ಮದ್ದು ನೀಡದ ಹಾಸ್ಯ

7

ಮದ್ದು ನೀಡದ ಹಾಸ್ಯ

Published:
Updated:
ಮದ್ದು ನೀಡದ ಹಾಸ್ಯ

ಚಿತ್ರ: ನಮ್ಮಣ್ಣ ಡಾನ್

ಚಿತ್ರದ ನಾಯಕ ಅರ್ಜುನ್ (ರಮೇಶ್ ಅರವಿಂದ್) ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯ. ಆತನ ಗೆಳೆಯ (ಅಚ್ಯುತ್‌ಕುಮಾರ್) ಅರ್ಜುನ್ ಬೆಳವಣಿಗೆ ಸಹಿಸದವ. ಬಡ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಮಾಧ್ಯಮಗಳ ಎದುರು ಘೋಷಿಸಿತ್ತಾನೆ. ಮರುದಿನ ಹೃದ್ರೋಗಿ ಮಕ್ಕಳ ದಂಡೇ ಆಸ್ಪತ್ರೆ ಮುಂದೆ ಬರುತ್ತದೆ. ಆಸ್ಪತ್ರೆ ಮಾಲೀಕ ಉಚಿತ ಚಿಕಿತ್ಸೆಗೆ ಒಪ್ಪುವುದಿಲ್ಲ. ಅದೇ ವೇಳೆಗೆ ಅರ್ಜುನ್‌ನ ಪ್ರೇಯಸಿ (ಮೋನಾ ಪರ್ವೇಶ್) ಕುಖ್ಯಾತ ಡಾನ್ ಒಬ್ಬನಿಗೆ ಅಪಘಾತ ಮಾಡಿ ಬಿಡುತ್ತಾಳೆ. ಆಸ್ಪತ್ರೆಗೆ ಸೇರುವ ವೇಳೆಗೆ ಡಾನ್ ಸಾಯುತ್ತಾನೆ.  ಡಾನ್ ಬದುಕಿದ್ದಾನೆ ಎಂದು ಘೋಷಿಸಿದರೆ ಬಡಮಕ್ಕಳ ಶಸ್ತ್ರಚಿಕಿತ್ಸೆಗೆ ಅಪಾರ ಹಣ ಬರುತ್ತದೆ ಎಂದು ಗೆಳೆಯ ಉಪಾಯ ಹುಡುಕುತ್ತಾನೆ. ಅಲ್ಲಿಂದ ನಾಟಕ ಆರಂಭ.ಪ್ರಯೋಗದ ದೃಷ್ಟಿಯಿಂದ ಕೆಲವು ಗಮನಾರ್ಹ ಅಂಶಗಳು ಚಿತ್ರದಲ್ಲಿವೆ. ಮಕ್ಕಳನ್ನು ಹೈಲೈಟ್ ಮಾಡಿರುವುದು, ಗಂಭೀರ ವಿಷಯವನ್ನು ಹಾಸ್ಯದ ಚೌಕಟ್ಟಿಗೆ ತರಲು ಯತ್ನಿಸಿರುವುದು, ಹೊಸಬರಿಗೆ ಪ್ರಾಮುಖ್ಯತೆ ನೀಡಿರುವುದು. ಡಾನ್ ಸೋದರನಾಗಿ ರಾಜೇಂದ್ರ ಕಾರಂತರ ಅಭಿನಯ ಉತ್ತಮವಾಗಿದೆ. ಚಿತ್ರದಲ್ಲಿ ಅವರದು ದ್ವಿಪಾತ್ರ. ಡಾನ್‌ನ ಅಣ್ಣ. ಮತ್ತೊಂದೆಡೆ ಕ್ರಿಕೆಟ್ ಹುಚ್ಚಿನಿಂದ ಸರ್ವಸ್ವವನ್ನೂ ಕಳೆದುಕೊಂಡ ವ್ಯಕ್ತಿ. ಎರಡೂ ಪಾತ್ರಗಳಿಗೆ ಅವರು ನ್ಯಾಯ ಒದಗಿಸಿದ್ದಾರೆ.ಮೋನಾ ಪರ್ವೇಶ್ ತುಂಟಾಟಗಳಿಂದ ಗಮನ ಸೆಳೆದರೆ, ಚೆಲುವೆ ನರ್ಸ್ ಪಾತ್ರದಲ್ಲಿ ಸನಾತನಿ ಕಂಗೊಳಿಸಿದ್ದಾರೆ.  ಸುನೈನಾ ಅವರ ಆಕೃತಿಯೇ ಹಾಸ್ಯದ ಹೊನಲು ಉಕ್ಕಿಸುತ್ತದೆ. ಡಾನ್‌ಗಳೂ ಮನುಷ್ಯರು, ಮಾನವೀಯತೆ  ಇರುವವರು ಎಂದು ಬಿಂಬಿಸುವಲ್ಲಿ ನಿರ್ದೇಶಕ ರಮೇಶ್ ಯಶಸ್ವಿಯಾಗಿದ್ದಾರೆ. ಮೊದಲ ಬಾರಿಗೆ ಸಂಗೀತ ನೀಡಿರುವ ಮ್ಯಾಥ್ಯೂಸ್ ಮನು ಬೆಳೆಯಬಹುದಾದ ಪ್ರತಿಭೆ. ನಿರೀಕ್ಷೆಗೂ ಮೀರಿ ಅವರು ಉತ್ತಮ ಸಂಗೀತ ನೀಡಿದ್ದಾರೆ. ಆದರೆ ಪ್ರೇಕ್ಷಕರ ನಾಲಿಗೆ ಮೇಲೆ ಹರಿದಾಡುವಂತಹ ಗುಣ ಹಾಡುಗಳ ಸಾಹಿತ್ಯಕ್ಕೆ ಇಲ್ಲ.   ವೈದ್ಯ ಪೇಚಿಗೆ ಸಿಗುವ ಅನೇಕ ಸಂದರ್ಭಗಳು ಎದುರಾದರೂ ರಮೇಶ್ ಅಲ್ಲೆಲ್ಲೂ ಸರಿಯಾಗಿ ಹಾಸ್ಯದ `ಮದ್ದು~ ಅರೆದಿಲ್ಲ. ಕೆಲವು ವರ್ಷಗಳ ಹಿಂದೆ ರಮೇಶ್ ವೈದ್ಯರಾಗಿ ಅಭಿನಯಿಸಿದ್ದ ಚಿತ್ರ `ಸತ್ಯವಾನ್ ಸಾವಿತ್ರಿ~ ಚಿತ್ರದ ಕಚಗುಳಿ ಇಡುವಂತಹ ಹಾಸ್ಯ ನಿರೀಕ್ಷಿಸಿ ಬರುವ ಪ್ರೇಕ್ಷಕರಿಗೆ ಇಲ್ಲಿ ನಿರಾಶೆಯಾಗುತ್ತದೆ. ರಾಜು ತಾಳಿಕೋಟೆ ಅಭಿನಯದಲ್ಲಿ ವಿಶೇಷವೇನೂ ಇಲ್ಲ. ಎಂ.ಎಸ್.ಉಮೇಶ್ ಅಭಿನಯಕ್ಕೆ ನಿರ್ದೇಶಕರು ಹೆಚ್ಚಿನ ಒತ್ತು ನೀಡಿಲ್ಲ.ಸಂಭಾಷಣೆ (ಡಿ.ಬಿ.ಚಂದ್ರಶೇಖರ್) ನಗು ಉಕ್ಕಿಸುತ್ತದಾದರೂ ಹೊಸತನವೇನೂ ಇಲ್ಲ. ಹಲವು ಚಿತ್ರಗಳಲ್ಲಿ ಬಂದು ಹೋಗಿರುವ ಹಾಸ್ಯಮಿಶ್ರಿತ ವೈದ್ಯಲೋಕದ ಕತೆಗಳಿಗಿಂತ ವಿಶೇಷವಾಗಿಲ್ಲ. ಚಿತ್ರದ ಪ್ರಚಾರಕ್ಕೆ ನೀಡಿದ ಗಮನವನ್ನು ರಮೇಶ್ ಕತೆಯ ಒಳಗೆ ತಂದಿದ್ದರೆ `ನಮ್ಮಣ್ಣ ಡಾನ್~ ರಾರಾಜಿಸುತ್ತಿದ್ದ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry