ಸೋಮವಾರ, ಮೇ 23, 2022
28 °C

ಮಧುಮೇಹದಲ್ಲಿ ಬದಲಾವಣೆ ಗಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ. ಹಾಗೆಯೇ ಯಾವುದೂ ನಿಶ್ಚಲವಲ್ಲ. ಬದಲಾವಣೆ  ಅನಿವಾರ್ಯ ಹಾಗೂ ನಿಶ್ಚಿತ. ಮನುಷ್ಯನ ಜೀವನದಲ್ಲೂ, ಬದಲಾವಣೆಯ ಗಾಳಿ ಸುಳಿದಾಡುತ್ತಿರುತ್ತದೆ.ದೈಹಿಕವಾಗಿ, ಮಾನಸಿಕವಾಗಿ ಆರ್ಥಿಕವಾಗಿ ಅಥವಾ ಸುತ್ತಮುತ್ತ ಪರಿಸರದಲ್ಲೂ ನಿತ್ಯ ಬದಲಾವಣೆಯನ್ನು ಮಾನವ ಕಾಣುತ್ತಿರುತ್ತಾನೆ. ಆದಿಮಾನವನಿಂದ ಇಂದಿನ ಅತ್ಯಾಧುನಿಕ ಕಂಪ್ಯೂಟರ್ ಯುಗದವರೆಗೆ ಸಾಕಷ್ಟು ಬದಲಾವಣೆಗಳು ಆಗಿಹೋಗಿವೆ, ಆಗುತ್ತಲೇ ಇವೆ.

 

ಹಾಗೆಯೇ ಔಷಧ ಲೋಕದಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗಿಹೋಗಿವೆ ಮತ್ತು ನಿರಂತರವಾಗಿ ಆಗುತ್ತಿವೆ. ಸುಮಾರು ಮೂವತ್ತು ವರ್ಷಗಳ ಹಿಂದೆ, ಮಧುಮೇಹಕ್ಕಾಗಿ ಎರಡು ಅಥವಾ ಮೂರು ಔಷಧಗಳಿದ್ದರೆ, ಇಂದು ನಾನಾ ತರಹದ, ಉತ್ತಮವಾದ ಔಷಧಗಳು ಬಂದಿವೆ ಮತ್ತು ನಿರಂತರವಾಗಿ ಬರುತ್ತಿವೆ.ಮಧುಮೇಹ ನಿಯಂತ್ರಣಕ್ಕೆ ಬರದಿರಲು ಅನೇಕ ಕಾರಣಗಳಿವೆ. ಯಾವ ನಿಖರವಾದ ಕಾರಣದಿಂದ ಮಧುಮೇಹವು ನಿಯಂತ್ರಣಕ್ಕೆ ಬರಲಿಲ್ಲವೆಂದು  ವಿಶ್ಲೇಷಿಸುವುದು ಮಧುಮೇಹ ತಜ್ಞರ ಆದ್ಯ ಕರ್ತವ್ಯ ಆಗಿರುತ್ತದೆ. ಒಮ್ಮೆ ಆ ಕಾರಣವನ್ನು ಕಂಡುಹಿಡಿದುಬಿಟ್ಟರೆ, ಮಧುಮೇಹದ ಚಿಕಿತ್ಸೆ ಬಾಳೇಹಣ್ಣಿನ ಸಿಪ್ಪೆ ಸುಲಿದಷ್ಟು ಸುಲಭ.

 

ಆಹಾರದಲ್ಲಿ ಸರಿಯಾದ ಪಥ್ಯವಿಲ್ಲದಿರುವುದು, ವ್ಯಾಯಾಮವಿಲ್ಲದಿರುವುದು, ವಿಪರೀತ ಒತ್ತಡ, ನಿಗದಿತ ಔಷಧ ತೆಗೆದುಕೊಳ್ಳದೇ ಇರುವುದು, ದೇಹದಲ್ಲಿ ಯಾವುದೇ ಸೋಂಕಿರುವುದು ಮುಂತಾದ ಕಾರಣಗಳಿಂದ ಮಧುಮೇಹ ನಿಯಂತ್ರಣಕ್ಕೆ ಬರುವುದಿಲ್ಲ. ವೈದ್ಯರ ಚಿಕಿತ್ಸೆ ವೈಫಲ್ಯತೆಯಿಂದ ಕೂಡ ರೋಗಿಗೆ ಒಮ್ಮಮ್ಮೆ ಮಧುಮೇಹ ನಿಯಂತ್ರಣಕ್ಕೆ ಬಾರದೇ ಇರಬಹುದು.ರಕ್ತದಲ್ಲಿನ ಗ್ಲುಕೋಸ್ ಅಂಶ, ಮನುಷ್ಯನ ವಯಸ್ಸು, ಆತನಿಗೆ ಇರುವ ಇತರೇ ಕಾಯಿಲೆಗಳು, ಆತನ ಚಟುವಟಿಕೆಗಳು ಮುಂತಾದ ಅಂಶಗಳ ಮೇಲೆ ಆತನಿಗೆ ಕೊಡುವ ಮಧುಮೇಹದ ಔಷಧಗಳು ನಿರ್ಬಂಧವಾಗಿರುತ್ತವೆ. ಇದು ಏರುಪೇರಾದಾಗ ಕೂಡ  ಮಧುಮೇಹ ನಿಯಂತ್ರಣಕ್ಕೆ ಬಾರದೇ ಇರಬಹುದು. ಈ ಎಲ್ಲ ಕಾರಣಗಳ ಜೊತೆಯಲ್ಲಿ, ಮಧುಮೇಹ  ನಿಯಂತ್ರಣಕ್ಕೆ ಬಾರದೇ ಇರಲು ಮತ್ತೊಂದು ಕಾರಣ ಇದೆ. ಅದೇ ಸ್ಥೂಲಕಾಯ ಶರೀರ.ಹೌದು ಅಗತ್ಯಕ್ಕಿಂತ ಹೆಚ್ಚು ದಡೂತಿ ಶರೀರವುಳ್ಳವರಾಗಿದ್ದರೆ ಅಂತಹವರಿಗೆ ಮಧುಮೇಹ  ನಿಯಂತ್ರಿಸುವುದು ಕಷ್ಟಸಾಧ್ಯ. ಒಬ್ಬ ವ್ಯಕ್ತಿಯನ್ನು  ಸ್ಥೂಲಕಾಯ ಶರೀರವುಳ್ಳವನು ಎಂದು ನಿರ್ಧರಿಸುವುದು  ಆ ವ್ಯಕ್ತಿಯ ಎತ್ತರದ ಆಧಾರದ ಮೇಲೆ. ಉದಾ: ಒಬ್ಬ ಗಂಡಸಿನ ಎತ್ತರ 175 ಸೆಂ,ಮೀ.ಎಂದರೆ ಅವನ ಎತ್ತರಕ್ಕೆ ಅವನು ಸರಿಸುಮಾರು 75 ಕೆಜಿ ಇರಬೇಕು. ಅವನ ಎತ್ತರ (ಸೆಂ.ಮೀ)ವನ್ನು 100ರಿಂದ ಕಳೆದರೆ, ಅವನ  ಎತ್ತರಕ್ಕೆ ಎಷ್ಟು ತೂಕ ಇರಬಹುದು ಎಂದು ತಿಳಿಯುತ್ತದೆ. ಹಾಗೆಯೇ ಹೆಂಗಸರಲ್ಲಿ ಅವರ ಎತ್ತರದ ಮೇಲೆ ಸುಮಾರು  105ರಷ್ಟು ಕಳೆದರೆ ಅವರ ಅಗತ್ಯವಾದ ತೂಕ ಎಷ್ಟಿರಬೇಕೆಂಬುದು ನಿರ್ದಿಷ್ಟವಾಗಿ ತಿಳಿಯುತ್ತದೆ. ಉದಾ: ಒಬ್ಬ ಹೆಂಗಸಿನ ಎತ್ತರ 155 ಸೆಂಮೀ ಇದ್ದರೆ ಅವರ ನಿರ್ದಿಷ್ಟವಾದ ತೂಕ 50ಕೆ. ಜಿ.ಇರಬೇಕು.ಅಗತ್ಯಕ್ಕಿಂತ ಏನೇ ಹೆಚ್ಚಿದರೂ ಅದು ವಿಷವೇ ಸರಿ. ಹಾಗೆಯೇ ಅಗತ್ಯಕ್ಕಿಂತ ದೇಹದ ತೂಕ ಹೆಚ್ಚಿದರೆ ಅದು ಅಪಾಯ. ಇಲ್ಲಿಯ ತನಕ, ದೇಹದ ತೂಕ ಇಳಿಸಲು ಅನೇಕ ಔಷಧಗಳು ಮಾರುಕಟ್ಟೆಗೆ ಬಂದಿವೆ. ಆದರೆ, ಅವುಗಳು  ದೇಹದ ತೂಕ ಇಳಿಸುವುದಕ್ಕಿಂತಲೂ ಅದರಿಂದ ಆಗುತ್ತಿರುವ ದುಷ್ಪರಿಣಾಮಗಳೇ ಹೆಚ್ಚು. ಹೀಗಾಗಿ ಈ ಔಷಧಗಳಿಂದ  ವೈದ್ಯರ ಕೈಕಟ್ಟಿಹಾಕಿದಂತಾಗಿದೆ. ಆದರೆ ಇದಕ್ಕೆಲ್ಲ ಪರಿಹಾರದಂತೆ ಮತ್ತು ಸ್ಥೂಲಕಾಯ ಶರೀರಕ್ಕೆ ರಾಮಬಾಣದಂತೆ ಬಂದಿರುವ  ಹೊಸ ಔಷಧ ಬ್ರೂಮೋಕ್ರಿಪ್ಟಿನ್.ನಿಜ. ಇತ್ತೀಚಿನ ದಿನಗಳಲ್ಲಿ ಮಧುಮೇಹಕ್ಕಾಗಿ  ಬಂದಿರುವ ಹಲವು  ಔಷಧಗಳಲ್ಲಿ, ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆ ಮಾಡುವ ಮತ್ತು ದೇಹದ ತೂಕವನ್ನು ಗಣನೀಯವಾಗಿ ಇಳಿಸುವ ಹೊಸ ಔಷಧ- ಬ್ರೂಮೋಕ್ರಿಪ್ಟಿನ್.ಈ ಮಾತ್ರೆಯ ಬಗ್ಗೆ, ಹಲವಾರು ಸಂಶೋಧನೆಗಳನ್ನು ವಿಜ್ಞಾನಿಗಳು ಕೈಗೊಂಡಿದ್ದಾರೆ. ಒಂದು ಸಂಶೋಧನೆ ಪ್ರಕಾರ ಸ್ಥೂಲಕಾಯವಿದ್ದು ಮತ್ತು ಅವರು ಮಧುಮೇಹದಿಂದ ಬಳಲುತ್ತಿದ್ದರೆ, ಅಂತಹವರಿಗೆ ಡೋಪಮಿನ್ ಪ್ರಮಾಣ ಕಡಿಮೆ ಇರುತ್ತದೆ. ಅಂದ ಹಾಗೆ ಡೋಪಮಿನ್‌ನ ಮುಖ್ಯಕಾರ್ಯಾಚರಣೆ ದೇಹದ ಕೊಬ್ಬನ್ನು ಕರಗಿಸುವುದು ಮತ್ತು ತಕ್ಕಮಟ್ಟಿಗೆ ರಕ್ತದಲ್ಲಿ ಗ್ಲುಕೋಸ್ ಅಂಶ ನಿಯಂತ್ರಿಸುವುದು.ನೂತನವಾಗಿ ಬಂದಿರುವ ಬ್ರೂಮೋಕ್ರಿಪ್ಟಿನ್ ಔಷಧ, ಡೋಪಮಿನ್ ಪ್ರಮಾಣವನ್ನು ಹೆಚ್ಚಿಸಲು ಅನುಕೂಲ ಮಾಡುತ್ತದೆ. ಇದರಿಂದಾಗಿ, ಯಕೃತ್ತಿನಿಂದ ಹೊರಬರುವ ಗ್ಲುಕೋಸ್ ಅಂಶ ಕಡಿಮೆಯಾಗುತ್ತದೆ. ಅಲ್ಲದೆ ಕೊಬ್ಬು ಅಂಶವನ್ನು ಸಹ ಕರಗಿಸುತ್ತದೆ.ಇದಲ್ಲದೆ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಮಧುಮೇಹದ ನಿಯಂತ್ರಣಕ್ಕೆ ಅನುವು ಮಾಡಿಕೊಡುತ್ತದೆ.ಎಲ್ಲರಿಗೂ ತಿಳಿದಿರುವ ಹಾಗೆ, ಇನ್ಸುಲಿನ್ ತಯಾರಿಸುವ ಬೀಟಾ ಸೆಲ್ಸ್‌ನ ಘಟಕ ಪ್ಯಾನ್‌ಕ್ರಿಯಾಸ್‌ನ್ಲ್ಲಲಿದೆ. ಯಾವುದೇ ಒಬ್ಬ ವ್ಯಕ್ತಿಗೆ ಮಧುಮೇಹ ಬಂತೆನ್ನುವಷ್ಟರಲ್ಲಿ ಸರಿಸುಮಾರು ಅರ್ಧದಷ್ಟು  ಬೀಟಾ ಸೆಲ್ಸ್  ಪ್ಯಾನ್‌ಕ್ರಿಯಾಸನಲ್ಲಿ ನಾಶಹೊಂದಿರುತ್ತದೆ. ಹಾಗಾಗಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗಿ, ಮಧುಮೇಹವು ಮನುಷ್ಯನಿಗೆ ಆವರಿಸಿಕೊಳ್ಳುತ್ತದೆ.ಈಗಾಗಲೇ ಮಧುಮೇಹಕ್ಕಿರುವ ಅನೇಕ ಔಷಧಗಳು, ಈ ಬಾಕಿ ಇರುವ ಬೀಟಾ ಸೆಲ್ಸ್‌ನ ಮೇಲೆ ಪರಿಣಾಮ ಬೀರಿ, ಅದರಿಂದ ಮತ್ತಷ್ಟು ಇನ್ಸುಲಿನ್ ತಯಾರಿಸುವಂತೆ ಮಾಡುತ್ತದೆ. ಅದರ ಪರಿಣಾಮವಾಗಿ, ಬೀಟಾ ಸೆಲ್ಸ್‌ನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ರೋಗಿಯು ಮುಂದೊಂದು ದಿನ  ಇನ್ಸುಲಿನ್ ಮೇಲೆ ಅವಲಂಬಿತವಾಗಬೇಕಾಗುತ್ತದೆ.ಆದರೆ ನೂತನವಾಗಿ ಬಂದಿರುವ ಬ್ರೂಮೋಕ್ರಿಪ್ಟಿನ್, ಪ್ಯಾನ್‌ಕ್ರಿಯಾಸನಲ್ಲಿರುವ ಬೀಟಾ ಸೆಲ್ಸ್ ಅನ್ನು ವೃದ್ಧಿಯಾಗಲು ಅನುವುಮಾಡಿಕೊಡುತ್ತದೆ. ಇದರಿಂದಾಗಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ, ಮಧುಮೇಹವು ಹಿಡಿತಕ್ಕೆ ಬರುತ್ತದೆ. ಸಾಮಾನ್ಯವಾಗಿ ಮಧುಮೇಹದವರ ಮಾಂಸಖಂಡಗಳು ಗ್ಲುಕೋಸ್ ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿರುತ್ತವೆ. ಹಾಗಾಗಿ ಅವರ ರಕ್ತದಲ್ಲಿ ಹೆಚ್ಚಾಗಿ ಗ್ಲುಕೋಸ್ ಅಂಶ ಏರಿಕೆಯಾಗಿರುತ್ತದೆ. ಈ ಹೊಸ ಔಷಧವು ಮಾಂಸಖಂಡಗಳ ಮೇಲೆ ಪರಿಣಾಮ ಬೀರಿ, ಗ್ಲುಕೋಸ್‌ಅನ್ನು  ಹೀರಿಕೊಳ್ಳುವ ಹಾಗೆ ಮಾಡುತ್ತದೆ. ತದನಂತರ ಗ್ಲುಕೋಸ್ ಅಂಶ ರಕ್ತದಲ್ಲಿ ಕಡಿಮೆಯಾಗಲು ಸಹಾಯ ಮಾಡುತ್ತದೆ.ದಡೂತಿ ಶರೀರವುಳ್ಳರು, ಅತ್ಯಂತ ಒತ್ತಡದ ಬದುಕಿನವರಿಗೆ, ಮಾನಸಿಕ  ಖಿನ್ನತೆಯಿಂದ ನರಳುತ್ತಿದ್ದು,  ಮಧುಮೇಹವಿದ್ದರೆ, ಅಂತಹವರಿಗೆ ಇದು ಒಂದು ಸಂಜೀವಿನಿಯೇ ಸರಿ.ಅಮೇರಿಕಾದ ಡ್ರಗ್ಸ ಕಂಟ್ರೋಲ್(ಖಿಖಊಈಅ) ಸಂಸ್ಥೆಯವರು ಈ ಮಾತ್ರೆಯನ್ನು ಪ್ರಮಾಣೀಕರಿಸಿದ್ದಾರೆ. ಮುಂಜಾನೆ ತಿಂಡಿಯ ನಂತರ ಈ ಮಾತ್ರೆಯನ್ನು (ವೈದ್ಯರ ಅನುಮತಿಯ ಮೇರೆಗೆ) ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗಿ ಉತ್ತಮವಾಗಿ ಗ್ಲುಕೋಸ್ ಅಂಶ ರಕ್ತದಲ್ಲಿ  ಹಿಡಿತಕ್ಕೆ  ಬರುತ್ತದೆ. ಆದರೆ ಕೆಲವರಲ್ಲಿ  ನಾವು ಗಮನಿಸಿರುವ ಹಾಗೆ ಹೊಟ್ಟೆಯುರಿ, ಗ್ಯಾಸ್‌ಟ್ರೈಟಿಸ್ ಮುಂತಾದುವುಗಳು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಸರಿಯಾದ ಔಷಧೋಪಚಾರ ಮಾಡಿದರೆ ಮಧುಮೇಹದವರು ಇದರ ಅಡ್ಡಪರಿಣಾಮದಿಂದ ಪಾರಾಗಬಹುದು.ಬದಲಾವಣೆ ಅಗತ್ಯ. ಉತ್ತಮ ಭವಿಷ್ಯಕ್ಕಾಗಿ ಬದಲಾವಣೆಯಾದರೆ ಅದು ಮತ್ತಷ್ಟು ಚೆಂದ. ಈ ಬದಲಾವಣೆಯ ಗಾಳಿಯಲ್ಲಿ ಉತ್ತಮವಾದ್ದುದನ್ನು ಆಯ್ದುಕೊಂಡು, ಮಿಕ್ಕಿದ್ದನ್ನು ಕಡೆಗಣಿಸಿ ನಮ್ಮ ಸಮಾಜಕ್ಕೆ ಅದನ್ನು ಅರ್ಪಿಸುವುದರಿಂದ, ದೇಶದ ಭವಿಷ್ಯವು ಸಧೃಢವಾಗುತ್ತದೆ.

(ದೂರವಾಣಿ 080-26651818)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.