ಮಧುಮೇಹ: ಒಂದು ಉಪ್ಪಿನ ಕಥೆ

7

ಮಧುಮೇಹ: ಒಂದು ಉಪ್ಪಿನ ಕಥೆ

Published:
Updated:
ಮಧುಮೇಹ: ಒಂದು ಉಪ್ಪಿನ ಕಥೆ

‘ತಾ ಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ’ ಎಂಬ ನಾಣ್ಣುಡಿ ಬಹುಶಃ ಎಲ್ಲರಿಗೂ ಗೊತ್ತು. ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜದಲ್ಲಿ ತಾಯಿ ಮತ್ತು ಉಪ್ಪಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ನಾವು ಸೇವಿಸುವ ಆಹಾರದಲ್ಲಿ ಉಪ್ಪು ಕಾಣದಿದ್ದರೆ, ಬಾಯಿಗೆ ಇಟ್ಟೊಡನೆ, ಅದರ ಅನುಪಸ್ಥಿತಿ ಎದ್ದು ಕಾಣುತ್ತದೆ. ಹಾಗೆಯೇ ನಮ್ಮ ದೇಹದಲ್ಲಿ ಕೂಡ, ಉಪ್ಪಿನ ಅಂಶ ಇಲ್ಲದಿದ್ದರೆ, ಬದುಕಲು ಅಸಾಧ್ಯ.ನಮ್ಮ ಪ್ರಜ್ಞಾವಂತರಲ್ಲಿ ಕೆಲವರು ಇತ್ತೀಚೆಗೆ ಉಪ್ಪು ಎಂದರೆ ಅಲರ್ಜಿ ಎನ್ನುತ್ತಾರೆ. ಅದರಲ್ಲೂ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಇರುವವರು, ಉಪ್ಪು ಸೇವಿಸಿದರೆ ಮಹಾಪಾಪ ಎನ್ನುವ ಅಭಿಪ್ರಾಯ ಹೊಂದಿದ್ದರೆ, ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂಬುದು ಅವರ ಅಂಬೋಣ. ಆದರೆ ದೇಹದಲ್ಲಿ ಉಪ್ಪಿನ ಅಂಶ ಇಲ್ಲದಿದ್ದರೆ ಕೆಲ ಕ್ಷಣವೂ ಮನುಷ್ಯ ಬದುಕಲು ಅಸಾಧ್ಯ ಎಂಬುದು ವಾಸ್ತವ ಸಂಗತಿ.ವಯೋವೃದ್ಧರಾದ ರಮಾಠಾಕೂರ್ ಎಂಬುವವರು ಸುಮಾರು ವರ್ಷಗಳಿಂದ ಮಧುಮೇಹ ಮತ್ತು ರಕ್ತದೊತ್ತಡದ ಚಿಕಿತ್ಸೆಗೆಂದು ನಮ್ಮ ಆಸ್ಪತ್ರೆಗೆ ಬರುತ್ತಿದ್ದರು. ಶಿಸ್ತು ಜೀವನ ನಡೆಸುವ ಇವರು, ಕಾಲಕಾಲಕ್ಕೆ ರಕ್ತಪರೀಕ್ಷೆ, ವೈದ್ಯರ ತಪಾಸಣೆ, ಔಷಧಿಗಳನ್ನು ತೆಗೆದುಕೊಳ್ಳುವುದರಲ್ಲಿ ಎಲ್ಲೂ ಬೆರಳು ಮಾಡುವ ಹಾಗಿರಲಿಲ್ಲ. ನಮ್ಮ ಸಿಬ್ಬಂದಿ ಎಲ್ಲ ಅವರಿಗೆ ಚಿರಪರಿಚಿತ. ಚಿಕಿತ್ಸೆಗೆಂದು ಬಂದರೆ ಅವರೆಲ್ಲರ ಉಭಯಕುಶಲೋಪರಿ ವಿಚಾರಿಸಿಕೊಂಡು, ಆನಂತರ ಪರೀಕ್ಷೆಗೆ ಅನುವಾಗುತ್ತಿದ್ದರು. ರಕ್ತದೊತ್ತಡ ಮತ್ತು ಮಧುಮೇಹವು ಅವರಿಗೆ ಉತ್ತಮ ಹಿಡಿತದಲ್ಲಿತ್ತು ಎಂದು ಬೇರೆ ಹೇಳಬೇಕಿಲ್ಲ. ಕೆಲ ದಿನಗಳ ಹಿಂದೆ, ಅವರನ್ನು ತುರ್ತಾಗಿ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದರು. ಈ ಮೊದಲು ಅನಾಯಾಸವಾಗಿ ನಡೆಯುತ್ತ ಇದ್ದ ಅವರು, ಅಂದು ಒಂದೊಂದು ಹೆಜ್ಜೆ ಇಡಲೂ ಕಷ್ಟಪಡುತ್ತಿದರು. ಅದಲ್ಲದೆ ನಮ್ಮ ಸಿಬ್ಬಂದಿ ಮಾತನಾಡಿಸಿದರೂ, ಅವರು ಮಾತನಾಡುತ್ತಿರಲಿಲ್ಲ. ನನ್ನನ್ನು ಕೂಡ ಅವರು ಗುರುತಿಸಲಿಲ್ಲ. ಅವರನ್ನು ಪರೀಕ್ಷಿಸಲೆಂದು ಅವರ ಹೆಸರು ಕೇಳಿದಾಗ, ಸುಮಾರು ಹತ್ತು ಹದಿನೈದು ನಿಮಿಷದ ನಂತರ, ತಮ್ಮ ಹೆಸರನ್ನು ನೆನಪಿಸಿಕೊಂಡು ಹೇಳಿದರು. ಆತನ ಮಗನ ಬಳಿ ಈ ಬಗ್ಗೆ ವಿಚಾರಿಸಿದಾಗ ‘ಸರ್, ನಮ್ಮ ತಾಯಿ ಹೋದ ವಾರದ ತನಕ ಬಹಳ ಆರಾಮಾಗಿಯೇ ಇದ್ದರು. ಆದರೆ ಕಳೆದ ವಾರ ಇದ್ದಕ್ಕಿದ್ದ ಹಾಗೆ ನಾಲ್ಕೈದು ಬಾರಿ ವಾಂತಿಯಾಗಿ, ಬಹಳ ಆಯಾಸಗೊಂಡರು.ಮಧುಮೇಹವು ಉತ್ತಮ ರೀತಿಯಲ್ಲಿದ್ದ ಕಾರಣ, ನಾವು ವೈದ್ಯರಿಗೆ ತೋರಿಸುವ ಗೋಜಿಗೆ ಹೋಗಲಿಲ್ಲ. ವಾಂತಿ ನಿಲ್ಲುವ ಸಲುವಾಗಿ ಅವರಿಗೆ ಔಷಧಗಳನ್ನು ಕೊಡಿಸಿದ ಮೇಲೆ ವಾಂತಿ ಸಂಪೂರ್ಣ ಹತೋಟಿಗೆ ಬಂತು. ಆದರೆ ಅಂದಿನಿಂದಲೂ ತೀರ ಮಂಕಾಗಿ ಬಿಟ್ಟಿದ್ದಾರೆ. ನಡೆದಾಡಲು ಆಗುತ್ತಿಲ್ಲ. ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ’ ಎಂದು ಹೇಳಿದ.ರೋಗಿಯು ಹೇಳುವ ಕಾಯಿಲೆಗಳ ಚಿಹ್ನೆಗಳಿಂದಲೇ ವೈದ್ಯರು ರೋಗಿಗೆ ಯಾವ ಕಾಯಿಲೆ ಎಂದು ಕಂಡುಹಿಡಿಯಬಹುದಾಗಿದೆ. ಹಾಗೆಯೇ, ರೋಗಿ ರೋಗದ ಚಿಹ್ನೆಗಳನ್ನು ವಿವರಿಸುತ್ತಿರುವಂತೆ, ನನ್ನ ವೈದ್ಯ ಬುದ್ಧಿ ಚುರುಕುಗೊಂಡಿತ್ತು. ಅದಕ್ಕೆ ಪೂರಕವಾಗಿ ಕೆಲವು ರಕ್ತ ಪರೀಕ್ಷೆಗಳನ್ನು ತುರ್ತಾಗಿ ಮಾಡಿಸಿದ್ದೆವು. ನನ್ನ ನಿರೀಕ್ಷೆಯಂತೆ ರಕ್ತದಲ್ಲಿ ಸೋಡಿಯಂ ಅಂಶ ತೀರ ಕುಸಿದಿತ್ತು.ಹೌದು, ರಕ್ತದಲ್ಲಿ  ಸೋಡಿಯಂ ಅಥವಾ ಉಪ್ಪಿನ ಅಂಶಕ್ಕೆ ಬಹಳ ಮಹತ್ವವಿದೆ. ರಕ್ತದಲ್ಲಿ ಸರಿಸುಮಾರು 135-145mg/dl ತನಕ ಸೋಡಿಯಂ ಅಂಶ ಇರಬೇಕು. ಸೋಡಿಯಂ ಅಂಶ 135mg/dl ಕ್ಕಿಂತಲೂ ಕುಸಿದರೆ, ರೋಗಿಯೂ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ತೀವ್ರ ಆಯಾಸ, ಕಾಲಿನ ಮೀನಖಂಡದಲ್ಲಿ ಅಸಾಮಾನ್ಯ ನೋವು ಮುಂತಾದುವುಗಳು ರೋಗಿಗೆ ಕಾಣಿಸಿಕೊಳ್ಳುತ್ತವೆ.ರೋಗಿಗೆ ಸುಮಾರು 120mg/dl ಸೋಡಿಯಂ ಅಂಶ ರಕ್ತದಲ್ಲಿ  ಕುಸಿದರೆ, ರೋಗಿಯ ಪ್ರಾಣಕ್ಕೆ ಸಂಚಕಾರವಾಗಿ ಪರಿಣಮಿಸುತ್ತದೆ. ರೋಗಿಗೆ ತೀವ್ರ ನಿತ್ರಾಣವಾಗಿ, ಕಾಲುಗಳಲ್ಲಿ ನಡೆಯಲು ಶಕ್ತಿಯೇ ಇಲ್ಲದಂತಾಗುತ್ತದೆ. ಅವರ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗಿ, ಯಾರನ್ನೂ ಅವರು ಗುರುತಿಸಲು ಆಗುವುದಿಲ್ಲ. ಅಸಂಬದ್ಧ ಮಾತುಗಳನ್ನ ಆಡುತ್ತಾರೆ. ಉದಾಹರಣೆಗೆ ಬೆಳಿಗ್ಗೆ ಏನು ತಿಂಡಿ ತಿಂದಿರಿ ಎಂದರೆ ಅದನ್ನ ಹೇಳಲು ಅವರಿಗೆ ಆಗುವುದಿಲ್ಲ. ಅದನ್ನ ನೆನೆಪಿಸಿಕೊಳ್ಳಲು ಅವರು ಬಹಳ ಪ್ರಯಾಸ ಪಡುತ್ತಾರೆ. ತಲೆಸುತ್ತು, ತಲೆನೋವು ಮುಂತಾದವು ಆಗುವುದು. ಇನ್ನೂ ಹೆಚ್ಚು ರಕ್ತದಲ್ಲಿ ಸೋಡಿಯಂ ಅಂಶ ಕುಸಿದರೆ ತೀವ್ರ ಉಸಿರಾಟದ ತೊಂದರೆ, ಮೆದುಳಿನ ಆಘಾತ, ಕೋಮ ಮುಂತಾದವು ಸಂಭವಿಸುತ್ತದೆ. ರಕ್ತದಲ್ಲಿ ಸೋಡಿಯಂ ಅಂಶ ಕಡಿಮೆಯಾಗಲು ನಾನಾ ಕಾರಣಗಳಿವೆ. ಪದೇ ಪದೇ ವಾಂತಿ, ಹೆಚ್ಚು ಮೂತ್ರವಿಸರ್ಜನೆ, ಭೇದಿ ಮುಂತಾದವುಗಳು ಪ್ರಮುಖ ಕಾರಣಗಳು. ದೇಹದಲ್ಲಿ ನೀರಿನ ಅಂಶ ತೆಗೆಯುವ ಮಾತ್ರೆಗಳು, ರಕ್ತದೊತ್ತಡದ ಕೆಲವು ಮಾತ್ರೆಗಳು (ACE INHIBITORS) ಮುಂತಾದ ಔಷಧಗಳಿಂದ ಸಹ ಸೋಡಿಯಂ ಅಂಶ ರಕ್ತದಲ್ಲಿ ಕಡಿಮೆಯಾಗುತ್ತದೆ. ಹೈಪೋಥೈರಾಯ್ಡ, ಹೃದಯ ವೈಫಲ್ಯ, ಯಕೃತ್ ತೊಂದರೆ, ಮೂತ್ರಪಿಂಡದ ವೈಫಲ್ಯ ಮುಂತಾದ ಕಾಯಿಲೆಗಳಿಂದ ಸಹ ಇದು ಸಂಭವಿಸಬಹುದು. ಮಧುಮೇಹವು ವಿಪರೀತವಾದಾಗ ಕೂಡ, ಸೋಡಿಯಂ ಅಂಶ ರಕ್ತದಲ್ಲಿ ಕಡಿಮೆಯಾಗುತ್ತದೆ. ಕೆಲವು ನೋವು ನಿವಾರಕ ಮಾತ್ರೆಗಳಿಂದ ಕೂಡ ಈ ರೀತಿ ಆಗುವುದುಂಟು. ವಿಪರೀತ ನೀರನ್ನ ಕುಡಿದರೆ ( ಹತ್ತು ಲೀಟರ್‌ಗಿಂತ ಹೆಚ್ಚು) ಸೋಡಿಯಂ ಅಂಶ ಕಡಿಮೆಯಾಗುತ್ತದೆ.ಚಿಕಿತ್ಸೆ: ಇದರ ಚಿಕಿತ್ಸೆ ಬಹಳ ಯೋಚನಾಬದ್ಧವಾಗಿರಬೇಕಾಗುತ್ತದೆ, ಮೊದಲು ಹೀಗೆ  ಆಗಲು ಕಾರಣ ಕಂಡುಹಿಡಿದು, ಅದಕ್ಕೆ ಸೂಕ್ತ ಚಿಕಿತ್ಸೆ ಕೊಟ್ಟರೆ, ರೋಗಿಯು ಚೇತರಿಸಿಕೊಳ್ಳುತ್ತಾನೆ.ಉದಾ: ರಕ್ತದಲ್ಲಿ ಸೋಡಿಯಂ ಅಂಶ ಕಡಿಮೆಯಾಗುವ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸುವುದು, ದೇಹದಲ್ಲಿ ಕೆಲ ಕಾಯಿಲೆಗಳು ಇದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ಕೊಡುವುದು ಮುಂತಾದುವುಗಳು ಈ ನಿಟ್ಟಿನಲ್ಲಿ ಬಹಳ ಪ್ರಮುಖವಾಗುತ್ತದೆ. ಸೋಡಿಯಂ ಅಂಶ ರಕ್ತದಲ್ಲಿ ತೀವ್ರ ಕಡಿಮೆಯಾದರೆ, ಆಗ ಲೆಕ್ಕಾಚಾರದ ಪ್ರಕಾರ normal saline ಕೊಡಬೇಕಾಗುತ್ತದೆ. ಪ್ರತಿ ನಾಲ್ಕು ಗಂಟೆಗೊಮ್ಮೆಯಾದರೂ, ರಕ್ತದಲ್ಲಿ ಸೋಡಿಯಂ ಅಂಶ ಪರೀಕ್ಷಿಸಿ ಅದರ ಪ್ರಕಾರ  normal  saline ಕೊಡಬೇಕಾಗುತ್ತದೆ.ಅತಿಯಾದರೆ ಅಮೃತವೂ ವಿಷವೆ ಎನ್ನುವ ಹಾಗೆ, ಸೋಡಿಯಂ ಅಂಶ ಹೆಚ್ಚಿದರೂ ಕೂಡ ರೋಗಿಗೆ ತೀವ್ರ ಆಪತ್ತಾಗುವುದು. ಒಟ್ಟಿನಲ್ಲಿ ಹೇಳುವುದಾದರೆ ಸೋಡಿಯಂ ಅಂಶ ಹೆಚ್ಚಾದರೂ ಕಷ್ಟ, ಕಡಿಮೆ ಆದರೂ ಕಷ್ಟ. ಮೊದಲೇ ತಿಳಿಸಿದ ಹಾಗೆ 135-145 mg/dl ತನಕ ರಕ್ತದಲ್ಲಿ ಅದರ ಇರುವಿಕೆ ಕ್ಷೇಮ.  ‘ಲೋ ಸೋಡಿಯಂ’ ಯಾರಿಗೆ ಬೇಕಾದರೂ ಆಗಬಹುದು.ಮಧುಮೇಹದವರು ಇದಕ್ಕೆ ಹೆಚ್ಚು ತುತ್ತಾಗುತ್ತಾರೆ. ಅನ್ಯರು ಇದರಿಂದ ಹೊರತಲ್ಲ. ಮಧುಮೇಹದವರು, ಮಧುಮೇಹವನ್ನು ಹಿಡಿತದಲ್ಲಿ ಇಟ್ಟುಕೊಂಡು ಔಷಧಗಳ ಬಗ್ಗೆ ಜಾಗ್ರತೆಯಿಂದ ಇದ್ದು, ಭೇದಿ, ವಾಂತಿ ಮುಂತಾದವುಗಳಾದಾಗ, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವುದರೊಂದಿಗೆ  ರೋಗಿಯು, ‘ಲೋ ಸೋಡಿಯಂ’ನಿಂದ ಪಾರಾಗಬಹುದು.

(ಲೇಖಕರ ದೂರವಾಣಿ: 080-26651818)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry