ಶುಕ್ರವಾರ, ಜೂನ್ 18, 2021
24 °C

ಮದುವೆ ಮುಂದೂಡುತ್ತಿರುವ ಮೆಟ್ರೊ ಲಲನೆಯರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲೆಲ್ಲ ಹದಿಹರೆಯ ದಾಟುವ ಮುನ್ನ ಗಂಡನ ಮನೆಯ ಹೊಸಿಲಿಗೆ ನೊಸಲು ಮುಟ್ಟಿಸುತ್ತಿದ್ದರು. ನಿಧಾನವಾಗಿ ಕಾಲ ಬದಲಾಯಿತು. ಕೊನೆಯ ಪಕ್ಷ ಪದವಿಯಾದರೂ ಮುಗಿಯಲಿ ಎಂದು.. ಆಗ 18ಕ್ಕೆ ಮದುವೆಯ ವಯಸ್ಸು ಎಂದಾಗಿದ್ದು, 20ಕ್ಕೆ ಮುಂದೂಡಲಾಗಿತ್ತು. 80ರ ದಶಕದಲ್ಲಿ 20ರ ನಂತರದ ಮದುವೆಯನ್ನೇ `ತಡ~ವಾದ ಮದುವೆಯೆಂದು ಕರೆಯುತ್ತಿದ್ದರು.ಆದರೆ ಇನ್ನೊಂದು ದಶಕದ ಅವಧಿಯಲ್ಲಿ ಓದು, ಮುಗಿಯಿತು, ಕೆಲಸ ಸಿಗಲಿ ಎನ್ನುವಂತಾಯಿತು. ಆಗ ಮದುವೆಯ ವಯಸ್ಸು 22ರಿಂದ 24ಕ್ಕೆ ಮುಂದೂಡಲಾಯಿತು.

ಈಗ ಮದುವೆಯ ಸರಾಸರಿ ವಯಸ್ಸು 28ಕ್ಕೆ ಬಂದು ನಿಂತಿದೆ.

 

ಕಳೆದ ವರ್ಷಕ್ಕೆ ಹೋಲಿಸಿದರೆ 2 ವರ್ಷ ಮುಂದೂಡಿದಂತಾಗಿದೆ. ಮೊದಲು 26 ವರ್ಷಕ್ಕೆ ಮದುವೆಯಾಗಲು ಬಯಸುತ್ತಿದ್ದ ಹುಡುಗಿಯರೀಗ ಓದು, ಕೆಲಸ, ಕೆರಿಯರ್ ಎಂದು ಇನ್ನಷ್ಟು ಮುಂದೂಡಿದ್ದಾರೆ.ಜೀವನ್‌ಸಾಥಿ.ಕಾಮ್ ಕೈಗೊಂಡಿದ್ದ ಸಮೀಕ್ಷೆಯು ಈ ಅಂಕಿಅಂಶವನ್ನು ಹೊರಹಾಕಿದೆ.

2008ರಲ್ಲಿ ಮದುವೆಯ ಸರಾಸರಿ ವಯಸ್ಸು 26 ಎಂದು ತೀರ್ಮಾನಗೊಂಡ ಫಲಿತಾಂಶ ದೊರೆತಿತ್ತು. ಬಿಹಾರ್, ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಈಗಲೂ ಮದುವೆಯ ವಯಸ್ಸು 26 ಎಂದೇ ನಿರ್ಣಯಿಸಲಾಗಿದೆ.ದೆಹಲಿ, ಚೆನ್ನೈಗಳಲ್ಲಿ 27 ವರ್ಷ ಎಂದು ಅಭಿಪ್ರಾಯ ಪಡಲಾಗಿದೆ. ಬೆಂಗಳೂರು ಮತ್ತು ಮುಂಬೈನ ಯುವತಿಯರು ಮಾತ್ರ ಮದುವೆಗದು ಮಾಗಿದ ಕಾಲವಲ್ಲ ಎಂದು ಹೇಳಿದ್ದಷ್ಟೇ ಅಲ್ಲ, 28 ವರ್ಷಕ್ಕೆ ಮದುವೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಆಸಕ್ತಿಕರ ಅಂಶವೆಂದರೆ ಪುರುಷರ ಮದುವೆಯ ವಯಸ್ಸು ಮಾತ್ರ 30 ವರ್ಷದಿಂದ ಇಳಿಕೆಯಾಗಿ 29ಕ್ಕೆ ಬಂದು ನಿಂತಿದೆ.ಭಾರತದ ನಗರದಲ್ಲಿರುವ ಮಹಿಳೆಯರು ಈಗ ತಮ್ಮ ಭವಿಷ್ಯಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಉದ್ಯೋಗಸ್ಥರಾಗಿರುವುದರಿಂದ ಪಾಲಕರೂ ಮದುವೆಗೆ ಒತ್ತಾಯ ಮಾಡುವುದಾಗಲೀ, ಬಲವಂತ ಪಡಿಸುವುದಾಗಲೀ ಕಡಿಮೆಯಾಗಿದೆ.ತಮ್ಮ ಕ್ಷೇತ್ರದಲ್ಲಿ ಒಂದು ಹಂತಕ್ಕೆ ಬಂದು ತಲುಪಿದ ನಂತರವೇ ಮದುವೆಯತ್ತ ಒಲವು ತೋರುತ್ತಿದ್ದಾರೆ ಎಂದು ಜೀವನ್‌ಸಾಥಿ.ಕಾಮ್‌ನ ಮುಖ್ಯಸ್ಥ ರೋಹಿತ್ ಮಂಘಾನಿ ಅಭಿಪ್ರಾಯ ಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.