ಬುಧವಾರ, ನವೆಂಬರ್ 20, 2019
27 °C

`ಮದ್ಯ ಕುಡಿಸಿ ಮತ ಪಡೆವ ಪ್ರಯತ್ನ ವಿರೋಧಿಸಿ'

Published:
Updated:

ಶಿರಸಿ: `ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಗ್ಧ ಜನರಿಗೆ ಮದ್ಯ ಕುಡಿಸಿ ಮತ ಪಡೆಯುವ ಪ್ರಯತ್ನ ನಡೆಯಬಹುದು. ಅಂತಹ ಪ್ರಯತ್ನ ಎಲ್ಲಿಯೇ ಆಗಲಿ ಯಾರಿಂದಲೇ ಆಗಲಿ ನಡೆದಿದ್ದಲ್ಲಿ ಅದನ್ನು ಬಲವಾಗಿ ವಿರೋಧಿಸಿರಿ..' ಹೀಗೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕ ಕರೆ ನೀಡಿದೆ.ಈ ಕುರಿತಂತೆ ವೇದಿಕೆ ಕರಪತ್ರವೊಂದನ್ನು ಬಿಡುಗಡೆ ಮಾಡಿದ್ದು, ಇದನ್ನು ಸ್ವ-ಸಹಾಯ ಸಂಘಗಳು, ಪ್ರಗತಿಬಂಧು ತಂಡಗಳು, ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಬುಧವಾರ ಧರ್ಮಸ್ಥಳ ಯೋಜನೆಯ ಕಾರ್ಯಾಲಯದಲ್ಲಿ ಯೋಜನೆಯ ನಿರ್ದೇಶಕ ಕೆ.ಚಂದ್ರಶೇಖರ ಕರಪತ್ರ ಬಿಡುಗಡೆ ಮಾಡಿದರು.`ಹೆಂಡದ ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಿದಲ್ಲಿ ಕೇವಲ ಹೆಂಡಕ್ಕಾಗಿ ನಮ್ಮನ್ನು ನಾವು ಮಾರಿಕೊಂಡಂತೆ', `ನಿಮ್ಮ ಊರಿನಲ್ಲಿ, ನಿಮ್ಮ ಪರಿಸರದಲ್ಲಿ ಅಂತಹ ಪ್ರಯತ್ನ ನಡೆದಲ್ಲಿ ಜಾತಿ-ಭೇದ ಮರೆತು ಸಾಮೂಹಿಕವಾಗಿ ಪ್ರತಿಭಟಿಸಿರಿ', `ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಯೋಗ್ಯ ಪ್ರತಿನಿಧಿ ಆಯ್ಕೆ ಮಾಡಿ', `ಸದೃಢ, ದುಶ್ಚಟರಹಿತ, ಪಾರದರ್ಶಕ ಆಡಳಿತ ರೂಪಿಸಲು ಸಹಕರಿಸಿ'.ಇಂತಹ ಅನೇಕ ಸಂದೇಶಗಳನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ. ಮತದಾರರಿಗೆ ಹೆಂಡದ ಆಮಿಷವೊಡ್ಡಿ ಮತ ಪಡೆಯುವ ಪ್ರಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ತಕ್ಷಣ ಚುನಾವಣಾಧಿಕಾರಿ, ತಹಸೀಲ್ದಾರ್, ಪೊಲೀಸರಿಗೆ ಮಾಹಿತಿ ನೀಡಿ ಎಂದು ವೇದಿಕೆ ವಿನಂತಿಸಿದೆ.`ಗ್ರಾಮೀಣ ಭಾಗದಲ್ಲಿ ಕರಪತ್ರಗಳನ್ನು ವ್ಯಾಪಕವಾಗಿ ಹಂಚಲಾಗಿದ್ದು, ಧರ್ಮಸ್ಥಳ ಯೋಜನೆಯ ಸ್ವ ಸಹಾಯ ಸಂಘಗಳ ಸಭೆ ನಡೆಸಿ ಸಹ ಯಾವುದೇ ಆಮಿಷಗಳಿಗೆ ಬಲಿಯಾಗಬಾರದೆಂದು ತಿಳಿಸಲಾಗಿದೆ' ಎಂದು ಚಂದ್ರಶೇಖರ ಹೇಳಿದರು.ಸ್ವಾಸ್ಥ್ಯ ಸಂಕಲ್ಪ:

`ಜನಜಾಗೃತಿ ವೇದಿಕೆಯು ವಿವಿಧ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು, 24 ಶಾಲೆಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಾಗಾರದ ಮೂಲಕ 4960 ವಿದ್ಯಾರ್ಥಿಗಳನ್ನು ತಲುಪಿ ದುಶ್ಚಟಗಳಿಂದ ದೂರವಿರುವಂತೆ ವಿನಂತಿಸಲಾಗಿದೆ. ಆರು ಮದ್ಯವ್ಯಸನ ಶಿಬಿರ ನಡೆಸಿದ್ದು, 300 ಜನ ಮದ್ಯ ತ್ಯಜಿಸುವಂತೆ ಮಾಡಲಾಗಿದೆ.

34 ನವಜೀವನ ಸಮಿತಿಗಳ ಸಭೆ ನಡೆಸಲಾಗಿದೆ. ಮುಂದಿನ ಅವಧಿಯಲ್ಲಿ 21 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಆರು ಮದ್ಯವರ್ಜನ ಶಿಬಿರ, 10 ನವಜೀವನ ಸಮಿತಿ ರಚನೆ, ಮೂರು ಪ್ರೇರಣಾ ಶಿಬಿರ, 33 ಮನೆ ಭೇಟಿ ಹಾಗೂ 21 ಗ್ರಾಮ ಸುಭಿಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ' ಎಂದರು.ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕ ರಾಯಕರ, ಸತೀಶ ಶೆಟ್ಟಿ, ಅಮರ ಪ್ರಸಾದ, ಜಯಂತ, ಎಂ.ಪಿ.ಕುಸೂರು, ಅರವಿಂದ ಗುಡವಿ, ಸಂಧ್ಯಾ ಕುರ್ಡೇಕರ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)