ಮಧುಗಿರಿ: ಕೈದಿಗೆ ಹೋಟೆಲ್ ಊಟ

7

ಮಧುಗಿರಿ: ಕೈದಿಗೆ ಹೋಟೆಲ್ ಊಟ

Published:
Updated:

ಮಧುಗಿರಿ: ಪಟ್ಟಣದಲ್ಲಿರುವ ಉಪ ಕಾರಾಗೃಹದಲ್ಲಿ ಕೈದಿಗಳು ಸೋಪು, ಎಣ್ಣೆ, ಸೀಗೇಕಾಯಿ ಕಂಡು ಹಲವು ತಿಂಗಳೇ ಕಳೆದಿವೆ. ಸಿಬ್ಬಂದಿ ಕೊರತೆ, ಬಜೆಟ್ ಕೊರತೆ, ಇಲಾಖೆಗಳ ನಡುವಿನ ಸಮನ್ವಯ ಕೊರತೆ ನೆಪದಲ್ಲಿ ಕೈದಿಗಳ ಆರೋಗ್ಯ ಹದಗೆಡುತ್ತಿದೆ.ಕಾರಾಗೃಹಗಳ ನಿರ್ವಹಣೆ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಕಾರಾಗೃಹ ಇಲಾಖೆ ಜಂಟಿಯಾಗಿ ಹೊರಬೇಕು. ಆದರೆ ಒಬ್ಬರು ಇನ್ನೊಬ್ಬರತ್ತ ಬೆರಳು ತೋರಿಸುತ್ತಿರುವುದು ಸಮಸ್ಯೆ ಹೆಚ್ಚಿಸಿದೆ.ಸುಮಾರು 40 ಕೈದಿಗಳಿರುವ ಮಧುಗಿರಿ ಉಪ ಕಾರಾಗೃಹದ ರಕ್ಷಣೆ ಮತ್ತು ಕೈದಿಗಳ ಆರೋಗ್ಯದ ಹೊಣೆಯನ್ನು ಕಾನ್ಸ್‌ಸ್ಟೆಬಲ್ ದರ್ಜೆಯ ಒಬ್ಬ ವಾರ್ಡನ್ ಹೊತ್ತಿದ್ದಾರೆ. ಕೈದಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಬೆಂಗಾವಲು ಒದಗಿಸಬೇಕು ಎಂಬ ನಿಯಮವಿದೆ. ಆದರೆ ಮಧುಗಿರಿಯಲ್ಲಿ ಈ ನಿಯಮಕ್ಕೆ ಯಾವುದೇ ಕಿಮ್ಮತ್ತಿಲ್ಲ.`ಕಾನ್ಸ್‌ಸ್ಟೆಬಲ್ ದರ್ಜೆಯ ಒಬ್ಬ ನೌಕರ ನೀಡುವ ಕೋರಿಕೆಯನ್ನು ಪೊಲೀಸ್ ಠಾಣೆಯಲ್ಲಿರುವ ಅಧಿಕಾರಿಗಳು ಮನ್ನಿಸುವುದಿಲ್ಲ. ಹೀಗಾಗಿ ನಿಯಮಕ್ಕೆ ವಿರುದ್ಧವಾಗಿ ಸ್ವಂತ ಜವಾಬ್ದಾರಿಯಿಂದ ಜೈಲಿನಲ್ಲಿರುವ ಒಬ್ಬನೇ ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿರುವ ಕೈದಿಗಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿದೆ. ಕೈದಿಗಳ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆತನೇ ಔಷಧೋಪಚಾರ ಮಾಡಬೇಕು.ಏನಾದರೂ ಹೆಚ್ಚು ಕಡಿಮೆಯಾದರೆ ಹಲವರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ~ ಎಂದು ಕಾರಾಗೃಹ ಇಲಾಖೆ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.`ಮಧುಗಿರಿ ಉಪ ಕಾರಾಗೃಹಕ್ಕೆ ಎರಡು ಹುದ್ದೆಗಳು ಮಂಜೂರಾಗಿವೆ. ಅದರಂತೆ ಎಎಸ್‌ಐ ದರ್ಜೆಯ ಮುಖ್ಯ ವಾರ್ಡರ್ ಮತ್ತು ವಾರ್ಡರ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸಬೇಕು.ಕೆಲವು ತಿಂಗಳ ಹಿಂದೆ ಮುಖ್ಯ ವಾರ್ಡರ್ ನಿವೃತ್ತರಾದರು, ಮತ್ತೊಬ್ಬ ಸಿಬ್ಬಂದಿ ವರ್ಗಾವಣೆಗೊಂಡರು. ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿಯ ಮೇಲೆ ಎಲ್ಲ ಜವಾಬ್ದಾರಿ ಬಿದ್ದಿದೆ~.ಈ ಕುರಿತು ಹಲವು ಬಾರಿ ಇಲಾಖೆಯ ಮುಖ್ಯ ಕಚೇರಿಗೆ, ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. `ಅಲ್ಲಿಗೆ ಬರಲು ಯಾರೂ ಸಿದ್ಧರಿಲ್ಲ. ಮುಂದಿನ ವರ್ಗಾವಣೆ ಸಮಯದಲ್ಲಿ ನೋಡೋಣ~ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಕಾಲಯಾಪನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.ಸೆರೆಮನೆಯಲ್ಲಿ ಅಡುಗೆಮನೆ ಇಲ್ಲ. ಹೀಗಾಗಿ ಹೋಟೆಲ್‌ನಿಂದ ಹೊರಗುತ್ತಿಗೆ ಆಧಾರದ ಮೇಲೆ ಆಹಾರ ತರಿಸಿಕೊಳ್ಳಲಾಗುತ್ತಿದೆ. ಕೈದಿಗಳ ಆರೋಗ್ಯ ಮತ್ತು ರಕ್ಷಣೆ ದೃಷ್ಟಿಯಿಂದ ಜೈಲಿನಲ್ಲಿಯೇ ಆಹಾರ ತಯಾರಿಸುವುದು ಒಳಿತು ಎಂಬುದು ಕೈದಿಗಳ ಸಂಬಂಧಿಕರ ಒತ್ತಾಯ.ಆಹಾರದ ಗುಣಮಟ್ಟ ಕುರಿತು ಕೈದಿಯೊಬ್ಬ ನ್ಯಾಯಾಧೀಶರ ಎದುರು ದೂರು ಸಲ್ಲಿಸಿದ್ದ. ನಂತರದ ದಿನಗಳಲ್ಲಿ ನ್ಯಾಯಾಧೀಶರೇ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದ ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry