ಮಂಗಳವಾರ, ನವೆಂಬರ್ 19, 2019
29 °C

ಮದ್ದೂರಿನಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ?

Published:
Updated:

ಮಂಡ್ಯ:  `ಶತ್ರುವಿನ ಶತ್ರು ಮಿತ್ರ' ಎಂಬ ನೀತಿ ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲು ಮದ್ದೂರು ವಿಧಾನಸಭೆ ಕ್ಷೇತ್ರದಲ್ಲಿ ಮುಂದಾಗಿದೆ.ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಾಜಿ ಸಂಸದ ಜಿ. ಮಾದೇಗೌಡರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಲ್ಲದೇ, ಅವರ ಗರಡಿಯಲ್ಲಿಯೇ ರಾಜಕೀಯ ಆರಂಭಿಸಿದ ಡಿ.ಸಿ. ತಮ್ಮಣ್ಣ ಅವರಿಗೆ ಬಿಸಿ ಮುಟ್ಟಿಸಲು ಇಬ್ಬರೂ ನಾಯಕರು ಮುಂದಾಗಿದ್ದಾರೆ.ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ, ಅಲ್ಲಿಂದ ಜೆಡಿಎಸ್‌ಗೆ ಬಂದಿರುವ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರು ಮದ್ದೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ತಮಗೇ ತಿರುಗೇಟು ನೀಡುತ್ತಿರುವ ತಮ್ಮಣ್ಣ ಅವರ ಮೇಲಿರುವ ಸೇಡು ತೀರಿಸಿಕೊಳ್ಳಲು ಕಲ್ಪನಾ ಸಿದ್ದರಾಜು ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸುವ ಚಿಂತನೆ ನಡೆದಿದೆ.ತಮ್ಮಣ್ಣ ಅವರನ್ನು ಸೋಲಿಸುವ ಮೂಲಕ ಅವರ ಬೀಗರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮದ್ದೂರಿನಲ್ಲಿ ನಾವೇ `ಗೌಡರು' ಎಂದು ಸಾರುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಸಿದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್‌ನಿಂದ ಹೊರ ಬಂದಿರುವ ಕಲ್ಪನಾ ಸಿದ್ದರಾಜು ಅವರನ್ನು ಕಣಕ್ಕೆ ಇಳಿಸಲು ಎಸ್.ಎಂ.ಕೃಷ್ಣ ಅವರು ಯೋಜಿಸಿದ್ದಾರೆ. ಕಿರುಗಾವಲು ವಿಧಾನಸಭೆ ಕ್ಷೇತ್ರದಿಂದ 6 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಜಿ.ಮಾದೇಗೌಡರು, 1999ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಸಿ. ತಮ್ಮಣ್ಣ ಅವರ ಬೆಂಬಲಕ್ಕೆ ನಿಂತು ಗೆಲ್ಲಿಸಿದರು. 2004ರ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ  ಮದ್ದೂರು ಕ್ಷೇತ್ರದಲ್ಲಿ ತಮ್ಮಣ್ಣ ಅವರನ್ನು ಕಣಕ್ಕೆ ಇಳಿಸಿ, ತಾವು ಬೆಂಗಳೂರಿನಿಂದ ಸ್ಪರ್ಧಿಸಿದರು.

ಜಿ. ಮಾದೇಗೌಡ ಅವರ ಪುತ್ರ ಮಧು ಮಾದೇಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಟಿಕೆಟ್ ದೊರೆಯದಿದ್ದರೆ, ಅವರೂ ಕಲ್ಪನಾ ಅವರನ್ನು ಬೆಂಬಲಿಸುವ ಸಾಧ್ಯತೆಗಳು ಹೆಚ್ಚಿವೆ.ರೆಬೆಲ್‌ಗೆ ರೆಬೆಲ್: ರೆಬೆಲ್‌ಸ್ಟಾರ್ ಅಂಬರೀಷ್ ಅವರು ಭಿನ್ನಮತದ ಕಾಟವನ್ನು ತಪ್ಪಿಸಿಕೊಳ್ಳಲು ಶ್ರೀರಂಗಪಟ್ಟಣ ಕ್ಷೇತ್ರ ಬಿಟ್ಟು, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅದಕ್ಕೆ ಮಂಡ್ಯದಲ್ಲಿಯೂ ವಿರೋಧ ವ್ಯಕ್ತವಾಗುತ್ತಿದೆ.ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಅವರಿಗೆ ಮಂಡ್ಯದಿಂದ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ನಗರಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಬೇಕಾಗುತ್ತದೆ ಎಂದು 10ಕ್ಕೂ ಹೆಚ್ಚು ನಗರಸಭೆ ಸದಸ್ಯರು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರತಿಕ್ರಿಯಿಸಿ (+)