ಮದುವೆ ವಯಸ್ಸು ಇಳಿಕೆ: ವಿರೋಧ

7

ಮದುವೆ ವಯಸ್ಸು ಇಳಿಕೆ: ವಿರೋಧ

Published:
Updated:

ತಿರುವನಂತಪುರ (ಪಿಟಿಐ): ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯರ ಮದುವೆ ವಯಸ್ಸು 18ಕ್ಕಿಂತ ಕಡಿಮೆ ಮಾಡಬೇಕೆಂದು  ಒತ್ತಾಯಿಸಿರುವ ಮುಸ್ಲಿಂ ಸಂಘಟನೆಗಳಿಗೆ ಕೇರಳದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಧಾರ್ಮಿಕ ಸಂಘಟನೆಗಳ  ಪ್ರಮುಖರು ಮತ್ತು ಮಹಿಳಾ ಸಂಘಟನೆಗಳು ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.‘ಯುವತಿಯರ ಮದುವೆ ವಯಸ್ಸು 18ಕ್ಕಿಂತ ಕಡಿಮೆ ಗೊಳಿಸುವುದರಿಂದ ಮಹಿಳೆಯರ ಹಿತಾಸಕ್ತಿಗೆ ಧಕ್ಕೆಯುಂಟಾ ಗುತ್ತದೆ.  ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿರುವ ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಜ್ಞಾಪೂರ್ವಕವಾಗಿ ಕೆಲ ಸಂಘಟನೆಗಳು ನ್ಯಾಯಾಲಯಕ್ಕೆ ಹೋಗಿವೆ. ಇದು ಹಿಮ್ಮುಖವಾದ ಹೆಜ್ಜೆ’ ಎಂದು ಅವುಗಳು ಆರೋಪ ಮಾಡಿವೆ.  ಕಳೆದ ವಾರ ಕೊಯಿಕ್ಕೋಡ್‌ನಲ್ಲಿ ಸಭೆ ಸೇರಿದ್ದ ಒಂಬತ್ತು ಮುಸ್ಲಿಂ ಸಂಘಟನೆಗಳು, ‘ಸಮುದಾಯಕ್ಕೆ ಸೇರಿದ ಯುವತಿ ಯರ ವಿವಾಹದ ಕನಿಷ್ಠ ವಯಸ್ಸಿನ ಮಿತಿ ನಿಗದಿ­ಗೊಳಿಸುವುದು ಮುಸ್ಲಿಂ  ವೈಯಕ್ತಿಕ ಕಾನೂನಿಗೆ ವಿರುದ್ಧವಾಗುತ್ತದೆ. ಇದರಿಂದ ವಿನಾಯ್ತಿ ನೀಡಬೇಕು’ ಎಂದು ಕೋರಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದವು.  ಯುಎಇ ಪ್ರಜೆಯೊಬ್ಬ 17 ವರ್ಷದ ಬಾಲಕಿಯೊಂದಿಗೆ ವಿವಾಹವಾಗಿ ಬಳಿಕ ವಿಚ್ಛೇದನ ನೀಡಿದ ನಂತರ ಮದುವೆ ವಯಸ್ಸಿಗೆ ಸಂಬಂಧಿಸಿದಂತೆ ಮುಸ್ಲಿಂ ಸಂಘಟನೆಗಳು ಈ ತೀರ್ಮಾನಕ್ಕೆ ಬಂದಿವೆ.16 ವರ್ಷ ಮೇಲ್ಪಟ್ಟ ಮುಸ್ಲಿಂ ಯುವತಿಯರ ವಿವಾಹವನ್ನು ಮಾನ್ಯ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಸುತ್ತೋಲೆ ವಾಪಸ್‌ ಪಡೆಯಿತು. ನಿರ್ದಿಷ್ಟ ಸಮುದಾಯವನ್ನು ಓಲೈಸುವ ಉದ್ದೇಶದಿಂದಲೇ ಸರ್ಕಾರ ಈ ಆದೇಶ ಹೊರಡಿಸಿತ್ತು ಎಂದು ಆರೋಪಿಸಲಾಗಿದೆ.

ಈ ಘಟನೆ ಬೆನ್ನಲ್ಲೇ ಇಂತಹದ್ದೊಂದು ಬೆಳವಣಿಗೆ ನಡೆದಿದೆ.   ‘ಮಹಿಳೆಯರ ಸಾಮಾಜಿಕ, ಮಾನಸಿಕ ಮತ್ತು ದೈಹಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಯುವತಿಯ ಮದುವೆ ವಯಸ್ಸು ಇಳಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕಿ ಶನಿಮೊಲ್‌ ಉಸ್ಮಾನ್‌ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry