ಶುಕ್ರವಾರ, ಮಾರ್ಚ್ 5, 2021
16 °C

ಮದ್ಯಪಾನ; 428 ಸಮಸ್ಯೆಗಳಿಗೆ ದಾರಿ

ಸುಮ Updated:

ಅಕ್ಷರ ಗಾತ್ರ : | |

ಮದ್ಯಪಾನ; 428 ಸಮಸ್ಯೆಗಳಿಗೆ ದಾರಿ

ಗರ್ಭಧಾರಣೆ ಸಮಯದಲ್ಲಿ ಮಹಿಳೆಯರು ಎಷ್ಟು ಜಾಗ್ರತೆ ವಹಿಸುತ್ತಾರೋ ಮಗುವಿನ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಅದರಲ್ಲೂ ಈ ಸಮಯದಲ್ಲಿ ಮದ್ಯಪಾನದ ನಂಟನ್ನು ಕಡಿದುಕೊಳ್ಳಲೇಬೇಕು. ಇಲ್ಲದಿದ್ದರೆ ಮಗುವಿಗೆ ಒಂದಲ್ಲಾ ಎರಡಲ್ಲಾ 428 ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.‘ಗರ್ಭಧಾರಣೆ ಸಮಯದಲ್ಲಿ ಮದ್ಯಸೇವನೆಯ ಪರಿಣಾಮ’ಕ್ಕೆ ಪೂರಕವಾಗಿ ನಡೆದ ಅಧ್ಯಯನವೊಂದರ ಫಲಿತಾಂಶವಿದು. ಗರ್ಭಿಣಿಯಾಗಿದ್ದಾಗ ಮದ್ಯ ಸೇವನೆ ಮಾಡಿದರೆ  ನಿಮ್ಮ ಮಗುವನ್ನು ನೀವೇ ಸಮಸ್ಯೆಗಳ ಕೂಪಕ್ಕೆ ತಳ್ಳಿದಂತೆ ಎಂದಿರುವ ಅಧ್ಯಯನ, ನೀವು ಸೇವಿಸುವ ಮದ್ಯ ಮಗುವಿಗೆ 428 ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುವ ಗರಿಷ್ಠ ಸಾಧ್ಯತೆಯನ್ನು ಹೊಂದಿದೆ ಎನ್ನುತ್ತಿದೆ.‘ಫೀಟಲ್ ಆಲ್ಕೊಹಾಲ್ ಸ್ಪೆಕ್ಟ್ರಮ್‌ ಡಿಸಾರ್ಡರ್ಸ್‌’ ಅಡಿಯಲ್ಲಿ ಬರುವ ಈ ಸಮಸ್ಯೆಗಳು, ಹುಟ್ಟಿಗೆ ಮುನ್ನ ಅಂದರೆ ಭ್ರೂಣಾವಸ್ಥೆಯಲ್ಲಿ ಮದ್ಯಪಾನಕ್ಕೆ ಒಡ್ಡಿಕೊಳ್ಳುವುದು ಜೀವಮಾನವಿಡೀ ಆರೋಗ್ಯ ಸಮಸ್ಯೆಗಳು ಬರುವಂತೆ ಪ್ರೇರೇಪಿಸಬಹುದು.ಈ ಅಧ್ಯಯನದಲ್ಲಿ, ಸಂಶೋಧಕರು 428 ವಿಶಿಷ್ಟ ಬಗೆಯ ಸಮಸ್ಯೆಗಳನ್ನು ಗುರುತಿಸಿದ್ದಾರೆ. ಗರ್ಭಾವಸ್ಥೆಯ ಯಾವ ಹಂತದಲ್ಲಿಯೂ ಯಾವುದೇ ರೀತಿಯ ಮದ್ಯವನ್ನು ಯಾವುದೇ ಪ್ರಮಾಣದಲ್ಲೂ ತೆಗೆದುಕೊಳ್ಳುವುದು ಯಾವ ದೃಷ್ಟಿಯಿಂದಲೂ ಸರಿಯಲ್ಲ ಎನ್ನುತ್ತಾರೆ ಅಧ್ಯಯನದ ಮುಖ್ಯಸ್ಥ  ಟೊರೆಂಟೊದ ಸೆಂಟರ್‌ ಫಾರ್‌ ಅಡಿಕ್ಷನ್ ಅಂಡ್‌ ಮೆಂಟಲ್ ಹೆಲ್ತ್‌ನ ಲಾನಾ ಪೊಪೊವ.ಭ್ರೂಣದ ಅಂಗಾಂಗ ರಚನೆ ಹಾಗೂ ಬೆಳವಣಿಗೆ ಮೇಲೆ ಮದ್ಯಪಾನ ಅತಿ ಕೆಟ್ಟ ಪರಿಣಾಮ ಬೀರುತ್ತದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.ಮದ್ಯವನ್ನು ಎಷ್ಟು ಮತ್ತು ಯಾವಾಗ ಸೇವಿಸಿದ್ದಿರಿ ಎಂಬುದರ ಮೇಲೆ  ಮಗುವಿನ ಸಮಸ್ಯೆಯ ಗಂಭೀರತೆ ಮತ್ತು ಲಕ್ಷಣಗಳು ಭಿನ್ನ ಭಿನ್ನವಾಗಿರುತ್ತವೆ. ಇದರೊಂದಿಗೆ ತಾಯಿಯ ಜೀವನ ಶೈಲಿ, ಅಂದರೆ  ಗರ್ಭಿಣಿಯ ಒತ್ತಡದ ಪ್ರಮಾಣ, ಪೋಷಕಾಂಶ ಹಾಗೂ ವಾತಾವರಣವೂ ಪ್ರಭಾವ ಬೀರುತ್ತವೆ. ಕೆಲವು ವಂಶವಾಹಿ ಅಂಶಗಳೂ ಸಮಸ್ಯೆಗಳಿಗೆ ಪ್ರೇರೇಪಣೆಯಾಗಿರುತ್ತವೆ. ಇದಕ್ಕೆ ಸಂಬಂಧಿಸಿದಂತೆ 127 ಅಧ್ಯಯನಗಳನ್ನು ವಿಮರ್ಶಿಸಿದ ನಂತರ 428 ರೀತಿಯ ಮದ್ಯಪಾನ ಸಂಬಂಧಿ ಸಮಸ್ಯೆಗಳನ್ನು ಗುರುತಿಸಲಾಗಿದೆ.ನರಮಂಡಲ ವ್ಯವಸ್ಥೆ, ದೃಷ್ಟಿ,  ಶ್ರವಣ, ಹೃದಯ, ರಕ್ತ ಸಂಚಲನ, ಜೀರ್ಣಕ್ರಿಯೆ, ಉಸಿರಾಟ ವ್ಯವಸ್ಥೆ ಹೀಗೆ ದೇಹದ ಪ್ರತಿ ವ್ಯವಸ್ಥೆ ಮೇಲೂ ಈ ಸಮಸ್ಯೆಗಳು ಪ್ರಭಾವ ಬೀರುತ್ತವೆ ಎಂದಿದ್ದಾರೆ.ನಿಮಗೆ ಆರೋಗ್ಯವಂತ ಮಗು ಬೇಕೆಂದರೆ ಮದ್ಯಪಾನವನ್ನು ತ್ಯಜಿಸುವುದೊಂದೇ ದಾರಿ. ಈ ವಿಷಯವನ್ನು  ಜನರು ಮನವರಿಕೆ ಮಾಡಿಕೊಂಡು ಅನುಸರಿಸಬೇಕು ಎಂದಿದೆ ಅಧ್ಯಯನ. ದಿ ಲ್ಯಾನ್ಸೆಟ್‌ನ ನಿಯತಕಾಲಿಕೆಯಲ್ಲಿ ಈ ಅಧ್ಯಯನ ವರದಿಯಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.