ಮದ್ದೂರು ತಾ.ಪಂ.: ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸಿಂಧು

7

ಮದ್ದೂರು ತಾ.ಪಂ.: ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸಿಂಧು

Published:
Updated:

ಮದ್ದೂರು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೌಡಮ್ಮ ಅವರ ವಿರುದ್ಧ ಮಂಗಳವಾರ ಮಂಡಿಸಿದ ಅವಿಶ್ವಾಸ ನಿರ್ಣಯ ಸಿಂಧುವಾಗಿದೆ.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅವಿಶ್ವಾಸ ನಿರ್ಣಯ ಮಂಡನೆ ವಿಶೇಷ ಸಭೆಯಲ್ಲಿ ಈಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಿಜೆಪಿ ಸದಸ್ಯೆ ಇಂದ್ರಾಣಿ ಹಾಗೂ ಕಾಂಗ್ರೆಸ್‌ನ 13 ಮಂದಿ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸಿದರು.ಜೆಡಿಎಸ್‌ನ 10ಮಂದಿ ಸದಸ್ಯರಲ್ಲಿ 5ಮಂದಿ ಗೈರು ಹಾಜರಾಗ್ದ್ದಿದರು. 5ಮಂದಿ ಅವಿಶ್ವಾಸದ ವಿರುದ್ಧ ಮತ ಚಲಾಯಿಸಿದರು. ಬಿಜೆಪಿಯ ಇಬ್ಬರು ಸದಸ್ಯರು ಸಭೆಯಿಂದ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.ಅವಿಶ್ವಾಸ ನಿರ್ಣಯ ಸಿಂಧುವಾಗುವ ಮೂಲಕ ಜೆಡಿಎಸ್‌ನ ರಣತಂತ್ರದ ನಿರೀಕ್ಷೆ ಹುಸಿಯಾಗಿದ್ದು, ಬಿಜೆಪಿ ಸದಸ್ಯೆ ಇಂದ್ರಾಣಿ ಅವರು ಅಧ್ಯಕ್ಷರಾಗುವ ಹಾದಿ ಸುಗಮಗೊಂಡಿದೆ. ಅವಿಶ್ವಾಸ ಗೊತ್ತುವಳಿ ಸಿಂಧುವಾಗುತ್ತಿದ್ದಂತೆ ಹೊರ ಬಂದ ಕಾಂಗ್ರೆಸ್‌ನ ತಾ.ಪಂ. ಸದಸ್ಯರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಮಾತನಾಡಿ, ಬಿಜೆಪಿ ಸದಸ್ಯೆ ಇಂದ್ರಾಣಿ ಅವರಿಗೆ ಈ ಹಿಂದೆ ಜೆಡಿಎಸ್ ಒಡಂಬಡಿಕೆ ಮಾಡಿಕೊಂಡು ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರ ನೀಡದೇ ಮೋಸ ಮಾಡಿದ್ದರಿಂದ ಇಂದ್ರಾಣಿ ನಮ್ಮ ಪಕ್ಷ ಸೇರಿದ್ದಾರೆ. ಇದೀಗ ಇಂದ್ರಾಣಿ ಅವರಿಗೆ ನಮ್ಮ ಪಕ್ಷದಿಂದ ಅಧ್ಯಕ್ಷ ಪದವಿ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಮಾಜಿ ಶಾಸಕ ಮಧು ಜಿ. ಮಾದೇಗೌಡ, ಜಿ.ಪಂ. ಮಾಜಿ ಅಧ್ಯಕ್ಷರಾದ ಗುರುಚರಣ್, ಬಿ. ವಿವೇಕಾನಂದ, ತಾ.ಪಂ. ಉಪಾಧ್ಯಕ್ಷ ರಾಮಚಂದ್ರು ಸೇರಿದಂತೆ ತಾ.ಪಂ. ಸದಸ್ಯರು ಭಾಗವಹಿಸಿದ್ದರು. ಹೈಜಾಕ್ ಮಾಡಿದ್ದು ನಾಚಿಕೆಗೇಡು: ಅಧಿಕಾರ ದಾಹಕ್ಕಾಗಿ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಹೈಜಾಕ್ ಮಾಡಿರುವುದು ನಾಚಿಕೆಗೇಡಿನ ಸಂಗತಿ. ನಾವು ಇಂದ್ರಾಣಿ ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುತ್ತಿದ್ದೆವು. ಆದರೆ ಅವರೇ ಅಧಿಕಾರಕ್ಕಾಗಿ ನಮಗೆ ದ್ರೋಹ ಬಗೆದು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಟೀಕಿಸಿದರು.ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಾರ್ಯಾಧ್ಯಕ್ಷ ವೆಂಕಟೇಶ್, ಜಿ.ಪಂ. ಸದಸ್ಯರಾದ ಲಲಿತಾ ಪ್ರಕಾಶ್, ಕಂಠಿ ಸುರೇಶ್ ಇತರ ತಾ.ಪಂ. ಸದಸ್ಯರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry