ಬುಧವಾರ, ಫೆಬ್ರವರಿ 24, 2021
23 °C

ಮದುವೆ; ತರುವ-ಕೊಡುವ ವ್ಯವಹಾರ

ಸುಮಂಗಲಾ Updated:

ಅಕ್ಷರ ಗಾತ್ರ : | |

ಮದುವೆ; ತರುವ-ಕೊಡುವ ವ್ಯವಹಾರ

ಮಲೆನಾಡಿನ ಕಡೆ ಸಾಮಾನ್ಯವಾಗಿ ಯಾರಿಗೋ ಮದುವೆಯಾದ ಅಥವಾ ಆಗುವ ಕುರಿತು, ಒಟ್ಟಾರೆಯಾಗಿ ಮದುವೆಯ ಬಗ್ಗೆ ವಿಷಯ ಬಂದಾಗ ‘ಅವನಿಗೆ ಎಲ್ಲಿಂದ ಹೆಣ್ಣು ತಂದಿದ್ದಾರೆ?’, ‘ಅವರ ಮಗಳನ್ನು ಎಲ್ಲಿಗೆ ಕೊಟ್ಟಿದ್ದಾರೆ?’ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ಗಂಡು ಹುಡುಗನಿಗೆ ಎಲ್ಲಿಂದಲೋ ಒಂದು ಹೆಣ್ಣನ್ನು ‘ತರುವುದು’ ಮತ್ತು ಹೆಣ್ಣುಮಗಳನ್ನು ಒಂದು ಗಂಡಿನ ಮನೆಗೆ ‘ಕೊಡುವುದು’ ಅತ್ಯಂತ ಸಾಮಾನ್ಯ ಸಂಗತಿ.ಹಾಗಂತ ಇಲ್ಲೇನೂ ಕ್ರಯವಿಕ್ರಯ ವ್ಯಾಪಾರ ನಡೆಯುತ್ತದೆ ಎಂದೇನಲ್ಲ. ಹೀಗೆ ‘ತರುವ’ ಮತ್ತು ‘ಕೊಡುವ’ ಎಲ್ಲ ಮದುವೆಗಳಲ್ಲಿಯೂ ವರದಕ್ಷಿಣೆ ಕೊಡುತ್ತಾರೆ ಎಂದೂ ಇಲ್ಲ ಅಥವಾ ತೆರ ಕೊಡುವ ಪದ್ಧತಿಯಂತೂ ಇಲ್ಲವೇ ಇಲ್ಲ (ನನಗೆ ತಿಳಿದ ಮಟ್ಟಿಗೆ). ಆದರೂ ಸೊಸೆಯನ್ನು ‘ತರುವುದು’ ಮತ್ತು ಮಗಳನ್ನು ‘ಕೊಡುವುದು’ ಮಾತುಕತೆಗಳಲ್ಲಿ ನಡೆದೇ ಇರುತ್ತದೆ.ನಾನು ಚಿಕ್ಕವಳಿದ್ದಾಗಿನಿಂದ ಇಂತಹ ಮಾತುಕತೆಯನ್ನು ಕೇಳಿರುವೆ. ಈಗ ಮಲೆನಾಡಿನ ಸರಿಸುಮಾರು ಎಲ್ಲ ಹಳ್ಳಿಗಳಲ್ಲಿಯೂ, ಒಂದು ಎರಡು ಮನೆಗಳಿರುವ ಹಳ್ಳಿಗಳಲ್ಲಿಯೂ ಟಿವಿ ಇದೆ, ಡಿಶ್ ಹಾಕಿಸಿಕೊಂಡಿದ್ದಾರೆ. ಎಲ್ಲರ ಕೈಗಳಲ್ಲಿ ಮೊಬೈಲ್ ರಿಂಗಣಿಸುತ್ತದೆ. ಮನೆಗಳಲ್ಲಿ ಸಾಕಷ್ಟು ಆಧುನಿಕ ಸಲಕರಣೆಗಳು ಪ್ರವೇಶಿಸಿವೆ. ಆದರೆ ಹೆಣ್ಣು ‘ತರುವ’ ಮತ್ತು ‘ಕೊಡುವ’ ಮನೋಗತಿಯಲ್ಲಿ ಬದಲಾವಣೆಯಾಗಿದೆ ಎಂದು ಅನ್ನಿಸುವುದಿಲ್ಲ. ‘ಲಿಂಗ ಸಂವೇದಿ’ ಪ್ರಜ್ಞೆ ಬೆಳೆಯಲು ಇನ್ನೂ ಸಾಕಷ್ಟು ದೂರ ಸಾಗಬೇಕಿದೆ. ವೈಯಕ್ತಿಕ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿಯೂ ‘ನಾನು ಅವಳನ್ನು ಮದುವೆಯಾಗುತ್ತಿರುವೆ’ ಎಂಬರ್ಥದ ಕರೆಯೋಲೆಯೇ ಹೆಚ್ಚು. ‘ಲಿಂಗ ಸಂವೇದಿ’ ಅರಿವನ್ನು ಜನಮಾನಸದಲ್ಲಿ ಹುಟ್ಟುಹಾಕಬೇಕಾದ ನಮ್ಮ ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಇದನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂದು ಗಂಭೀರ ಅಧ್ಯಯನ ಮಾಡಬೇಕಾದ ಅಗತ್ಯವಿದೆ.ಪ್ರತಿಷ್ಠಿತರ ಮಕ್ಕಳ ಮದುವೆಯಾದಾಗ ಮಾಧ್ಯಮಗಳು ವರ್ಣರಂಜಿತವಾಗಿ ವರದಿ ಮಾಡುತ್ತವೆ, ಇಲೆಕ್ಟ್ರಾನಿಕ್ ಮಾಧ್ಯಮಗಳು ಸಾಧ್ಯವಿದ್ದಷ್ಟು ಚ್ಯೂಯಿಂಗ್‌ಗಮ್‌ನಂತೆ ಅವನ್ನು ಬಳಸಿಕೊಳ್ಳುತ್ತವೆ. ಇರಲಿ, ಅದು ಇಂದಿನ ಮಾಧ್ಯಮದ ಅಗತ್ಯ, ಟಿಆರ್‌ಪಿ ಶ್ರೇಣಿಯಲ್ಲಿ ಉಳಿಯುವ ಅನಿವಾರ್ಯ, ನಿಜ. ಆದರೆ ಹೆಚ್ಚಿನ ವೇಳೆ ಇಂತಹ ವರದಿಗಳಲ್ಲಿ ಕೂಡ ‘ಲಿಂಗ ಸಂವೇದಿ’ ಪ್ರಜ್ಞೆಯ ಬದಲಿಗೆ ಅದೇ ರೂಢಮಾದರಿಯ ಪುರುಷಕೇಂದ್ರಿತ ಆಲೋಚನಾ ಧಾಟಿಯೇ ಎದ್ದು ಕಾಣುತ್ತದೆ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗುತ್ತದೆ.ಇತ್ತೀಚೆಗೆ ಜ್ಯೋತಿಗೆ ಬಾಳು ನೀಡಿದ ಯುವಕ ಎಂಬ ಶೀರ್ಷಿಕೆಯಡಿ ಒಂದು ವರದಿ ಇತ್ತು. ಮಾಗಡಿ ಬಳಿಯ ಅನಾಥಾಶ್ರಮವೊಂದರಲ್ಲಿ ಬೆಳೆದು, ಶಿಕ್ಷಣ ಪಡೆದು, ಕೆಲಸವೊಂದನ್ನು ಮಾಡಿಕೊಂಡಿದ್ದ ಜ್ಯೋತಿ ಎಂಬ ಯುವತಿಯನ್ನು ದಕ್ಷಿಣ ಕನ್ನಡದ ಕಡೆಯ ಹಳ್ಳಿಯ ಯುವ ರೈತನೊಬ್ಬ ಮದುವೆಯಾಗಿದ್ದನ್ನು ಪತ್ರಿಕೆಯೊಂದು ವರ್ಣಿಸಿದ ಶಿರ್ಷಿಕೆ ಇದು.ಈಗ ಹಳ್ಳಿಯಲ್ಲಿ ರೈತರಾಗಿಯೇ ಇರುವರಿಗೆ ಅವರು ಓದಿದವರಾಗಿದ್ದರೂ ಮದುವೆಯಾಗುವುದು ಕಷ್ಟವಾಗುತ್ತಿದೆ. ಹಲವು ವರ್ಷಗಳಿಂದ ಪ್ರಯತ್ನಿಸಿದರೂ, ಆ ಹುಡುಗನಿಗೆ ಅವನದೇ ಊರಿನ ಕಡೆಯ ಹುಡುಗಿ ಸಿಗದೆ ಮದುವೆಯಾಗುವುದು ಕಷ್ಟವಾಗಿತ್ತು. ಆಗ ಆತನಿಗೆ ಯಾರೋ ಹೇಳಿ, ಈ ಜ್ಯೋತಿಯನ್ನು ಪರಿಚಯಿಸಿ, ಮದುವೆ ಮಾಡಿದ್ದರು. ಹಾಗೆ ನೋಡಿದರೆ ಮದುವೆಯಾಗುವುದೇ ಕಷ್ಟವಾಗಿದ್ದ ಆತನಿಗೆ ಜ್ಯೋತಿ ಬಾಳು ನೀಡಿದಂತಾಗಿತ್ತೇ ವಿನಾ, ಆತ ಆ ಹುಡುಗಿಗೆ ಬಾಳು ನೀಡಿರಲಿಲ್ಲ.  ಪ್ರತಿಷ್ಠಿತರ ಮದುವೆಗಳನ್ನು ವರದಿ ಮಾಡುವಾಗಲೂ, ಮಾಧ್ಯಮಗಳಲ್ಲಿ ಹೆಚ್ಚಾಗಿ ಇಂಥ ಹುಡುಗ ಇಂಥವಳನ್ನು  ‘ವರಿಸಿದ’ ಅಥವಾ ‘ಕೈಹಿಡಿದ’ ಎಂಬರ್ಥದ ಶೀರ್ಷಿಕೆಗಳಡಿಯಲ್ಲಿ ವರದಿ ಇರುತ್ತದೆಯೇ ವಿನಾ ಮದುವೆ ಎಂಬುದು ಇಬ್ಬರು ಬಾಳಸಂಗಾತಿಯಾಗುವ ಒಂದು ಸಮಾರಂಭ/ಪ್ರಕ್ರಿಯೆ ಎಂದು ನೋಡುವುದಿಲ್ಲ.ಪ್ರತಿಷ್ಠಿತರ ಮಕ್ಕಳ ಮದುವೆ ವರದಿಗಳಲ್ಲಿಯೂ ಹೆಚ್ಚಿನ ಪ್ರಾಮುಖ್ಯ ಹುಡುಗನ ವಿದ್ಯಾರ್ಹತೆ, ಹುಡುಗ ಏನು ಮಾಡುತ್ತಿದ್ದಾನೆ ಎನ್ನುವುದಕ್ಕೆ ನೀಡುತ್ತಾರೆಯೇ ವಿನಾ ಹುಡುಗಿಯ ವಿದ್ಯಾರ್ಹತೆ, ಹುಡುಗಿಯ ಕೆಲಸದ ಕುರಿತು ಹೆಚ್ಚಿನ ವಿವರಗಳನ್ನು ನೀಡುವುದು ಕಡಿಮೆ. ಹುಡುಗನಷ್ಟೇ ಅಥವಾ ಹುಡುಗನಿಗಿಂತ ಒಂದು ಕೈ ಮೇಲೆ ಎಂಬಂತೆ ಹುಡುಗಿಯ ವಿದ್ಯಾರ್ಹತೆ, ವೃತ್ತಿನೈಪುಣ್ಯ, ಹುದ್ದೆ ಎಲ್ಲವೂ ಇದ್ದಾಗಲೂ ಅದನ್ನು ವರದಿಯಲ್ಲಿ ಕಡೆಗಣಿಸುವುದು ಕೂಡ ಸಾಮಾನ್ಯ.ಅಲ್ಲದೇ ರೋಚಕ, ಆಕರ್ಷಕ, ತಟ್ಟನೆ ಗಮನ ಸೆಳೆಯುವ ಹೆಡ್ಡಿಂಗ್ ನೀಡುವ ಅನಿವಾರ್ಯ ಬೇರೆ ಇರುತ್ತದೆ. ಹೀಗಾಗಿ ಇಲ್ಲಿ ಹುಡುಗ ಹುಡುಗಿಯನ್ನು ವರಿಸುವುದು, ಹುಡುಗಿಗೆ ತಾಳಿ ಗಂಟು ಬಿಗಿಯುವುದು, ಅನಾಥೆಗೆ ಕಂಕಣಭಾಗ್ಯ ನೀಡುವುದು, ಹುಡುಗಿಗೆ ಬಾಳು ನೀಡುವುದು ಹುಡುಗಿಯ ಬದುಕು ಬೆಳಕಾಗಿಸುವುದು ಇವೆಲ್ಲ ಸಾಮಾನ್ಯ.ಲಿಂಗಸಂವೇದಿಯಾಗಿರುವುದು ಎಂದರೆ ಮಹಿಳಾ ಪುರವಣಿ ಪ್ರಕಟಣೆ, ಮಹಿಳಾ ವಿಶೇಷ ನಿಯತಕಾಲಿಕ ಹೊರತರುವುದು, ಮಹಿಳೆಯರಿಗೆ ಪುಟಗಳನ್ನು ಮೀಸಲಿಡುವುದು, ಮಹಿಳೆಯರಿಗೆ ನಿರ್ದಿಷ್ಟ ಸಮಸ್ಯೆಗಳ ಕುರಿತು ಮಹಿಳೆಯರಿಂದ ಬರೆಸುವುದು ಮಾತ್ರವೇ? ಅಥವಾ ಪ್ರಕಟಿಸುವ ಸುದ್ದಿ ಆಯ್ಕೆ, ಆದ್ಯತೆ, ಶೀರ್ಷಿಕೆ, ವರದಿಗಾರಿಕೆ, ವಿಷಯ ನಿರೂಪಣೆ ಎಲ್ಲದರಲ್ಲಿ ಲಿಂಗಸಂವೇದಿ ಅರಿವಿನಿಂದ ಇರುವುದೇ? ಪ್ರಶ್ನೆಗೆ ಉತ್ತರಿಸುವವರು ಯಾರು?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.