ಶುಕ್ರವಾರ, ನವೆಂಬರ್ 22, 2019
27 °C

ಮಧುಗಿರಿ: `ಪುತ್ರನ ಪರಾಕ್ರಮ' ಪ್ರದರ್ಶನ

Published:
Updated:

ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೆಂದೇ ಪರಿಗಣಿತವಾಗಿರುವ ಐಎಎಸ್ ಅಧಿಕಾರಿ ವೀರಭದ್ರಯ್ಯ ರಾಜೀನಾಮೆ ಅಂಗೀಕಾರ ನಿಧಾನಗೊಳ್ಳುತ್ತಿರುವ ನಡುವೆಯೇ ಅವರ ಪುತ್ರ ಕಾರ್ತೀಕ್ ವೀರಭದ್ರಯ್ಯ ಸೋಮವಾರ ವಿಧಾನಸಭಾ ಕ್ಷೇತ್ರದಾದ್ಯಂತ ತಮ್ಮ ಪರಾಕ್ರಮ ಪ್ರದರ್ಶಿಸಿದರು.ರಾಜೀನಾಮೆ ಅಂಗೀಕರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವೀರಭದ್ರಯ್ಯ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಕದ ತೊಟ್ಟಿದ್ದಾರೆ. ಪ್ರಕರಣದ ವಿಚಾರಣೆ ಏ. 4ಕ್ಕೆ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ದಿಢೀರನೇ ವೀರಭದ್ರಯ್ಯ ಪುತ್ರ ಕಾರ್ತೀಕ್ ಚುನಾವಣೆ ಪ್ರಚಾರಕ್ಕೆ ಇಳಿಯುವ ಮೂಲಕ ಸಂಚಲನ ಮೂಡಿಸಿದರು.ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೂ ಜೆಡಿಎಸ್ ನಾಯಕನಿಲ್ಲದೆ ಸೊರಗಿದಂತಿತ್ತು. ಆದರೀಗ ವೀರಭದ್ರಯ್ಯ ಕುಟುಂಬ ರಾಜಕೀಯ ಪ್ರವೇಶ ಮಾಡುವ ಮೂಲಕ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ.ಸುಮಾರು 150ಕ್ಕೂ ಹೆಚ್ಚು ಕಾರುದ್ವಿಚಕ್ರ ವಾಹನಗಳಲ್ಲಿ ತೆರಳಿದ ಕಾತೀಕ್ ಮತ್ತು ಜೆಡಿಎಸ್ ಕಾರ್ಯಕರ್ತರು ಐ.ಡಿ.ಹಳ್ಳಿ ಹೋಬಳಿಯ ದೇವಮೂಲೆಯಲ್ಲಿರುವ ದೊಡ್ಡದಾಳವಟ್ಟ ಲಕ್ಷ್ಮೀನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ  ಚುನಾವಣೆ ಪ್ರಚಾರ ಆರಂಭಿಸಿದರು.ಕೊಡಿಗೇನಹಳ್ಳಿ, ಐ.ಡಿ.ಹಳ್ಳಿ, ಮಿಡಿಗೇಶಿ ಹೋಬಳಿ ಸೇರಿದಂತೆ ಹೊಸಕೆರೆ ಮಾರ್ಗವಾಗಿ ರಂಟವಳಲು, ಬಡವನಹಳ್ಳಿ, ದೊಡ್ಡೇರಿ ಹೋಬಳಿಯ ಗೂಬಲಗುಟ್ಟೆ, ಕೈಮರ, ದಬ್ಬೇಘಟ್ಟ ಮಾರ್ಗವಾಗಿ ರ‌್ಯಾಲಿ ಮಧುಗಿರಿಗೆ ಆಗಮಿಸಿತು.ಜೆಡಿಎಸ್ ಮುಖಂಡ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಮಧುಗಿರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯ, ಗುಂಪುಗಳಿಲ್ಲ. ಪಕ್ಷದಲ್ಲಿ ಯಾರೇ ಅಭ್ಯರ್ಥಿಯಾದರೂ ನಿಷ್ಠೆಯಿಂದ ಕೆಲಸ ಮಾಡುವುದಾಗಿ ತಿಳಿಸಿದರು.ರ‌್ಯಾಲಿ ಉದ್ದಕ್ಕೂ ಪಕ್ಷದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯಕರ್ತರು ಕಾರ್ತೀಕ್ ಅವರನ್ನು ಅಭಿನಂದಿಸಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ನಾಗೇಶ್‌ಬಾಬು, ರಾಮಕೃಷ್ಣ, ರಘು, ಪ್ರೊ.ತಿಪ್ಪೇರುದ್ರಯ್ಯ, ಭಕ್ತರಹಳ್ಳಿ ಕಾಮರಾಜ್, ತಾ.ಪಂ. ಸದಸ್ಯ ನಾಗರಾಜು, ಮಧು ಇತರರಿದ್ದರು.ವೀರಭದ್ರಯ್ಯ ರಾಜೀನಾಮೆ ಅಂಗೀಕಾರವಾಗದಿದ್ದರೆ ಅವರ ಪುತ್ರ ಕಾರ್ತೀಕ್ ಅಥವಾ ವೀರಭದ್ರಯ್ಯ ಪತ್ನಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)