ಮದ್ದೂರು ತಾ.ಪಂ.ಗೆ 1 ಕೋಟಿ ಅನುದಾನ ಬಿಡುಗಡೆ

ಭಾನುವಾರ, ಜೂಲೈ 21, 2019
27 °C

ಮದ್ದೂರು ತಾ.ಪಂ.ಗೆ 1 ಕೋಟಿ ಅನುದಾನ ಬಿಡುಗಡೆ

Published:
Updated:

ಮದ್ದೂರು: 2012-13ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯಿತಿಗೆ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದ್ರಾಣಿ ಗುರುವಾರ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಅನುದಾನದಲ್ಲಿ ಹೊಲಿಗೆ ಯಂತ್ರಗಳ ಖರೀದಿಗೆ ರೂ.11.70ಲಕ್ಷ , ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ನೀಡುವ ಕೃಷಿ ಯಂತ್ರೋಪಕರಣಗಳ ಖರೀದಿಗೆ ರೂ.7ಲಕ್ಷ ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ತೆಂಗಿನ ಸಸಿ ವಿತರಣೆಗೆ ರೂ.2ಲಕ್ಷ ಮತ್ತು ಉಳಿದ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲಾಗಿದೆ ಎಂದು ಸಭೆಗೆ ವಿವರಿಸಿದರು.ಉಪಾಧ್ಯಕ್ಷ ರಾಮಚಂದ್ರಯ್ಯ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಔಷಧಿಗಳನ್ನು ವಿತರಿಸದೇ ವೈದ್ಯರು ವಂಚಿಸುತ್ತಿದ್ದಾರೆ ಎಂಬ ದೂರು ಬಂದಿವೆ. ಖಾಸಗಿ ಅಂಗಡಿಗಳಲ್ಲಿ ಔಷಧಿ ಖರೀದಿಸಲು ರೋಗಿಗಳಿಗೆ ನಿರ್ದೇಶಿಸುವ ವೈದ್ಯರ ವಿರುದ್ಧ ಕ್ರಮ ಜರುಗಿಸಿ ಎಂದರು.ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿನ ವ್ಯತ್ಯಯ, ವಿದ್ಯುತ್ ಸಮಸ್ಯೆ, ಅಂಗನವಾಡಿ ಕಟ್ಟಡಗಳ ದುಸ್ಥಿತಿ,    ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿತನ, ಕಾಮಗಾರಿಗಳಲ್ಲಿ ಲೋಪ ಕುರಿತು ತಾಲ್ಲೂಕು ಪಂಚಾಯಿತಿ ಸದಸ್ಯರು ಸಭೆಯಲ್ಲಿ ಆರೋಪಿಸಿದರು.ಶಿಫಾರಸು: ತಾಲ್ಲೂಕು ಪಂಚಾಯಿತಿ ಸಭೆಗಳಿಗೆ ಅಧಿಕಾರಿಗಳು ನಿರಂತರವಾಗಿ ಗೈರು ಹಾಜರಾಗುತ್ತಿದ್ದು, ತಮ್ಮ ಇಲಾಖೆಗಳ ಸಮರ್ಪಕ ಮಾಹಿತಿ ನೀಡದೇ ಸಭೆಯನ್ನು ದಿಕ್ಕುತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.ಇನ್ನು ಮುಂದೆ ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಕಾರ್ಯನಿರ್ವಾಹಕಾಧಿಕಾರಿ ಶಮಂತಕುಮಾರ್ ಎಚ್ಚರಿಕೆ ನೀಡಿದರು.ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಸಹಾಯಕ ನಿರ್ದೇಶಕ ಕುಮಾರ್ ಸೇರಿದಂತೆ ಸದಸ್ಯರು, ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry