ಮಂಗಳವಾರ, ಮೇ 24, 2022
30 °C

ಮದುವೆ ನೆಪ- ಯುವತಿಯರ ಸಾಗಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಜಿಲ್ಲೆಯ ಹಿಂದುಳಿದ ಗ್ರಾಮಗಳ ದಲಿತ ಹಾಗೂ ಹಿಂದುಳಿದ ಜನಾಂಗದ ಕುಟುಂಬಗಳಿಗೆ ವಂಚಿಸಿ ಬಡ ಯುವತಿಯರನ್ನು ಮದುವೆಯ ನೆಪದಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಸಾಗಿಸುವ ದಲ್ಲಾಳಿಗಳ ಜಾಲ ವ್ಯಾಪಕವಾಗಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕು ಕೋಲಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.ಈ ಬಗ್ಗೆ ಲಿಖಿತ ಹೇಳಿಕೆ ನೀಡಿರುವ ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ  ಲಕ್ಷ್ಮಣ ಆವುಂಟಿ,  ಈ ವಂಚನಾ ಜಾಲದಲ್ಲಿ ದಲ್ಲಾಳಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಉತ್ತರ ಭಾರತದದ ರಾಜ್ಯದ ಜನರೊಂದಿಗೆ ಈ ದಲ್ಲಾಳಿಗಳು ನೇರ ಸಂಪರ್ಕ ಹೊಂದಿದ್ದಾರೆ. ಅಲ್ಲಿನ ವ್ಯಕ್ತಿಗಳಿಂದ ಹಣ ಪಡೆಯುತ್ತಾರೆ. ಬಳಿಕ ಇಲ್ಲಿನ ಬಡವರ ಮನೆಗಳಿಗೆ ತೆರಳಿ `ನಿಮ್ಮ ಮಗಳು ಸುಖವಾಗಿರಲು ಉತ್ತರದ ರಾಜ್ಯಗಳಿಗೆ ಮದುವೆ ಮಾಡಿ ಬಿಡಿ. ವರನನ್ನು ನಾನು ತರುತ್ತೇನೆ. ಈಗಾಗಲೇ ಹಲವು ಮದುವೆ ಮಾಡಿದ್ದು, ಎಲ್ಲರೂ ಸುಖವಾಗಿದ್ದಾರೆ~ ಎಂದು ಪಾಲಕರ ಮನವೊಲಿಸುತ್ತಾರೆ. ಆ ಬಳಿಕ ಮದುವೆಯ ನೆಪದಲ್ಲಿ ಯುವತಿಯರನ್ನು ಸಾಗಿಸಲಾಗುತ್ತಿದೆ ಎಂದು ಆವಂಟಿ ದೂರಿದ್ದಾರೆ.ಪೋಲಕಪಳ್ಳಿ  ಮೂಲದ, ಪ್ರಸ್ತುತ ಪಟ್ಟಣದ ನಿವಾಸಿಯೊಬ್ಬರು ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಗುಜರಾತಿಗೆ ತೆರಳಿದ್ದರು. ಒಟ್ಟು ಐದು ಮಂದಿ ಹೋಗಿದ್ದು, ಆ ಪೈಕಿ  ಮೂವರು ವಾಪಸ್ಸಾಗಿದ್ದಾರೆ. ಮದುವೆಯ ಹುಡುಗಿ ಹಾಗೂ ಅಣ್ಣನನ್ನು ವರನ ಕಡೆಯವರು ಎನ್ನಲಾದ ಗುಜರಾತಿನ ಮಂದಿ ಹಣದ ಕಾರಣಕ್ಕಾಗಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಇಬ್ಬರೂ ಜೀವ ಭಯದಲ್ಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದರಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅಮಾಯಕ ಬಡ ಯುವತಿಯರನ್ನು ಮಾರಾಟ ಜಾಲದಿಂದ ರಕ್ಷಿಸಬೇಕು.ತಾಲ್ಲೂಕಿನಲ್ಲಿ ನಡೆದ ಇಂತಹ ಪ್ರಕರಣಗಳ ಸಮಗ್ರ ತನಿಖೆ ನಡೆಸಬೇಕು ಎಂದು ಪೊಲೀಸ್ ಹಾಗೂ ಸರ್ಕಾರವನ್ನು ಲಕ್ಷ್ಮಣ ಆವುಂಟಿ ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.