ಮದ್ಯದ ಕುರಿತು ಪುನರಾಲೋಚನೆ ಅತ್ಯಗತ್ಯ

7

ಮದ್ಯದ ಕುರಿತು ಪುನರಾಲೋಚನೆ ಅತ್ಯಗತ್ಯ

Published:
Updated:

`ಮದ್ಯದಿಂದ ಸರ್ಕಾರಕ್ಕೆ ಎಂಟು ಸಾವಿರ ಕೋಟಿ ರೂಪಾಯಿಗಳ ಆದಾಯವಿದ್ದರೆ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳ ನಷ್ಟವಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಬೆಂಗಳೂರಿನ ಗಾಂಧೀ ಭವನದಲ್ಲಿ ಗಾಂಧೀ ಜಯಂತಿಯ ಸಂದರ್ಭದಲ್ಲಿ ಹೇಳಿದರು.

ಸದಾನಂದ ಗೌಡರು ಅಷ್ಟಕ್ಕೇ ನಿಲ್ಲಲಿಲ್ಲ. `ಇದು ಸರ್ಕಾರಕ್ಕೆ ಬರುವ -ನಷ್ಟವನ್ನಷ್ಟೇ ನೋಡದೇ ಸಮಾಜಕ್ಕೆ ಯಾವುದು ಹಿತಕಾರಿಯೋ ಅದನ್ನು ಜಾರಿಗೆ ತರಬೇಕು~ ಎಂದು ಹೇಳಿದರು. ಕುಡುಕ ಗಂಡಂದಿರಿಂದ ಕಂಗೆಟ್ಟ ಮತ್ತು ಮನೆಯೊಳಗೆ ಶಾಂತಿ-ನೆಮ್ಮದಿಯನ್ನು ಬಯಸುತ್ತಿರುವ  ಮಹಿಳೆಯರ ಹೃದಯಗಳಿಗೆ ತಂಪೆರೆಯುವಂತಿದೆ ಮುಖ್ಯಮಂತ್ರಿಗಳ ಮಾತು. 

ಮದ್ಯಪಾನದ ವಿರುದ್ಧ ಧ್ವನಿ ತೆಗೆಯುವುದೆಂದರೆ ಪ್ರಗತಿ ಪರ ಇಲ್ಲ ಎನ್ನುವುದು ವಾಸ್ತವ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಬೇಕು ಎಂಬುದು ಆಡಳಿತ ನಡೆಸುವವರು ಕುಡಿತವನ್ನು ಸಮರ್ಥಿಸಲು ಮುಂದಿಡುವ ವಾದ. ಬಹುತೇಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮದ್ಯದ ಪರವಾಗಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಮದ್ಯದಿಂದ ಸರ್ಕಾರಕ್ಕೆ ಆದಾಯಕ್ಕಿಂತ ನಷ್ಟ ಜಾಸ್ತಿ ಮತ್ತು ಇಲ್ಲಿ ಲಾಭ-ನಷ್ಟದ ಪ್ರಶ್ನೆಗಿಂತ ಸಮಾಜಹಿತ ಮುಖ್ಯ ಎಂಬ ಮಾತನ್ನು ಮುಖ್ಯಮಂತ್ರಿಗಳು ಆಡಿದ್ದು ಸಣ್ಣ ವಿಷಯವೇನಲ್ಲ.  

ಗಾಂಧೀಜಿ ದೃಷ್ಟಿಯಲ್ಲಿ ಮದ್ಯಪಾನದ ವಿರುದ್ಧದ ಹೋರಾಟ ಸ್ವಾತಂತ್ರ್ಯ ಹೋರಾಟದಷ್ಟೇ ಮುಖ್ಯ. ಅದು ಸ್ವಾತಂತ್ರ್ಯ ಹೋರಾಟದ ಒಂದು ಭಾಗವಾಗಿತ್ತು. ಈ ಕಾರಣದಿಂದಲೇ ಸ್ವಾತಂತ್ರ್ಯ ಬಂದ ಬಳಿಕ ಪಾನ ನಿರೋಧವನ್ನು ಜಾರಿಗೆ ತರಲಾಯಿತು. ಕಳ್ಳಬಟ್ಟಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಹಾಗೂ ಜನರಿಗೆ ವೈಜ್ಞಾನಿಕವಾಗಿ ತಯಾರಾದ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟರೆ ಜನರ ಆರೋಗ್ಯವನ್ನು ಕಾಪಾಡಿದಂತಾಯಿತು ಮತ್ತು ಸರ್ಕಾರಕ್ಕೆ ಆದಾಯವನ್ನು ದೊರಕಿಸಿಕೊಟ್ಟಂತಾಯಿತು ಎಂಬ ತರ್ಕವನ್ನು ಮುಂದಿಟ್ಟು 60 ಹಾಗೂ 70ರ ದಶಕಗಳಲ್ಲಿ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳು ಪಾನನಿಷೇಧವನ್ನು ತೆಗೆದುಹಾಕಿದವು. ಆದರೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ನಡೆದ ಈ ಪ್ರಯೋಗದಿಂದ ಸಮಾಜದ ಮೇಲೆ ಎಂತಹ ಪರಿಣಾಮ ಉಂಟಾಗಿದೆ ಎಂಬುದರ ಮೌಲ್ಯಮಾಪನ ಈವರೆಗೆ ನಡೆದಿಲ್ಲ. ಅದು ನಡೆಯಬೇಕಾಗಿದೆ.

ಅಲ್ಕೋಹಾಲ್ ಯಾವತ್ತಿಗೂ ಅಲ್ಕೋಹಾಲೇ ಎನ್ನುತ್ತಾರೆ ವೈದ್ಯರು. ಕಳ್ಳಭಟ್ಟಿ ಸಾರಾಯಿಯನ್ನು ಕುಡಿದರೆ ಮಾತ್ರ ಆರೋಗ್ಯ ಕೆಡುತ್ತದೆ ಮತ್ತು ಐಎಂಎಫ್‌ಎಲ್ ಕುಡಿದರೆ ಆರೋಗ್ಯದ ರಕ್ಷಣೆಯಾಗುತ್ತದೆ ಎನ್ನುವಂತಿಲ್ಲ. ಎಂಎಫ್‌ಎಲ್‌ಮದ್ಯವನ್ನು ಕುಡಿದರೂ ಕೂಡ ಸಾವು ಶೀಘ್ರವಾಗಿ ಬರುತ್ತದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಎಂಬ ಹಳ್ಳಿಯಲ್ಲಿ ಅಲ್ಲಿರುವ ಹತ್ತು ಸಾವಿರ ಜನಸಂಖ್ಯೆಯಲ್ಲಿ ಕುಡಿದು ಸತ್ತವರ ವಿಧವೆಯರು 400ರಷ್ಟಿದ್ದಾರೆ ಎಂದು `ಪ್ರಜಾವಾಣಿ~ ವರದಿ ಮಾಡಿತ್ತು. ನಾನು ಆ ವರದಿ ಓದಿ ಆ ಊರಿಗೆ ಭೇಟಿಕೊಟ್ಟು  ಅಲ್ಲಿನ ಸಾಮಾಜಿಕ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದೆ. ಆ ಊರಿನಲ್ಲಿ ಒಂದು ಪರವಾನಿಗೆ ಪಡೆದ ವೈನ್‌ಶಾಪ್ ಇದೆ. ಅದರ ಒಂದು ದಿನದ ವ್ಯಾಪಾರ 80,000 ರೂಪಾಯಿ ಎಂಬುದು ಕೂಡ `ಪ್ರಜಾವಾಣಿ~ ವರದಿಯ ಒಂದು ಅಂಶ. ದಲಿತರೇ ಹೆಚ್ಚಿರುವ ಆ ಊರಿನಲ್ಲಿ ಇಷ್ಟೊಂದು ದೊಡ್ಡ ಮೊತ್ತದ ವ್ಯಾಪಾರ ಹೇಗೆ ಸಾಧ್ಯ? ಅದಕ್ಕೆ ಆ ಊರಿನ ಕಾರ್ಯಕರ್ತರು ನನಗೆ ತಿಳಿಸಿದ್ದೇನೆಂದರೆ  ಸರ್ಕಾರ ದಲಿತರಿಗೆ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ನೀಡುವ ಎಲ್ಲ ಸೌಲತ್ತುಗಳು/ಸಹಾಯಧನ ನೇರವಾಗಿ ಆ ವೈನ್‌ಶಾಪಿಗೇ ಹೋಗುತ್ತದೆ ಎಂದು. ಎಲ್ಲ ಬಿಪಿಎಲ್ ಕಾರ್ಡ್‌ದಾರರು ಹಾಗೆ  ಕುಟುಂಬದ ಸದಸ್ಯರಿಗೆ ತಲುಪಿಸದೇ ಕುಡಿತದ ಚಟಕ್ಕೆ ಬಳಸುತ್ತಾರೆ ಎಂದಲ್ಲ. ಅಷ್ಟೊಂದು ಕುಡಿದು ಗಲಾಟೆ ಮಾಡುತ್ತಾರೆ~ ಎಂದು ಅವರು ನನಗೆ ತಿಳಿಸಿದರು.

ಇದು ಕಟ್ಟೆಮಳಲವಾಡಿ ಚಿತ್ರಣ ಮಾತ್ರವಲ್ಲ, ರಾಜ್ಯದ ಬಹುತೇಕ ಹಳ್ಳಿಗಳ ಚಿತ್ರಣ.

`ಈ ರಾಜ್ಯವು ಕುಡಿತವಿಲ್ಲದ ರಾಜ್ಯವಾಗಿದ್ದರೆ ಈಗಿರುವ ಪೋಲೀಸ್ ಬಲದ ಶೇಕಡಾ 20ರಷ್ಟು ಸಾಕು, ನಾವು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸುತ್ತೇವೆ~ ಎಂದು ಅಂದಿನ ಪೋಲೀಸ್ ಮಹಾನಿರ್ದೇಶಕ ಡಾ. ಡಿ.ವಿ.ಗುರುಪ್ರಸಾದ್ ಶಿರಸಿಯಲ್ಲಿ ಕಳೆದ ಏಪ್ರಿಲ್ 5-6ರಂದು ಮದ್ಯಪಾನ ಸಂಯಮ ಮಂಡಳಿಯ ರಾಜ್ಯಮಟ್ಟದ ಸಮಾವೇಶದಲ್ಲಿ ಹೇಳಿದ್ದುದು ಇಲ್ಲಿ ಉಲ್ಲೇಖನಾರ್ಹ.

ಕೇವಲ ಲಾಭ-ನಷ್ಟದ ಲೆಕ್ಕಾಚಾರವನ್ನಷ್ಟೇ ತೆಗೆದುಕೊಂಡರೂ ಮದ್ಯ ಸರ್ಕಾರಕ್ಕೆ ನಷ್ಟದ ಬಾಬೇ ವಿನಾ ಲಾಭದ ಮೂಲವಲ್ಲ ಎನ್ನುವುದು ನಿಮ್ಹಾನ್ಸ್ ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ. ನಿಮ್ಹಾನ್ಸ್ ತಜ್ಞರ ತಂಡ ರಾಜ್ಯಕ್ಕೆ ಮದ್ಯದಿಂದ 800 ಕೋಟಿ ರೂ.ಗಳ ಆದಾಯವಿದ್ದಾಗ ಸಂಶೋಧನೆ ನಡೆಸಿ 1,800 ಕೋಟಿ ರೂ.ಗಳ ನಷ್ಟವಿದೆ ಎಂದು ವರದಿ ನೀಡಿತ್ತು. ಈಗ ರಾಜ್ಯದ ಬೊಕ್ಕಸಕ್ಕೆ 8,000 ಕೋಟಿ ರೂ.ಗಳ ಆದಾಯ ಮದ್ಯದಿಂದ ಬರುತ್ತದೆ. ಅಂದಮೇಲೆ ನಷ್ಟ 18,000 ಕೋಟಿ ರೂ.ಗಳು ಆಗಲೇಬೇಕು. ಡಾ. ಗುರುಪ್ರಸಾದ್ ಹೇಳಿಕೆಯನ್ನು ಮಾಪನವಾಗಿ ಬಳಸಿಕೊಂಡರೆ ಪ್ರತಿವರ್ಷ ಸರ್ಕಾರ ಪೋಲೀಸ್ ಇಲಾಖೆಯ ಮೇಲೆ 12 ಸಾವಿರ ಕೋಟಿ ರೂ.ಗಳನ್ನು ವ್ಯಯಿಸುತ್ತದೆ. ಅದರ ಶೇಕಡಾ 20ರಷ್ಟು ಬಲ ಇದ್ದರೆ ಸಾಕು ಎಂದರೆ ಖರ್ಚು ಕೂಡ ಶೇಕಡಾ 80ರಷ್ಟು (ಸುಮಾರು ಎಂಟೂವರೆ ಸಾವಿರ ಕೋಟಿ ರೂ.ಗಳು) ಉಳಿತಾಯವಾಗಲೇಬೇಕಲ್ಲವೇ?

ಅಪರಾಧ ಪ್ರಕರಣಗಳು ಸಂಭವಿಸಿದಾಗ ಅಂಥ ಪ್ರಕರಣಗಳಿಗೆ ಸರ್ಕಾರಿ ಆಸ್ಪತ್ರೆಗಳ ಮೂಲಕ, ನ್ಯಾಯಾಲಯಗಳ ಮೂಲಕ, ಸೆರೆಮನೆಗಳ ಮೂಲಕ ಸರ್ಕಾರ ನಡೆಸುವ ಖರ್ಚನ್ನು ಲೆಕ್ಕಹಾಕಬೇಕು. ಹಾಗೆ ಲೆಕ್ಕಹಾಕಿದಾಗ ಅದು 18 ಸಾವಿರ ಕೋಟಿ ರೂ.ಗಳನ್ನು  ತಲುಪಿಯೇ ತಲುಪುತ್ತದೆ. ಅಷ್ಟೇ ಅಲ್ಲ, ಕುಡಿತದಿಂದ ಆಗುವ ದುಡಿತ ನಷ್ಟ, ದಕ್ಷತೆಯ ನಷ್ಟ, ಉತ್ಪಾದನೆಯ ನಷ್ಟ (ಕೃಷಿ ಹಾಗೂ ಉದ್ದಿಮೆ ಎರಡೂ ರಂಗಗಳಲ್ಲಿ) ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ  ನಷ್ಟದ ಪ್ರಮಾಣ ಲಕ್ಷಾಂತರ ಕೋಟಿ ರೂ.ಗಳಿಗೆ ಏರುವುದು ಖಚಿತ.

ಆದುದರಿಂದ ನಮ್ಮ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಮದ್ಯದ ಪಾತ್ರದ ಬಗೆಗೆ ಸಮಗ್ರವಾದ ಪುನರಾಲೋಚನೆ ಅತ್ಯಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry