ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ

7
ಕರ್ಜಗಿ ಗ್ರಾಮದಲ್ಲಿ ವಿದ್ಯಾರ್ಥಿಗಳ, ಮಹಿಳೆಯರ ಪ್ರತಿಭಟನೆ

ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ

Published:
Updated:

ಹಾವೇರಿ: ಗ್ರಾಮದಲ್ಲಿ ತಾಂಡವಾಡುತ್ತಿರುವ ಅಕ್ರಮ ಮದ್ಯ ಮಾರಾಟವನ್ನು  ಸಂಪೂರ್ಣ ನಿಷೇಧಿಸಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಕರ್ಜಗಿ ಗ್ರಾಮದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಸ್ ನಿಲ್ದಾಣದ ಎದುರಿನ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಒಂದೂವರೆ ಗಂಟೆ ಪ್ರತಿಭಟನೆ ನಡೆಸಿದರಲ್ಲದೇ ಟಯರ್‌ಗೆ ಬೆಂಕಿ ಹಚ್ಚಿ ಅಕ್ರಮ ಮದ್ಯ ಮಾರಾಟ ಹಾಗೂ ಅದಕ್ಕೆ ಕುಮ್ಮಕ್ಕು ನೀಡುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದ ಸರ್ಕಾರಿ ಫ್ರೌಡ ಶಾಲೆ ಹಾಗೂ ದೇವಸ್ಥಾನದ ಸಮೀಪದಲ್ಲಿಯೇ ಮದ್ಯದ ಅಂಗಡಿ ಇದ್ದು, ಮದ್ಯ ವ್ಯಸನಿಗಳು ರಾತ್ರಿ ಸಮಯದಲ್ಲಿ ಶಾಲಾ ಆವರಣ ಇಲ್ಲವೇ ಕೊಠಡಿಗಳ ಎದುರಿನಲ್ಲಿಯೇ ಕುಳಿತು ಮದ್ಯ ಸೇವನೆ ಮಾಡಿ ಬಾಟಲಿ ಅಲ್ಲಿಯೇ ಎಸೆದಿರುತ್ತಾರೆ. ಅಷ್ಟೇ ಅಲ್ಲದೇ ಅವರು ಕುಳಿತ ಜಾಗದಲ್ಲಿಯೇ ಉಗುಳುವುದು, ಮೂತ್ರ ವಿಸರ್ಜನೆ ಮಾಡಿರುತ್ತಾರೆ. ಇದರಿಂದ ಶಾಲೆಯ ಆವರಣವೇ ಗಲೀಜು ಆಗಿರುತ್ತದೆ. ಪ್ರತಿನಿತ್ಯ ಶಾಲಾ ಸಿಬ್ಬಂದಿ ಇಲ್ಲವೇ ಮಕ್ಕಳು ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆಯಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ದೇವಸ್ಥಾನ ದಾರಿಯಲ್ಲಿಯೇ ಮದ್ಯ ಸೇವನೆ ಮಾಡಿದ ಕೆಲವರು ಬರುವವರಿಗೆ, ಮಹಿಳೆಯರು, ಮಕ್ಕಳು ದೇವಸ್ಥಾನಕ್ಕೆ ಬರುವುದು ದುಸ್ತರವಾಗಿದೆ.  

ಮದ್ಯದ ಅಂಗಡಿ ಪರಿಣಾಮ ಗ್ರಾಮದಲ್ಲಿ ಯುವಕರು, ಮಕ್ಕಳು ಸಹ ಕುಡಿತದ ಚಟಕ್ಕೆ ಅಂಟಿಕೊಂಡು ಅವರದೇ ಹಾವಳಿ ಹೆಚ್ಚಾಗಿದೆ. ಬಸ್ ನಿಲ್ದಾಣದಲ್ಲಿ ಮಹಿಳೆಯರು, ಸಭ್ಯ ಜನರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾ.ಪಂ.ಸದಸ್ಯ ನಾರಾಯಣ ಕಾಳೆ ತಿಳಿಸಿದರು.ಕುಡಿತದಿಂದ ಬಡಜನತೆಯ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆಯಲ್ಲದೇ, ಅವರ ಬದುಕನ್ನು ಬೀದಿಗೆ ತಳ್ಳುತ್ತಾ ನಿತ್ಯ ಗ್ರಾಮದಲ್ಲಿ ಜಗಳ, ಹೊಡೆದಾಟ ನಡೆಯಲು ಕಾರಣವಾಗಿದೆ. ಕುಡಿತದಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಟ್ಟು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಪ್ರಕರಣಗಳು ಹೆಚ್ಚಾಗಿವೆ. ಈ ಎಲ್ಲ ಕಾರಣಗಳಿಗಾಗಿ ಕೂಡಲೇ ಗ್ರಾಮದಲ್ಲಿರುವ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು ಇಲ್ಲವೇ ಶಾಲೆ, ದೇವಸ್ಥಾನದ ಸಮೀಪ ಇರುವ ಮದ್ಯದ ಅಂಗಡಿಯನ್ನು ಉರಿನಿಂದ ಆಚೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.ಒಂದು ವಾರದಲ್ಲಿ ತಮ್ಮ ಬೇಡಿಕೆ ಈಡೆರದಿದ್ದರೆ, ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಆವರಣಕ್ಕೆ ಕಂಪೌಂಡ್ ನಿರ್ಮಿಸಿ ಮುಖ್ಯ ದ್ವಾರಕ್ಕೆ ಗೇಟ್ ಅಳವಡಿಸಬೇಕು ಹಾಗೂ ಶಾಲೆಯ ಕೊಠಡಿಗಳ ಹಿಂದೆ ಕಂಪೌಂಡಿನ ಒಳಗೆ ಹರಿದು ಬರುತ್ತಿರುವ ಚರಂಡಿ ನೀರು ಬರದಂತೆ ಬೇರೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೂಜಾರ, ಕಾರ್ಯದರ್ಶಿ ರೇಣುಕಾ ಕಹಾರ, ಮುಖಂಡರಾದ ವಿನಾಯಕ, ಸಿದ್ದಯ್ಯ ಪಾಟೀಲ, ಸಂತೋಷ ಪಾಟೀಲ, ಶ್ರೀಕೃಷ್ಣಾ ಮಂದಿ, ಕಿರಣಕುಮಾರ , ಬಸವರಾಜ ಕೆ. ಅಭಿಷೇಕ, ಗೋಪಾಲ, ಭಾರತಿ, ದೀಪಾ, ಗ್ರಾಮಸ್ಥರಾದ ಸಹದೇವಪ್ಪ, ಶಂಭಣ್ಣ ಕಾಳೆ, ಫರಶುರಾಮ, ಅಕ್ಕಮ್ಮ ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry