ಮಂಗಳವಾರ, ನವೆಂಬರ್ 12, 2019
27 °C

ಮದ್ದೂರಮ್ಮ ಜಾತ್ರೆಗೆ ಭಕ್ತರ ದಂಡು

Published:
Updated:
ಮದ್ದೂರಮ್ಮ ಜಾತ್ರೆಗೆ ಭಕ್ತರ ದಂಡು

ವೈಟ್‌ಫೀಲ್ಡ್/ ಬೊಮ್ಮನಹಳ್ಳಿ: ಹುಸ್ಕೂರಿನ ಪ್ರಸಿದ್ಧ ಮದ್ದೂರಮ್ಮ ದೇವಿಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸುತ್ತಮುತ್ತಲ ಏಳು ಗ್ರಾಮಗಳಿಂದ ರಥ (ಕುರ್ಜು)ಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಿ ಜೋಡಿ ಎತ್ತುಗಳನ್ನು ಕಟ್ಟಿ ಕೆರೆ, ಹೊಲ, ಗದ್ದೆ, ನೀಲಗಿರಿ ತೋಪುಗಳ ಮದ್ಯೆ ದಾರಿ ಮಾಡಿಕೊಂಡು ಎಳೆದು ತರುವುದು ಇಲ್ಲಿನ ವಿಶೇಷವಾಗಿದೆ.ಬೇಸಿಗೆಯ ಬಿರುಬಿಸಿಲನ್ನು ಲೆಕ್ಕಿಸದೆ ಸಹಸ್ರಾರು ಸಂಖ್ಯೆಯ ಭಕ್ತರು ರಥೋತ್ಸವನದಲ್ಲಿ ಪಾಲ್ಗೊಂಡಿದ್ದರು. ಭಕ್ತರು ಏರ್ಪಡಿಸಿದ್ದ ಅರವಂಟಿಗೆಗಳು ಭಕ್ತಾದಿಗಳ ಬಿಸಿಲಿನ ದಣಿವನ್ನು ನೀಗಿಸಿದವು.ಹೀಲಲಿಗೆ, ಹಾರೋಹಳ್ಳಿ, ಸೂಲುಕುಂಟೆ, ಕೊಡತಿ, ರಾಯಸಂದ್ರ, ಸಿಂಗೇನ ಅಗ್ರಹಾರ, ಹಾಗೂ ದೊಡ್ಡನಾಗಮಂಗಲ ಗ್ರಾಮಸ್ಥರು ಕುರ್ಜುಗಳನ್ನು ನಿರ್ಮಿಸಿದ್ದರು. ಪ್ರತಿ ಗ್ರಾಮದ ನೂರಾರು ದನಗಳು ಸುಮಾರು 7 ಕಿ.ಮೀ.ವರೆಗೆ ಈ ಕುರ್ಜುಗಳನ್ನು ಎಳೆದವು.ಮಾರ್ಗದಲ್ಲಿ ಬರುವ ಗ್ರಾಮಗಳ ಸಾವಿರಾರು ಭಕ್ತರು ಕುರ್ಜುಗಳಿಗೆ ಪೂಜೆ ಸಲ್ಲಿಸಿದರು. ಇದಲ್ಲದೆ ಆನೇಕಲ್ ತಾಲ್ಲೂಕಿನ ಹಾರೋಹಳ್ಳಿ, ಚಿಕ್ಕನಾಗಮಂಗಲ, ದೊಡ್ಡನಾಗಮಂಗಲ, ರಾಮಸಾಗರ, ಚಿಂತಲಮಡಿವಾಳ, ರಾಯಸಂದ್ರ ಮುಂತಾದ ಗ್ರಾಮಗಳಿಂದಲೂ ಕುರ್ಜುಗಳ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ನಗರದ ಅನೇಕ ಬಡಾವಣೆಗಳು, ಆನೇಕಲ್ ಹಾಗೂ ತಮಿಳುನಾಡಿನ ಬಹುತೇಕ ಕಡೆಗಳಿಂದ ಸಾವಿರಾರು ಭಕ್ತರು ಮದ್ದೂರಮ್ಮ ದೇವಿ ಜಾತ್ರೆಗೆ ಆಗಮಿಸಿದ್ದರು ಕುರ್ಜು ಮೆರವಣಿಗೆಯಿಂದ ಚಂದಾಪುರ- ದೊಮ್ಮಸಂದ್ರ ಮಾರ್ಗದ ವಾಹನ ಸಂಚಾರದಲ್ಲಿ ಕೆಲ ಕಾಲ ಅಡಚಣೆ ಆಗಿತ್ತು. ಕೆಲ ವಾಹನಗಳು ಕೊಮ್ಮಸಂಧ್ರ- ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಸಂಚರಿಸಿದವು.

ಪ್ರತಿಕ್ರಿಯಿಸಿ (+)