ಶುಕ್ರವಾರ, ಏಪ್ರಿಲ್ 16, 2021
31 °C

ಮದ್ಯಸೇವಿಸಿ ಧ್ವಜಾರೋಹಣಕ್ಕೆ ಮುಂದಾದ ಪ್ರಭಾರ ಪಿಡಿಒಗೆ ಧರ್ಮದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಪಾನಮತ್ತನಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ತ್ರಿವರ್ಣ ಧ್ವಜಾರೋಹಣಕ್ಕೆ ಮುಂದಾದ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮಸ್ಥರೇ ಧರ್ಮದೇಟು ನೀಡಿದ ಘಟನೆ ಬುಧವಾರ ನಾಗಾಈದಲಾಯಿ ಗ್ರಾಮದಿಂದ ವರದಿಯಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿ ಎದುರು 66ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಅಭಿವೃದ್ಧಿ ಅಧಿಕಾರಿ ಪಾನಮತ್ತನಾಗಿ ಬೂಟು ಧರಿಸಿಕೊಂಡು ತ್ರಿವರ್ಣ ಧ್ವಜ ಹಾರಿಸಲು ಧ್ವಜಕಟ್ಟೆ ಹತ್ತಿದರು ಎನ್ನಲಾಗಿದೆ.

ಆಗ ಗ್ರಾಮಸ್ಥರು ಆಕ್ಷೇಪವೆತ್ತಿದರೂ ಕೇಳದೇ ಧ್ವಜಾರೋಹಣ ನೆರವೇರಿಸುವಾಗ ತಿರಂಗಾ ಧ್ವಜಕಂಬದಲ್ಲಿ ಅರ್ಧಕ್ಕೆ ಬಿಚ್ಚಿಕೊಂಡಿದೆ. ಇದರಿಂದ ಕೆರಳಿದ ಗ್ರಾಮಸ್ಥರು ಪೊಲೀಸರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.

ಆಗ ಅಲ್ಲಿಯೇ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ ಚಂದ್ರಪ್ಪ ಧ್ವಜಾರೋಹಣ ನೆರವೇರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾವಾಣಿಗೆ ತಿಳಿಸಿದ್ದಾರೆ.

ನಂತರ ಆಗಮಿಸಿದ ಪೊಲೀಸರು ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೇವ ಬೈಗೊಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಪಘಾತ ಧ್ವಜಾರೋಹಣಕ್ಕೆ ಅಡ್ಡಿ: ಬೆಳಿಗ್ಗೆ 8.15ಕ್ಕೆ ನಿಗದಿಯಾದ ತಿರಂಗ ಧ್ವಜಾರೋಹಣ ತಾಲ್ಲೂಕಿನ ಸಾಸರಗಾಂವ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯರೇ 10.30ಕ್ಕೆ ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿದ ವದರಿ ಬಂದಿದೆ. ಇದರಿಂದ ಬೆಳಿಗ್ಗೆ 9.00ಕ್ಕೆ ಶಾಲೆಗೆ ಆಗಮಿಸಿದ್ದಾರೆ. ಇಷ್ಟೋತ್ತಿಗಾಗಲೇ ಶಾಲೆ ಎದುರು ಜಮಾಯಿಸಿದ ಸ್ಥಳೀಯ ಜನರು ಧ್ವಜಾರೋಹಣ ಅಡ್ಡಿ ಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ.

ಶಾಲೆಯ ಇಬ್ಬರು ಶಿಕ್ಷಕರು ಕಮಲಾಪೂರದವರಾಗಿದ್ದು, ಸಾಸರಗಾಂವ್ ತಾಂಡಾಕ್ಕೆ ತಮ್ಮ ದ್ವಿಚಕ್ರ ವಾಹನದ ಮೇಲೆ ಬರುವಾಗ ಬುಧವಾರ ಬೆಳಿಗ್ಗೆ ಚೇಂಗಟಾ ಬಳಿ ಮುಗುಚಿದೆ. ಗಾಯಗೊಂಡ ಒಬ್ಬರಿಗೆ ಚಿಕಿತ್ಸೆ ಕೊಡಿಸಿ ವಾಪಸ್ ಕಳುಹಿಸಿ ಧ್ವಜಾರೋಹಣಕ್ಕಾಗಿ ತಾವು ತಡವಾಗಿ ಬಂದಿದ್ದೇನೆ ಕ್ಷಮಿಸಿ ಎಂದರೂ ಜನರು ಶಿಕ್ಷಕರ ಮಾತು ಕೇಳಿಲ್ಲ. ಸುದ್ದಿ ತಿಳಿದು ಸುಲೇಪೇಟ ಸರ್ಕಲ್ ಇನ್ಸ್‌ಪೆಕ್ಟರ್ ಎಂ. ವರದರಾಜು, ಬಿಇಒ ಅರ್ಜುನ ದೊಡ್ಮನಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತ ಸಂಭವಿಸಿದ್ದು ಖಾತರಿ ಪಡಿಸಿಕೊಂಡ ನಂತರ ಬೆಳಿಗ್ಗೆ 10.30ಕ್ಕೆ ಶಿಕ್ಷಕರ ಎದುರುಗಡೆಯೇ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವೀಂದ್ರ ಆಡೆ ಧ್ವಜಾರೋಹಣ ನೆರವೇರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

2 ತಾಸಿನಲ್ಲಿಯೇ ಧ್ವಜ ಕೆಳಕ್ಕೆ!: ತಾಲ್ಲೂಕಿನ ಕೋಡ್ಲಿ ಕ್ರಾಸ್‌ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾರಿಸಿದ ತ್ರಿವರ್ಣ ಧ್ವಜ ಎರಡು ತಾಸಿನಲ್ಲಿಯೇ ಕೆಳಕ್ಕೆ ಇಳಿಸಿ ಶಾಲೆಗೆ ಬೀಗ ಹಾಕಿ ಮನೆಗೆ ಮರಳಿದ ಘಟನೆ ಬುಧವಾರ ನಡೆದಿದೆ.

ಗುಲ್ಬರ್ಗದಿಂದ ಆಗಮಿಸುವ ಶಿಕ್ಷಕಿ ಸಂಜೆವರೆಗೂ ಇರುವುದೇ ಅನಾವಶ್ಯಕ ಎಂದು ಭಾವಿಸಿ ಧ್ವಜಾರೋಹಣ ನೆರವೇರಿಸಿದ ಕೆಲವೆ ಗಂಟೆಗಳ ನಂತರ ಧ್ವಜ ಕೆಳಕ್ಕೆಇಳಿಸಿ ಬೇಜವಾಬ್ದಾರಿ ತೋರಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸದರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ದೊಡ್ಮನಿ ಭೇಟಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.