಿಯಂತ್ರಣ ತಪ್ಪಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry