ಮದ್ದೂರು: ವೈಭವದ ಎಲ್ಲಮ್ಮದೇವಿ ಜಾತ್ರೆ

7

ಮದ್ದೂರು: ವೈಭವದ ಎಲ್ಲಮ್ಮದೇವಿ ಜಾತ್ರೆ

Published:
Updated:

ಮದ್ದೂರು: ಶಕ್ತಿದೇವತೆ ಶ್ರೀರೇಣುಕಾ ಎಲ್ಲಮ್ಮದೇವಿಯ 40ನೇ ವಾರ್ಷಿಕ ಜಾತ್ರಾ ಮಹೋತ್ಸವವು ಮಂಗಳವಾರ ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಸಂಭ್ರಮದಿಂದ ನಡೆಯಿತು.ಸೋಮವಾರ ರಾತ್ರಿಯಿಂದಲೇ ಚಂಡಿಕಾ ಹೋಮದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯ ಆರಂಭಗೊಂಡವು. ಮಂಗಳವಾರ ಮುಂಜಾನೆ ಬೆಳಿಗ್ಗೆ 6ಗಂಟೆಗೆ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ರಕ್ಷಾಬಂಧನ, ಸಪ್ತದೇವಿ ಪಾರಾಯಣದೊಂದಿಗೆ 13ನೇ ವರ್ಷದ ಮಹಾಚಂಡಿಕಾಯಾಗ ಆರಂಭಗೊಂಡಿತು. ಬೆಳಿಗ್ಗೆ 7.30ರ ವೇಳೆಗೆ ವೇದ ಪಾರಾಯಣದೊಂದಿಗೆ ದೇವಿಗೆ ಮಹಾಭಿಷೇಕ ನಡೆಯಿತು. ಮಧ್ಯಾಹ್ನದ ವೇಳೆಗೆ ಮಹಾ ಪೂರ್ಣಾಹುತಿ ಬಲಹರಣ, ಯಾಗ ಫಲ ಸ್ವೀಕಾರ, ಕುಮಾರಿಕೆ ಪೂಜೆ ಹಾಗೂ ಸುಮಂಗಲಿ ಪೂಜೆಗಳು ಸಾಂಗವಾಗಿ ನೆರವೇರಿದವು.ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕೆಲವರು ಕುಂಕುಮ, ನಿಂಬೆಹಣ್ಣಿನ ಹಾರ ಅರ್ಪಿಸಿ ಹರಕೆ ತೀರಿಸಿದರು. ಭಕ್ತರಿಗೆ ದೇಗುಲ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

 

10 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಸಂಜೆ ಪಟ್ಟಣದ ಹೆಂಗಳೆಯರು ದೇವಿಗೆ ತಂಬಿಟ್ಟಿನ ನೈವೇದ್ಯ ಹಾಗೂ ನಿಂಬೆ ಸಿಪ್ಪೆಯ ದೀಪದಾರತಿ ಹರಕೆ ಸಲ್ಲಿಸಿದರು. 20 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಲಡ್ಡು ಪ್ರಸಾದ ವಿನಿಯೋಗ ನಡೆಯಿತು.ಮುತ್ತಿನ ಪಲ್ಲಕ್ಕಿ ಉತ್ಸವ:
ಸಂಜೆ ವೇಳೆಗೆ ದೇವಿಯ ಉತ್ಸವ ಮೂರ್ತಿಯನ್ನು ಶಿಂಷಾಹೊಳೆ ದಂಡೆಯ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ವಿವಿಧ ಚಿನ್ನಾಭರಣಗೊಂದಿಗೆ ಅಲಂಕೃತಗೊಳಿಸಲಾಯಿತು. ನಂತರ ಭಕ್ತರ ಉದ್ಘೋಷಗಳ ನಡುವೆ ದೇವಿಯನ್ನು ಚಿತ್ತಾಕರ್ಷಕ ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಅಲ್ಲಿಂದ ಹೊರಟ ದೇವಿಯ ಪಲ್ಲಕ್ಕಿ ಉತ್ಸವದೊಂದಿಗೆ ಗ್ರಾಮ ದೇವತೆ ಮದ್ದೂರಮ್ಮ, ದಂಡಿನ ಮಾರಮ್ಮ, ಕದಲೂರು ಹಾಗೂ ನಗರಕೆರೆ ಪಟಲದಮ್ಮ, ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿಯ ಪೂಜಾ ಪಟಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಕಾಲ ಭೈರವೇಶ್ವರಸ್ವಾಮಿಯ ದೇವರ ಬಸವ ಮೆರವಣಿಗೆಯುದ್ದಕ್ಕೂ ಭಕ್ತವೃಂದವನ್ನು ಸೆಳೆಯಿತು.ಆಂಧ್ರದ ಹೆಸರಾಂತ ತಿರುಮಲ ದೇಗುಲದ ವಿದ್ವಾನ್ ಮಂಜು ಅವರ ನಾದಸ್ವರದೊಂದಿಗೆ, ಕೇರಳದ ಚಂಡೆ ವಾದ್ಯ, ತಮಿಳುನಾಡಿನ ನಾಯಂಡಿ ಕುಣಿತ, ಲಾಳಘಟ್ಟ ಮಲ್ಲರಾಜು ಅವರ ತಮಟೆ, ನಗಾರಿಗಳೊಂದಿಗೆ ಆಕರ್ಷಕ ಸಿಡಿಮದ್ದು ಹಾಗೂ ಬಾಣ ಬಿರುಸುಗಳ ಪ್ರದರ್ಶನ ಮೆರವಣಿಗೆಗೆ ರಂಗು ತುಂಬಿದವು. ಇಡೀ ರಾತ್ರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಉತ್ಸವದಲ್ಲಿ ಪಾಲ್ಗೊಂಡ ಜನರು ದೇವಿಗೆ ಹರಕೆ ಸಮರ್ಪಿಸಿದರು.ದೇಗುಲ ಧರ್ಮದರ್ಶಿಗಳಾದ ಟಿ. ಶ್ರೀನಿವಾಸ್, ಟಿ. ಅಂಜನಪ್ಪ, ಟ್ರಸ್ಟ್‌ನ ಪದಾಧಿಕಾರಿಗಳಾದ ಕಿರಣ್ ಪ್ಯಾಲೆಸ್‌ನ ಟಿ. ದಾಸಪ್ಪ, ಟಿ.ಎಂ. ಕೃಷ್ಣ, ಶ್ರೀನಿಧಿ ಕೃಷ್ಣಪ್ಪ, ಕೆ. ದೇವರಾಜು, ಕಳಿಂಗ ಶ್ರೀನಿವಾಸ್, ಎಂ.ಡಿ. ಕಿರಣಪ್ರಸಾದ್, ಕೆಸ್ತೂರು ವೆಂಕಟೇಶ್, ಎಂ.ಎಲ್. ಮಂಜು, ಪಿ. ಸುರೇಶ್, ನಿಡಘಟ್ಟ ಎ. ನಾರಾಯಣಸ್ವಾಮಿ, ಎಂ.ವಿ. ಸಂತೋಷ್, ಇ. ಮಹೇಶ್, ಪಾಂಡು ಸದಾನಂದ, ಮೂಗೂರು ಕೃಷ್ಣಪ್ಪ, ಎಂ.ವಿ. ದೀಪಕ್, ಎನ್. ವಿ.ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry