ಸೋಮವಾರ, ಡಿಸೆಂಬರ್ 16, 2019
17 °C
ವಿಜೇಂದರ್ ಪ್ರಕರಣಕ್ಕೆ ಹೊಸ ತಿರುವು

ಮದ್ದು ಸೇವನೆ ಪರೀಕ್ಷೆ ನಡೆಸಲು `ನಾಡಾ' ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಉದ್ದೀಪನ ಮದ್ದು ಸೇವನೆ ಮಾಡಿದ ಆರೋಪ ಎದುರಿಸುತ್ತಿರುವ ಒಲಿಂಪಿಯನ್ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಪರೀಕ್ಷೆಗೆ ಒಳಪಡಿಸುವುದಿಲ್ಲ ಎಂದು ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಸ್ಪಷ್ಟವಾಗಿ ಹೇಳಿದೆ.`ವಿಜೇಂದರ್ ಮದ್ದು ಸೇವನೆ ಮಾಡಿದ್ದು ನಿಜ' ಎಂದು ಪೊಲೀಸರು ಮೂರು ದಿನಗಳ ಹಿಂದೆ ಬಹಿರಂಗಗೊಳಿಸಿದ್ದ ಕಾರಣ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯ ವಿಜೇಂದರ್ ಅವರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಸೋಮವಾರ ನಾಡಾಕ್ಕೆ ಸೂಚನೆ ನೀಡಿತ್ತು. ವಿಜೇಂದರ್ 2012ರ ಡಿಸೆಂಬರ್‌ನಿಂದ 2013ರ ಫೆಬ್ರುವರಿ ಅವಧಿಯಲ್ಲಿ ಮದ್ದು ಸೇವನೆ ಮಾಡಿದ್ದರು ಎಂದೂ ಪೊಲೀಸರು ಹೇಳಿದ್ದರು.`ವಿಶ್ವ ಉದ್ದೀಪನಾ ಮದ್ದು ತಡೆ ಘಟಕ (ವಾಡಾ) ನಿಯಮದಂತೆ ನಾಡಾ ಕಾರ್ಯನಿರ್ವಹಿಸಬೇಕಾಗುತ್ತದೆ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವೇಳೆ ಮಾತ್ರ ಕ್ರೀಡಾಪಟುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸ್ಪರ್ಧೆಯ ಹೊರಗಿದ್ದರೆ ಪರೀಕ್ಷಿಸುವ ಅಧಿಕಾರ ನಮಗಿಲ್ಲ' ಎಂದು ನಾಡಾದ ಪ್ರಧಾನ ನಿರ್ದೇಶಕ ಮುಕುಲ್ ಚಟರ್ಜಿ ತಿಳಿಸಿದ್ದಾರೆ.ವಿಜೇಂದರ್ ಮದ್ದು ಸೇವನೆ ವಿವಾದದಲ್ಲಿ ಸಿಕ್ಕಿ ಬಿದ್ದಾಗ ಪೊಲೀಸರು ರಕ್ತ ಹಾಗೂ ಕೂದಲಿನ ಮಾದರಿ ನೀಡುವಂತೆ ತಿಳಿಸಿದ್ದರು. ಆದರೆ, ಬಾಕ್ಸರ್ ಪೊಲೀಸರ ಮನವಿಯನ್ನು ತಿರಸ್ಕರಿಸಿದ್ದರು.ಹೊಸ ತಿರುವು: `ವಿಜೇಂದರ್ ಅವರನ್ನು ಈ ಪ್ರಕರಣದಲ್ಲಿ ಸಿಕ್ಕಿ ಬೀಳಿಸಲು ಪೊಲೀಸರೇ ಕುತಂತ್ರ ಮಾಡಿದ್ದಾರೆ' ಎಂದು ಇನ್ನೊಬ್ಬ ಬಾಕ್ಸರ್ ಹಾಗೂ ವಿಜೇಂದರ್ ಗೆಳೆಯ ದಿನೇಶ್ ಕುಮಾರ್ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. ಇದರಿಂದ ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ.

ಪ್ರತಿಕ್ರಿಯಿಸಿ (+)