ಸೋಮವಾರ, ಮೇ 17, 2021
25 °C

ಮದ್ಯದಲ್ಲಿ ಗಾಣದೆಣ್ಣೆ ಸೇರಿಸಿ ಕೊಲೆಗೆ ಯತ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಘಟಪ್ರಭಾ (ಗೋಕಾಕ): ಸೋದರ ಸಂಬಂಧಿಗಳಿಂದ ಕೊಲೆ ಯತ್ನದ ಘಟನೆ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ.

ರಾಯಬಾಗ ತಾಲ್ಲೂಕಿನ ಖನದಾಳ ಗ್ರಾಮದ ನಿವಾಸಿ ರಾಮಚಂದ್ರ ಯಲ್ಲಪ್ಪ ನಾಯಿಕನಿಗೆ  (23) ಮದ್ಯದಲ್ಲಿ ಗಾಣದ ಎಣ್ಣೆ ಸೇರಿಸಿ ಕೊಲೈಗೈಯಲು ಯತ್ನಿಸಲಾಗಿದೆ. ಸೋದರ ಸಂಬಂಧಿಗಳು ಸೃಷ್ಟಿಸಿದ ಮೋಸದ ಬಲೆಗೆ ಬಿದ್ದು ರಾಮಚಂದ್ರ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.ರಾಮಚಂದ್ರನ ಕಕ್ಕಂದಿರ ಮಕ್ಕಳಾದ ಭೀಮಪ್ಪ ಅಣ್ಣಪ್ಪ ನಾಯಿಕ ಹಾಗೂ ಮಹಾದೇವ ರಾಯಪ್ಪ ನಾಯಿಕ ಎಂಬುವವರು ಮೂರು ದಿನಗಳ ಹಿಂದೆ ರಾಮಚಂದ್ರನನ್ನು ಸಂಪರ್ಕಿಸಿ ಸೋದರ ಸಂಬಂಧಿ ಊರಿಗೆ ಹೋಗಿ ಬರಲು ಒತ್ತಾಯಿಸಿ ಖನದಾಳ ಗ್ರಾಮದಿಂದ ಕರೆತಂದು ಗೋಕಾಕ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮಕ್ಕೆ ತೆರಳಿದ್ದಾರೆ.  ಇಲ್ಲಿಯೂ ಯಾವುದೇ ಕಾರಣ ನೀಡದೆ ದಾರಿ ಬದಲಿಸಿದ್ದಾರೆ. ಈ ಮಧ್ಯೆ ಮದ್ಯದಲ್ಲಿ ಗಾಣದ ಎಣ್ಣೆ ಮಿಶ್ರಣ ಮಾಡಿ ಒತ್ತಾಯ ಪೂರ್ವಕವಾಗಿ ರಾಮಚಂದ್ರನಿಗೆ ಕುಡಿಸಿದ್ದಾರೆ ಎನ್ನಲಾಗಿದೆ.ಸ್ವಲ್ಪ ಹೊತ್ತಿನಲ್ಲಿಯೇ ರಾಮಚಂದ್ರ ಹೊಟ್ಟೆ ನೋವು ಎಂದು ಚಡಪಡಿಸುತ್ತಿರುವಾಗಲೇ ಭೀಮಪ್ಪ ಮತ್ತು ರಾಯಪ್ಪ ನಾಪತ್ತೆಯಾಗಿದ್ದಾರೆ. ಈ ಮಧ್ಯೆ ರಾಮಚಂದ್ರ ಮೊಬೈಲ್ ಮೂಲಕ ದೂರದ ಸಂಬಂಧಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಆತನನ್ನು ಚಿಕಿತ್ಸೆಗಾಗಿ ಕರ್ನಾಟಕ ಆರೋಗ್ಯ ಧಾಮ (ಕೆ.ಎಚ್.ಐ.) ಆಸ್ಪತ್ರೆಗೆ ದಾಖಲಿಸಿದ್ದಾರೆ.ಮೂರು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಮಚಂದ್ರ ಗುರುವಾರ ಎಚ್ಚೆದ್ದು ಇಡೀ ಘಟನೆಯ ವಿವರವನ್ನು ಸ್ಥಳೀಯ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾನೆ. ಆಸ್ಪತ್ರೆಯಿಂದ ಲಭಿಸಿದ ಮಾಹಿತಿ ಆಧರಿಸಿ ಘಟನೆ ಕುರಿತು ಘಟಪ್ರಭಾ ಠಾಣೆಯಲ್ಲಿ ಆಪಾದಿತರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದು 3 ದಿನ ಕಳೆದರೂ ರಾಯಬಾಗ ಪೊಲೀಸರು ಪ್ರಕರಣದ ಬಗ್ಗೆ ವಿಚಾರಣೆಗೆ ಬರದೇ ಇರುವುದು ಸಂಶಯ ಮೂಡಿಸಿದೆ ಎಂದು  ರಾಮಚಂದ್ರನ ಸಂಬಂಧಿಗಳು ದೂರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.