ಮಂಗಳವಾರ, ಏಪ್ರಿಲ್ 20, 2021
31 °C

ಮದ್ಯಪಾನ ಮುಕ್ತ ಗ್ರಾಮಕ್ಕೆ ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: `ಮದ್ಯಪಾನ ಮುಕ್ತವಾದ ಗ್ರಾಮ ನಿರ್ಮಾಣಕ್ಕೆ ಈ ಹಿಂದೆ ಗ್ರಾಮಸ್ಥರೆಲ್ಲ ಒಂದಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡು ಸ್ವಯಂ ಪ್ರೇರಿತವಾಗಿ ಜಾರಿಗೆ ತಂದಿದ್ದ ದಂಡ ಪದ್ಧತಿ ಮುಂದುವರೆಸಿರಿ. ಹಿರಿಯರ ಈ ನಿರ್ಣಯವನ್ನು ಯಾರು ಮುರಿಯುತ್ತಾರೋ ಅಂಥವರನ್ನು ನಮ್ಮ ಮಠದಲ್ಲಿರುವ ನ್ಯಾಯಕಟ್ಟೆಗೆ ಕಳುಹಿಸಿರಿ~ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಗುಂಡಗಟ್ಟಿ ಗ್ರಾಮದ ಶನೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಹಾದಿ ಬಸವಣ್ಣ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಸಭಾ ಭವನದ ಅಡಿಗಲ್ಲು ಮತ್ತು ಮೂಲಭೂತ ಸೌಕರ್ಯಗಳ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.`ಮದ್ಯಪಾನ ಮಾರಾಟವಾಗುವುದರಿಂದ ಗ್ರಾಮಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಬಡ ಕುಟುಂಬ ಬೀದಿಗೆ ಬಂದು ನಿರ್ನಾಮವಾಗಲು ಮದ್ಯಪಾನ ಕಾರಣವಾಗುತ್ತದೆ. ಕಾರಣ ಗ್ರಾಮದಲ್ಲಿ ನಡೆಯುವ ಮದ್ಯ ಮಾರಾಟ ನಿಲ್ಲಿಸಬೇಕು. ಜನತೆ ಕುಡಿಯುವುದನ್ನು ನಿಲ್ಲಿಸಬೇಕು. ಆಗ ಮಾತ್ರ ನಾವು ಭೇಟಿ ನೀಡಿರುವುದು ಸಾರ್ಥಕವಾಗುತ್ತದೆ~ ಎಂದು ತಿಳಿಸಿದರು.ದೇವರ ವಿಗ್ರಹ ಮುಕ್ಕಾದರೂ ಪ್ರತಿಯೊಬ್ಬ ಭಕ್ತನಲ್ಲಿರುವ ಭಕ್ತಿ ಮುಕ್ಕಾಗಬಾರದು. ದೇವರ ಮೇಲೆ ಭಕ್ತಿ ಇದ್ದ ಹಾಗೆ ಲೌಕಿಕ ಜೀವನದಲ್ಲಿಯೂ ಪ್ರೀತಿ ಇರಬೇಕು. ಆದರೆ ಇಂದು ಕುಟುಂಬದ ಸದಸ್ಯರ ನಡುವೆ ಇರುವ ಪ್ರೀತಿ ಮುಕ್ಕಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಶಾಸಕ ಬಿ.ಸಿ.ಪಾಟೀಲ ಮಾತನಾಡಿ, ಸುವರ್ಣ ಗ್ರಾಮೋದಯ ಯೋಜನೆಗೆ ಗುಂಡಗಟ್ಟಿಯು ಆಯ್ಕೆಯಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ದುರ್ಗಾದೇವಿ ಕೆರೆಗೆ ತುಂಗಭದ್ರಾ ನದಿ ನೀರು ಸರಬರಾಜು ಆರಂಭಿಸಿದೆ. ಅಲ್ಲಿಂದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವ ಯೋಜನೆ ತಮ್ಮ ಕನಸಾಗಿದೆ ಎಂದು ತಿಳಿಸಿದರು.ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ತರಳಬಾಳು ಮಠವು ನಾಡಿನ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಅಮೋಘ ಸಾಧನೆ ಮಾಡಿದೆ. ಶ್ರೀಗಳ ಸೇವೆ ಸಮಾಜಕ್ಕೆ ಅನಿವಾರ್ಯವಾಗಿದ್ದು, ಅವರು ನಿವೃತ್ತಿಯ ನಿಲುವು ಬದಲಾಯಿಸಬೇಕು ಎಂದು ಮನವಿ ಮಾಡಿದರು.ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿ ಜಾತಿಗೊಂದು ಮಠಾಧೀಶರಿದ್ದಾರೆ. ಸಂವಿಧಾನದಲ್ಲಿರುವ ಜಾತ್ಯತೀತತೆ ಕೇವಲ ಬೂಟಾಟಿಕೆ ಎನಿಸುತ್ತಿದೆ. ರಾಜ್ಯ, ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಜಾತಿ ಪದ್ಧತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿವೆ ಎಂದು ವಿಷಾದಿಸಿದರು.ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಎಸ್.ಎಸ್.ಪಾಟೀಲ ವಹಿಸಿದ್ದರು. ತರಳಬಾಳು ಕೇಂದ್ರ ಸಮಿತಿ ನಿರ್ದೇಶಕ ಎಸ್.ಎಸ್.ಪಾಟೀಲ, ತಾ.ಪಂ. ಅಧ್ಯಕ್ಷೆ ಗದಿಗೆವ್ವ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ಜಿ.ಪಂ.ಸದಸ್ಯ ಬಸವರಾಜ ಬೇವಿನಹಳ್ಳಿ, ತಾ.ಪಂ. ಸದಸ್ಯರಾದ ನಿರ್ಮಲಾ ಗುಬ್ಬಿ, ಆರ್.ಎನ್. ಗಂಗೋಳ, ಗ್ರಾಮದ ಹಿರಿಯರಾದ ಟಿ.ಎಂ.ಪಾಟೀಲ, ಮಲ್ಲೇಶಪ್ಪ ಬಣಕಾರ, ಬಿ.ಎಚ್.ಪುಟ್ಟಪ್ಪಗೌಡ್ರ, ಭೀಮಪ್ಪ ಬಣಕಾರ, ಏಕಪ್ಪ ಮುದಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಮೊದಲಾದವರು ಉಪಸ್ಥಿತರಿದ್ದರು. ಬಿ.ಎಸ್.ಪಾಟೀಲ ಸ್ವಾಗತಿಸಿ ದರು. ಎಚ್.ಎಸ್.ಹಲಗೇರಿ ನಿರೂಪಿಸಿ ದರು. ಮಲ್ಲನಗೌಡ ಪುಟ್ಟಪ್ಪಗೌಡ್ರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.